ಮೂಡುಬಿದರೆ: ಪರಿಸರ ಸಮತೋಲನಕ್ಕೆ ಸರ್ಪಗಳ ಸಂರಕ್ಷಣೆ ಅಗತ್ಯ, ಹಾವುಗಳ ನಾಶ ಆಹಾರ ಸರಪಳಿಯ ಅಸಮತೋಲನಕ್ಕೆ ನಾಂದಿ ಎಂದು ಮಂಗಳೂರಿನ ಸರ್ಪ ಸಂರಕ್ಷಕ ಕಿರಣ್ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ʻಅಭಿವ್ಯಕ್ತಿ ಫೋರಂʼ ವತಿಯಿಂದ ವಿಶ್ವ ಅರಣ್ಯ ದಿನದ ಹಿನ್ನಲೆಯಲ್ಲಿ ಆಯೋಜಿಸಿದ್ದ ಅತಿಥಿ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಭವಿಷ್ಯಕ್ಕೆ ಸಂಪತ್ತನ್ನು ಕೂಡಿಡುವ ಭರಾಟೆಯಲ್ಲಿ ಮನುಷ್ಯ ಅರಣ್ಯ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಕಾಡಿನ ಜೀವ ಸಂಕುಲಗಳಲ್ಲೊಂದಾದ ಹಾವುಗಳೂ ಕೂಡ ಪರಿಸರ ಸಮತೋಲನ ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ಕರ್ನಾಟಕದಲ್ಲಿ 185 ಪ್ರಜಾತಿಯ ಹಾವುಗಳಿವೆ ಅವುಗಳಲ್ಲಿ 10 ಪ್ರಬೇಧಗಳು ಮಾತ್ರ ವಿಷವುಳ್ಳವು. ಸರ್ಪಗಳ ವಿಷದಿಂದಾಗುವ ಮನುಷ್ಯನ ಸಾವಿಗಿಂತ ಅವುಗಳ ಕುರಿತಿರುವ ಭಯವೇ ಸಾವಿನ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಸರ್ಪಗಳ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಕಾರ್ಯಗಳಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೊಜಕ ಪ್ರಸಾದ್ ಶೆಟ್ಟಿ, ಉಪನ್ಯಾಸಕರಾದ ಡಾ. ಶ್ರೀನಿವಾಸ ಹೊಡೆಯಾಲ, ಡಾ. ಸಫಿಯಾ, ಅಕ್ಷಯ್, ನಿಶಾನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಕನ್ಯಾ ಸ್ವಾಗತಿಸಿ, ರಂಜೀತಾ ಮ ಯಲಿಮಠ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ