ಅನುಭವ ಮತ್ತು ಅನುಭಾವದ ನಡುವೆ ನಿಂತ ಮಹಾನ್ ಕವಿ ಬೇಂದ್ರೆ: ಡಾ.ವಿನಾಯಕ ಭಟ್ಟ
ಪುತ್ತೂರು: ವರಕವಿ ಬೇಂದ್ರೆಯವರನ್ನು ನೆನಪಿಸಿಕೊಳ್ಳುವುದೆಂದರೆ ಕಾವ್ಯಪರಂಪರೆಯನ್ನು ನೆನಪಿಸಿಕೊಂಡಂತೆ. ಅನುಭವ ಮತ್ತು ಅನುಭಾವದ ನಡುವೆ ನಿಂತ ಮಹಾನ್ ಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ. ಸಾಹಿತ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಸಂಚಲನ ಮೂಡಿಸಿದ ವಿಶೇಷ ವ್ಯಕ್ತಿತ್ವ ಅವರದ್ದು ಎಂದು ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನಗರದ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಹೇಳಿದರು.
ಅವರು ಕಾಲೇಜಿನ ಕನ್ನಡ ಸಂಘ ಹಾಗೂ ಐಕ್ಯುಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ಸೋಮವಾರ ದ.ರಾ.ಬೇಂದ್ರೆ ಅವರ ಜನ್ಮದಿನದ ನೆಲೆಯಲ್ಲಿ ಆಯೋಜಿಸಲಾದ ಕಾಲೇಜು ವಿದ್ಯಾರ್ಥಿಗಳ ನಡುವಣ ಭಾವಗೀತೆ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾಷೆಗೆ ಸೌಂದರ್ಯರೂಪ ಸಿಕ್ಕಾಗ ಅದು ಕಾವ್ಯವಾಗುತ್ತದೆ. ಯಾವುದೇ ಒಂದು ಸಾಹಿತ್ಯಾಧ್ಯಯನಕ್ಕೆ ತಳಸ್ಪರ್ಶಿಯಾದ ಅರ್ಹತೆ ಇರಬೇಕು. ಕಾವ್ಯದ ಆಶಯವನ್ನು ತಿಳಿದುಕೊಳ್ಳುವ ಸಂಸ್ಕಾರವನ್ನು ಮನಸ್ಸಿಗೆ ನೀಡಿರಬೇಕು. ಕವಿಹೃದಯವನ್ನು ಅರ್ಥ ಮಾಡಿಕೊಂಡು ಕಾವ್ಯದ ಬಗೆಗೆ ಅಧ್ಯಯನ ನಡೆಸಿದಾಗ ವಿನೂತನ ಹೊಳಹುಗಳು ಕಾಣಿಸಿಕೊಳ್ಳುವುದಕ್ಕೆ ಸಾಧ್ಯ. ಬೇಂದ್ರೆಯವರಂತೂ ಧಾರವಾಡದ ಸಾಧನಕೇರಿಯ ಮೂಲಕ ನಾಡಿನೆಲ್ಲೆಡೆ ಕಂಪು ಪಸರಿಸಿದ ಕವಿ. ದತ್ತು ಮಾಸ್ತರರೆಂಬ ಹೆಸರಿನಿಂದ ಖ್ಯಾತಿ ಪಡೆದ ಅಪರೂಪದ ಸಾಧಕ ಎಂದು ಹೇಳಿದರು.
ಕಾಲೇಜಿನ ಕನ್ನಡ ಉಪನ್ಯಾಸಕ ಗಿರೀಶ್ ಭಟ್ ಕೂವೆತ್ತಂಡ ಮಾತನಾಡಿ ದ.ರಾ.ಬೇಂದ್ರೆಯವರು ಕನ್ನಡ ಸಾಹಿತ್ಯ ಲೋಕಕ್ಕೆ ಎರಡನೆಯ ಜ್ಞಾನಪೀಠ ತಂದಿತ್ತ ವರಕವಿ. ವಿದ್ಯಾರ್ಥಿ ಜೀವನದಲ್ಲೇ ಕೃತಿ ರಚಿಸಿ ಸಾಧನೆ ಮೆರೆದವರು. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿಗೆ ಅನ್ವರ್ಥವಾಗಿ ಬಾಳಿ ಬದುಕಿದವರು. ಅಂತಹ ಮಹಾನ್ ವ್ಯಕ್ತಿತ್ವವನ್ನು ನೆನಪಿಸಿಕೊಳ್ಳಬೇಕಾದ್ದು ವಿದ್ಯಾರ್ಥಿಗಳಾದವರಿಗೆ ಮಾತ್ರವಲ್ಲದೆ ಎಲ್ಲರಿಗೂ ಅತ್ಯಂತ ಅಗತ್ಯ ಎಂದರು.
ಸಭಾ ಕಾರ್ಯಕ್ರಮದ ನಂತರ ನಡೆದ ಭಾವಗೀತೆ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿಯರಾದ ಮಹಿಮಾ ಹೆಗಡೆ, ಅನನ್ಯ ಮತ್ತು ತಂಡ, ಚೈತನ್ಯ, ದಿಶಾ ಹಾಗೂ ಸ್ಪೂರ್ತಿ, ನಯನ ಮತ್ತು ತಂಡ, ವೈಷ್ಣವೀ ಜೆ ರಾವ್ ಹಾಗೂ ಅದಿತಿ ಎಂ.ಎಸ್ ಅಲ್ಲದೆ ವಿದ್ಯಾರ್ಥಿ ಅನ್ವಯ್ ಭಟ್ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ, ಕಾಲೇಜಿನ ಕನ್ನಡ ಉಪನ್ಯಾಸಕಿಯರಾದ ಪುಷ್ಪಲತಾ ಹಾಗೂ ಜಯಂತಿ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಗಣೇಶ್ ಪ್ರಸಾದ್ ಎ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ ಕುಮಾರ್ ಕಮ್ಮಜೆ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಅಭಿಷೇಕ್ ಎನ್, ಇಂಗ್ಲಿಷ್ ಉಪನ್ಯಾಸಕಿ ಸಂಧ್ಯಾ ಎಂ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ ಭಾವಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಿದರು. ವಿದ್ಯಾರ್ಥಿನಿ ಸಾಯಿಶ್ವೇತಾ ಕಾರ್ಯಕ್ರಮ ನಿರ್ವಹಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ