ಮಂಗಳೂರು: ಸಾಫ್ಟ್‌ವೇರ್ ಸಮಸ್ಯೆಯಿಂದಾಗಿ ಬಿಪಿಎಲ್ ಕಾರ್ಡ್, ಹಿರಿಯ ನಾಗರಿಕ ಪಿಂಚಣಿ, ಸಂಧ್ಯಾ ಸುರಕ್ಷಾ ಅಂಗ ವಿಕಲರ ಮಾಸಿಕ ಪಿಂಚಣಿ ಸೇರಿದಂತೆ ವಿವಿಧ ಮಾಸಿಕ ಪಿಂಚಣಿ ಪಡೆಯಲು ಫಲಾನುಭವಿಗಳು ಅನುಭವಿಸುವ ಸಮಸ್ಯೆಯ ಕುರಿತು ಶಾಸಕ ವೇದವ್ಯಾಸ ಕಾಮತ್ ಸದನದ ಗಮನ ಸೆಳೆದರು.
ವಿವಿಧ ಪಿಂಚಣಿ ಸೌಲಬ್ಯಗಳಿಗೆ ಕಂದಾಯ ಇಲಾಖೆಯಿಂದ ಆದಾಯ ಮಿತಿ 32,000 ರೂ ನಿಗದಿಪಡಿಸಿದ್ದಾರೆ. ಎಲ್ಲದಕ್ಕೂ ಬೆಲೆಯೇರಿಕೆ ಆಗಿರುವ ಸನ್ನಿವೇಶದಲ್ಲಿ ಈ ಮೊತ್ತ ಬಹಳ ಕಡಿಮೆಯಾಗುತ್ತದೆ. ಹೀಗಾಗಿ ಅರ್ಹತೆಯ ಆದಾಯ ಮಿತಿಯನ್ನು ಹೆಚ್ಚುಮಾಡಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದರು.
ಆಹಾರ ಇಲಾಖೆಯಲ್ಲೂ ಇದೇ ರೀತಿಯ ಸಮಸ್ಯೆ ಎದುರಾಗಿದೆ. ಕಂದಾಯ, ಆಹಾರ ಸಚಿವರಿಗೆ ಗಮನ ಸೆಳೆದಿದ್ದೇನೆ. ಪಿಂಚಣಿ ಪಡೆಯುವ ಬಡ ವ್ಯಕ್ತಿಗಳಿಗೆ ಅದನ್ನು ದೊರಕಿಸಿಕೊಡುವ ಬಗ್ಗೆ ಕ್ರಮ ಕೈಗೊಳ್ಳಬೇಕು. ತಾಂತ್ರಿಕ ದೋಷಗಳಿಂದಲೂ ಈ ಸಮಸ್ಯೆ ಉಲ್ಬಣವಾಗಿದೆ. ಇವ್ವೆಲ್ಲವನ್ನೂ ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ ಅವರು, ಪಿಂಚಣಿದಾರರ ಈ ಸಮಸ್ಯೆಗಳಿಗೆ ಎಪಿಎಲ್-ಬಿಪಿಎಲ್ ಕಾರ್ಡ್‌ಗಳ ಮಾನದಂಡ ಕಾರಣವಲ್ಲ; ಪಿಂಚಣಿದಾರರ ದಾಖಲೆಗಳ ಮರುಪರಿಶೀಲನೆ ವೇಳೆ ಫಲಾನುಭವಿಗಳು ಮೃತಪಟ್ಟಿರುವುದು ಪತ್ತೆಯಾದ ಕಾರಣ ಕೆಲವೊಂದು ಫಲಾನುಭವಿಗಳ ಹೆಸರುಗಳು ರದ್ದಾಗಿವೆ ಎಂದು ಸಚಿವರು ಸಮಜಾಯಿಷಿ ನೀಡಿದರು.
ಸಚಿವರು ಈ ರೀತಿ ಉತ್ತರಿಸಿದಾಗ, ಶಾಸಕರು ಎತ್ತಿದ ಪ್ರಶ್ನೆಗಳಿಗೆ ಪೂರಕವಾಗಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರೇ ಮಧ್ಯಪ್ರವೇಶಿಸಿ ಮಾತನಾಡಿದರು. ಇತ್ತೀಚೆಗೆ ಶಾಸಕ ಕಾಮತ್ ಅವರನ್ನು ಮಂಗಳೂರಿನಲ್ಲಿ ತಾವು ಭೇಟಿ ಮಾಡಿದ್ದಾಗ ಅಲ್ಲಿನ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಅವರು ವಿವರವಾಗಿ ತಮ್ಮ ಜತೆ ಚರ್ಚಿಸಿದ್ದಾರೆ. ಅದರಂತೆ ಒಟ್ಟಾರೆಯಾಗಿ ಅವರ ಅಭಿಪ್ರಾಯವೇನೆಂದರೆ, ಪಿಂಚಣಿದಾರ ಫಲಾನುಭವಿಗಳ ಮರುಪರಿಶೀಲನೆ ವೇಳೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳದೆ ಕಚೇರಿಯಲ್ಲಿ ಕುಳಿತೇ ಫಲಾನುಭವಿಗಳ ಹೆಸರುಗಳನ್ನು ರದ್ದುಪಡಿಸಿದ್ದಾರೆ ಎಂಬ ಭಾವನೆ ಇದೆ ಎಂದು ಸಭಾಧ್ಯಕ್ಷರು ವಿಶದಪಡಿಸಿದರು.
ಆಗ ಉತ್ತರಿಸಿದ ಸಚಿವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಗಳನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ