ಮಂಗಳೂರು: ನಗರದ ಉರ್ವ ಸ್ಟೋರ್ ಬಳಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಭವನಕ್ಕೆ ಫೆ.26ರ ಶನಿವಾರ ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೊಂಕಣಿ ಭಾಷಿಗರ ಹಲವು ವರ್ಷಗಳ ಬೇಡಿಕೆ ಇದೀಗ ಈಡೇರುತ್ತಿದ್ದು, ಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದೆ, ಮುಂಬರುವ ದಿನಗಳಲ್ಲಿ ಭವನದ ಮೂಲ ಸೌಕರ್ಯಗಳ ವೃದ್ದಿಗೆ ಮತ್ತಷ್ಟು ಅನುದಾನ ನೀಡಲಾಗುವುದು, ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳಿಗೆ ಶಕ್ತಿ ತುಂಬುವ ಕೆಲಸ ಸರ್ಕಾರದಿಂದ ಮಾಡಲಾಗುತ್ತಿದೆ ಎಂದು ಹೇಳಿದರು.
ಭಾಷೆ, ಸಂಸ್ಕೃತಿ, ನಡವಳಿಕೆ ಹಾಗೂ ನಾಗರೀಕತೆ ಒಂದಕ್ಕೊಂದು ಕೊಂಡಿಯಾಗಿದ್ದುಕೊಂಡು ಕೆಲಸ ಮಾಡಬೇಕು, ಭಾಷೆ ಮತ್ತು ಸಂಸ್ಕೃತಿ ಕೊಂಡಿಯಾಗಿ ಕೆಲಸ ಮಾಡಿದರೆ ನಾಗರೀಕ ಸಮಾಜ ಚನ್ನಾಗಿ ನಡೆಯುತ್ತದೆ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೊಂಕಣಿ ಮಾತನಾಡುವ ಭಾಷಿಗರ ಸಂಖ್ಯೆ ದೊಡ್ಡದಿದೆ, ಆ ಭಾಷಿಗರನ್ನು ಸಾಹಿತ್ಯ ಹಾಗೂ ಇತರೆ ಚಟುವಟಿಕೆಗಳ ಮೂಲಕ ಒಟ್ಟು ಗೂಡಿಸುವ ಕೆಲಸವಾಗಬೇಕಾದರೆ ಅಕಾಡೆಮಿಗೊಂದು ಸ್ವಂತ ಕಚೇರಿ ಇರಬೇಕಾದ ಅಗತ್ಯವಿದೆ. ಅದಕ್ಕೆ ಪೂರಕವಾಗಿ ಭವನ ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಶಾಸಕರಾದ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ಕೊಂಕಣಿ ಭವನದ 37 ವರ್ಷಗಳ ಬೇಡಿಕೆಗೆ ಇದೀಗ ಕಾಲಕೂಡಿ ಬಂದಿದೆ, 35 ಸೆಂಟ್ಸ್ ನಿವೇಶನ ಲಭಿಸಿದ್ದು, ಭವನ ನಿರ್ಮಾಣದಿಂದ ದೇಶ ವಿದೇಶಗಳಲ್ಲಿ ನೆಲೆಸಿರುವ 42 ಪಂಗಡಗಳಿಗೆ ಈ ಭವನ ದೊಡ್ಡ ಕೊಡುಗೆಯಾಗಲಿದೆ ಎಂದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಕೆ.ಜಗದೀಶ್ ಪೈ ಪ್ರಸ್ತಾವಿಕವಾಗಿ ಮಾತನಾಡಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್‍ಸಿಂಹ ನಾಯಕ್, ಮಂಗಳೂರು ಮಹಾಪೌರರಾದ ಪ್ರೇಮಾನಂದ ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿ ನಾರಾಯಣ ಕಜೆಗದ್ದೆ, ಮಹಾನಗರ ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಜಯಶ್ರೀ, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ವೇದಿಕೆಯಲ್ಲಿದ್ದರು.
ಅಕಾಡೆಮಿ ಸದಸ್ಯರಾದ ಕೆನ್ಯೂಟ್ ಜೀವನ್ ಪಿಂಟೋ ಸ್ವಾಗತಿಸಿದರು. ವೃಂದಾ ನವೀನ್ ನಾಯಕ್ ಪ್ರಾರ್ಥಿಸಿದರು. ನವೀನ್ ನಾಯಕ್ ವಂದಿಸಿದರು. ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ