'ನಮ್ಮ ಅಬ್ಬಕ್ಕ- 2022' ಸಮಾಲೋಚನಾ ಸಭೆಯಲ್ಲಿ ಮೇಯರ್ ಪ್ರೇಮಾನಂದ ಶೆಟ್ಟಿ
ಮಂಗಳೂರು: 'ಭಾರತ ಸ್ವಾತಂತ್ರ್ಯ ಸಂಗ್ರಾಮದ ಮೊದಲ ಧ್ವನಿಯಾಗಿ ಹೋರಾಟದ ಕಣಕ್ಕಿಳಿದ ಉಳ್ಳಾಲದ ರಾಣಿ ಅಬ್ಬಕ್ಕ ನಮಗೆಲ್ಲಾ ಸ್ಫೂರ್ತಿಯಾಗಿದ್ದಾಳೆ. ಅವಳು ತುಳು ನಾಡಿನ ಹೆಮ್ಮೆ. ಮಂಗಳೂರಿನ ಲಕ್ಷ್ಮಪ್ಪ ಬಂಗರಸನನ್ನು ವರಿಸಿದ ಆಕೆ ಪೋರ್ಚುಗೀಸರಿಗೆ ಕಪ್ಪ ಕೊಡುವ ವಿಚಾರದಲ್ಲಿ ಪತಿಯನ್ನೇ ವಿರೋಧಿಸಿದ ದಿಟ್ಟ ಮಹಿಳೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಮ್ಮ ಮನೆ ಮಗಳು ಅಬ್ಬಕ್ಕನನ್ನು ಸ್ಮರಿಸಿಕೊಳ್ಳುವುದು ಆದ್ಯ ಕರ್ತವ್ಯ' ಎಂದು ಮಂಗಳೂರಿನ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದೊಂದಿಗೆ ಫೆಬ್ರವರಿ 26 ಮತ್ತು 27 ರಂದು ನಗರದ ಪುರಭವನದಲ್ಲಿ ಹಮ್ಮಿಕೊಂಡಿರುವ 'ನಮ್ಮ ಅಬ್ಬಕ್ಕ - 2022 ಅಮೃತ ಸ್ವಾತಂತ್ರ್ಯ ಸಂಭ್ರಮ' ಸಮಾಲೋಚನಾ ಸಭೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಭಾಗವಹಿಸಿದ ಮಂಗಳೂರಿನ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ 'ರಾಷ್ಟ್ರವು 75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿರುವ ಸಂದರ್ಭದಲ್ಲಿ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ ಅಬ್ಬಕ್ಕ ರಾಣಿ ಯನ್ನು ಅರ್ಥಪೂರ್ಣವಾಗಿ ಸ್ಮರಿಸಿಕೊಳ್ಳುವುದರ ಮೂಲಕ ಪಾಲಿಕೆ ಮತ್ತು ಪ್ರತಿಷ್ಠಾನ ಶ್ಲಾಘನೀಯ ಕೆಲಸಮಾಡುತ್ತಿದೆ. ಎಲ್ಲರೂ ಕೈಜೋಡಿಸಿ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿದೆ' ಎಂದರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಎರಡು ದಿನಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅತಿಥಿಗಳು ಮತ್ತು ಸಾಂಸ್ಕೃತಿಕ ತಂಡಗಳ ವಿವರ ನೀಡಿದರು.
ಉಪಮೇಯರ್ ಸುಮಂಗಳಾ, ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶೋಭಾ ರಾಜೇಶ್, ಕಾರ್ಪೊರೇಟರ್ ರಾಧಾಕೃಷ್ಣ, ಪಾಲಿಕೆ ಆಯುಕ್ತ ಡಾ.ಅಕ್ಷಯ್ ಶ್ರೀಧರ್, ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಲೆಕ್ಕಪತ್ರ ವಿಭಾಗದ ನಿಶ್ಚಿತ್ ಹೆಗ್ಡೆ; ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಪದಾಧಿಕಾರಿಗಳಾದ ತೋನ್ಸೆ ಪುಷ್ಕಳ ಕುಮಾರ್, ಪಿ.ಡಿ. ಶೆಟ್ಟಿ, ಸತೀಶ್ ಸುರತ್ಕಲ್, ನಮಿತಾ ಶ್ಯಾಮ್ ಮತ್ತು ಸುಮಾ ಪ್ರಸಾದ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ