ಮಕ್ಕಳಿಗಾಗಿ ಹೆತ್ತವರು ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು: ಮೀನಾ
ಪುತ್ತೂರು: ಮಕ್ಕಳ ಮನಸ್ಸು ಹಸಿಮಣ್ಣಿನ ಮುದ್ದೆಯಂತೆ. ಆ ಮಗುವನ್ನು ಹೇಗೆ ಬೆಳೆಸಬೇಕು ಎಂಬ ಮಹತ್ವದ ಜವಾಬ್ದಾರಿಯನ್ನು ಇಂದು ನಾವು ನಿಭಾಯಿಸಬೇಕಿದೆ. ಇಂದಿನ ಆಧುನಿಕ ಯುಗದಲ್ಲಿ ಮಕ್ಕಳನ್ನು ಬೆಳೆಸುವುದು ಒಂದು ದೊಡ್ಡ ಸವಾಲು. ಪರಿಪೂರ್ಣತ್ವದ ಬಗ್ಗೆ ಬಹಳಷ್ಟು ಮಾಹಿತಿಯನ್ನು ತಿಳಿದುಕೊಂಡಿರಬೇಕಾದ ಅವಶ್ಯಕತೆ ಇದೆ. ಇತರ ಮಕ್ಕಳೊಂದಿಗೆ ಹೋಲಿಕೆ ಮಾಡುವುದು ಮತ್ತು ನಮ್ಮ ಕನಸಿನಲ್ಲಿರುವ ಮಗುವಿನ ಗುಣಗಳನ್ನು ನಮ್ಮ ಮುಂದಿರುವ ಮಗುವಿನ ಮೇಲೆ ಹೇರುವುದು ಖಂಡಿತ ತಪ್ಪು. ಅದು ಮಗುವಿನ ಭಾವನಾತ್ಮಕ ಮನಸ್ಸಿನ ಮೇಲೆ ತುಂಬಾ ಕೆಟ್ಟದಾದ ಪರಿಣಾಮವನ್ನು ಬೀರುತ್ತದೆ ಎಂದು ಸುಳ್ಯದ ಮಕ್ಕಳ ಮನೋವೈದ್ಯಕೀಯ ಆಪ್ತ ಸಮಾಲೋಚಕಿ ಮೀನಾ ಕೆ ಅವರು ಹೇಳಿದರು.
ಅವರು ಅಂಬಿಕ ವಿದ್ಯಾಲಯ ಸಿಬಿಎಸ್ಸಿ ಇಲ್ಲಿನ ಕಿಂಡರ್ ಗಾರ್ಟನ್ ಮಕ್ಕಳ ವಾರ್ಷಿಕ ಉತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಷಣ ಮಾಡಿದರು.
ಸ್ವಚ್ಛಂದದ ಬಾಲ್ಯವನ್ನು ಕಳೆಯಬೇಕಾಗಿರುವ ಮಕ್ಕಳು ಇಂದು ಅತ್ಯಂತ ಒತ್ತಡವನ್ನು ಎದುರಿಸುತ್ತಿದ್ದಾರೆ. ಪ್ರತಿ ಮಗುವೂ ವಿಭಿನ್ನ. ನಮ್ಮ ಮಗುವಿನ ಪರಿಪೂರ್ಣ ಜವಾಬ್ದಾರಿ ನಮ್ಮದೇ. ನಮ್ಮ ಮಗುವನ್ನು ಅದಾಗಿ ಬೆಳೆಯಲು ಅವಕಾಶ ಮಾಡಿಕೊಡಬೇಕಾದದ್ದು ಅತ್ಯಂತ ಅವಶ್ಯಕ. ಈ ನಿಟ್ಟಿನಲ್ಲಿ ಪೋಷಕರು ಅತ್ಯಂತ ಜಾಗರೂಕರಾಗಿ ವರ್ತಿಸಬೇಕಾದ್ದು ಇಂದಿನ ಅನಿವಾರ್ಯತೆ. ಮಗುವು ನಮ್ಮನ್ನು ನೋಡಿ ಕಲಿಯುತ್ತದೆ ಹೊರತು ನಾವು ಹೇಳಿದ್ದನ್ನಲ್ಲ. ಹಾಗಾಗಿ ಮಗುವಿಗೋಸ್ಕರ ನಮ್ಮ ವರ್ತನೆಯನ್ನು ನಾವು ಸರಿಪಡಿಸಿಕೊಳ್ಳಬೇಕಿರುವುದು ಅವಶ್ಯಕ ಎಂದು ಅವರು ಕಿವಿಮಾತು ಹೇಳಿದರು.
ವಿದ್ಯಾಲಯದ ಪ್ರಾಂಶುಪಾಲೆ ಮಾಲತಿ ಡಿ, ಮಕ್ಕಳ ಪ್ರತಿಭೆ ಹೂವಿನಂತೆ ಅರಳಿ ಸುವಾಸನೆಯನ್ನು ಬೀರುವಂತಾಗಬೇಕು ಎಂದು ಶುಭ ಹಾರೈಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ರಾಜಶ್ರೀ ನಟ್ಟೋಜ, ಆಡಳಿತ ಮಂಡಳಿ ಸದಸ್ಯ ಸುರೇಶ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಎಲ್‌ಕೆಜಿ-ಯುಕೆಜಿ ವಿದ್ಯಾರ್ಥಿಗಳು ಮನಮೋಹಕ ನೃತ್ಯಗಳ ಮೂಲಕ ಎಲ್ಲರ ಮನಗೆದ್ದರು. ಯುಕೆಜಿ ವಿದ್ಯಾರ್ಥಿನಿ ಪ್ರಸ್ತುತಿ ಕಾರ್ಯಕ್ರಮವನ್ನು ನಿರೂಪಿಸಿದರು. ಆಹ್ಲಾದ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿ ಮಾನ್ವಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಅಧ್ಯಾಪಕ ವೃಂದ ಬೋಧಕೇತರ ವೃಂದ ಹಾಗೂ ವಿದ್ಯಾರ್ಥಿಗಳ ಪೋಷಕರು ಹಾಜರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ