ಧರ್ಮಸ್ಥಳದಲ್ಲಿ ಶಿವರಾತ್ರಿ ವೈಭವ: ಪಾದಯಾತ್ರಿಗಳ ಗಡಣ

Upayuktha
0

ಧರ್ಮಸ್ಥಳದಲ್ಲಿ ಮುಖ್ಯ ಪ್ರವೇಶದ್ವಾರದ ಬಳಿ ಪಾದಯಾತ್ರಿಗಳಿಗಾಗಿ ಸ್ವಾಗತ ಕಚೇರಿಯನ್ನು ಶನಿವಾರ ದೇವಳದ ಮಣೆಗಾರರಾದ ಡಿ. ವಸಂತ ಭಟ್ ಉದ್ಘಾಟಿಸಿದರು.


ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ಮಾ. ಒಂದರಂದು ಮಂಗಳವಾರ ಶಿವರಾತ್ರಿ ವಿಶೇಷ ದಿನವಾಗಿದ್ದು ಅಂದು ನಾಡಿನೆಲ್ಲೆಡೆಯಿಂದ ಭಕ್ತಾದಿಗಳು ಬರುತ್ತಾರೆ.


ಸುಮಾರು ಮೂವತ್ತು ಸಾವಿರಕ್ಕೂ ಮಿಕ್ಕಿ ಭಕ್ತಾದಿಗಳು ಪಾದಯಾತ್ರೆಯಲ್ಲಿ ಬರುವುದಾಗಿ ಧರ್ಮಸ್ಥಳಕ್ಕೆ ಮಾಹಿತಿ ನೀಡಿದ್ದಾರೆ.


ಪ್ರತಿ ವರ್ಷದಂತೆ ಈ ಬಾರಿಯೂ ಬೆಂಗಳೂರು, ಮೈಸೂರು, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಮೊದಲಾದ ಊರುಗಳಲ್ಲಿ ಧರ್ಮಸ್ಥಳ ಪಾದಯಾತ್ರಿಗಳ ಸಂಘದ ಆಶ್ರಯದಲ್ಲಿ ಭಕ್ತಾದಿಗಳು ಬರುತ್ತಾರೆ. ಪಾದಯಾತ್ರೆ ಆರಂಭಿಸಿದ್ದು ಸೋಮವಾರ ಅವರು ಉಜಿರೆ ತಲುಪುವರು. ಮಂಗಳವಾರ ಬೆಳಿಗ್ಯೆ ಧರ್ಮಸ್ಥಳಕ್ಕೆ ಬರುವರು.


ಪಾದಯಾತ್ರೆಯಲ್ಲಿ ಭಜನೆ, ಪ್ರಾರ್ಥನೆ ಮಾಡುತ್ತಾ ಬರುತ್ತಾರೆ. ಧರ್ಮಸ್ಥಳದಲ್ಲಿ ಪ್ರವೇಶ ದ್ವಾರದ ಬಳಿ ಪಾದಯಾತ್ರಿಗಳಿಗಾಗಿ ಸ್ವಾಗತ ಕಛೇರಿ ತೆರೆಯಲಾಗಿದ್ದು, ಅಲ್ಲಿ ಸ್ವಯಂಸೇವಕರು, ವೈದ್ಯರು, ದಾದಿಯರು ಪಾದಯಾತ್ರಿಗಳ ಸ್ವಾಗತ ಮತ್ತು ಸೇವೆಗಾಗಿ ಸಿದ್ಧರಿದ್ದಾರೆ. ಉಚಿತ ಪಾನೀಯ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಉಜಿರೆಯಲ್ಲಿರುವ ಎಸ್.ಡಿ.ಎಂ. ಆಸ್ಪತ್ರೆ ನೇತೃತ್ವದಲ್ಲಿ ಸಂಚಾರಿ ಆಸ್ಪತ್ರೆ, ವೈದ್ಯಕೀಯ ಶಿಬಿರ, ಉಚಿತ ಶುಶ್ರೂಷೆ, ಅಂಬುಲೆನ್ಸ್ ಸೇವೆ ಸದಾ ಲಭ್ಯವಿದೆ.


ಬೆಂಗಳೂರಿನ ಖ್ಯಾತ ವೈದ್ಯ ಡಾ. ಕೆ.ಎಲ್. ಪಂಚಾಕ್ಷರಿ ನೇತೃತ್ವದಲ್ಲಿ ಡಾ. ನಾಗರಾಜು, ಡಾ. ಮಂಜುನಾಥ್, ಮತ್ತು ಡಾ. ರೇಣುಕಾ ಸ್ವಯಂ ಪ್ರೇರಣೆಯಿಂದ ಉಚಿತ ವೈದ್ಯಕೀಯ ಸೇವೆ ನೀಡುತ್ತಾರೆ.


ಮಂಗಳವಾರ ಸಂಜೆ 6 ಗಂಟೆಗೆ ಪ್ರವಚನ ಮಂಟಪದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಶಿವಪಂಚಾಕ್ಷರಿ ಪಠಣ ಕಾರ್ಯಕ್ರಮ ಉದ್ಘಾಟಿಸುವರು. ಬಳಿಕ ಅಹೋ ರಾತ್ರಿ ಭಕ್ತಾದಿಗಳು ಶಿವಪಂಚಾಕ್ಷರಿ ಪಠಣ, ಭಜನೆ ಹಾಡುವರು.


ದೇವಸ್ಥಾನದಲ್ಲಿ ನಾಲ್ಕು ಜಾವಗಳಲ್ಲಿ ಭಕ್ತರು ವಿಶೇಷವಾಗಿ ಶತರುದ್ರಾಭಿಷೇಕ ಸೇವೆ ಸಲ್ಲಿಸುವರು. ಶಂಖ, ಕೊಂಬು, ಕಹಳೆ, ಮೊದಲಾದ ಜಾನಪದ ಕಲಾವಿದರು ಬಂದು ಕಲಾ ಸೇವೆ ಮಾಡುವರು.

ಪಾದಯಾತ್ರಿಗಳಿಗೆ ಸೂಚನೆ:

• ಪಾದಯಾತ್ರಿಗಳು ಬರುವಾಗ ಮತ್ತು ತಂಗುವ ಸ್ಥಳಗಳಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಸಾನಿಟೈಸರ್ ಬಳಕೆ ಕಡ್ಡಾಯವಾಗಿದೆ.

• ತಂಗುವ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು.

• ಹಿತ-ಮಿತವಾದ ಆಹಾರ ಸೇವನೆ ಮಾಡಬೇಕು. 

• ಶ್ರದ್ಧಾ-ಭಕ್ತಿಯೊಂದಿಗೆ ದೃಢಸಂಕಲ್ಪದಿಂದ ಪಾದಯಾತ್ರೆ ಮಾಡಬೇಕು.

• ರಸ್ತೆಯಲ್ಲಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ಧರಿಸುವ ಬಟ್ಟೆಯ ಹಿಂಬದಿಯಲ್ಲಿ / ತೋಳಿನಲ್ಲಿ/ತಲೆಯ ಧಿರಿಸಿನಲ್ಲಿ ಪ್ರತಿಫಲಕ ಕಡ್ಡಾಯವಾಗಿ ಬಳಸಬೇಕು. 


hit counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top