ಗಿಣ್ಣು (ಚೀಸ್) ರಹಸ್ಯಗಳು: ಅತಿಯಾದ ಚೀಸ್ ಸೇವನೆ ಒಳ್ಳೆಯದಲ್ಲ

Upayuktha
0


ಗಿಣ್ಣು ಎನ್ನುವುದು ಡೈರಿ ಉತ್ಪನ್ನವಾಗಿದ್ದು, ಹಲವಾರು ಸ್ವಾದಗಳಲ್ಲಿ, ರೂಪಗಳಲ್ಲಿ, ಆಕಾರಗಳಲ್ಲಿ ಮತ್ತು ಆಕೃತಿಗಳಲ್ಲಿ ಲಭ್ಯವಿದೆ. ಹಾಲನ್ನು ಒಡೆದು, ಹಾಲಿನಲ್ಲಿರುವ ಹಾಲಿನ ಪ್ರೋಟಿನ್ ಕೇಸಿನ್‍ನ್ನು ಬತ್ತಿಸಿ ಗಿಣ್ಣನ್ನು ತಯಾರಿಸಲಾಗುತ್ತದೆ. ಅತೀ ಹೆಚ್ಚು ಪ್ರೋಟಿನ್, ಕೊಬ್ಬು, ಕೊಲೆಸ್ಟ್ರಾಲ್, ಕ್ಯಾಲ್ಸಿಯಂ ಹೊಂದಿರುವ ಈ ಗಿಣ್ಣಿನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಅತಿ ಕನಿಷ್ಠ ನಾರಿನಂಶ ಕೂಡಾ ಅತ್ಯಲ್ಪವಾಗಿರುತ್ತದೆ. ದನ, ಎಮ್ಮೆ, ಆಡು ಮತ್ತು ಕುರಿಗಳ ಹಾಲಿನಿಂದ ಈ ಗಿಣ್ಣನ್ನು ತಯಾರಿಸಬಹುದಾಗಿದೆ. ಹೆಚ್ಚಾಗಿ ದನದ ಹಾಲನ್ನೇ ಗಿಣ್ಣು ತಯಾರಿಸಲು ಬಳಸುತ್ತಾರೆ. ಗಿಣ್ಣಿನಲ್ಲಿ ಅತಿ ಹೆಚ್ಚು ಸಾಚುರೇಟೆಡ್ ಕೊಬ್ಬು ಮತ್ತು ಲವಣಾಂಶ ಇರುವ ಕಾರಣ ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣ ಏರುತ್ತದೆ ಮತ್ತು ರಕ್ತದೊತ್ತಡ ಕೂಡಾ ಏರುವ ಸಾಧ್ಯತೆ ಇರುತ್ತದೆ.


ಅತಿಯಾದ ಗಿಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಗಿಣ್ಣು (ಚೀಸ್) ಮತ್ತು ಪನೀರ್ ಎರಡೂ ಕೂಡಾ ಡೈರಿ ಉತ್ಪನ್ನವಾಗಿದ್ದು, ಹಾಲನ್ನು ಬತ್ತಿಸಿ ಮಾಡುತ್ತಾರೆ. ಗಿಣ್ಣಿನಲ್ಲಿ ಹಲವಾರು ವಿಧಗಳು ಮತ್ತು ಸ್ವಾದಗಳು ಲಭ್ಯವಿದೆ. ಆದರೆ ಪನೀರ್ ಗಿಣ್ಣಿಗಿಂತ ಭಿನ್ನವಾದ ಆಕೃತಿ, ರುಚಿ ಮತ್ತು ರಚನೆಯನ್ನು ಹೊಂದಿದೆ. ಸಾಮಾನ್ಯವಾಗಿ ಪನೀರನ್ನು ಕಾಟೇಜ್ ಚೀಸ್‍ಗೆ ಹೋಲಿಸುತ್ತಾರೆ.

ಸಾಮಾನ್ಯವಾಗಿ ಚೀಸನ್ನು ಹಾಲನ್ನು ಬತ್ತಿಸಿ, ರೆನೆಟ್ ಕಿಣ್ವವನ್ನು ಬಳಸಿ ಉತ್ಪಾದಿಸಲಾಗುತ್ತದೆ. ಆದರೆ ಪನೀರ್ ಉತ್ಪಾದನೆಗೆ ವಿನೇಗರ್, ಲಿಂಬೆರಸ ಅಥವಾ ಯೋಗರ್ಟ್‍ನ್ನು ಬಳಸಲಾಗುತ್ತದೆ.


ಚೀಸ್‍ನಲ್ಲಿ ಅತೀ ಹೆಚ್ಚು ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಇರುತ್ತದೆ. ಚೀಸ್‍ನಲ್ಲಿ ಸಾಚುರೇಟೆಡ್ ಕೊಬ್ಬು ಹಾಗೂ ಕೊಲೆಸ್ಟ್ರಾಲ್ ಇರುತ್ತದೆ. ಆದರೆ ಪನೀರ್‍ನಲ್ಲಿ ಆರೋಗ್ಯ ಪೂರ್ಣ ಕೊಬ್ಬು ಮತ್ತು ಪ್ರೋಟಿನ್ ಇರುತ್ತದೆ. ಚೀಸ್‍ಗೆ ಹೋಲಿಕೆ ಮಾಡಿದಲ್ಲಿ ಪನೀರ್ ಹೆಚ್ಚು ಆರೋಗ್ಯಕ್ಕೆ ಪೂರಕ ಎಂದೂ ತಿಳಿದು ಬಂದಿದೆ. ಅತಿಯಾಗಿ ಚೀಸ್ ಬಳಸಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅತೀ ಹೆಚ್ಚು ಕ್ಯಾಲರಿಯನ್ನು ಚೀಸ್ ಹೊಂದಿರುತ್ತದೆ. ಸಾಮಾನ್ಯವಾಗಿ ಈಗಿನ ಮಕ್ಕಳು, ಯುವಕರು ಹೆಚ್ಚು ತಿನ್ನಲು ಇಷ್ಟಪಡುವ ಪಿಜ್ಜಾ, ಸ್ಯಾಂಡ್‍ವಿಚ್‍ಗಳು, ಪಾಸ್ತಾ, ಚೀಸ್ ಕೇಕ್, ಚೀಸ್ ಬಾಲ್, ಚೀಸ್ ಬೋರ್ಡ್‍ಗಳಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಚೀಸ್ ಇರುತ್ತದೆ. ಈ ಆಹಾರ ಉತ್ಪನ್ನಗಳನ್ನು ದಿನನಿತ್ಯ ಬಳಸಿದಲ್ಲಿ ಮಕ್ಕಳ ಮತ್ತು ಯುವಕರ ಆರೋಗ್ಯ ಹಾಳಾಗುವುದರಲ್ಲಿ ಸಂದೇಹವೇ ಇಲ್ಲ. ಎಲ್ಲವನ್ನೂ ಇತಿ ಮಿತಿಯಲ್ಲಿ ಬಳಸಬೇಕು. ಅನಿಯಂತ್ರಿತ ಚೀಸ್ ಬಳಕೆಯಿಂದ ದೇಹದ ಕೊಬ್ಬು ಹೆಚ್ಚಾಗಿ, ಬೊಜ್ಜು ಬೆಳೆದು ಸಣ್ಣ ವಯಸ್ಸಿನಲ್ಲಿಯೇ ಹೃದಯಸಂಬಂಧಿ ರೋಗ, ಮಧುಮೇಹ ರೋಗ ಬರುವ ಸಾಧ್ಯತೆ ಹೆಚ್ಚಾಗಿದೆ.


ಚೀಸ್‍ನಲ್ಲಿ ಏನೇನು ಇದೆ?

100ಗ್ರಾಂ ಚೀಸ್‍ನಲ್ಲಿ ಸುಮಾರು 400 ಕ್ಯಾಲರಿ ಇರುತ್ತದೆ. ಇದರಲ್ಲಿ ಅರ್ಧ ಭಾಗ ಅಂದರೆ 50 ಶೇಕಡಾ (33g) ಕೊಬ್ಬು ಮತ್ತು 21 ಗ್ರಾಂ ಸಾಚುರೇಟೆಡ್ ಕೊಬ್ಬು ಇರುತ್ತದೆ. ಸೋಡಿಯಂ 620mg, ಕೊಲೆಸ್ಟ್ರಾಲ್ 105mg, ಪೊಟಾಸಿಯಂ 98mg ಇರುತ್ತದೆ. ಕಾರ್ಬೋಹೈಡ್ರೇಟ್, ನಾರಿನಂಶ ಮತ್ತು ಸಕ್ಕರೆ ಅಂಶ ಅತೀ ಕನಿಷ್ಠ ಪ್ರಮಾಣದಲ್ಲಿ ಇರುತ್ತದೆ. ಸುಮಾರು 50 ಶೇಕಡಾ ಅಂದರೆ 25ಗ್ರಾಂ ನಷ್ಟು ಪ್ರೋಟಿನ್ ಇರುತ್ತದೆ. ಕಬ್ಬಿಣ, ವಿಟಮಿನ್ ಃ6 ಮತ್ತು ವಿಟಮಿನ್ ಅ ಕನಿಷ್ಠ ಪ್ರಮಾಣದಲ್ಲಿ ಇರುತ್ತದೆ. ಕ್ಯಾಲ್ಸಿಯಂ ಮಾತ್ರ ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ. ಮೆಗ್ನಿಷಿಯಂ, ಕೊಬಾಲಮಿನ್ ಕೂಡಾ ಅತ್ಯಲ್ಪ ಪ್ರಮಾಣದಲ್ಲಿ ಇರುತ್ತದೆ. ಒಬ್ಬ ಸಾಮಾನ್ಯ ವ್ಯಕ್ತಿಗೆ ದಿನನಿತ್ಯ 2000 ದಿಂದ 2400 ಕ್ಯಾಲರಿ ಸಾಕಾಗುತ್ತದೆ. ನಾವು ಇದರಲ್ಲಿ 200 mg ಚೀಸ್ ಬಳಸಿದಲ್ಲಿ ಸುಮಾರು 800 ಕ್ಯಾಲರಿ ನಮಗೆ ಅನಗತ್ಯವಾಗಿ ನಮ್ಮ ದೇಹಕ್ಕೆ ಸೇರಿಕೊಳ್ಳುತ್ತದೆ. ಹೀಗೆ ನಮಗೆ ಹೆಚ್ಚಾಗಿ ದೊರೆತ ಕ್ಯಾಲರಿ, ದೇಹದಲ್ಲಿ ಕೊಬ್ಬಿನ ರೂಪದಲ್ಲಿ ಶೇಕರಣೆಯಾಗಿ ಮುಂದೆ ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ.


ಚೀಸ್‍ನ ಪ್ರಯೋಜನಗಳು:

1. ಎಲುಬಿನ ಆರೋಗ್ಯಕ್ಕೆ ಅವಶ್ಯಕ: 

ಚೀಸ್‍ನಲ್ಲಿ ಇರುವ ಕ್ಯಾಲ್ಸಿಯಂ, ಪ್ರೋಟಿನ್, ಮೆಗ್ನಿಷಿಯಂ, ಸತು ವಿಟಮಿನ್ ಂ, ಆ ಮತ್ತು ಏ ಕಾರಣದಿಂದಾಗಿ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಎಲುಬಿನ ಬೆಳವಣಿಗೆಗೆ ಬಹಳಷ್ಟು ಪೂರಕವಾಗಿ ಸಹಾಯ ಮಾಡುತ್ತದೆ. ಅಸ್ಥಿರಂಧ್ರತೆ ತಡೆಯಲೂ ಗಿಣ್ಣು ಸಹಾಯ ಮಾಡುತ್ತದೆ.

2. ಹಲ್ಲಿನ ಆರೋಗ್ಯಕ್ಕೆ ಪೂರಕ:

ಹಲ್ಲಿನ ಪರಿಪೂರ್ಣ ಬೆಳವಣಿಗೆಗೆ ಕ್ಯಾಲ್ಸಿಯಂ ಅತೀ ಅವಶ್ಯಕ. ಚೀಸ್‍ನಲ್ಲಿರುವ ಕ್ಯಾಲ್ಸಿಯಂನಿಂದಾಗಿ ಹಲ್ಲಿನ ಬೆಳವಣೆಗೆಗೆ ಪೂರಕ ಎಂದೂ ಸಾಭೀತಾಗಿದೆ. ಅದೇ ರೀತಿ ಚೀಸ್ ಸೇವನೆಯಿಂದಾಗಿ ಹಲ್ಲಿನ ಸುತ್ತಲಿರುವ ಪಾಚಿಗಳಲ್ಲಿ ಆಮ್ಲೀಯತೆಯನ್ನು ಹೆಚ್ಚಿಸಿ, ದಂತ ಕ್ಷಯ ಆಗದಂತೆ ತಡೆಯುತ್ತದೆ ಎಂದು ನಂಬಲಾಗಿದೆ.

3. ರಕ್ತದೊತ್ತಡ ನಿಯಂತ್ರಣ:

ಚೀಸ್‍ನಲ್ಲಿರುವ ಕ್ಯಾಲ್ಸಿಯಂ ರಕ್ತದೊತ್ತಡ ನಿಯಂತ್ರಣಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಕಡಿಮೆ ಕೊಬ್ಬಿನ, ಕಡಿಮೆ ಸೋಡಿಯಂ (ಲವಣಾಂಶದ) ಚೀಸ್ ಸೇವನೆಯಿಂದ ರಕ್ತದೊತ್ತಡ ನಿಯಂತ್ರಿಸಬಹುದಾಗಿದೆ.

4. ರಕ್ತನಾಳಗಳ ಆರೋಗ್ಯಕ್ಕೆ ಪೂರಕ:

ಚೀಸ್‍ನಲ್ಲಿರುವ ಅಧಿಕ ಕೊಬ್ಬು ಮತ್ತು ಸೋಡಿಯಂನಿಂದಾಗಿ ಹೃದಯ ಸಂಬಂಧಿ ರೋಗ ಜಾಸ್ತಿ ಎಂದೂ ಹಲವರು ವಾದಿಸುತ್ತಾರೆ. ಆದರೆ ಗಿಣ್ಣಿನಲ್ಲಿರುವ ಗ್ಲುಟಾಥಯೋನ್ ಎಂಬ ಆಂಟಿಆಕ್ಸಿಡೆಂಟ್‍ನಿಂದಾಗಿ, ಮೆದುಳಿನ ಆರೋಗ್ಯ ವೃದ್ಧಿಸುತ್ತದೆ ಹಾಗೂ ರಕ್ತನಾಳಗಳ ಕಾರ್ಯಕ್ಷಮತೆ ವೃದ್ಧಿಸುತ್ತದೆ ಎಂದು ತಿಳಿದು ಬಂದಿದೆ.

5. ಜೀರ್ಣಾಂಗವ್ಯೂಹದಲ್ಲಿನ ಬ್ಯಾಕ್ಟೀರಿಯಗಳನ್ನು ಪೋಷಿಸುತ್ತದೆ.

ಗಿಣ್ಣು ಸೇವನೆಯಿಂದ ಜೀರ್ಣಾಂಗವ್ಯೂಹದಲ್ಲಿನ  ಪರೋಪಕಾರಿ ಬ್ಯಾಕ್ಟೀರಿಯಗಳು ವೃದ್ಧಿಸಿ, ಜೀರ್ಣಾಂಗ ವ್ಯೂಹದ ಆರೋಗ್ಯವನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.

6. ತೂಕ ನಿಯಂತ್ರಣ:

ದೇಹದ BMI (ಬಾಡಿ ಮಾಸ್ ಇಂಡೆಕ್ಸ್) ಜಾಸ್ತಿ ಇರುವವರಿಗೆ ಕ್ಯಾಲ್ಸಿಯಂ ಪ್ರಮಾಣ ಕಡಿಮೆ ಇರುತ್ತದೆ. ಇಂತವರಿಗೆ ಕಡಿಮೆ ಕೊಬ್ಬು ಮತ್ತು ಕಡಿಮೆ ಸೋಡಿಯಂ ಇರುವ ಗಿಣ್ಣು ಸೇವನೆಯಿಂದ, ಹೆಚ್ಚು ಕ್ಯಾಲ್ಸಿಯಂ ದೊರೆತು, ತೂಕ ನಿಯಂತ್ರಣ, ಆಹಾರದ ಆಯ್ಕೆಯಲ್ಲಿ ಗಿಣ್ಣಿಗೆ ಹೆಚ್ಚಿನ ಪ್ರಾಧಾನ್ಯತೆ ದೊರಕಿದೆ.

7. ಒಮೆಗಾ-3 ಫ್ಯಾಟೀ ಆಸಿಡ್ ಹೆಚ್ಚಿಳ:

ಕೆಲವೊಂದು ನಿರ್ದಿಷ್ಟ ಗಿಣ್ಣಿನಲ್ಲಿ (ದನದಿಂದ ತಯಾರಿಸಿದ) ಒಮೆಗಾ-3 ಫ್ಯಾಟೀ ಆಸಿಡ್ ಹೆಚ್ಚು ಇರುತ್ತದೆ ಮತ್ತು ಇವುಗಳು ಹೃದಯದ ಮತ್ತು ಮೆದುಳಿನ ಆರೋಗ್ಯಕ್ಕೆ ಪೂರಕ ಎಂದು ತಿಳಿದು ಬಂದಿದೆ

8. ಜೀವಕೋಶಗಳ ಆರೋಗ್ಯ ವೃದ್ಧಿ:

ಪ್ರತಿ ಜೀವಕೋಶಗಳು ತನ್ನ ವಿಭಜನೆಗೆ ಮತ್ತು ಬೆಳವಣೆಗೆಗೆ ಪ್ರೋಟಿನ್ ಅತೀ ಅವಶ್ಯಕ. ಹೆಚ್ಚಿನ ಎಲ್ಲಾ ಚೀಸ್‍ಗಳಲ್ಲಿ ಅತೀ ಹೆಚ್ಚು ಪ್ರೋಟಿನ್ ಇರುತ್ತದೆ. ಒಬ್ಬ ವ್ಯಕ್ತಿಯ ಪ್ರೋಟಿನ್ ಅವಶ್ಯಕತೆ ಆತನ ಲಿಂಗ, ವಯಸ್ಸು, ಗಾತ್ರ ಮತ್ತು ಜೀವನ ಶೈಲಿಯ ಮೇಲೆ ಆಧಾರಿತವಾಗಿರುತ್ತದೆ. ಅವಶ್ಯಕತೆಗೆ ಅನುಗುಣವಾಗಿ ಸೇವಿಸಿದಲ್ಲಿ ಜೀವಕೋಶಗಳ ಆರೋಗ್ಯ ವೃದ್ಧಿಸುತ್ತದೆ.

9. ಗಿಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ B12 (ಕೋಬಾಲಮಿನ್) ಇರುತ್ತದೆ. ಇದು ಕೆಂಪು ರಕ್ತಕಣ, ಪ್ರೋಟೀನ್, ಡಿಎನ್‍ಎ ತಯಾರಿಕೆಗೆ ಅತೀ ಅವಶ್ಯಕ. ನರಗಳ ಆರೋಗ್ಯಕ್ಕೂ ಈ ಸಂಕೀರ್ಣ B12 ಎಂಬ ಜೀವಧಾತುವೇ ಅವಶ್ಯಕ. ಪ್ರಾಣಿಜನ್ಯ ಮತ್ತು ಕೃತಕ ಉತ್ಪನ್ನಗಳಲ್ಲಿ ಮಾತ್ರ ದೊರಕುವ ಈ B12 ಗಿಣ್ಣಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ.


ತೊಂದರೆಗಳೇನು?

1. ಅತೀ ಹೆಚ್ಚು ಸಾಚುರೇಟೆಡ್ ಕೊಬ್ಬಿನಿಂದ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗ ಬರುವ ಸಾಧ್ಯತೆ

2. ಅತೀ ಹೆಚ್ಚು ಸೋಡಿಯಂ ಪ್ರಮಾಣದಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.

3. ಹೆಚ್ಚಿನ ಪ್ರಮಾಣದಲ್ಲಿರುವ ಸ್ಯಾಚುರೇಟೆಡ್‌ ಕೊಬ್ಬಿನಿಂದಾಗಿ ಟೈಪ್-2 ಡಯಾಬಿಟೀಸ್ ಬರುವ ಸಾಧ್ಯತೆ. ನಮ್ಮ ದಿನನಿತ್ಯದ ಅವಶ್ಯಕತೆ 2000 ಕ್ಯಾಲರಿ ಇದ್ದಲ್ಲಿ ಅದರಲ್ಲಿ ಕೊಬ್ಬಿನಾಂಶ 20 ರಿಂದ 30 ಶೇಕಡ ಮಾತ್ರ ಇರತಕ್ಕದ್ದು ಮತ್ತು ಸ್ಯಾಚುರೇಟೆಡ್  ಕೊಬ್ಬು 10 ಶೇಕಡಾಕ್ಕಿಂತ  ಕಡಿಮೆ ಇರತಕ್ಕದ್ದು. ಅಂದರೆ ದಿನನಿತ್ಯ ಸೇವಿಸುವ ಆಹಾರದಲ್ಲಿ 2000 ಕ್ಯಾಲರಿ ಅಗತ್ಯವಿರುವ ಮನುಷ್ಯನಿಗೆ, ಕೇವಲ 20 ಗ್ರಾಂನಷ್ಟು ಸ್ಯಾಚುರೇಟರ್ ಕೊಬ್ಬು ಸೇವಿಸಲು ಅವಕಾಶವಿರುತ್ತದೆ. ಇದಕ್ಕಿಂತ ಜಾಸ್ತಿ ಸೇವಿಸಿದಲ್ಲಿ ಅಪಾಯ ಕಟ್ಟಿಟ್ಟಬುತ್ತಿ, ಅಗತ್ಯಕ್ಕಿಂತ ಜಾಸ್ತಿ ಸೇವಿಸಿದಲ್ಲಿ ಬೊಜ್ಜುತನ, ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ರೋಗ ಬರುವ ಸಾಧ್ಯತೆ ಹೆಚ್ಚಾಗುತ್ತದೆ.   

4. ಚೀಸ್‍ನಲ್ಲಿರುವ ಇಸ್ಟ್ರೋಜನ್ ಮತ್ತು ಇತರ ಸ್ಟಿರಾಯ್ಡ್ ರಸದೂತಗಳು ನಮ್ಮ ದೇಹದ ರಸದೂತಗಳ ಕಾರ್ಯಕ್ಷಮೆಯನ್ನು ಹಾಳು ಮಾಡುವ ಎಲ್ಲಾ ಸಾಧ್ಯತೆ ಇರುತ್ತದೆ. ಇದರಿಂದ ಕ್ಯಾನ್ಸರ್ ಬರುವ ಸಾಧ್ಯತೆಯೂ ಹೆಚ್ಚಾಗುತ್ತದೆ.  

5. ಲ್ಯಾಕ್ಟೋಸ್, ಇನ್‍ಟಾಲರೆನ್ಸ್ ಇರುವ ವ್ಯಕ್ತಿಗಳಲ್ಲಿ ಡೈರಿ ಉತ್ಪನ್ನಗಳ ಜೀರ್ಣಿಸಿಕೊಳ್ಳಲು ಬೇಕಾದ ಕಿಣ್ವಗಳು ಇರುವುದಿಲ್ಲ. ಅವರಿಗೆ ಹೊಟ್ಟೆ ಉಬ್ಬರಿಸುವ, ಗ್ಯಾಸ್ ಮತ್ತು ಬೇಧಿ ಆಗುವ ಸಾಧ್ಯತೆ ಗಿಣ್ಣು ಬಳಸಿದಾಗ ಉಂಟಾಗುತ್ತದೆ.


ಕೊನೆ ಮಾತು:

ದಿನನಿತ್ಯದ ಆಹಾರದಲ್ಲಿ ಗಿಣ್ಣನ್ನು ಹಿತಮಿತವಾಗಿ ಬಳಸಬೇಕು. ಉತ್ತಮ ಪ್ರೋಟೀನ್ ಮತ್ತು ಕ್ಯಾಲ್ಸಿಯಂ, ದೇಹಕ್ಕೆ ನೀಡುವುದರ ಜೊತೆಗೆ, ಗಿಣ್ಣಿನಲ್ಲಿ ಹೆಚ್ಚು ಜೀರ್ಣಾಂಗ ವ್ಯೂಹಕ್ಕೆ ಪೂರಕವಾದ ಪ್ರೋಬಯೋಟಿಕ್ ಎಂಬ ವಸ್ತು ದೊರಕುತ್ತದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದನ್ನು ಜನರು ಅರಿತು ಮಿತ ಪ್ರಮಾಣದಲ್ಲಿ ಗಿಣ್ಣನ್ನು ಬಳಸಬೇಕು, ಅತಿಯಾಗಿ ಗಿಣ್ಣಿನ ಬಳಕೆಯಿಂದ ಹೃದಯ ತೊಂದರೆ, ಬೊಜ್ಜು, ಅಧಿಕ ರಕ್ತದೊತ್ತಡ ಮತ್ತು ಜೀರ್ಣಾಂಗ ವ್ಯೂಹದ ಸಮಸ್ಯೆ ಉದ್ಬವಿಸುತ್ತದೆ ಎಂಬುದನ್ನು ಅರಿತು ವ್ಯವರಿಸಿದಲ್ಲಿ ಯಾವುದೇ ಸಮಸ್ಯೆ ಉಂಟಾಗದು. ಗರ್ಭಿಣಿ ಸ್ತ್ರೀಯರಿಗೆ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ವಿಟಮಿನ್ B ಸಂಕೀರ್ಣ ಅತೀ ಅವಶ್ಯಕ. ಈ ಮೂರು ಅತ್ಯವಶ್ಯಕ ಧಾತುಗಳು ಗಿಣ್ಣಿನಲ್ಲಿ ಹೇರಳವಾಗಿರುವುದರಿಂದ  ಗರ್ಭಾವಸ್ಥೆಯ ಮಹಿಳೆಯರ ಆಹಾರದಲ್ಲಿ ಗಿಣ್ಣಿಗೆ ವಿಶೇಷ ಸ್ಥಾನ ದೊರಕಿದೆ. ದೇಹದಲ್ಲಿನ ಸ್ನಾಯುಗಳ ಆರೋಗ್ಯ ವೃದ್ದಿಗೂ ಗಿಣ್ಣು ಅವಶ್ಯಕ ಎಂಬುದಾಗಿ ಸಾಬೀತಾಗಿದೆ. ಗುರಾಣಿ ಗ್ರಂಥಿಯ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಮತ್ತು ಅದರಿಂದ ಉತ್ಪಾದನೆ ಆಗುವ ರಸದೂತಗಳ ಸಮತೋಲನ ಕಾಯ್ದುಕೊಳ್ಳಲು ಕೂಡಾ ಗಿಣ್ಣು ಅತೀ ಅವಶ್ಯಕ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ದೈಹಿಕ ಮಾನಸಿಕ ಆರೋಗ್ಯವನ್ನು ಪರಿಪೂರ್ಣವಾಗಿಸಲು ಬೇಕಾದ ಎಲ್ಲ ರೀತಿ ಅಂಶಗಳನ್ನು ಗಿಣ್ಣು ಹೊಂದಿರುವುದರಿಂದ ಹಿತಮಿತವಾಗಿ ಸೇವಿಸಿದಲ್ಲಿ ನೂರು ಕಾಲ ಸುಖವಾಗಿ ಬದುಕಬಹುದು. ಅದರಲ್ಲಿಯೇ ನಮ್ಮ ಸಮಾಜದ ಹಿತ ಅಡಗಿದೆ.

-ಡಾ: ಮುರಲಿ ಮೋಹನ್ ಚೂಂತಾರು 

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top