ಲತಾ ಮಂಗೇಶ್ಕರ್ ಕಣ್ಮರೆ: ಜರಾ ಆಂಖ್‌ಮೆ ಭರ್‌ಲೋ ಪಾನಿ

Upayuktha
0

ಎಂತಹ ಸುಂದರ ಪಟ! ಅವರ ಹಾಡಿನಷ್ಟೇ ಚುಂಬಕ. ಅವರ ಗಾಯನದಷ್ಟೇ ಮೋಹಕ. ಅವರು ಪದ್ಮಶ್ರೀ ಅಲ್ಲ; ಭಾರತರತ್ನ ಬಿರುದಾಂಕಿತೆ. ಅವರು ಭೂಪ್ ರಾಗದಲ್ಲಿ ಹಾಡಿದ ಗೀತೆ ನೆನಪಾಗುತ್ತಿದೆ. ಭಾರತರತ್ನ ಸುಬ್ಬುಲಕ್ಷ್ಮಿ ಸಮಾಜಕ್ಕೆ ಕೊಟ್ಟು, ಕೊಟ್ಟು ಹೋದವರು! ಲತಾ ದೀದಿ ಎಲ್ಲರಂತೆ ಎಲ್ಲವನ್ನೂ ಬಿಟ್ಟು ಹೋದವರು.


ಪಿಯಾ ತುಮ್ ಹೊ ಸಾಗರ್ ಮೈ ಪ್ಯಾಸೀ ನದೀ ಹ್ಞೂಂ ಎಂದು ಜೀವನವಿಡೀ  ಹಿಡಿ  ಪ್ರೀತಿಗಾಗಿ ಹಂಬಲಿಸಿದ ಅವರು ಇಂದು ಕಾಣದ ಕಡಲನ್ನು ಸೇರಿದ್ದಾರೆ. ಜರಾ ಆಂಖ್‌ಮೆ ಭರ್‌ಲೋ ಪಾನಿ ಎಂದು ಹೇಳಬೇಕೆ? ಕಣ್ಣು ಮಂಜಾಗಿದೆ, ಮಬ್ಬಾಗಿದೆ, ಮಸುಕಾಗಿದೆ. ಅದು ಮಡುಗಟ್ಟಿ ಕೋಡಿ ಹರಿದಿದೆ.

 

ಜೀಮೆ ಆತಾ ಹೈ ತೇರೆ ದಾಮನ್ ಮೆ ಸರ್ ಜುಕಾಕೆ ಹಂ ರೋತೆ ರಹೇಂ, ರೋತೆ ರಹೇಂ ಎಂದು ಬಿಕ್ಕಿದ್ದ ಲತಾ, ಆಜ್ ಫಿರ್ ಜೀನೆ ಕಿ ತಮನ್ನಾ ಹೈ, ಆಜ್ ಫಿರ್ ಮರ್‌ನೇ ಕಾ ಇರಾದಾ ಹೈ ಎಂದು ಸಮ್ಮಿಶ್ರ ಭಾವದಲ್ಲಿ ಷರಾ ಬರೆದು, ಗುನುಗುತ್ತಾ ಹೊರಟೇಬಿಟ್ಟರು. ಅವರಿಗೊಂದು ವಿದಾಯ ಕೋರೋಣ. ಕಭೀ ಅಲ್‌ವಿದ ನಾ ಕೆಹೆನಾ ಎನ್ನೋಣವೆ? 

- ಕೆ. ರಾಜಕುಮಾರ್


*******

ಲತಾ ಮಂಗೇಶ್ಕರ್: ಮೇಘಾ ಛಾಯೆ ಆಧಿ ರಾತ್ ಬೈರನ್ ಬನ್‌ಗಯೀ ನಿಂದಿಯಾ 

ಲತಾರವರು ಏರುದನಿಯಲ್ಲೂ ಶ್ರುತಿತಪ್ಪದೆ ರಚನೆಯ ಎಲ್ಲ ಸಾಧ್ಯತೆಗಳನ್ನೂ ಕಂಠದಲ್ಲಿಯೇ ಕಂಡರಿಸಿ, ಸಾಹಿತ್ಯವನ್ನು ಸ್ಪಷ್ಟವಾಗಿ ಉಚ್ಚರಿಸುತ್ತಿದ್ದಂತಹ ಅಸಾಮಾನ್ಯ ಗಾಯಕಿ. ಗಾಯನದ ಸಂದರ್ಭದಲ್ಲಿ ಅವರು  ಕಂಬದ ಹಾಗೆ ಮೈಕಿನ ಮುಂದೆ ನಿಲ್ಲುವ ಭಂಗಿ‌ ಜನಜನಿತ. ಎಸ್. ಜಾನಕಿಯೂ ಅಂತೆಯೇ. ಆಂಗಿಕ ಚಲನೆಯೇ ಕಾಣದು. ಇಬ್ಬರೂ ಕಂಬದಾ ಮೇಲಿನ ಚಿತ್ರಗಳೇ! ಆದರೂ ಹಾಡಿದ ಗೀತೆಗಳಿಗೆ ಭಾವ-ಬಣ್ಣವನ್ನು ತುಂಬುತ್ತಿದ್ದ ಪರಿ ಅನನ್ಯ.


ಪಟ್‌ದೀಪ್ ಎಂಬ ರಾಗ ಕಾಡುತ್ತಿದೆ. ಅದರೊಂದಿಗೆ ಶಾಲಾ ದಿನಗಳ ನೆನಪುಗಳನ್ನು ಹೊತ್ತ ಸಾಲು ಸಾಲು ಮೆರೆವಣಿಗೆ. ಐವತ್ತು ವರ್ಷಗಳ ಹಿಂದಿನ ಮಾತು. ಆಗ ಬಂದಿದ್ದು ಶರ್ಮೀಲಿ. ಓ ಮೇರಿ, ಓ ಮೇರಿ ಓ ಮೇರಿ ಶರ್‌ಮಿಲೀ ಎಂಬ ಗುನುಗು ಎಲ್ಲರ ಬಾಯಲ್ಲೂ. ಆದರೆ ನನಗೆ ಆ ಚಿತ್ರದಲ್ಲಿ ಲತಾ ಅವರು ಎಸ್.ಡಿ. ಬರ್ಮನ್ ಅವರ ನಿರ್ದೇಶನದಲ್ಲಿ ಹಾಡಿದ 'ಮೇಘಾ ಛಾಯೆ ಆಧೀ ರಾತ್  ಬೈರನ್ ಬನ್‌ಗಯೀ ನಿಂದಿಯಾ, ಬತಾದೆ ಮೈ ಕ್ಯಾ ಕರೂಂ' ಎಂಬ ಗೀತೆ ಮನದಲ್ಲಿ ಬೇರೂರಿ ನಿವಸಿಸಿತು. ಅದೇ ಹಾಡು ಪಟದೀಪ್ ರಾಗಾಧಾರಿತ ಎಂದು ಅರಿವಾಗುವ ವೇಳೆಗೆ ಸಂಗೀತದ ಆಸಕ್ತಿ, ಅಭಿರುಚಿ ಎರಡೂ ಬೆಳೆದಿದ್ದವು. ಆ ಗೀತೆಗೆ ಇದೀಗ ಸುವರ್ಣ ಮಹೋತ್ಸವದ ಸಂಭ್ರಮ. 50 ವರ್ಷಗಳಾದರೂ ಬಿಡದೆ ಕಾಡುವ ಹಾಡಾಗಿದೆ. ಮಧುರ ಸ್ಮೃತಿಗಳನ್ನು ಧೇನಿಸುತ್ತ, ವಿಷಾದದ ಭಾವವನ್ನು ಸೂಸುವ ಗೀತೆಯದು. ರಾಗಾನುರಾಗಗಳು ಎಂದೂ ವಿಸ್ಮೃತಿಗೆ ಸಂಬಂಧಿಸಿದ್ದು ಅಲ್ಲವಲ್ಲ. ಲತಾಜಿ ಇಲ್ಲ. ಆದರೆ ಆಲಿಸಲು ಅವರ ಗಂಭೀರ ಭಾವದ, ಸುಸ್ವರ ನಾದದ ಮಧುರ ಕಂಠವಿದೆ. 

- ಕೆ. ರಾಜಕುಮಾರ್


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top