ಮಾಘ ಶುದ್ಧ ಪೌರ್ಣಿಮೆಯಂದು ಕಾಮಧೇನುವಿನ ಸುತೆ ನಂದಿನಿ ನದಿಯಾಗಿ ಹರಿದ ಪುಣ್ಯ ಕಥೆ

Upayuktha
0


ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಸಮಾಜೋನ್ನತಿಗೆ ತನ್ನ ಕಾಣಿಕೆ ಸಲ್ಲಿಸುತ್ತಿದೆ. ಈ ದೇವಾಲಯವು #ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಪ್ರತಿ ವರ್ಷವೂ ಸಾವಿರಾರು ಯಾತ್ರಿಕರು ಇಲ್ಲಿಗೆ ತಾಯಿ ದುರ್ಗಾ ಪರಮೇಶ್ವರಿಯ ದರ್ಶನಕ್ಕಾಗಿ ಭೇಟಿ ನೀಡುತ್ತಾರೆ.


ಹಿಂದೆ ಶುಂಭ ಮತ್ತು ನಿಶುಂಭರೆಂಬ ರಾಕ್ಷಸರನ್ನು ದುರ್ಗೆಯು ಸಂಹರಿಸಿದ ಕಾಲದಲ್ಲಿ, ಅವರ ಮಂತ್ರಿಗಳಲ್ಲಿ ಒಬ್ಬನಾದ ಅರುಣಾಸುರನು ಯುದ್ಧಭೂಮಿಯಿಂದ ಪಾತಾಳಲೋಕಕ್ಕೆ ಓಡಿಹೋಗಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದನು. ಕಾಲಕ್ರಮೇಣ ಅರುಣಾಸುರನು ಏಕವೀರಾದ್ರಿ ಯಲ್ಲಿ ತನ್ನ ಪುರವನ್ನು ರಚಿಸಿ, ರಾಕ್ಷಸರ ನಾಯಕನಾಗಿ, ಋಷಿಮುನಿಗಳ ತಪಸ್ಸು, ಯಾಗ, ಯಜ್ಞ ಮುಂತಾದವುಗಳಿಗೆ ವಿಘ್ನವನ್ನೊಡ್ಡತೊಡಗಿದನು. ಇದರಿಂದ ಋಷಿಮುನಿಗಳು ಯಾಗ ನಡೆಸದಂತಾದಾಗ ಕುಪಿತಗೊಂಡ ದೇವತೆಗಳು ಭೂಮಿಗೆ ಮಳೆ ಸುರಿಯುವುದನ್ನು ನಿಲ್ಲಿಸಿಬಿಟ್ಟರು. ಇದರಿಂದಾಗಿ ಭೂಮಿಯಲ್ಲಿ ಭೀಕರ ಕ್ಷಾಮ ತಲೆದೋರಿತು. ಎಲ್ಲೆಡೆಯೂ ನೀರು, ಆಹಾರಗಳ ಅಭಾವ ತಲೆದೋರಿತು. ಜನರ ದಾರುಣ ಸ್ಥಿತಿಯಿಂದ ವಿಚಲಿತರಾದ ಜಾಬಾಲಿ ಮಹರ್ಷಿಗಳು, ದೇವತೆಗಳನ್ನು ತೃಪ್ತಿಗೊಳಿಸಿ ತನ್ಮೂಲಕ ಮಳೆ ಸುರಿಯುವಂತೆ ಮಾಡಲು ಒಂದು ಯಜ್ಞವನ್ನು ನಡೆಸಲು ನಿಶ್ಚಯಿಸಿದರು. ಅದಕ್ಕಾಗಿ ಅವರು ದೇವಲೋಕಕ್ಕೆ ತೆರಳಿ ಯಜ್ಞಕ್ಕೆ ಸಹಾಯಕವಾಗುವಂತೆ ಕಾಮಧೇನುವನ್ನು ತಮ್ಮೊಡನೆ ಕಳುಹಿಸಿ ಕೊಡಲು ದೇವೇಂದ್ರನಲ್ಲಿ ವಿನಂತಿಸಿದರು. ಆದರೆ ಕಾಮಧೇನುವು ವರುಣ ಲೋಕಕ್ಕೆ ತೆರಳಿದ್ದರಿಂದ ಅವಳ ಬದಲಿಗೆ ಅವಳ ಮಗಳಾದ ನಂದಿನಿಯನ್ನು ಉದ್ದೇಶಿತ ಯಜ್ಞಕ್ಕೆ ಹೋಮಧೇನುವನ್ನಾಗಿ ಕರೆದೊಯ್ಯಲು ದೇವೇಂದ್ರನು ಅನುಮತಿಸಿದನು. ಅದಕ್ಕಾಗಿ ಮಹರ್ಷಿಗಳು ನಂದಿನಿಯ ಬಳಿಗೆ ತೆರಳಿ ತಮ್ಮೊಡನೆ ಬರುವಂತೆ ವಿನಂತಿಸಿದಾಗ ಅವಳು ಭೂಲೋಕವನ್ನು ಹಾಗೂ ಭೂಲೋಕದ ಜನರನ್ನು ನಿಂದಿಸಿ, ಮಹರ್ಷಿಗಳೊಡನೆ ಬರಲು ನಿರಾಕರಿಸಿದಳು. ಇದರಿಂದ ಮನನೊಂದ ಮಹರ್ಷಿಗಳು ಭೂಲೋಕದಲ್ಲಿ ನದಿಯಾಗಿ ಹರಿಯುವಂತೆ ನಂದಿನಿಯನ್ನು ಶಪಿಸಿದರು.  


ನಂದಿನಿಯು ಕ್ಷಮಿಸುವಂತೆ ಪ್ರಾರ್ಥಿಸಿದಾಗ ಕರುಣಾಪೂರ್ಣರಾದ ಮಹರ್ಷಿಗಳು ಶಾಪವಿಮೋಚನೆಗಾಗಿ ಆದಿಶಕ್ತಿಯನ್ನು ಪ್ರಾರ್ಥಿಸುವಂತೆ ಸೂಚಿಸಿದರು. ಅದರಂತೆಯೇ ನಂದಿನಿಯು ನಡೆದುಕೊಂಡಾಗ ಪ್ರತ್ಯಕ್ಷಳಾದ ಆದಿಶಕ್ತಿಯು ಋಷಿವಾಕ್ಯವನ್ನು ಸುಳ್ಳಾಗಿಸುವುದು ಅಸಾಧ್ಯವಾದ್ದರಿಂದ ನಂದಿನಿಯು ನದಿಯಾಗಿ ಹರಿಯಲೇಬೇಕೆಂದೂ, ಮುಂದೆ ತಾನೇ ಅವಳ ಮಗಳಾಗಿ ಜನಿಸಿ ಶಾಪದಿಂದ ಮುಕ್ತಿಯನ್ನು ಕೊಡುವುದಾಗಿಯೂ ಅಭಯವನ್ನಿತ್ತಳು. ಇದರಿಂದ ಸಮಾಧಾನಗೊಂಡ ನಂದಿನಿಯು ಮಾಘ ಶುಧ್ಧ ಪೂರ್ಣಿಮೆ ಯಂದು ಕನಕಗಿರಿಯಿಂದ ನದಿಯಾಗಿ ಹರಿದಳು. ಇದರಿಂದ ಭೂಮಿಯು ಮತ್ತೆ ಹಸುರಿನಿಂದ ಕಂಗೊಳಿಸಲಾರಂಭಿಸಿತು.

ನಂದಿನಿಯು ಮೂಡಬಿದ್ರೆಯ ಕನಕಗಿರಿಯಲ್ಲಿ ಹುಟ್ಟಿ ಪಾವಂಜೆ ಸಮೀಪ ಪಡುಗಡಲನ್ನು ಸೇರುತ್ತಾಳೆ.


ಚಿತ್ರಗಳು: ಪಿಕೆ ಜೈನ್ ಮತ್ತು ಶ್ರೀರಂಗ ರಾವ್ 


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top