ದೀರ್ಘಾವಧಿಯಲ್ಲಿ ಕ್ಷಮತೆ ಹಾಗೂ ಬೆಳವಣಿಗೆಯ ಕನಸನ್ನು ಸಾಕಾರಗೊಳಿಸುವ ಬಜೆಟ್

Upayuktha
0


-ಡಾ. ಎ. ಜಯಕುಮಾರ ಶೆಟ್ಟಿ


ಇಂದು ಬಹುನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆಯಾಗಿದೆ. ಜನಪ್ರಿಯತೆಗೆ ಒತ್ತು ನೀಡದೆ ದೀರ್ಘಾವಧಿಯಲ್ಲಿ ಕ್ಷಮತೆ ಮತ್ತು ಬೆಳವಣಿಗೆಯ ಕನಸನ್ನು ಸಾಕಾರಗೊಳಿಸುವ ಬಜೆಟ್ ಇದಾಗಿದೆ. ಇದೇ ಸಂದರ್ಭದಲ್ಲಿ ದೇಶದ ಆರ್ಥಿಕ ಸಮೀಕ್ಷೆಯನ್ನೂ ಸಹ ಮಂಡಿಸಲಾಗಿದ್ದು ದೇಶದ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆ ಸರಾಸರಿ ೨೧-೨೨ರ ಸಾಲಿನಲ್ಲಿ ಶೇ 9.2 ಮುಟ್ಟುವ ಕನಸು ಇದೆ. ಇದು ವಿಶ್ವದ ಎಲ್ಲ ಬೃಹತ್ ಆರ್ಥಿಕತೆಗಳಲ್ಲಿಯೇ ಗರಿಷ್ಠ ಮಟ್ಟದ್ದು. ನಾವು ನಮ್ಮೆಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದ್ದೇವೆ ಎಂದು ಸ್ಪಷ್ಟಪಡಿಸುತ್ತದೆ.


ಉದಯೋನ್ಮುಖ ಜಾಗತಿಕ ಆರ್ಥಿಕತೆಯ ಕೇಂದ್ರ:

ಆಯವ್ಯಯವು ಆರ್ಥಿಕ ಹಿಂಜರಿತ ಸರಿಪಡಿಸುವ ದೃಷ್ಟಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿ ಹೊಂದಿದೆ. ಬಹು-ಮಾದರಿಯ ಮೂಲಸೌಕರ್ಯ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ಬಜೆಟಿನಲ್ಲಿ ಘೋಷಿಸಲಾಗಿದೆ. ಹೀಗಾಗಿ ಭಾರತವು ಉದಯೋನ್ಮುಖ ಜಾಗತಿಕ ಆರ್ಥಿಕತೆಯ ಕೇಂದ್ರವಾಗಿ ನಿಲ್ಲಲಿದೆ. ಬಹುಮಾದರಿಯ ಮೂಲಸೌಕರ್ಯ ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ಬಜೆಟಿನಲ್ಲಿ ಘೋಷಿಸಲಾಗಿದೆ. ಹೀಗಾಗಿ ಭಾರತವು ಉದಯೋನ್ಮುಖ ಜಾಗತಿಕ ಆರ್ಥಿಕತೆಯ ಕೇಂದ್ರವಾಗಿ ನಿಲ್ಲಲಿದೆ.


ಹೆಚ್ಚಲಿರುವ ಬಂಡವಾಳ ಹೂಡಿಕೆಯ ಮಟ್ಟ:

ಬಂಡವಾಳ ಹೂಡಿಕೆಯು ಕೈಗಾರಿಕೆಗಳಲ್ಲಿ ಉದ್ಯೋಗವನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಮಹಾಮಾರಿಯ ಪರಿಣಾಮಗಳಿಂದ ಹೊರಬರಲು ಇದು ಅವಶ್ಯಕ ಕೂಡಾ. ಖಾಸಗಿ ಹೂಡಿಕೆದಾರರ ಸಾಮರ್ಥ್ಯವನ್ನು 5.54 ಲಕ್ಷ ಕೋಟಿ ರೂ.ಗಳಿಂದ 7.55 ಲಕ್ಷ ಕೋಟಿ ರೂ. ಹೂಡಿಕೆ ಹೆಚ್ಚಿಸುವ ಗುರಿ ಹೊಂದಿದೆ. ಮೇಕ್ ಇನ್ ಇಂಡಿಯಾ ಮೂಲಕ 60 ಲಕ್ಷ ಉದ್ಯೋಗ ಸೃಷ್ಠಿ ಮಾಡುವ ಹಾಗೂ 30 ಲಕ್ಷ ಕೋಟಿ ಹೆಚ್ಚುವರಿ ಉತ್ಪಾದನೆಯನ್ನು ರಚಿಸುವ ಸಾಮರ್ಥ್ಯದ ಗುರಿ ಅಭಿನಂದನೀಯ.


ಈಕ್ವಿಟಿ ಶೇರ್ ಮತ್ತು ಇತರ ದೀರ್ಘಾವಧಿ ಹೂಡಿಕೆಗಳ ಮೇಲಿನ ಕ್ಯಾಪಿಟಲ್ ಗೈನ್ಸ್ ಶೇ 37ರಿಂದ ೧೫ಕ್ಕೆ ಇಳಿಕೆ ಹೂಡಿಕೆಗಳಿಗೆ ಉತ್ತೇಜನ ನೀಡಬಲ್ಲುದು. ೫೦ ವರ್ಷಗಳ ಕಾಲ ರಾಜ್ಯ ಸರಕಾರಗಳಿಗೆ ಬಡ್ಡಿರಹಿತ ಒಂದು ಲಕ್ಷ ಕೋಟಿ ರೂಪಾಯಿ ಸಾಲ ಯೋಜನೆಯು ಡಿಜಿಟಲೈಸೇಷನ್ ಹಾಗೂ ನಗರಗಳ ಬೆಳವಣಿಗೆಗೆ ಉತ್ತೇಜನ ನೀಡಲಿದೆ.


ಕ್ಷಮತೆ ಹಾಗೂ ಬೆಳವಣಿಗೆಯ ಕನಸಿನ ಬಜೆಟ್:

ಭಾರತವನ್ನು ಆತ್ಮನಿರ್ಭರವನ್ನಾಗಿ ಮಾಡುವ ಮತ್ತು ಸದೃಡಗೊಳಿಸುವ ಗುರಿಯನ್ನು ಹೊಂದಿರುವ ಈ ಬಜೆಟ್ ದೀರ್ಘಾವಧಿಯಲ್ಲಿ ಕ್ಷಮತೆ ಹಾಗೂ ಬೆಳವಣಿಗೆಯ ಕನಸನ್ನು ಸಾಕಾರಗೊಳಿಸುತ್ತದೆ. ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ನ ಅತಿಮುಖ್ಯ ಅಂಶಗಳೆಂದರೆ ಪಿಎಂ ಗತಿಶಕ್ತಿ, ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ, ಉತ್ಪಾದಕತೆಯ ವೃದ್ದಿ, ಅವಕಾಶಗಳ ಹೆಚ್ಚಳ, ವಿದ್ಯುತ್ ಉತ್ಪಾದನೆ, ವಿತರಣೆಯಲ್ಲಿ ಸುಧಾರಣೆ, ಪರಿಸರ ಸಂರಕ್ಷಣೆ, ವ್ಯವಸ್ಥಿತ ಹೂಡಿಕೆಗಳಿಗೆ ಒತ್ತು.


ರೈತರ ಮುಖದಲ್ಲಿ ಮಂದಹಾಸ:

ಎಂಎಸ್ ಪಿ ಮೂಲಕ ರೈತರ ಖಾತೆಗೆ 2.37 ಲಕ್ಷ ಕೋಟಿ ರೂ.ಜಮೆ ಆಗಲಿದೆ. ಮಾರುಕಟ್ಟೆಯಲ್ಲಿ ಬೆಳೆಗೆ ಬೆಲೆ ಕುಸಿದರೂ ಸರಕಾರ ರೈತನಿಗೆ ಎಂಎಸ್ ಪಿ ಪ್ರಕಾರ ಹಣ ನೀಡುತ್ತದೆ. ಇದರೊಂದಿಗೆ ರೈತರು ತಮ್ಮ ಬೆಳೆಗೆ ನಿಗದಿತ ಬೆಲೆ ಪಡೆಯಲು ಸಾಧ್ಯವಾಗುತ್ತದೆ. ನದಿ ಜೋಡಣೆ ಯೋಜನೆ 25 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಅನುಕೂಲವಾಗಲಿದೆ. ದೇಶದಲ್ಲಿ ರಾಸಾಯನಿಕ ಮುಕ್ತ ಸಹಜ ಕೃಷಿಗೆ ಹೆಚ್ಚು ಒತ್ತು ನೀಡಲಿದೆ.

ಮೂಲ ಸೌಕರ್ಯ, ಹೈವೇಗಳು, 400 ರೈಲು ಯೋಜನೆಗಳ ಘೋಷಣೆಯಾಗಿದೆ. ಸ್ವದೇಶಿಯವಾಗಿ ಉತ್ಪಾದಿಸಲ್ಪಡುವ ’ಒಂದೇ ಭಾರತ್ ರೈಲು’ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಉತ್ತೇಜನ ನೀಡಲಿರುವುದು ಸ್ವಾಗತಾರ್ಹ.


ಆರ್ಥಿಕತೆಗೆ ಉತ್ತೇಜನ ನೀಡಲಿರುವ ಡಿಜಿಟಲ್ ಕರೆನ್ಸಿ:

ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆಗೊಳಿಸಲಿರುವ ’ಸೆಂಟ್ರಲ್ ಬ್ಯಾಂಕ್ ಡಿಝಿಟಲ್ ಕರೆನ್ಸಿ’ ವರ್ಚುವಲ್ ಅಥವಾ ಕ್ರಿಪ್ಟೊಕರೆನ್ಸಿಯಾಗಿದ್ದು ರೂಪಾಇಯ್ಗೆ ಪರ್ಯಾಯವಾಗಿ ಬಳಸಬಹುದಾಗಿದೆ. ಸರಕಾರಿ ಡಿಜಿಟಲ್ ಕರೆನ್ಸಿ ಇತರ ಕ್ರಿಪ್ಟೊಕರೆನ್ಸಿಗಳಿಂದ ಆರ್ಥಿಕತೆಗೆ ಆಗಲಿರುವ ಸಂಭವನೀಯ ಅಪಾಯವನ್ನು ಕಡಿಮೆ ಮಾಡಲಿದೆ.


ಡಿಜಿಟಲ್ ವಿಶ್ವವಿದ್ಯಾಲಯ:

ವಿದ್ಯಾರ್ಥಿಗಳಿಗೆ ವಿಶ್ವ ದರ್ಜೆಯ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಡಿಜಿಟಲ್ ವಿಶ್ವವಿದ್ಯಾಲಯಗಳನ್ನು ಪ್ರಾರಂಭಿಸಲಾಗುವುದು ಹಾಗೂ ಅಭಿವೃದ್ಧಿಪಡಿಸಲಾಗುವುದು. ಒನ್ ಕ್ಲಾಸ್, ಒನ್ ಟಿವಿ ಚಾನಲ್ ಯೋಜನೆಯನ್ನು 12ನೇ ತರಗತಿವರೆಗಿನ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಆರಂಭಿಸುವ ನಿರ್ಧಾರ ಪ್ರಮುಖವಾಗಿ ಬಡ ಹಾಗೂ ಗ್ರಾಮೀಣ ಪ್ರತಿಭೆಗಳಿಗೆ ಸಹಾಯಕವಾಗಿದೆ.


ಆದಾಯ ತೆರಿಗೆ ಹಳೆ ಪದ್ಧತಿ-ಹೊಸ ಪದ್ಧತಿ:

ಪ್ರಸ್ತುತ ದೇಶದಲ್ಲಿ ಆದಾಯ ತೆರಿಗೆ ಪಾವತಿಗಾಗಿ ಹೊಸ ಪದ್ಧತಿ ಮತ್ತು ಹಳೆ ಪದ್ಧತಿ ಎಂಬ ಎರಡು ವಿಧಾನಗಳಿವೆ. ಹಳೆ ಪದ್ಧತಿಯನ್ನು ಪೂರ್ತಿ ತೆಗೆದು ಹಾಕಿ ಹೊಸ ಪದ್ಧತಿಯನ್ನು ಕಡ್ಡಾಯಗೊಳಿಸುತ್ತದೆ ಎಂಬ ಆತಂಕವೂ ಇತ್ತು. ಈ ಆತಂಕವು ಈಗ ಮರೆಯಾಗಿದೆ. ಕೊರೋನಾ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಈ ಬಾರಿ ತೆರಿಗೆಯಲ್ಲಿ ಕೆಲ ವಿನಾಯ್ತಿಗಳು ಸಿಗಬಹುದು ಎಂಬ ನಿರೀಕ್ಷೆಯಿತ್ತು. ಇಂತಹ ಯಾವುದೇ ಪ್ರಸ್ತಾವಗಳು ಇಂದು ಪ್ರಕಟವಾಗಿಲ್ಲ. ಆದರೆ ಆದಾಯ ತೆರಿಗೆಗೆ ಈ ಬಾರಿ ಯಾವುದೇ ಹೊಸ ಸೆಸ್ ಅಥವಾ ಸರ್ಚಾರ್ಜ್ ಎನ್ನುವುದು ಸಮಾಧಾನದ ಸಂಗತಿ.


ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946


ಹೆಚ್ಚಿದ ಬಂಡವಾಳ ವೆಚ್ಚ:

ಈ ಬಾರಿಯ ಬಜೆಟ್ ನಲ್ಲಿ ಬಂಡವಾಳ ವೆಚ್ಚವನ್ನು ಶೇ 35.4 ರಷ್ಟು ಹೆಚ್ಚಿಸಲಾಗಿದೆ. ಇದು ದೇಶದ ರಾಷ್ಟ್ರೀಯ ಆಸ್ತಿ ಹೆಚ್ಚಿಸುವ ಉದ್ದೇಶಕ್ಕಾಗಿ ಬಳಕೆಯಾಗಲಿದೆ. ಒಟ್ಟು ಜಿಡಿಪಿಯ ಶೇ 2.9ರಷ್ಟು ಮೊತ್ತವನ್ನು (ರೂ.10.9 ಲಕ್ಷ ಕೋಟಿ) ಬಂಡವಾಳ ವೆಚ್ಚಕ್ಕೆ ಮೀಸಲಿಡಲಾಗಿದೆ.


ಡಿಜಿಟಲ್ ಕಲಿಕೆ, ಕೌಶಲ್ಯಗಳ ಪೂರೈಕೆ ಮತ್ತು ನವೋದ್ಯಮಗಳ ಬೆಳವಣಿಗೆಗೆ ಒತ್ತು ನೀಡುವ ಕ್ರಮ ಸಮಕಾಲೀನ ಜಾಗತಿಕ ಅಗತ್ಯಗಳಿಗೆ ತಕ್ಕಂತೆ ಕೈಗೊಂಡಿರುವ ದಿಟ್ಟ ಹೆಜ್ಜೆಗಳು. ಸಂಶೋಧನೆ ಹಾಗೂ ನಾವಿನ್ಯತೆಗಳಿಗೆ ಆದ್ಯತೆ ನೀಡಿರುವುದು ಸ್ವಾಗತಾರ್ಹ.



(ಲೇಖಕರು: ಡಾ. ಎ. ಜಯಕುಮಾರ ಶೆಟ್ಟಿ, ಮುಖ್ಯಸ್ಥರು, ಅರ್ಥಶಾಸ್ತ್ರ ವಿಭಾಗ, ಎಸ್‌ಡಿಎಂ ಕಾಲೇಜು ಉಜಿರೆ)

Post a Comment

0 Comments
Post a Comment (0)
To Top