ಅಬ್ಬಕ್ಕರಾಣಿ ಹೆಸರು ತೌಳವ ನಾಡಿಗರ ಸ್ವಾಭಿಮಾನದ ಸಂಕೇತ: ಡಾ. ಪುಂಡಿಕಾಯಿ ಗಣಪಯ್ಯ ಭಟ್

Upayuktha
0



ಮಂಗಳೂರು: 'ಕರ್ನಾಟಕ ಕರಾವಳಿ ಪ್ರದೇಶದಲ್ಲಿ ಮೂರು ನೆಲೆಗಳಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮ ಅತ್ಯಂತ ಮಹತ್ವ ಪಡೆದಿದೆ. ಪೋರ್ಚುಗೀಸರೊಂದಿಗೆ ಸೆಣಸಿದ ಅಬ್ಬಕ್ಕ ರಾಣಿಯರು ಇಬ್ಬರೋ-ಮೂವರೋ ಎಂಬುದು  ಮುಖ್ಯವಲ್ಲ. ಆದರೆ ಅಬ್ಬಕ್ಕ ಎಂಬ ಹೆಸರು ತೌಳವ ನಾಡಿಗರ ಸ್ವಾಭಿಮಾನದ ಸಂಕೇತವಾಗಿ ಚರಿತ್ರೆಯಲ್ಲಿ ದಾಖಲಾಗಿದೆ' ಎಂದು ಹಿರಿಯ ಇತಿಹಾಸ ಸಂಶೋಧಕ ಹಾಗೂ ವಿಶ್ರಾಂತ ಪ್ರಾಧ್ಯಾಪಕ ಡಾ. ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದ್ದಾರೆ.


ಮಂಗಳೂರು ಮಹಾನಗರಪಾಲಿಕೆ ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರಗಿದ ಎರಡು ದಿನಗಳ ನಮ್ಮ ಅಬ್ಬಕ್ಕ ಅಮೃತ ಸ್ವಾತಂತ್ರ್ಯ ಸಂಭ್ರಮದ 'ಅಬ್ಬಕ್ಕ ಸಂಕಥನ: ಕರಾವಳಿಯಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆ ಗುರುತುಗಳು' ಎಂಬ ವಿಚಾರ ಸಂಕಿರಣದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


'ಅಬ್ಬಕ್ಕನ ಪ್ರತಿಭಟನೆಯ ದಾರಿಯಲ್ಲಿ ನಂತರದ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಸೆಟೆದು ನಿಂತವರು ಪ್ರಾದೇಶಿಕ ನೆಲೆಯಲ್ಲಿ ಹೋರಾಟ ನಡೆಸಿದರೂ ಅವೆಲ್ಲ ಸ್ವಾತಂತ್ರ ಸಂಗ್ರಾಮದ ವ್ಯಾಪ್ತಿಯಲ್ಲಿ ಬರುತ್ತವೆ. ಆಧುನಿಕ ಸಮಾಜದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸುವ ರೀತಿಯಲ್ಲಿ ನಮ್ಮ ಅಬ್ಬಕ್ಕದಂತಹ ಕಾರ್ಯಕ್ರಮಗಳು ನಡೆಯಬೇಕು' ಎಂದವರು ನುಡಿದರು.


'ರಾಣಿ ಅಬ್ಬಕ್ಕನ ಹೋರಾಟದ ನೆಲೆಗಳು' ಎಂಬ ವಿಷಯದಲ್ಲಿ ಡಾ.ತುಕಾರಾಮ ಪೂಜಾರಿ; 'ಅಮರಸುಳ್ಯ ಕ್ರಾಂತಿ ಮತ್ತು ರೈತ ಹೋರಾಟ' ವಿಚಾರವಾಗಿ ಪ್ರಭಾಕರ ನೀರುಮಾರ್ಗ ಮತ್ತು 'ತುಳುನಾಡಿನಲ್ಲಿ ಗಾಂಧಿ ಕಾಲದ ಸ್ವಾತಂತ್ರ್ಯ ಸಂಗ್ರಾಮ' ವಿಷಯದ ಮೇಲೆ ಮನೋಹರ ಪ್ರಸಾದ್ ಉಪನ್ಯಾಸ ನೀಡಿದರು.


ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ವಿಷಯ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿ, ಸುಮಾ ಪ್ರಸಾದ್ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top