|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮರೆಯಾದರೇನು ಮರೆಯಲುಂಟೇ?

ಮರೆಯಾದರೇನು ಮರೆಯಲುಂಟೇ?


ಕಳೆದು ಹೋಯಿತಲ್ಲ ಮರೆಯಾಗಿ ನೀನು ಇಂದಿಗೆ ಸಂವತ್ಸರ ಒಂದು !  ಮನಸು ಒಪ್ಪುತ್ತಿಲ್ಲ ಲಕ್ಷ್ಮಿ ನೀನಿಲ್ಲವೆಂದು. ಪ್ರತಿಯೊಂದು ಶ್ವಾಸೋಚ್ವಾಸವೂ ಗಾಢ ನಿದ್ದೆಯ ಹೊರತು ನಿನ್ನ ನೆನಪನ್ನು ಸವರಿಕೊಂಡೇ ನಡೆಯುತ್ತದೆ. ಅಂದುಕೊಂಡಿದ್ದೆ ನಾನು ದಿನ ಕಳೆದಂತೆ ನಿನ್ನ ಅನುಪಸ್ಥಿತಿ ಸಹಿಸಬಹುದೆಂದು. ಆದರೆ ಅದು ಅಸಾಧ್ಯವೆಂದು ಪ್ರಸ್ತುತ ಅರಿವಾಗಿದೆ ನನಗೆ. ಗೀತೆಯಲ್ಲಿ ಕೃಷ್ಣ ಅದೆಷ್ಚು ಚಂದವಾಗಿ ಹೇಳಿದ್ದಾನೆ ಸಂಸಾರವನ್ನು ಅತಿಯಾಗಿ ಹಚ್ಚಿಕೊಳ್ಳಬೇಡ ಕರ್ತವ್ಯವೆಂದರಿತು ಪ್ರವೃತ್ತನಾಗು. ತಾವರೆ ಎಲೆಯು ನೀರೊಳಗಿದ್ದೂ ನೀರನ್ನು ಹಚ್ಚಿಕೊಳ್ಳದೆ ಇರುವಂತೆ ಸಂಸಾರದೊಳಗಿರಬೇಕೆಂದು. ಆಹಾ ಅದೆಷ್ಟು ವಾಸ್ತವ ಆ ವಾಕ್ಯದ ಒಳಮರ್ಮ ! ಹೆಚ್ಹೆಚ್ಚು ಹಚ್ಚಿಕೊಂಡಷ್ಟೂ ಕಳಚಿಕೊಂಡಾಗ ಆಗುವ ಆಘಾತ ಅಥವಾ ನೋವು ನಮ್ಮನ್ನು ಅಪ್ಪಚ್ಚಿ ಮಾಡುವುದಂತು ಖಂಡಿತ. ಆದರೆ ನಾವು ಕೃಷ್ಣನಂತಾಗಬಹುದೇ? ನಾವು ಮನುಷ್ಯರಲ್ಲವೇ ಸಂಸಾರದಲ್ಲಿ ಆಸಕ್ತಿ ತುಂಬಿಸಿದವನೂ ಅವನೇ. ಮಡದಿ ಮಕ್ಕಳೆಂಬ ಭಾವಕ್ಕೆ ನೀರುಣಿಸಿ ಬೆಳೆಸಿದವನೂ ಅವನೇ. ಅದರಿಂದ ಭಾವ ಬಲಿತು ಪ್ರೀತಿಯು ಹೆಮ್ಮರವಾದಾಗ ಅದನ್ನು ಕಸಿದುಕೊಂಡವನೂ ಅವನೇ. ಅದರಿಂದುಂಟಾದ ನಿರ್ವಾತವನ್ನು ಸಹಿಸಿಕೊಳ್ಳುವಂತೆ ಶಕ್ತಿಯನ್ನು ಮರು ಪೂರೈಸುವವನೂ ಅವನೇ. ಛೆ ಛೆ!!


ಹೌದು ಲಕ್ಷ್ಮಿ ನೀನು ಒಂದು ದಿನವಾದರೂ ನನ್ನಲ್ಲಿ ಜಗಳವಾಡಿದ್ದರೆ ಅದಕ್ಕೊಂದಷ್ಟು ಪ್ರೀತಿಯನ್ನು ಬಿಡಬಹುದಿತ್ತು. ಒಂದು ಗಳಿಗೆಯಾದರೂ ನನ್ನನ್ನು ಮಕ್ಕಳನ್ನು ಉಪೇಕ್ಷೆ ಮಾಡಿದ್ದರೆ ಅದಕ್ಕೊಂದಷ್ಟು ಪ್ರೀತಿಯನ್ನು ತೊರೆಯಬಹುದಿತ್ತು. ಒಂದು ದಿನವಾದರೂ ಬಟ್ಟೆ ಬರೆ ಬಂಗಾರವೆಂದು ಹಟ ಮಾಡಿದ್ದರೆ ಅದರಿಂದಿಷ್ಟು ಪ್ರೀತಿಯನ್ನು ಕಳೆಯಬಹುದಿತ್ತು. ಒಂದು ದಿನವಾದರೂ ಕೆಟ್ಟ ಅಡುಗೆ ಮಾಡಿ ಹಾಕಿದ್ದರೆ ಅದಕ್ಕೊಂದಿಷ್ಟು ನಿನ್ನನ್ನು ದೂರ ಮಾಡಬಹುದಿತ್ತು. ಒಂದು ದಿನವಾದರೂ ಇನ್ನೊಂದು ಜೀವಿಯನ್ನು ದ್ವೇಷಿಸುತ್ತಿದ್ದರೆ ನಿನ್ನನ್ನು ಮರೆಯಬಹುದಿತ್ತು.  ಒಂದು ದಿನವಾದರೂ ಅಂತಹ ಕಷ್ಟ ಕಾಲದಲ್ಲೂ ದೇವರನ್ನು ನಿಂದಿಸಿದ್ದರೆ ನಿನ್ನನ್ನು ಉಪೇಕ್ಷಿಸಬಹುದಿತ್ತು. ಲಕ್ಷ್ಮಿ ಇಲ್ಲ ಸಾಧ್ಯವೇ ಇಲ್ಲ. ನೀನು ಪ್ರತಿಯೊಂದು ಮಾನವೀಯ ಮೌಲ್ಯಗಳಿಗೆ ಭಾಷ್ಯವನ್ನೇ ಬರೆಯುವಷ್ಟು ವರ್ತಿಸಿದ್ದೆ. ವರ್ತಮಾನಕ್ಕೆ ಸಾಕ್ಷಿಯಾಗಿ ಬದುಕುವ ಜಾಣೆಯಾಗಿದ್ದೆ. ವೈರತ್ವವೆಂಬ ಪದವೂ ನಿನ್ನ ಬಳಿ ಸುಳಿಯಲಾರದಂತಿದ್ದೆ. ಇಷ್ಟೆಲ್ಲ ವಿಶೇಷಣಗಳಿಂದೊಡಗೂಡಿದ ನಿನ್ನ ಅಸ್ತಿತ್ವವನ್ನು ಅದೆಂತು....  ಅದೆಂತು ಮರೆಯಲಿ?  


ಬೆಳಗ್ಗೆ ನಿದ್ದೆಯಿಂದ ಎಚ್ಚರವಾಗುವಾಗ ಅಡುಗೆ ಮನೆಯ ಪಾತ್ರೆಗಳ ಸದ್ದು ಕೇಳಿಸುತ್ತದೆ. ಮುಖ ತೊಳೆದು ಬಂದಾಗ ಸವಿರುಚಿಯ ಚಾಯವನ್ನು ಎದುರಿಟ್ಟಂತೆ ಭಾಸವಾಗುತ್ತದೆ. ತಿಂಡಿ ತಿನ್ನವಾಗ ಒತ್ತಾಯದಿಂದ ಬಡಿಸುತ್ತಿ ಎಂದೆನಿಸುತ್ತದೆ. ಅಡುಗೆಯಲ್ಲಿ ತೊಡಗುವಾಗ ಹಿಂದೆ ಮುಂದೆ ತಿರುಗಿ ಸಲಹೆಗಳನ್ನು ಕೊಡುತ್ತಲೇ ಇರುತ್ತಿ ಎನಿಸುತ್ತಿದೆ. ಮನೆಯಿಂದ ಹೊರಗೆ ಹೋಗುವಾಗ ಬಾಗಿಲಿನವರೆಗೆ ಬಂದು ಬೀಳ್ಕೊಟ್ಟು ಟಾಟಾ ಹೇಳುವ ಭಂಗಿ ಕಣ್ಣಿಗೆ ಕಾಣುತ್ತದೆ. ಫೋನು, ಹಣ, ವಾಚು ಮರೆಯದಂತೆ ಎಚ್ಚರಿಸುವುದು ನೆನಪಾಗುತ್ತದೆ. ಮನೆಗೆ ಬರುವ ವೇಳೆ ದಾಟಿದೊಡನೆ ಫೋನು ರಿಂಗಿಣಿಸಿದಂತೆ ಭ್ರಮೆಯಾಗುತ್ತದೆ. ಹೋಟೆಲಿಗೆ ಹೋದರೆ ನೀನು ಕೂರುವ ಜಾಗ, ನೀನು ತಿನ್ನುವ ತಿಂಡಿ ಅಪ್ಯಾಯಮಾನವಾಗುತ್ತದೆ. ವಾಪಸು ಮನೆಗೆ ಬಂದಾಗ ಅದೆಷ್ಟೇ ಸುಸ್ತಾದರೂ ನವ ಚೈತನ್ಯ ನೀಡುವ ನಿನ್ನ ನಗುಮೊಗದ ಸ್ವಾಗತವೇ ಕಂಡಂತಾಗುತ್ತದೆ. ಒಂದು ಗೃಹಿಣಿಯಾದವಳು, ಪತ್ನಿಯಾದವಳು ಅದು ಹೇಗಿರಬೇಕೋ ಅದಕ್ಕಿಂತ ಒಂದಷ್ಟು ಮೇಲ್ಮಟ್ಟದಲ್ಲೇ ನಿನ್ನ ವ್ಯವಹಾರಗಳಿದ್ದವು. ಯಾವನೇ ಆದರು ಇದಕ್ಕಿಂತ ಹೆಚ್ಚೇನೂ ಬಯಸಲಾರ. ಬಯಸಲೂ ಕೂಡದು. ಕ್ಷಣಕಾಲವಷ್ಟೆ... ಇದೆಲ್ಲವೂ ಹಿಂದೆ ನಡೆದ ಘಟನೆಗಳೆಂದು ಅರಿವಾದಾಗ ನಿರಾಶೆಯಲ್ಲದೆ ಅನ್ಯ ಭಾವ ಶೂನ್ಯವೇ.  

ಸಂಸಾರವೆಂಬಂಥ ಈ ನಾಟಕದಲ್ಲಿ ಗೃಹಿಣಿ ಎಂಬ ಪಾತ್ರವನು ಅದೆಷ್ಟು ಸೊಗಸಾಗಿ ನಿರ್ವಹಿಸಿದೆ. ಹೌದು ಲಕ್ಷ್ಮಿ ನಿನಗೆ ನೀನೇ ಸಾಟಿ. ನಾಟಕದ ಮುಂದಿನ ಅಂಕಗಳು ಅದೆಷ್ಟಿವೆಯೋ ಗೊತ್ತಿಲ್ಲ. ಅಂಕೆಯು ಅವನಲ್ಲಿದೆ. ಆದರೆ ನಿನ್ನ ಆಗಮನವಾದಂದಿನಿಂದ ನಿರ್ಗಮನದವರೆಗೂ ಕಥಾನಾಯಕಿಯದ್ದೇ ಕಥೆಯಂತಿದ್ದೆ. ನಿನ್ನ ನಿರ್ಗಮನದ ನಂತರ ಈ ನಾಟಕ ಕಳೆಗುಂದಿದೆ. ಇಲ್ಲಿ ಇನ್ನು ಯಾವ ಪಾತ್ರಗಳೂ ನಿನ್ನ ಅಭಿನಯಕ್ಕೆ ಹತ್ತಿರವೂ ಬಾರವು ಮತ್ತೆ ಸಾಟಿ ಎಲ್ಲಿಂದ? ನಿನ್ನಂಥ ಕಲಾವಿದೆ ಇರಲು ಯಾವ ನಾಟಕವೂ ಸುಸೂತ್ರವೇ. ಆದರೆ ಈಗ ಸೂತ್ರವೇ ಇಲ್ಲದ ಗಾಳಿಪಟದಂತಾಗಿದೆ, ನಾವಿಕನಿಲ್ಲದ ನೌಕೆಯಂತಾಗಿದೆ, ನಾಯಕನಿಲ್ಲದ ಸೈನ್ಯದಂತಾಗಿದೆ, ಗೊಲ್ಲನಿಲ್ಲದ ಗೋವಿನಂತಾಗಿದೆ ಅಂತೆಯೇ ಲಕ್ಷ್ಮಿ ನಾನಿಂದು ಚೈತನ್ಯವಿಲ್ಲದ ಚೇತನದಂತಾದೆ. ಜನನ ಮರಣ ಸಹಜ. ಇದು ಸತ್ಯ. ಆದರೆ ಇದರ ನಡುವೆ ಬಾಳಿದ ಜೀವನವಷ್ಟೆ ಜೀವಿಯ ಸಾಧನೆ. ಅಂತಹ ಸಾಧನೆ ನಿನ್ನಿಂದ ಬಹಳವಾಗಿ ಕಲಿತರುವೆವನು. ಈ ಜನ್ಮದಲ್ಲಿ ನಿನ್ನೊಡನೆ ನಿನ್ನ ಪತಿಯಾಗಿ ನಾನು ಕಳೆದ ದಿನಗಳು ಅದ್ಯಾವ ಪುಣ್ಯದಿಂದ ಲಭಿಸಿದವೋ ಕಾಣೆ. ಮುಂದೆಯೂ ಆ ದೇವರು ನನಗೆ ಆಯ್ಕೆ ಕೊಟ್ಟಲ್ಲಿ ನಿನ್ನೊಡನೆಯೇ ಬಾಳುವ ವರವನ್ನು ಕೊಡು ಎಂದು ಆ ದೇವರಲ್ಲಿ ನನ್ನ ಪ್ರಾರ್ಥನೆಯನ್ನಷ್ಟೇ ನಾನೀಗ ಸಲ್ಲಿಸಬಹುದು. ಎಲ್ಲೇ ಇರು ಹೇಗೇ ಇರು ಸುಖವಾಗಿರು ಲಕ್ಷ್ಮಿ, ಶಾಶ್ವತ ಸುಖವಾಗಿರು.. 

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم