ಉಡುಪಿ: ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ಭಾನುವಾರ ಎರಡು ಅಪೂರ್ವ ಕಾರ್ಯಕ್ರಮಗಳ ಸಂಭ್ರಮ. ಸಸ್ಯಸಂತ ಡಾ ಕೆ ಜಿ ಭಟ್, ರಂಗ ಋಷಿ ಡಾ. ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರನ್ನು ಅಭಿನಂದಿಸಿ ಉಡುಪಿ ಧನ್ಯವಾಯಿತು.
ಈ ಎರಡೂ ಕಾರ್ಯಕ್ರಮಗಳು ಭಿನ್ನ ವೇದಿಕೆಯಲ್ಲಿ ನಡೆದರೂ ಒಂದೇ ಸಂಸ್ಥೆಯ ಆವರಣದೊಳಗೇ ನಡೆಯಿತು. ಆದ್ದರಿಂದ ಎರಡಕ್ಕೂ ಸಾಕ್ಷಿಯಾಗುವ ಸುಯೋಗ ನಮ್ಮದಾಯಿತು.
ದಶಕಗಳಿಂದ ಉಡುಪಿಯ ಸಾಂಸ್ಕೃತಿಕ ಹಿರಿಮೆ ಗರಿಮೆಗಳಿಗೆ ಆಡುಂಬೊಲದಂತಿರುವ ಪ್ರತಿಷ್ಠಿತ ಎಂಜಿಎಂ ಕಾಲೇಜಿನ ಆವರಣದೊಳಗೆ ಈ ಎರಡೂ ನಡೆಯಿತು.
ದೇಶವೇ ಹೆಮ್ಮೆಪಡಬೇಕಾದ ಸಸ್ಯ ಸಂತ ಡಾ ಕೆ ಗೋಪಾಲಕೃಷ್ಣ ಭಟ್ಟರ ಕುರಿತಾಗಿ ಅಪೂರ್ವ ಕೃತಿಯೊಂದನ್ನು ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಬಿಡುಗಡೆಗೊಳಿಸಿ ಅಭಿನಂದಿಸುವ ಕಾರ್ಯಕ್ರಮವನ್ನು ಗೀತಾಂಜಲಿ ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು.
ಉಡುಪಿಯ ಪ್ರತಿಷ್ಠಿತ ರಂಗಭೂಮಿ ರಿ ಸಂಸ್ಥೆಯು ನಾಡಿನ ಅಪೂರ್ವ ಸಾಂಸ್ಕೃತಿಕ ಆಧ್ವರ್ಯು ರಂಗ ಋಷಿ ಡಾ ಸಾಣೆಹಳ್ಳಿ ಪಂಡಿತಾಚಾರ್ಯ ಶಿವಾಚಾರ್ಯ ಸ್ವಾಮೀಜಿ ಯವರಿಗೆ ರಂಗಪಂಚಾನನ ಎಂಬ ಅಭಿದಾನದೊಂದಿಗೆ ಈ ಬಾರಿಯ ರಂಗಭೂಮಿ ಪ್ರಶಸ್ತಿ ನೀಡಿ ಅಭಿನಂದಿಸಿತು.
ನಿಸ್ಸಂಶಯವಾಗಿ ಈ ಎರಡೂ ಸಂಸ್ಥೆಗಳು ಉಡುಪಿಯ ನಾಗರಿಕರ ವೈಜ್ಞಾನಿಕ ಬದ್ಧತೆ ಮತ್ತು ಸಾಂಸ್ಕೃತಿಕ ಪ್ರಜ್ಞೆಗೆ ಹೆಗಲು ಕೊಟ್ಟಿರುವುದಕ್ಕೆ ಸಾಕ್ಷಿಯಾದವು.
ಸಸ್ಯ ಸಂತ ಡಾ ಕಾಕುಂಜೆ ಗೋಪಾಲಕೃಷ್ಣ ಭಟ್ಟರದ್ದು ವ್ಯಷ್ಟಿ ಸಾಧನೆಯಾದರೆ ಡಾ ಸಾಣೆಹಳ್ಳಿ ಸ್ವಾಮೀಜಿಯವರದ್ದು ಸಮಷ್ಟಿ ಸಾಧನೆ ಎನ್ನಬಹುದು.
ಅತ್ಯಂತ ಕಷ್ಟಕರವಾದ ಸಸ್ಯವರ್ಗೀಕರಣ ಶಾಸ್ತ್ರವನ್ನು ಆಯ್ದುಕೊಂಡು ಅದರಲ್ಲಿ ಉನ್ನತ ಪದವಿಗಳನ್ನೂ ಪಡೆದ ಬಳಿಕ ದಶಕಗಳಿಂದ ಅನನ್ಯ ನಿಷ್ಠೆ ಶ್ರದ್ಧೆಯಿಂದ ತಪಸ್ಸಿನ ರೀತಿಯಲ್ಲಿ ಅಧ್ಯಯನ ಅಧ್ಯಾಪನ ನಡೆಸಿ ಈ ಭೂಮಿಯಲ್ಲಿರುವ ಸಸ್ಯ ಸೃಷ್ಟಿಯ ಸೊಬಗು- ಸೊಗಡುಗಳನ್ನು, ವೈವಿಧ್ಯ- ವಿಶೇಷಗಳನ್ನು ಪ್ರಪಂಚವೇ ಬೆರಗಾಗುವ ರೀತಿಯಲ್ಲಿ ತೆರೆದಿಟ್ಟ ಡಾ ಭಟ್ಟರು ಬಹುತೇಕ ಒಬ್ಬಂಟಿಯಾಗಿಯೇ ಈ ಸಾಧನೆಗೈದವರು. ಈ ಕ್ಷೇತ್ರದಲ್ಲಿ ಅವರು ನಡೆಸಿದ ತಪಸ್ಸು, ರಚಿಸಿ ಕೊಟ್ಟ ಕೃತಿಗಳು ಈ ನಾಡಿನ ಸಾರ್ವಕಾಲಿಕ ಮಾನ್ಯವೆನಿಸುವ ಆಕರ ಗ್ರಂಥಗಳೇ ಆಗಿವೆ.
ಡಾ ಭಟ್ಟರದ್ದು ಮೌನ ಸಾಧನೆ. ಅವರು ಕಂಡುಹಿಡಿದ ಐದಾರು ಸಸ್ಯಪ್ರಭೇದಗಳನ್ನು ಮೆಚ್ಚಿದ ಅಂತಾರಾಷ್ಟ್ರೀಯ ಬಯೋಲಜಿಕಲ್ ಸೊಸೈಟಿ ಆ ಸಸ್ಯಗಳಿಗೆ ಭಟ್ಟರ ಹೆಸರನ್ನು ಸಂಯೋಜಿಸಿ ಭಟ್ಟರ ಶ್ರಮವನ್ನು ಬಹುಮಾನಿಸಿದ್ದು ಸಾಮಾನ್ಯ ಸಂಗತಿಯಲ್ಲ.
ಡಾ ಭಟ್ಟರ ಕುರಿತಾಗಿ ಉಡುಪಿಯ ಮತ್ತೋರ್ವ ಸಸ್ಯಶಾಸ್ತ್ರ ಪ್ರಾಧ್ಯಾಪಕ, ಸಾಂಸ್ಕೃತಿಕ ಧುರೀಣರೂ, ರಂಜನಿ ಮೆಮೋರಿಯಲ್ ಟ್ರಸ್ಟ್ ನ ರೂವಾರಿಗಳೂ ಆಗಿರುವ ಪ್ರೊ ವಿ ಅರವಿಂದ ಹೆಬ್ಬಾರರು ಸಾಂದರ್ಭಿಕವಾಗಿ ರಚಿಸಿದ ಟ್ಯಾಕ್ಸೊನೊಮಿ ಭಟ್ಟರ ಯಾನ ಕೃತಿ ಭಟ್ಟರ ಅನೂಹ್ಯ ಸಾಧನೆ ಶ್ರಮಗಳಿಗೆ ಕನ್ನಡಿಯಾಗಿದ್ದು ಅದರ ಬಿಡುಗಡೆ ಸಮಾರಂಭ ಈ ಕಾರಣಕ್ಕೆ ಬಹುಕಾಲ ಸ್ಮರಣೀಯವಾಗಿದೆ.
ಈ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ, ಕೃತಿ ಬಿಡುಗಡೆಗೊಳಿಸಿ ಡಾ ಭಟ್ಟರ ಬಹುಕಾಲದ ಒಡನಾಡಿ ಸಹೋದ್ಯೋಗಿ ಹಾಗೂ ನಾಡಿನ ಮತ್ತೋರ್ವ ಅಪೂರ್ವ ಸಸ್ಯ ವಿಜ್ಞಾನಿ ಡಾ ಸಿ ಆರ್ ನಾಗೆಂದ್ರನ್ ರು ಮಾತನಾಡಿ ಡಾ ಕೆ ಗೋಪಾಲಕೃಷ್ಣ ಭಟ್ಟರ ತಪಸ್ಸು, ಅಧ್ಯಯನ ನಿಷ್ಠೆಗಳ ಆಳ ಅಗಲಗಳನ್ನು ತೆರೆದಿಟ್ಟರು.
ಇನ್ನೊಂದೆಡೆ ಇದೇ ಕಾಲೇಜಿನ ಮುದ್ದಣ ಮಂಟಪದಲ್ಲಿ ರಂಗಭೂಮಿಯು, ಬಹುಕಾಲದಿಂದಲೂ ಡಾ ಸಾಣೆಹಳ್ಳಿ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿಯವರು ಬಹುಕಾಲದಿಂದ ನಡೆಸಿಕೊಂಡುಬಂದ ಸಾಂಸ್ಕೃತಿಕ ತಪಸ್ಸು, ಸಾಹಿತ್ಯಕ ಕೊಡುಗೆ ಕೈಂಕರ್ಯಗಳಿಗಾಗಿ ರಂಗಪಂಚಾನನ ಎಂಬ ಅಭಿದಾನದೊಂದಿಗೆ ಗೌರವಿಸುವ ಸಾರ್ಥಕ ಕಾರ್ಯ ನಡೆಸಿತು.
ಕಾವಿ ತೊಟ್ಟ ಸನ್ಯಾಸಿಯೋರ್ವರ ಸಾಂಸ್ಕೃತಿಕ ಪ್ರಜ್ಞೆ, ಸಮಾಜಮುಖಿ ಚಿಂತನೆಗಳು ಹಾಗೂ ಆ ನಿಟ್ಟಿನಲ್ಲಿ ಅನೇಕ ವರ್ಷಗಳಿಂದ ಅವರು ನಡೆಸಿಕೊಂಡು ಬಂದ ಶ್ರಮಪೂರ್ವಕವಾದ ಕೃಷಿ, ಅವರು ರಚಿಸಿದ ಹತ್ತಾರು ಸಾಹಿತ್ಯಕ ಕೃತಿಗಳು, ರಂಗ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವಂತೆ ಅವರು ಸಾಣೆಹಳ್ಳಿ ಮತ್ತು ಇತರೆಡೆಗಳಲ್ಲಿ ನಿರ್ಮಿಸಿಕೊಟ್ಟ ರಂಗಮಂದಿರಗಳು, ನಾಟಕ ತಂಡ ಕಟ್ಟಿಕೊಂಡು ದೇಶದುದ್ದಗಲ ಸಂಚರಿಸಿ ಅವರು ನಡೆಸಿದ ಸಾಹಸದ ರಂಗಪ್ರಯೋಗಗಳು ಮೇರುಸದೃಶವಾಗಿವೆ. ಈ ಕಾರ್ಯಕ್ರಮದ ವೇದಿಕೆಯ ಬಳಿಯಲ್ಲಿ ಈ ಎಲ್ಲವುಗಳನ್ನು ಬಿಂಬಿಸುವ ಚಿತ್ರಪದರ್ಶನವು ಸ್ವಾಮೀಜಿಯವರ ಸಾಧನೆಗಳನ್ನು ಅತ್ಯಂತ ಸಮರ್ಥವಾಗಿ ತೆರೆದಿಟ್ಟಿತು.
ಕಾರ್ಯಕ್ರಮದಲ್ಲಿ ಅಭಿವಂದನಾ ಭಾಷಣ ಮಾಡಿದ ನಾಡಿನ ಹಿರಿಯ ರಂಗಕರ್ಮಿ ಡಾ ಶ್ರೀನಿವಾಸ ಕಪ್ಪಣ್ಣ ಅವರು, ಸ್ವಾಮೀಜಿಯವರು ನಾಡಿನ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸಲು ನೀರೆರೆದು ಪೋಷಿಸಿದ ಪರಿ ಹಾಗೂ ಮಾಡಿದ ಕ್ರಾಂತಿಕಾರ್ಯಗಳನ್ನು ಮನೋಜ್ಞವಾಗಿ ಬಿಡಿಸಿಟ್ಟು ಉಡುಪಿಯ ಸಾಂಸ್ಕೃತಿಕ ಮನಸ್ಸುಗಳ ಕದತಟ್ಟಿದರು.
-ಜಿ ವಾಸುದೇವ ಭಟ್ ಪೆರಂಪಳ್ಳಿ