ಮಲೆಯಾಳ ಗೊತ್ತಿದ್ದರೆ ಮಾತ್ರ ಸರ್ಕಾರಿ ಉದ್ಯೋಗ: ಕೇರಳ ಸಿಎಂ ಹೇಳಿಕೆಗೆ ಖಂಡನೆ

Upayuktha
0

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿಕೆಗೆ  ಕರ್ನಾಟಕ ಗಡಿಪ್ರದೇಶ ಅಭಿವೃಧ್ಧಿ ಪ್ರಾಧಿಕಾರ ವಿರೋಧ


ಬೆಂಗಳೂರು: ಮಲೆಯಾಳ ಭಾಷೆ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರ್ಕಾರಿ ಉದ್ಯೋಗ ಎಂಬ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಹೇಳಿಕೆಯನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ತೀವ್ರವಾಗಿ ವಿರೋಧಿಸಿದೆ.


ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರು ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿದ್ದು, ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರ ಉದ್ಯೋಗಾವಕಾಶಗಳಿಗೆ ಕತ್ತರಿ ಹಾಕುವ ಈ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.


ಗಡಿ ಪ್ರದೇಶದ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ರಕ್ಷಣೆಗೆ ಬಾಧಕವಾಗುವ ರೀತಿಯಲ್ಲಿ ಕೇರಳ ಸರಕಾರ ನಡೆದುಕೊಂಡಲ್ಲಿ ಕಾಸರಗೋಡಿನ ಕನ್ನಡಿಗರ ಹಿತರಕ್ಷಣೆಗಾಗಿ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಅವರು ಎಚ್ಚರಿಸಿದ್ದಾರೆ. ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ ಅವರು ಈ ಪ್ರಕಟಣೆಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.


ಪ್ರಕಟಣೆಯ ಪೂರ್ಣ ವಿವರ ಇಂತಿದೆ:

ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಸೋಮವಾರ ನಡೆದ ಮಲೆಯಾಳ ಮಿಷನ್ ಮಾತೃಭಾಷಾ ದಿನಾಚರಣೆಯ ಸಂದರ್ಭದಲ್ಲಿ ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು 'ಮಲೆಯಾಳ ಭಾಷೆ ಗೊತ್ತಿದ್ದರೆ ಮಾತ್ರ ಕೇರಳದಲ್ಲಿ ಸರ್ಕಾರಿ ಉದ್ಯೋಗ' ಎಂಬ ಹೇಳಿಕೆ ನೀಡಿರುವುದು ಕಾಸರಗೋಡು ಹಾಗೂ ಸುತ್ತ ಮುತ್ತ ಇರುವ ಅಲ್ಪಸಂಖ್ಯಾತ ಕನ್ನಡಿಗರಲ್ಲಿ ಆತಂಕ ಉಂಟು ಮಾಡಿದೆ.


ಇದುವರೆಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಪ್ರದೇಶದಲ್ಲಿ ಮಲೆಯಾಳ ಭಾಷೆಯಿಂದ ವಿನಾಯತಿ ಇದ್ದು ಅದು ಮುಂದುವರೆಯಬೇಕಾಗಿದೆ. ಒಂದು ವೇಳೆ ಕಾಸರಗೋಡಿನ ಕನ್ನಡಿಗರಿಗೂ ಮಲೆಯಾಳ ಭಾಷೆಯನ್ನು ಉದ್ಯೋಗದ ದೃಷ್ಟಿಯಿಂದ ಕಡ್ಡಾಯ ಮಾಡಿದರೆ ಅದು ಭಾಷಾ ಅಲ್ಪ ಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ನೀಡಿದ ರಕ್ಷಣೆಯ ಉಲ್ಲಂಘನೆ ಆಗುತ್ತದೆ.


ದಯವಿಟ್ಟು ಕೇರಳ ಸರ್ಕಾರ ಕಾಸರಗೋಡಿನ ಕನ್ನಡಿಗರ ಉದ್ಯೋಗಕ್ಕೆ ಬಾಧಕ ಆಗುವಂತೆ ಯಾವುದೇ ರೀತಿಯಲ್ಲಿಯೂ ಮಲೆಯಾಳ ಭಾಷೆಯನ್ನು ಕಡ್ಡಾಯಗೊಳಿಸದಿರಲು ಕೇರಳ ಸರ್ಕಾರದ ಮುಖ್ಯ ಮಂತ್ರಿಗಳನ್ನು   ನಮ್ಮ ರಾಜ್ಯದ ಮುಖ್ಯ ಮಂತ್ರಿಗಳ ಮೂಲಕ ಅಗ್ರಹ ಪೂರ್ವಕವಾಗಿ ಒತ್ತಾಯಿಸುತ್ತದೆ. ಒಂದು ವೇಳೆ ಕನ್ನಡಿಗರಿಗೆ ಇರುವ ಸಂವಿಧಾನಾತ್ಮಕ ರಕ್ಷಣೆಯ ಉಲ್ಲಂಘನೆ ಆದರೆ ಕಾನೂನಾತ್ಮಕ ಹೋರಾಟ ನಡೆಸಬೇಕಾಗುತ್ತದೆ ಎಂದು ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ ಇವರು ತಿಳಿಸಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top