ಮಂಗಳೂರು: ನಗರದ ವಿಶ್ವವಿದ್ಯಾಲಯ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಶನಿವಾರ ಕಾಲೇಜಿನಲ್ಲಿ ಪ್ರಥಮ ವರ್ಷದ ಯುವ ರೆಡ್ ಕ್ರಾಸ್ ಸ್ವಯಂಸೇವಕರಿಗೆ ಓರಿಯಂಟೇಶನ್ ಹಮ್ಮಿಕೊಂಡಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಯುವ ರೆಡ್ ಕ್ರಾಸ್ ಜಿಲ್ಲಾ ಉಪಸಮಿತಿಯ ನಿರ್ದೇಶಕ ಸಚೇತ್ ಸುವರ್ಣ ಭಾಗವಹಿಸಿ, ರೆಡ್ ಕ್ರಾಸ್ ಕಳೆದ ಒಂದು ಶತಮಾನದಿಂದ ಮಾನವೀಯ ನೆಲೆಯಲ್ಲಿ ಸಮಾಜಕ್ಕೆ ಸ್ಪಂದಿಸುತ್ತಿದೆ. ಯುವಕರು ಕಾಲೇಜಿನಲ್ಲಿ ಆರೋಗ್ಯಕರ ವಾತಾವರಣ ರೂಪಿಸುವಿಕೆ, ಉತ್ತಮ ಚಿಂತನೆ, ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಟ, ರಕ್ತದಾನ ಶಿಬಿರ, ಆಸ್ಪತ್ರೆಗಳಲ್ಲಿ ಸ್ವಯಂಸೇವೆ ಮೊದಲಾದ ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕ ಅತ್ಯಂತ ಸಕ್ರಿಯವಾಗಿರುವುದನ್ನು ಶ್ಲಾಘಿಸಿದರು ಹಾಗೂ ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಆಸ್ಪತ್ರೆಯಲ್ಲಿ ಸ್ವಯಂಸೇವೆ ಸಲ್ಲಿಸಿದ 12 ಮಂದಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಿದರು.
ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಕುಮಾರಸ್ವಾಮಿ ಎಂ, ಕಳೆದ ಶೈಕ್ಷಣಿಕ ವರ್ಷದ ಕಾರ್ಯಕ್ರಮಗಳ ವಿವರ ನೀಡಿದರು. ಕುಮಾರಿ ಚೈತನ್ಯ ಕಾರ್ಯಕ್ರಮ ನಿರೂಪಿಸಿದರು. ಭವಿಷ್ಯ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ಯುವ ರೆಡ್ ಕ್ರಾಸ್ ಘಟಕದ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷದ ಸುಮಾರು 110 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ