ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸಾಹಿತ್ಯ , ಭಾಷಾ ಮತ್ತು ಸಂವಹನ ಕುರಿತ ಸಂವಾದ ಕಾರ್ಯಕ್ರಮ

Upayuktha
0

ಪುತ್ತೂರು: ಮನುಷ್ಯ ಸಂಸಾರದ ಜಂಜಾಟ ಹಾಗೂ ಬದುಕಿನ ಸಂಕೀರ್ಣತೆಯಿಂದ ಹೊರಬರಲು ಸಾಹಿತ್ಯದ ಪ್ರಕಾರಗಳಾದ ಕಥೆ, ಕವನ, ಕಾವ್ಯದ ಅಭಿರುಚಿ ಮೈಗೂಡಿಸಿಕೊಂಡಾಗ ಬದುಕಿಗೊಂದು ಅರ್ಥ ಬರುತ್ತದೆ ಎಂದು ವಿವೇಕಾನಂದ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಹೇಳಿದರು.


ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ವಿಭಾಗದ ವತಿಯಿಂದ ಆಯೋಜಿಸಲಾದ ಸಾಹಿತ್ಯ, ಭಾಷಾ ಮತ್ತು ಸಂವಹನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಸಾಹಿತಿಗಳ ಸಾಹಿತ್ಯ ರಚನೆಯಿಂದಾಗಿ ಭೌತಿಕ ಅಭಿವೃದ್ಧಿ ಆಗದಿದ್ದರೂ ಆಳುವ ವರ್ಗಕ್ಕೆ ಆತ್ಮಸ್ಥೈರ್ಯ ಹಾಗೂ ಪ್ರಜ್ಞಾವಂತಿಕೆ ಮೂಡಿಸುತ್ತದೆ. ಸಾಹಿತ್ಯ ನಿಂತ ನೀರಾಗಬಾರದು. ದಿನನಿತ್ಯದ ಜೀವನಕ್ಕೆ ಪೂರಕವಾಗಿರಬೇಕು. ವಿದ್ಯಾದಾಹಿಗಳ ಜ್ಞಾನಾರ್ಜನೆಗೆ ಸಹಕಾರಿಯಾಗಬೇಕು. ಸಮಾಜದಲ್ಲಿ ಕಟ್ಟಕಡೆ ವ್ಯಕ್ತಿಯೂ ಸಾಹಿತ್ಯ ಮೆಚ್ಚುವಂತಾಗಬೇಕು. ಅದೇ ರೀತಿ ಭಾಷೆ ಇಂದು ಸಂವಹನದ ಜತೆಗೆ ಜ್ಞಾನಾಭಿವೃದ್ಧಿಯ ಮಾಧ್ಯಮ. ಹಾಗಾಗಿ ನಮ್ಮ ಮಾತೃ ಭಾಷೆ ಜತೆಗೆ ವ್ಯಾವಹಾರಿಕ, ಪ್ರಚಲಿತ ಭಾಷೆಗಳನ್ನು ಕಲಿತು ನಮ್ಮ ಸಂವಹನವನ್ನು ವೃದ್ಧಿಸಿಕೊಳ್ಳುವ ಮುಖೇನ ಭಾಷಾ ಜ್ಞಾನವನ್ನು ಸಾಧಿಸಿಕೊಂಡು ಸ್ವಾವಲಂಬಿಯಾಗುವುದು ಇಂದಿನ ಅವಶ್ಯ. ಜೀವನಾವಶ್ಯಕ ಕಲೆಗಳ ಕೇಂದ್ರಬಿಂದು ಸಮರ್ಪಕ ಸಂವಹನ ಕಲೆ. ಜೀವವನ್ನೇ ಉಳಿಸಬಲ್ಲ ಶಕ್ತಿ ಹೊಂದಿರುವಂತಹ ಕಲೆ. ಇದನ್ನು ಸರಿಯಾಗಿ ರೂಢಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಮಾತನಾಡಿ ಭಾಷೆ ಎಂಬುದು ಕೇವಲ ಸಂಭಾಷಣೆಯ, ವಿಷಯ ಸಂವಹನದ ಮಾಧ್ಯಮವಷ್ಟೇ ಅಲ್ಲ. ಜ್ಞಾನಾಭಿವೃದ್ಧಿ ಮಾಡುವ ಮಾಧ್ಯಮವೂ ಹೌದು. ನಮ್ಮ ಸುತ್ತಲಿನ ನೈಜ ಪ್ರಪಂಚವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯವಸ್ಥೆ. ನಮಗೆ ತಿಳಿದಿರುವ ಭಾಷೆಯೊಂದಿಗೆ ಇತರರೊಡನೆ ಸಂವಹಿಸಲು ಅಗತ್ಯವಿರುವ ಇನ್ನಿತರ ಭಾಷೆಗಳನ್ನು ಕಲಿಯುವ ಉತ್ಸಾಹ ಪ್ರತಿಯೊಬ್ಬರಲ್ಲೂ ಇರಬೇಕು ಎಂದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥ ಪರಮೇಶ್ವರ ಶರ್ಮ ಮತ್ತು ಉಪನ್ಯಾಸಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಈಶ್ವರಿ ಜಿ ಪ್ರಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ವೈಷ್ಣವಿ ಎನ್ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿನಿ ವರ್ಷಾ ಎ ಸ್ವಾಗತಿಸಿ ದಿಶಾ ಎಂ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


free counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top