ರಾಜಶ್ರೀ ರೈ ಪೆರ್ಲ ಅವರ ಕೃತಿ ಬಿಡುಗಡೆಗೊಳಿಸಿ ಪ್ರೊ. ಪಿ ಎಸ್ ಯಡಪಡಿತ್ತಾಯ
ಮಂಗಳಗಂಗೋತ್ರಿ: ಮಡಕೆಗಳ ಆರಾಧನೆಯಲ್ಲಿ ದೈವತ್ವವನ್ನು ಕಾಣುವ ವಿಶಿಷ್ಟ ಆರಾಧನಾ ಕ್ರಮ ತುಳುನಾಡಿನ ಸಂಸ್ಕೃತಿಯಲ್ಲಿದೆ. ಈ ಕುರಿತು ಸಂಶೋಧನೆ ಮಾಡಿರುವ ರಾಜಶ್ರೀ ರೈ ಪೆರ್ಲ, ತುಳುನಾಡಿನ ಜಾನಪದ ಸಂಶೋಧನೆಗೆ ಅಪೂರ್ವ ಕೊಡುಗೆ ನೀಡಿದ್ದಾರೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಶ್ಲಾಘಿಸಿದ್ದಾರೆ.
ಶುಕ್ರವಾರ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ಪ್ರಕಟಿಸಿದ ರಾಜಶ್ರೀ ಟಿ.ರೈ ಪೆರ್ಲ ಇವರ ʼತುಳುನಾಡಿನ ಮೂರಿಗಳ ಆರಾಧನೆʼ ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇದು ಸಂಶೋಧನೆಗೋಸ್ಕರ ಸಂಶೋಧನೆಯಲ್ಲ. ಗೃಹಿಣಿಯಾಗಿದ್ದುಕೊಂಡು ಆಸಕ್ತಿಯಿಂದ ಕ್ಷೇತ್ರಕಾರ್ಯ ಮಾಡಿ ಮೂರಿಗಳ ಆರಾಧನಾ ಕ್ರಮ, ಪಾಡ್ದನ ದಾಖಲೀಕರಣ, ವಿಶ್ಲೇಷಣೆಗಳ ಮೂಲಕ ಈ ಕೃತಿಯನ್ನು ರಾಜಶ್ರೀಯವರು ರಚಿಸಿದ್ದು ಇತರರಿಗೆ ಪ್ರೇರಣೆ, ಎಂದು ಅವರು ಹೇಳಿದರು.
ಲೇಖಕಿ ರಾಜಶ್ರೀ ರೈ ಅವರು ಮಾತನಾಡಿ, ಮೂರಿಗಳ ಕುರಿತು ಮೊದಲ ಬಾರಿಗೆ ಸಮಗ್ರ ಅಧ್ಯಯನ ಮಾಡಿ ಕೃತಿ ಪ್ರಕಟಿಸುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಮೂರಿಗಳ ಕುರಿತ ಮುಂದಿನ ಅಧ್ಯಯನಕ್ಕೆ ಇದೊಂದು ಆಕರ ಗ್ರಂಥವಾಗಬಹುದು, ಎಂದು ಹೇಳಿದರು.
ಮಂಗಳೂರು ವಿವಿಯ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ. ಕೆ ಮಾತನಾಡಿ, ಪ್ರಸಾರಾಂಗವು ಸ್ಥಳೀಯ ಲೇಖಕರಿಗೆ ಪ್ರಾಮುಖ್ಯ ನೀಡುತ್ತಿರುವುದು ಉತ್ತಮ ಬೆಳವಣಿಗೆ. ನಮ್ಮ ಹಿಂದಿನ ಪರಂಪರೆಯ ಜ್ಞಾನ ಮತ್ತು ಮೌಲ್ಯಗಳು ಹೊಸ ತಲೆಮಾರಿಗೆ ತಲಪಿಸುವ ಇಂತಹ ಕೃತಿಗಳ ಪ್ರಕಟಣೆ ಪ್ರಸಾರಾಂಗಕ್ಕೆ ಗೌರವ ತರುತ್ತದೆ, ಎಂದರು.
ಪ್ರಸಾರಾಂಗದ ನಿರ್ದೇಶಕ ಡಾ. ಸೋಮಣ್ಣ ಹೊಂಗಳ್ಳಿ, ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ತುಳು ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್, ತಾರನಾಥ ರೈ ಪೆರ್ಲ, ಸನ್ನಿಧಿ ಟಿ ರೈ ಪೆರ್ಲ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ