ಮೈಸೂರಿನಲ್ಲಿ ಲೇಖಕಿ, ಕಲಾವಿದೆ, ಹೋಟೇಲ್ ಉದ್ಯಮಿ ಡಾ. ಶ್ವೇತಾ ಮಡಪ್ಪಾಡಿ ಅಭಿಮತ
ಮೈಸೂರು: ವಿದ್ಯಾಸಂಸ್ಥೆಗಳಲ್ಲಿ ಹಿಜಾಬ್ ಮಾತ್ರವಲ್ಲ, ಕೇಸರಿ, ನೀಲಿ, ಕೆಂಪು, ಕಪ್ಪು ಯಾವುದಕ್ಕೂ ಆದ್ಯತೆಯಿಲ್ಲದ ಕೇವಲ ವಿದ್ಯೆಯನ್ನಷ್ಟೇ ಕೇಂದ್ರೀಕರಿಸಬಲ್ಲ ಸಮವಸ್ತ್ರಕ್ಕಷ್ಟೇ ಆದ್ಯತೆಯಿರಲಿ. ಆ ಮೂಲಕ ಎಲ್ಲರೂ ವಿವಿಧತೆಯಲ್ಲಿ ಏಕತೆ ಕಾಣಲಿ' ಎಂದು ಲೇಖಕಿ, ಕಲಾವಿದೆ, ಹೋಟೆಲ್ ಉದ್ಯಮಿಯೂ ಆಗಿರುವ ಡಾ. ಶ್ವೇತಾ ಮಡಪ್ಪಾಡಿ ಹೇಳಿದರು. ಮೈಸೂರಿನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಹೇಳಿದ್ದಿಷ್ಟು:
'ವಿದ್ಯಾಸಂಸ್ಥೆಗಳಲ್ಲಿನ ಸಮವಸ್ತ್ರವು ಸೌಹಾರ್ದತೆ ಹಾಗೂ ಸಮಾನತೆಗೆ ದಾರಿಯಾಗುವುದು' ನಾವು ದೂರದಲ್ಲಿ ನಿಂತು ರಾಜಕಾರಣಿಗಳಾಗಿಯೋ, ವಿಚಾರವಾದಿಗಳಾಗಿಯೋ, ಅಥವಾ ಧರ್ಮಪರ ಯೋಚನೆಯುಳ್ಳವರಾಗಿಯೋ ಶೈಕ್ಷಣಿಕ ಸಂಸ್ಥೆಗಳನ್ನು ಚಿಂತನೆಗೆ ಒಳಪಡಿಸುವುದರಿಂದ ಆಗಬಹುದಾದ ಎಲ್ಲಾ ತೊಂದರೆಗಳೂ ಇಂದು ನಮ್ಮೆದುರಿಗೆ ಬಂದು ನಿಂತಿವೆ.
“ವಿದ್ಯಾರ್ಥಿ ಜೀವನವೆಂಬುದು ತಪ:ಸ್ಸಾಧನೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಒಬ್ಬ ಗೌರವ ತಪಸ್ವಿ” ಎಂದು ಕುವೆಂಪು ಹೇಳಿದ್ದಾರೆ. ಕಾಲೇಜಿನಲ್ಲಿ ಭವಿಷ್ಯದ ಸುಂದರ ಕನಸುಗಳನ್ನು ಧ್ಯಾನಿಸಿ, ಜ್ಙಾನ ಸರಸ್ವತಿಯನ್ನಷ್ಟೇ ಆರಾಧಿಸಿ ತಮ್ಮ ಸಾಧನೆಯನ್ನಷ್ಟೇ ಗುನುಗಬೇಕಾದ ಯುವ ಮನಸುಗಳು ಇಂದು ‘ವಸ್ತ್ರರಾಜಕಾರಣ’ದ ಗುಂಗಿನಲ್ಲಿ ಕಳೆದುಹೋಗುತ್ತಿದ್ದಾರೆ.
ಮತೀಯ ಅಮಲು ಬಹಳ ಅಪಾಯಕಾರಿ ವಿಷವಿದ್ದಂತೆ. ಅದನ್ನು ನಾವು ಯುವ ಸಮುದಾಯಕ್ಕೆ ದಾಟಿಸುತ್ತಿರುವುದು ಭವಿಷ್ಯzಲ್ಲಿ ಎದುರಾಗಬಹುದಾದ ಅತೀ ದೊಡ್ಡ ದುರಂತವನ್ನು ನಮ್ಮ ಮುಂದೆ ತೆರೆದಿಟ್ಟಿದೆ.
ಇಂಥ ವಿಷಮ ಪರಿಸ್ಥಿತಿಯಲ್ಲಿ ನಾನೊಬ್ಬಳು ಅಧ್ಯಾಪಕಿಯಾಗಿ, ಕಲಾವಿದೆಯಾಗಿ, ಲೇಖಕಿಯಾಗಿ ಎಲ್ಲಕ್ಕಿಂತ ಮುಖ್ಯವಾಗಿ ಒಬ್ಬಳು ಈ ದೇಶದ ನಾಗರೀಕಳಾಗಿ ನಮ್ಮ ಶೈಕ್ಷಣಿಕ ಸಂಸ್ಥೆಗಳ ಈ ಅಪಾಯಕಾರಿ ಸನ್ನಿವೇ಼ಷದ ಕುರಿತು ಪ್ರತಿಕ್ರಿಯೆ ನೀಡುವುದು ಬಹುಮುಖ್ಯವೆಂದು ಭಾವಿಸುತ್ತೇನೆ.
ನಾವಿಲ್ಲಿ ವಿದ್ಯಾಸಂಸ್ಥೆಗಳನ್ನು ಶೈಕ್ಷಣಿಕ ಭಾಗವಾಗಿಯಷ್ಟೇ ಮುಖ್ಯಮಾಡಬೇಕು.
ಶಾಲಾಕಾಲೇಜುಗಳ ಶಿಕ್ಷಣವೆಂದರೆ ಅದು ಪ್ರತೀ ವಿದ್ಯಾರ್ಥಿಯನ್ನು ಒಬ್ಬ ಗೌರವ ತಪಸ್ವಿಯನ್ನಾಗಿ ನಿರ್ಮಿಸಬಹುದಾದ ಜಾಗ.
ಶಿಕ್ಷಣ ಕೇಂದ್ರಗಳ ಕಲಿಕೆಯೆಂದರೆ ಅದು ಮನೆಯ ಕಲಿಕೆಗಳಿಗಿಂತ ಭಿನ್ನವಾದುದು. ಮತ್ತು ಮನೆಯಲ್ಲಿನ ಕಟ್ಟುಪಾಡುಗಳಿಂದ ಒಂದಷ್ಟು ದೂರವುಳಿದು ಹೊಸತನದ ಶಿಕ್ಷಣವನ್ನು ಕರಗತ ಮಾಡಿಕೊಳ್ಳಲು ಅವಕಾಶವಿರಬಹುದಾದ ಜಾಗ.
ನಮ್ಮಲ್ಲಿ ಗಾಂಧಿ, ಅಂಬೇಡ್ಕರ್‌ರಿಂದ ಹಿಡಿದು ಹಲವು ಸಾಮಾಜಿಕ ಸುಧಾರಣೆಗಳಲ್ಲಿ ಬಹುಡೊಡ್ಡ ಪಾತ್ರವಹಿಸಿದ ಆದರ್ಶ ಪ್ರಾಯರು ಭಾರತದ ಹೊಸ ಶಿಕ್ಷಣ ವ್ಯವಸ್ಥೆಯಿಂದ, ಹಾಗೇಯೇ ಶಾಲಾಶಿಕ್ಷಣ ವ್ಯವಸ್ಥೆಯು ರೂಪುಗೊಳಿಸಿದ ಶೈಕ್ಷಣಿಕ ಕಾರ್ಯಕ್ರಮಗಳ ಪರಿಣಾಮದಿಂದ ತಯಾರಾದವರೆಂಬ ಅಂಶವನ್ನು ನಾವು ಮರೆಯುವಂತಿಲ್ಲ.
ಹೀಗಾಗಿ ಮನೆಯೊಳಗಿನ ಪಾರಂಪರಿಕತೆ ನೀಡುವ ಜ್ಙಾನಕ್ಕೆ ಭಿನ್ನವಾದುದನ್ನು ಶೈಕ್ಷಣಿಕ ಸಂಸ್ಥೆಗಳು ನೀಡಬಲ್ಲವು.
ಅಲ್ಲದೇ ಸ್ವಾತಂತ್ರö್ಯದ ಅರ್ಥ, ಸೌಹಾರ್ದತೆಯ ಸೌಂದರ್ಯ, ವಿದ್ಯೆಯ ಮಹತ್ವ ಎಲ್ಲವನ್ನೂ ಅರಿತು ಜ್ಞಾನದ ಹಸಿವನ್ನು ನೀಗಿಸಿಕೊಳ್ಳಬಹುದಾದ ಜಾಗವನ್ನು ನಾವು ಪರಂಪರೆ, ಧರ್ಮ ಮತ್ತು ಅದರ ಹಕ್ಕಿನ ಕಾರಣ ನೀಡಿ ಹೊಸ ಬಗೆಯ ಧರ್ಮಸಂಕಟಕ್ಕೆ ತೆರೆದುಕೊಳ್ಳುವುದಕ್ಕೆ ಉತ್ಸುಕರಾಗಿರುವು ಅತ್ಯಂತ ಆತಂಕಕಾರಿ.
ನನ್ನ ಬಾಲ್ಯದಿಂದ ಯೌವನಕ್ಕೆ ಕಾಲಿಡುವುದರೊಳಗೆ ಸುಮಾರು ಆರು ಶೈಕ್ಷಣಿಕ ಸಂಸ್ಥೆಗಳ ಮೆಟ್ಟಿಲನ್ನು ತುಳಿದಿದ್ದೇನೆ ನಾನು. ಅದರಲ್ಲಿ ಎರಡು ಕ್ರಿಶ್ಛಿನ್ ಸಂಸ್ಥೆಯೂ ಇತ್ತು. ಅಲ್ಲಿ ಮುಸ್ಲಿಂ ವಿದ್ಯಾರ್ಥಿಗಳೂ ಇದ್ದರು. ಆದರೆ ಅಲ್ಲೆಲ್ಲಾ ಇಂಥ ಯಾವ ಆತಂಕದ ಕ್ಷಣಗಳನ್ನೂ ನಾವು ನೋಡಲಿಲ್ಲ. ತರಗತಿಯೊಳಗೆ ಅವರು ನಮ್ಮಂತೆ ಸಮವಸ್ತ್ರದೊಂದಿಗೇ ಕುಳಿತಿರುತ್ತಿದ್ದರು. ಅವರ ಹೆಸರು ಮಾತ್ರ ಅವರ ಧರ್ಮವನ್ನು ಪ್ರತಿನಿಧಿಸುತ್ತಿದ್ದವೇ ಹೊರತು ವಸ್ತ್ರವಲ್ಲ.
ಸಮವಸ್ತ್ರವು ನಮ್ಮೊಳಗೆ ಇಡೀ ತರಗತಿಯನ್ನು ಒಂದಾಗಿ ಬೆಸೆದಿರುತ್ತಿತ್ತು. ಅಪರೂಪಕ್ಕೆ ಯಾರಾದರೂ ದುಬಾರಿ ಬಟ್ಟೆಯನ್ನು ಧರಿಸಿ ಬರುತ್ತಿದ್ದರೆ ನಮ್ಮ ಬಡತನ ನಮ್ಮನ್ನು ಇನ್ನಿಲ್ಲದಂತೆ ಅಣಕಿಸುತ್ತಿದ್ದುದೂ ನೆನಪಿನಲ್ಲಿದೆ.
ಹೀಗಾಗಿ ಆರ್ಥಿಕ ಅಸಮಾನತೆಯನ್ನೂ ಸಮವಸ್ತ್ರವೆಂಬುದು ತರಗತಿಯ ಒಳಗಾದರೂ ನುಂಗಿಹಾಕಬಲ್ಲುದು. ಮತ್ತು ವಿದ್ಯಾಭ್ಯಾಸಕ್ಕೆ ಮಾತ್ರ ಮನಸ್ಸು ಕೇಂದ್ರೀಕರಿಸುವುದಕ್ಕೆ ಸಹಕರಿಸಬಲ್ಲುದು.
ನಮ್ಮ ಬಟ್ಟೆ ನಮ್ಮ ಓದಿನ ಮೇಲೆ ಬಹುವಾಗಿ ಪ್ರಭಾವ ಬೀರುತ್ತದೆಂಬುದನ್ನು ಯಾವ ಕಾರಣಕ್ಕೂ ತಳ್ಳಿ ಹಾಕುವಂತಿಲ್ಲ.
ಹೀಗಾಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಧರಿಸುವ ವಸ್ತ್ರಗಳಲ್ಲಿ ಇರುವ ಏಕರೂಪತೆ ಸಹಪಾಠಿಗಳ ಹೃದಯವನ್ನು ಒಂದಾಗಿ ಬೆಸೆಯುವಲ್ಲೂ ಯಶಸ್ಸು ಕಾಣಬಲ್ಲುದು ಎನ್ನುವುದರಲ್ಲಿ ಎರಡು ಮಾತಿಲ್ಲ.
ಸಮವಸ್ತ್ರವು 'ನಾವೆಲ್ಲಾ ಒಂದು' ಎಂಬ ಭಾವವನ್ನು ಹರಡಬಲ್ಲುದು.
ಈ ದೇಶದ ಮೇಲಿನ ಪ್ರೀತಿ, ಧರ್ಮದ ಮೇಲಿನ ಗೌರವ ಇವೆಲ್ಲವುಗಳಷ್ಟೇ ಮುಖ್ಯ ಶಿಕ್ಷಣದ ಸಂದರ್ಭದಲ್ಲಿ ಮಕ್ಕಳು ತಮ್ಮ ಮನಸ್ಸನ್ನು ಆರೋಗ್ಯಯುತವಾಗಿ ಇಟ್ಟುಕೊಳ್ಳಬೇಕಾಗಿರುವುದು.
ಮಕ್ಕಳಲ್ಲಿ ಶಿಕ್ಷಣದ ಕುರಿತಾದ ಎಚ್ಚರವನ್ನು ತುಂಬುವುದರಲ್ಲಿ ನಾವು ಸಾಮಾಜಿಕರಾಗಿ ಸೋಲುತ್ತಿದ್ದೇವೆ.
ಎಡ-ಬಲ ಪಂಥಗಳೆಲ್ಲ ತಮಗೆ ತೋಚಿದ್ದನ್ನು ಮಾತನಾಡುತ್ತಾ, ಸರಿಯೆನಿಸಿದ್ದನ್ನು ವಾದ ಮಾಡುತ್ತಾ ಹೋದರೆ ನಮ್ಮ ಶಿಕ್ಷಣದ ಶಿಸ್ತು ಹಾಳಾಗಿ ಮಕ್ಕಳ ಭವಿಷ್ಯ ನಾಶವಾಗುತ್ತದೆಯೇ ಹೊರತು ಒಳಿತೇನೂ ಆಗಲಾರದು.
ಈ ಸಂದರ್ಭದ ಕುರಿತು ಮಾತನಾಡುವಾಗ ನಾವು ವಿದ್ಯಾರ್ಥಿಗಳಾಗಿದ್ದ ಕಾಲವನ್ನು ನೆನಪಿಸಿಕೊಳ್ಳಬೇಕಷ್ಟೇ. ಅಲ್ಲೇ ಉತ್ತರ ಸಿಗಬಲ್ಲುದು.
ಸಾಮಾಜಿಕ ಜಾಲತಾಣಗಳಲ್ಲಿ, ಟಿವಿ ಮಾಧ್ಯಮಗಳಲ್ಲಿ ನಡೆಯುತ್ತಿರುವ ವಾದವಿವಾದಗಳ ಮುಖಾಂತರ ಬುರ್ಕಾ, ಕೇಸರಿಶಾಲು, ನೀಲಿ ಶಾಲುಗಳೊಂದಿಗೆ ನಾವು ಹೊಸ ತಲೆಮಾರುಗಳನ್ನು ಸಾಮೂಹಿಕವಾಗಿ ಮತೀಯ ಚಿಂತನೆಗಳತ್ತ ದೂಡುತ್ತಿದ್ದೇವೆ. ಇದು ಒಳ್ಳೆಯ ಬೆಳವಣಿಗೆಯಲ್ಲ.
ಶಿಕ್ಷಣಕ್ಕೆ ಅವಕಾಶ ದೊರೆತ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹವು ಶಾಲೆಯ ನಿಯಮಗಳನ್ನು ಪಾಲಿಸುವುದರಿಂದ ಎಲ್ಲರಿಗೂ ಒಳಿತಾಗಲಿದೆ.
ವಿವೇಚನೆಯಿಂದ ಬುದ್ಧಿ ಹೇಳಬೇಕಾದವರು ಕೂಡ ಇಲ್ಲಿ ದಾರಿ ತಪ್ಪುತ್ತಿದ್ದಂತೆ ಭಾಸವಾಗುತ್ತಿದೆ.
ಶೈಕ್ಷಣಿಕ ಸಂಸ್ಥೆ ಸರಕಾರದ್ದಾಗಲಿ, ಖಾಸಗಿಯದ್ದಾಗಲೀ ಏಕರೂಪದ ನಿಯಮ ತರುವುದು ಎಲ್ಲಾ ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಒಳ್ಳೆಯದು.
ಶೈಕ್ಷಣಿಕ ಸಮವಸ್ತ್ರವು ಧಾರ್ಮಿಕ ಸ್ವಾತಂತ್ರ್ಯಕ್ಕೆ ಯಾವುದೇ ಧಕ್ಕೆ ತರಲಾರದು. ಏಕೆಂದರೆ ಅದು ತರಗತಿಗಷ್ಟೇ ಸೀಮಿತ.
ಹಿಜಾಬ್ ಕುರಿತಾದ ಪ್ರೀತಿ ಗೌರವಕ್ಕೆ ಸಮಾನವಾಗಿ ಶಾಲಾ ಶಿಕ್ಷಣ ಮತ್ತು ಅದಕ್ಕೆ ಸಂಬಂಧಿಸಿದ ಶಿಸ್ತನ್ನು ಪ್ರೀತಿ-ಗೌರವಗಳಿಂದ ಕಾಣಬೇಕಾಗಿರುವು ವಿದ್ಯಾರ್ಥಿ ಬದುಕಿನ ಮಹೋನ್ನತ ಗಳಿಗೆಗಳೆಂದು ಮುಸ್ಲಿಂ ವಿದ್ಯಾರ್ಥಿಗಳು ಮತ್ತು ಅವರ ಹೆತ್ತವರು ಭಾವಿಸಿದಲ್ಲಿ ಈ ಸಮಸ್ಯೆಯು ಬಹು ಸುಲಭವಾಗಿ ಪರಿಹಾರವಾಗಿ ಬಿಡಬಲ್ಲುದು.
ವಿದ್ಯೆಯು ನಮ್ಮ ವ್ಯಕ್ಕಿತ್ವಕ್ಕೂ, ನಮ್ಮ ಧರ್ಮಕ್ಕೂ, ಕೊನೆಗೆ ನಮ್ಮ ದೇಶಕ್ಕೂ ನಾವು ಸೂಚಿಸಬಹುದಾದ ಗೌರವವೆಂದು ನಾವು ಭಾವಿಸೋಣ.
ಭಾರತದಲ್ಲಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಹಳ ಹೋರಾಟ ನಡೆದಿದೆ. ಇಂದು ಮಹಿಳೆ ಎಲ್ಲಾ ರಂಗದಲ್ಲೂ ಕಾಣಿಸಿಕೊಳ್ಳುವಲ್ಲಿ ಬಹುದೊಡ್ಡ ಸವಾಲುಗಳನ್ನು ಎದುರಿಸಿದ್ದಾಳೆ.
ಈ ಹಿನ್ನೆಲೆಯಲ್ಲಿ ಮುಸ್ಲಿಂ ಹೆಣ್ಣುಮಕ್ಕಳ ಹೆತ್ತವರು ತಮ್ಮ ಮಕ್ಕಳನ್ನು ಯಾವ ಭಯವೂ ಇಲ್ಲದೇ ತರಗತಿಗಳಿಗೆ ಕಳುಹಿಸುವಂತಾಗಬೇಕು. ತಮ್ಮ ಧರ್ಮದ ಗುಂಗನ್ನು ಅವರ ವಿದ್ಯಾಭ್ಯಾಸದ ಮೇಲೆ ಹೇರದಿರುವುದು ಅವರ ಭವಿಷ್ಯದ ಕಾರಣದಿಂದ ಬಹುಮುಖ್ಯವಾಗುತ್ತದೆ.
ನನಗನ್ನಿಸಿದಂತೆ ಇದು ತಿದ್ದುವ ಸಮಯ.
ಇಲ್ಲಿ ಯಾವ ಧರ್ಮವಾಗಲೀ, ಪಂಥವಾಗಲೀ, ರಾಜಕೀಯವಾಗಲೀ ವಿದ್ಯಾರ್ಥಿಗಳನ್ನು ದಾಳಗಳನ್ನಾಗಿ ಬಳಸಿಕೊಳ್ಳುವುದನ್ನು ನಮ್ಮಂತವರು ಬಹಳವಾಗಿ ವಿರೋಧಿಸಲೇಬೇಕು.
ಶೈಕ್ಷಣಿಕ ಪರಂಪರೆಯಲ್ಲಿ ಬರುವ ಗುರುಶಿಷ್ಯ ಭಾವನೆಯ ಕುರಿತು ಆತಂಕಿತರಾಗಬೇಕಾದ ಅಗತ್ಯತೆ ನಮ್ಮಲ್ಲಿಲ್ಲ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪುರುಷ ಅಧ್ಯಾಪಕರು ಬಹುಕಾಲದಿಂದ ತಮ್ಮ ಕೊಡುಗೆ ನೀಡುತ್ತಾ ಬಂದಿದ್ದಾರೆ. 'ಪುರುಷ ಅಧ್ಯಾಪಕರ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ನಮಗೆ ಧರ್ಮದ ಹಕ್ಕಿನ ಉಡುಪಿನ ಅವಶ್ಯಕತೆ ಇದೆ' ಎಂಬುದರಲ್ಲಿ ಅರ್ಥವಿಲ್ಲ. ಇಂಥ ಹೇಳಿಕೆಗಳು ಹೀಗೆ ಕಿಡಿ ಹೊತ್ತಿಸುತ್ತವೆಯೇ ಹೊರತು, ಜ್ಞಾನದ ಬೆಳಕಾಗಲು ಸಾಧ್ಯವಿಲ್ಲ.
ಹೀಗಾಗಿ ಯಾವುದೇ ಧರ್ಮ ಅಥವಾ ಅದನ್ನು ಬಳಸಿಕೊಳ್ಳುವ ರಾಜಕಾರಣವು ಶಿಕ್ಷಣ ವ್ಯವಸ್ಥೆಯನ್ನು ಗುರಿಯಾಗಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಲು ಹೊರಟಿರುವುದನ್ನು ನಾನು ವಿರೋಧಿಸುತ್ತೇನೆ. ಎಂದವರು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಉಪನ್ಯಾಸಕ ಬಸವರಾಜ್ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕಲಾವಿದರೂ ಕರ್ನಾಟಕ ಕಲಾಶ್ರೀ ಪುರಸ್ಕೃತರೂ ಆದ ಗಣೇಶ್ ಈಶ್ವರ ಭಟ್ ಅವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ