ಇಂದು (ಫೆ.9) ಭೀಷ್ಮಾಷ್ಟಮಿ: ಮನುಕುಲಕ್ಕೆ ಮಾದರಿ ಭೀಷ್ಮ ಪಿತಾಮಹ

Upayuktha
0

ಭೀಷ್ಮರಿಗೆ ಮಾನವಜನ್ಮದಿಂದ ಮುಕ್ತಿಕೊಡುವ ಆ ಉತ್ತರಾಯಣ ಪುಣ್ಯದಿನ ಬಂದೊದಗಿದ ಕೂಡಲೆ ಪಾಂಡವರು ಧೃತರಾಷ್ಟ್ರನನ್ನೂ ಕೃಷ್ಣನನ್ನೂ ಮುಂದಿಟ್ಟುಕೊಂಡು, ಗಂಧಪುಷ್ಪಧೂಪದೀಪಗಳನ್ನೂ ರತ್ನಾಭರಣಗಳನ್ನೂ ತೆಗೆದುಕೊಂಡು ರಣರಂಗದಲ್ಲಿ ಭೀಷ್ಮರು ಶರಶಯ್ಯೆಯಲ್ಲಿ ಮಲಗಿದ್ದೆಡೆಗೆ ನಡೆದರು. ಅವರೊಡನೆ ಕುಂತಿ, ಗಾಂಧಾರಿ, ದ್ರೌಪದಿ, ಸಾತ್ಯಕಿ, ವಿದುರ, ಯುಯುತ್ಸು ಮೊದಲಾದವರೂ ಹೊರಟರು.


ಭೀಷ್ಮರ ಸುತ್ತಲೂ ವ್ಯಾಸ ಪರಾಶರ ನಾರದರೇ ಮೊದಲಾದ ಋಷಿಶ್ರೇಷ್ಠರು ನೆರೆದಿದ್ದರು. ಯುಧಿಷ್ಠಿರನು ಅಜ್ಜನಿಗೆ ನಮಸ್ಕರಿಸಿ, “ದೇವ, ನಾನು ಪಾಂಡವನಾದ ಯುಧಿಷ್ಠಿರ. ನನ್ನ ಸಹೋದರರನ್ನೂ ನಿನ್ನ ಪ್ರೀತಿಪಾತ್ರರನ್ನೂ ಕರೆತಂದಿದ್ದೇನೆ. ನಿನ್ನನ್ನು ಗೌರವಿಸಲು ಇಡೀ ಹಸ್ತಿನಾವತಿಯೇ ಇಲ್ಲಿಗೆ ಬಂದಿದೆ. ಧೃತರಾಷ್ಟ್ರ ಕೃಷ್ಣರೂ ಬಂದಿದ್ದಾರೆ. ದಯವಿಟ್ಟು ಕಣ್ಣು ತೆರೆದು ನಮ್ಮನ್ನು ನೋಡು” ಎಂದನು. ಭೀಷ್ಮರು ಕಣ್ತೆರೆದು ಎಲ್ಲರನ್ನೂ ನೋಡಿ, “ಮಗು, ಈ ಸಮಸ್ತರ ಜೊತೆಗೆ ನಿನ್ನನ್ನು ನೋಡಲು ಸಂತೋಷವಾಗುತ್ತಿದೆ. ಕೊನೆಗೂ ಉತ್ತರಾಯಣ ಬಂದಿತಲ್ಲವೆ! ಇಂದಿಗೆ ನಾನು ಶರಶಯ್ಯೆಯಲ್ಲಿ ಮಲಗಿ  ಐವತ್ತೆಂಟು ದಿನವಾದರೂ ನೂರಾರು ವರ್ಷಗಳಾದ  ಹಾಗಿದೆ. ಈಗ ಪುಣ್ಯಕರವಾದ  ಮಾಘಮಾಸ ಹುಟ್ಟಿದೆ! ನಾನು ಈ ಭೂಮಿಯನ್ನು ಬಿಡುವ ಕಾಲ ಸನ್ನಿಹಿತವಾಯಿತು!” ಎಂದರು.


ಆಮೇಲೆ ಧೃತರಾಷ್ಟ್ರನಿಗೆ, “ಮಗನೇ, ನಿನಗೆ ರಾಜನ ಕರ್ತವ್ಯಗಳೆಲ್ಲವೂ ತಿಳಿದಿವೆ. ನಿನಗೆ ಗೊತ್ತಿಲ್ಲದಿರುವುದು ಯಾವುದೂ ಇಲ್ಲ. ವಿವೇಕಿಯಾದ ನೀನು ನಿನ್ನ ಮಕ್ಕಳ ಸಾವಿಗೆ ಶೋಕಿಸಬಾರದು. ಪಾಂಡವರು ನಿನ್ನ ಮಕ್ಕಳೇ; ನಿನ್ನ ಮೇಲೆ ಭಕ್ತಿಯಿಂದಿದ್ದಾರೆ. ಅವರೊಡನೆ ಸುಖವಾಗಿರು” ಎಂದರು. ನಂತರ ಅವರ ದೃಷ್ಟಿ ಕೃಷ್ಣನ ಕಡೆಗೆ ಹೊರಳಿತು. ಪುಷ್ಪಗಳನ್ನು ತರಿಸಿ ಅವುಗಳಿಂದ ಅವನನ್ನು ಪೂಜಿಸಿ, “ಕೃಷ್ಣಾ, ನೀನು ಈ ಜಗತ್ತಿಗೆಲ್ಲ ಈಶನು. ಪುರುಷನೆನ್ನಿಸಿಕೊಳ್ಳುವ ನೀನೇ ವಿಶ್ವದ ಸೃಷ್ಟಿಕರ್ತನು. ನೀನೇ ಪರಮಾತ್ಮನು. ನಿನ್ನ ವಿಶ್ವರೂಪವನ್ನು ತೋರಿಸಿ, ನನಗಿನ್ನು ಮನುಷ್ಯ ಶರೀರವನ್ನು ತೊರೆದು ಈ ಲೋಕವನ್ನು ಬಿಟ್ಟುಹೊರಡಲು ಅಪ್ಪಣೆಕೊಡು. ನಿನ್ನ ಕೃಪೆಯಿಂದ ನನಗೆ ಉತ್ತಮ ಗತಿ ದೊರೆಯಲಿ” ಎನ್ನಲು, ಕೃಷ್ಣನು ಅವರಿಗೆ ವಿಶ್ವರೂಪವನ್ನು ದರ್ಶನ ಮಾಡಿಸಿ, ಅನಂತರ, “ದೇವವ್ರತ, ನಿನ್ನ ನಿಜಧಾಮಕ್ಕೆ ಇನ್ನು ನೀನು ಹೊರಡು. ಹೋಗಿ ವಸುಗಳನ್ನು ಸೇರಿಕೋ. ಮಾರ್ಕಂಡೇಯನಂತೆ ನಿನಗೆ ಪುನರ್ಜನ್ಮವಿಲ್ಲ. ಮೃತ್ಯುವು ಸೇವಕನಂತೆ ನಿನ್ನ ಆಣತಿಗಾಗಿ ಕೈಕಟ್ಟಿಕೊಂಡು ನಿಂತಿರುವನು. ನೀನು ಅವನನ್ನು ಕರೆಯಬಹುದು” ಎಂದನು.


ಆಗ ಭೀಷ್ಮರು ಸುತ್ತಲೂ ಇದ್ದ ಜನರನ್ನು ನೋಡಿ “ನಾನು ಹೋಗಿ ಬರುತ್ತೇನೆ, ಎಲ್ಲರೂ ಅಪ್ಪಣೆಕೊಡಿ; ಸತ್ಯನಿರತರಾಗಿರಿ; ಸತ್ಯವೇ ದೊಡ್ಡ ಬಲ; ಆತ್ಮ ಸಂಯಮವುಳ್ಳವರಾಗಿಯೂ, ಅಹಿಂಸಾಪರರಾಗಿಯೂ ಧರ್ಮಶೀಲರಾಗಿಯೂ ತಪೋನಿಷ್ಟರಾಗಿಯೂ ಇರಿ!’ ಎಂದು ಎಲ್ಲರಿಗೂ ಕೈಮುಗಿದು, ಸ್ಥಿರರಾಗಿ ಶ್ವಾಸಧಾರಣೆ ಮಾಡಿದರು. ಪ್ರಾಣವು ಮೇಲಕ್ಕೆ ಏರುತ್ತ ಬಂತು. ಅದು ಯಾವ ಯಾವ ಅಂಗವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿತ್ತೋ ಆಯಾ ಅಂಗದಿಂದ ಚುಚ್ಚಿಕೊಂಡಿದ್ದ ಬಾಣಗಳು ಬಿದ್ದುಹೊಗುತ್ತಿದ್ದುವು. ಹೀಗೆ ಒಂದು ಕ್ಷಣದಲ್ಲಿ ಮೈಯಿನ ಬಾಣಗಳೆಲ್ಲಾ ಬಿದ್ದುಹೋದುವು. ಪ್ರಾಣವು ನೆತ್ತಿಯನ್ನು ಒಡೆದುಕೊಂಡು ಉಲ್ಕೆಯಂತೆ ಆಕಾಶಕ್ಕೆ ಹಾರಿ ಮಾಯವಾಯಿತು. ಆಗ ದೇವದುಂದುಭಿಗಳು ಮೊಳಗಿದುವು;  ಪುಷ್ಪವೃಷ್ಟಿಯಾಯಿತು. ತಂಪಾದ, ಸುಗಂಧಪೂರಿತ ಗಾಳಿಯು ಬೀಸಿತು. ಭೂಮಿಯು ಪ್ರಶಾಂತವಾಯಿತು. ಎಲ್ಲರ ಮನಸ್ಸೂ ಶಾಂತಿಯಿಂದ ತುಂಬಿಹೋಯಿತು.  


ಶರಗಳ ಸಮೇತವಾಗಿ ಅವನ ಶರೀರವನ್ನು ಗಂಧದ ಚಿತೆಯ ಮೇಲಿಟ್ಟು ಯುಧಿಷ್ಠಿರನೂ ವಿದುರನೂ ಪುಷ್ಪಗಳಿಂದ ಮುಚ್ಚಿದರು. ಯುಯುತ್ಸು ಶ್ವೇತಛತ್ರವನ್ನು ಹಿಡಿದನು. ಬ್ರಾಹ್ಮಣರು ಸಾಮಗಾನ ಮಾಡುತ್ತಿರಲು, ಧೃತರಾಷ್ಟ್ರನು ಚಿತೆಗೆ ಅಗ್ನಿಸ್ಪರ್ಶ ಮಾಡಿದನು. ಮಾರನೆಯ ದಿನ ಚಿತಾಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸಿದರು. ಗಂಗೆಯು ಮೇಲೆದ್ದು ಬಂದು, “ಭಾರ್ಗವನನ್ನೂ ಸೋಲಿಸಿದ ವೀರನಾದ ನನ್ನ ಮಗು ಶಿಖಂಡಿಯಿಂದ ಕೊಲ್ಲಲ್ಲಟ್ಟನು. ನನ್ನೆದೆಯು ಇನ್ನೂ ಒಡೆಯದಿರುವುದರಿಂದ ಅದು ಕಲ್ಲಿನದೇ ಇರಬೇಕು” ಎಂದು ಗೋಳಿಟ್ಟಳು.


ಕೃಷ್ಣನು ಅವಳನ್ನು ಕುರಿತು, “ತಾಯಿ, ಸಮಧಾನಮಾಡಿಕೊ. ನಿನ್ನ ಮಗನು ವಸುಗಳನ್ನು ಸೇರಿರುವನು. ಅವನು ಸಾಮಾನ್ಯ ಮಾನವನಲ್ಲ. ದೇವಿ ಅವನನ್ನು ಬೀಳಿಸಿದವನು ಅರ್ಜುನ; ಶಿಖಂಡಿಯಲ್ಲ. ನಿನ್ನ ಮಗನನ್ನು ದೇವತೆಗಳೆಲ್ಲಾ ಬಂದರೂ ಕೊಲ್ಲಬಲ್ಲರೇ?  ಅವನು ತಾನಾಗಿ ಇಷ್ಟಪಟ್ಟು ಸ್ವರ್ಗಕ್ಕೆ ಹೋಗಿ ವಸುಗಳನ್ನು ಸೇರಿಕೊಂಡವನಮ್ಮಾ! ಆದ್ದರಿಂದ ಸಂಕಟಪಡಬೇಡ!” ಎಂದು ಅವಳ ದುಃಖವನ್ನು ಶಮನಗೊಳಿಸಿದನು. ಅನಂತರ ಎಲ್ಲರೂ ಆಕೆಗೆ ನಮಸ್ಕರಿಸಿ  ಹೊರಡಲು ಆಕೆಯ ಅಪ್ಪಣೆಯನ್ನು ಪಡೆದುಕೊಂಡರು.


ಗಂಗಾದೇವಿಯೂ ನೀರಿಗೆ ಇಳಿದು ಅಂತರ್ಧಾನಳಾದಳು. ನದಿಯು ಅನಾದಿಕಾಲದಿಂದಲೂ ಹರಿಯುತ್ತಿರುವಂತೆಯೇ ಹರಿಯಲಾರಂಭಿಸಿತು. ಹೃದಯದಲ್ಲಿ ಶೋಕಸಂತೋಷಗಳೆರಡೂ ಒಟ್ಟಾಗಿ ಸೇರಿರಲು, ಎಲ್ಲರೂ ಹಸ್ತಿನಾಪುರಕ್ಕೆ ಹಿಂದಿರುಗಿದರು. ಭೀಷ್ಮ ಪಿತಾಮಹ ನೀಡಿದ ಪ್ರಮುಖ ಒಂಭತ್ತು ನೀತಿಬೋಧೆಗಳು.


** ನಾವೆಲ್ಲರೂ ಎಲ್ಲಿಂದ ಬಂದೆವೋ ಅಲ್ಲಿಗೆ ಹಿಂತಿರುಗಿ ಹೋಗಬೇಕು. ಪ್ರತಿಯೊಬ್ಬರೂ ಅವರವರ ಕರ್ಮದ ಫಲವನ್ನುಅನುಭವಿಸಬೇಕು. ಮಹಾಸಾಗರದಲ್ಲಿ ಎರಡು ಕಡ್ಡಿಗಳು ಬಂದು ಸೇರುವ ಹಾಗೆ; ನಾವು ಎಲ್ಲಿಂದಲೋ ಬಂದು ಈ ಲೋಕದಲ್ಲಿ ಸೇರುತ್ತೇವೆ, ಮತ್ತೆ ಬೇರ್ಪಟ್ಟು ಎಲ್ಲಿಗೋ ಹೋಗಿಬಿಡುತ್ತೇವೆ. ಹೀಗೆ ನಮ್ಮ ಬಂಧುಬಾಂಧವರ ವಿಯೋಗವು ಖಂಡಿತ ವಾಗಿರುವುದರಿಂದ ಸಂಬಂಧಗಳಿಗೆ ಅಂಟಿಕೊಳ್ಳಬಾರದು.


** ಸುಖವಾದ ಮೇಲೆ ದುಃಖವೂ, ದುಃಖವಾದ ಮೇಲೆ ಸುಖವೂ ಚಕ್ರದಂತೆ ಸುತ್ತುತ್ತಿರುತ್ತವೆ. ಇಷ್ಟುದಿನವೂ ಸುಖವಿತ್ತು; ಈಗ ದುಃಖ ಬಂದಿದೆ, ಮುಂದೆ ಮತ್ತೆ ಸುಖ ಬರುತ್ತದೆ. ದುಃಖವೂ ನಿತ್ಯವಲ್ಲ, ಸುಖವೂ ನಿತ್ಯವಲ್ಲ.


** ಸಂತೋಷಕ್ಕೆ ಸ್ನೇಹಿತರಾಗಲಿ, ದುಃಖಕ್ಕೆ ಶತ್ರುಗಳಾಗಲಿ, ಪ್ರಯೋಜನಗಳಿಗೆ ಬುದ್ಧಿಯಾಗಲಿ, ಸುಖಕ್ಕೆ ಹಣವಾಗಲಿ, ಹಣಕ್ಕೆ ಬುದ್ಧಿಯಾಗಲಿ ಕಾರಣವೆಂದೂ ಹೇಳುವಹಾಗಿಲ್ಲ. ಏಕೆಂದರೆ, ಜಾಣನಾಗಲಿ ದಡ್ಡನಾಗಲಿ, ಶೂರನಾಗಲಿ ಭೀರುವಾಗಲಿ,ಮಂಕನಾಗಲಿ ಕವಿಯಾಗಲಿ, ಬಲಿಷ್ಠನಾಗಲಿ ಕೈಲಾಗದವನಾಗಲಿ, ಸುಖ ಬರುವವರಿಗೆ ಬಂದೇಬರುತ್ತದೆ.


** ಪರಮ ಮೂಢನಿಗೆ, ಕಂಬಳಿ ಕವಚಿಕೊಂಡರೆ ಕಣ್ಣು ಕಾಣಿಸದಂತೆ, ಯಾವ ದುಃಖವೂ ಇಲ್ಲ; ಸುಖದುಃಖಗಳನ್ನುಮೀರಿದ ಜ್ಞಾನಿಗಳಿಗೂ ದುಃಖವಿಲ್ಲ; ಜಂಜಡವೆಲ್ಲ ಇವೆರಡರ ನಡುವೆ ಇರುವವರಿಗೆ ಮಾತ್ರ.


** ಸುಖವೋ ದುಃಖವೋ, ಇಷ್ಟವೋ ಅನಿಷ್ಟವೋ, ಬಂದಬಂದದ್ದನ್ನು ಎದೆಗುಂದದೆ ಅನುಭವಿಸಬೇಕು. ಆಮೆಯು ತನ್ನ ಅಂಗಗಳನ್ನೆಲ್ಲ ಒಳಗೆ ಎಳೆದುಕೊಳ್ಳುವಂತೆ ಕಾಮಕ್ರೋಧಗಳನ್ನು ಒಳಕ್ಕೆ ಅಡಗಿಸಿಕೊಂಡು ಶಾಂತನಾದರೆ ಆತ್ಮ ಸಂಪತ್ತು ದೊರೆಯುತ್ತದೆ, ಬೆಳಕು ಕಾಣುತ್ತದೆ. ಅದಕ್ಕೆ ಆಶೆಯನ್ನು ಬಿಡಬೇಕು; ಅದು ಮಂದಬುದ್ಧಿಗಳಿಗೆ ಸಾಧ್ಯವಿಲ್ಲ; ಆಶೆ ಎಂಬುದು ಮುಪ್ಪಿನಲ್ಲಿಯೂ ಮುದಿಯಾಗುವುದಿಲ್ಲ; ಬಂದರೆ ವಾಸಿಯಾಗದೆ ಪ್ರಾಣವನ್ನು ತೆಗೆಯುವ ರೋಗದಂತೆ, ಅದು ಕೊನೆಯವರೆಗೂ ಹೋಗುವುದಿಲ್ಲ.


** ಒಳ್ಳೆಯದೆಂದು ತಿಳಿದಿರುವುದನ್ನು ಕೂಡಲೇ ಮಾಡಿಬಿಡಬೇಕು; ಇಲ್ಲದಿದ್ದರೆ ಮೃತ್ಯು ಅಡ್ಡ ಬಂದೀತು. ನಾಳೆಮಾಡುವುದನ್ನು ಇಂದೇ ಮಾಡಬೇಕು; ಮಧ್ಯಾಹ್ನ ಮಾಡುವುದನ್ನು ಬೆಳಗ್ಗೆಯೇ ಮಾಡಬೇಕು. ಇದನ್ನು ಮಾಡಿದನೇ ಬಿಟ್ಟನೇಎಂದು ಮೃತ್ಯುವು ನೋಡುವುದಿಲ್ಲ. ಅದಕ್ಕೆ ಅದು ಬೇಕಾಗಿಯೂ ಇರುವುದಿಲ್ಲ. ಆದ್ದರಿಂದ ಸದಾ ಧರ್ಮಶೀಲರಾಗಿರಬೇಕು.


** ತ್ಯಾಗವಿಲ್ಲದೆ ಇಹಸುಖವಿಲ್ಲ, ತ್ಯಾಗವಿಲ್ಲದೆ ಪರವಿಲ್ಲ; ತ್ಯಾಗವಿಲ್ಲದೆ ನೆಮ್ಮದಿಯ ನಿದ್ರೆಯೂ ಬರುವುದಿಲ್ಲ; ಎಲ್ಲವನ್ನೂತ್ಯಜಿಸಿದವನಿಗೆ ಮಾತ್ರ ಸೌಖ್ಯ! ಭಾಗ್ಯವಂತನಿಗೆ ಮೃತ್ಯುವಿನ ಕೈಗೆ ಸಿಕ್ಕಿದವನ ಹಾಗೆ ಸದಾ ಕಳವಳವಿದ್ದೇ ಇರುತ್ತದೆ. ಹಣ ಕೈಗೆಸೇರಿತೆಂದರೆ ಕ್ರೋಧ ಲೋಭಗಳು ಅವನನ್ನು ಮೆಟ್ಟಿಕೊಳ್ಳ್ಳುತ್ತವೆ; ಬುದ್ಧಿ ಕೆಟ್ಟುಹೋಗುತ್ತದೆ; ಅಡ್ಡನೋಟ, ಸಿಡುಕುಮೋರೆ, ಹುಬ್ಬುಗಂಟು, ಕಚ್ಚುತುಟಿ, ಕಟು ಭಾಷಣಗಳು ಬರುತ್ತವೆ; ತಾನೇ ರೂಪವಂತ, ಧನವಂತ, ಕುಲವಂತ, ಸಿದ್ಧಪುರುಷ, ತಾನು ಮನುಷ್ಯಮಾತ್ರದವನಲ್ಲ ಎಂಬ ಮದವೇರುತ್ತದೆ. ವಿಷಯಸುಖಗಳಲ್ಲಿ ಹಣವೆಲ್ಲ ವೆಚ್ಚವಾಗಿ ಹೋದರೆ, ಮತ್ತೊಬ್ಬರ ಸ್ವತ್ತಿಗೆ ಕೈಹಾಕುತ್ತಾನೆ; ಶಿಕ್ಷೆಗೆ ಗುರಿಯಾಗುತ್ತಾನೆ.


** ಒಂದು ವಿಧದಲ್ಲಿ ನೋಡಿದರೆ ಏನೂ ಇಲ್ಲದಿರುವುದು ರಾಜ್ಯ ಸಂಪತ್ತಿಗಿಂತ ಮೇಲು. ಈ ಸುಖ ದುಃಖಗಳನ್ನೂ ಗಮನಿಸುತ್ತ, ನಿತ್ಯಾನಿತ್ಯವಿಚಾರ ಮಾಡಬೇಕು. ಸುಖ ಬಂದರೆ ಹಿಗ್ಗಬಾರದು; ದುಃಖ ಬಂದರೆ ಕುಗ್ಗಬಾರದು.


** ಕರ್ಮವು ಮನುಷ್ಯನನ್ನು ಅವನ ನೆರಳಿನಂತೆ ಎಡೆಬಿಡದೆ ಅನುಸರಿಸುತ್ತ, ಎದ್ದರೆ ಏಳುತ್ತ, ಕೂತರೆ ಕೂರುತ್ತ, ಓಡಿದರೆಓಡುತ್ತ, ಮಲಗಿದರೆ ಮಲಗುತ್ತ ಇರುತ್ತದೆ. ಅದರ ಕಾಲ ಬಂದಾಗ, ಯಾರ ಪ್ರೇರಣೆಯೂ ಇಲ್ಲದೆ, ಮರಗಳು ಹೂವುಹಣ್ಣುಗಳನ್ನು ಬಿಡುವಂತೆ ಫಲ ಕೊಡುತ್ತದೆ.ಸಾವಿರ ಹಸುಗಳಿದ್ದರೂ ಅವುಗಳ ನಡುವೆ ಕರು ತನ್ನ ತಾಯಿಯನ್ನು ಗುರುತಿಸುವಂತೆ ಅವರವರ ಕರ್ಮ ಅವರನ್ನು ಬೆಂಬಿಡದೆ ಹಿಡಿಯುತ್ತದೆ; ಬಟ್ಟೆ ಒಗೆದರೆ ಕೊಳೆ ಹೋಗುವಂತೆ, ಸತ್ಕರ್ಮಗಳಿಂದ ಪಾಪ ತೊಳೆದು ಇಷ್ಟಾರ್ಥಗಳು ಸಿದ್ಧಿಸುತ್ತವೆ.


(ಆಕರ: ವಚನ ಭಾರತ)

ಮೈ ರೋಮಾಂಚನಗೊಳ್ಳುವ ಈ ಸಣ್ಣ ಕತೆಯನ್ನೊಮ್ಮೆ ಪೂರ್ತಿ ಓದಿ. ಭೀಷ್ಮರು ಹೇಳಿದ ಆ ಮಂತ್ರ ಇಲ್ಲಿದೆ ನೋಡಿ..


ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ. ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ ಬರಲಾರದು.


ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.


ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು ಬ್ರಹತೀಸಹಸ್ರದ 72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ.


ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ಶ್ರೀ ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ. ಈ ಕಾರಣಕ್ಕಾಗಿಯೇ ಪ್ರಾಚೀನರು ಭಗವದ್ಗೀತೆ ಮತ್ತು ಶ್ರೀ ವಿಷ್ಣುಸಹಸ್ರನಾಮವನ್ನು ಅತ್ಯಮೂಲ್ಯ ಗ್ರಂಥವಾಗಿ ಪರಿಗಣಿಸಿದ್ದಾರೆ. ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.


ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ ‘ಇಡೀ ಜಗತ್ತಿನ ದೈವ? ಯಾರ ಸ್ತುತಿ, ಕೀರ್ತನೆ, ಅರ್ಚನೆಯಿಂದ ನಮಗೆ ಶ್ರೇಯಸ್ಸಾಗುತ್ತದೆ? ಸಮಸ್ತ ಧರ್ಮಗಳಲ್ಲಿ ಶ್ರೇಷ್ಠ ಧರ್ಮ ಯಾವುದು? ಯಾರ ಜಪ ಮಾಡುವುದರಿಂದ ಸಮಸ್ತ ಪಾಪ ಜನನ-ಮರಣಗಳ ಚಕ್ರದಿಂದ ಮುಕ್ತರಾಗಬಹುದು’? ಈ ಎಲ್ಲ ಪ್ರಶ್ನೆಗಳಿಗೂ ಭೀಷ್ಮಾಚಾರ್ಯರು ಶ್ರೀ ವಿಷ್ಣು ಸಹಸ್ರನಾಮವೆಂದು ಒಂದೇ ಉತ್ತರ ಹೇಳುತ್ತಾರೆ. ಅದಕ್ಕೆ ತಮ್ಮ ಜೀವನದ ಪ್ರಸಂಗವೊಂದನ್ನು ಈ ರೀತಿಯಾಗಿ ವಿವರಿಸುತ್ತಾರೆ.


ನಿಮ್ಮನ್ನು ನಾಶಮಾಡಲೆಂದೇ ದುರ್ಯೋಧನನು ಅರಗಿನ ಅರಮನೆಯಲ್ಲಿ ಅವರು ಉಳಿಯುವಂತೆ ಮಾಡಿ ರಾತ್ರಿಯಲ್ಲಿ ಅದಕ್ಕೆ ಬೆಂಕಿ ಇಡಿಸಿದ್ದ. ಆದರೆ ವಿದುರನ ದೂರದೃಷ್ಟಿ ನಿಮ್ಮನ್ನೇನೋ ಮೃತ್ಯುದವಡೆಯಿಂದ ಪಾರಾಗಿಸಿತ್ತು. ನಿಮಗೆ ಏನು ಆಗಿಲ್ಲವೆಂದುತಿಳಿದು ಎಲ್ಲಕ್ಕಿಂತ ಹೆಚ್ಚು ಸಂತೋಷವಾಗಿದ್ದು ನನಗೆ ಸಂತೋಷವಿರಲಿ ದುಃಖವಿರಲಿ ಅದನ್ನು ತಾಯಿ ಗಂಗಾ ಮಾತೆಯೊಡನೆ ಹಂಚಿಕೊಳ್ಳುವುದು ನನಗೆ ಅತ್ಯಂತ ಖುಷಿಯ ಸಂಗತಿಯಾಗಿತ್ತು.


ಹೀಗೇ ಒಂದು ಮುಂಜಾನೆ ಕೈಯಲ್ಲೊಂದು ಊರುಗೋಲು ಹಿಡಿದು ತಾಯಿ ಮಡಿಲೆಡೆಗೆ ಸಾಗುತ್ತಿದ್ದ ನನಗೆ ಮನಸಿನ ತುಂಬಾ ನೀವುಗಳೆ ಆವರಿಸಿಬಿಟ್ಟಿದ್ದಿರಿ. ನೀವು ಅನುಭವಿಸಿದ ಕಷ್ಟಕ್ಕೆ ಮರುಗುತ್ತ ಹೆಜ್ಜೆಹಾಕುತ್ತಿದ್ದ ನಾನು ಊರಿ ನಡೆಯುತ್ತಿದ್ದ ಕೋಲಿನ ತುದಿಗೆ ಆಕಸ್ಮಿಕವಾಗಿ ಓತಿಕ್ಯಾತವೊಂದು ಸಿಲುಕಿ ನರಳಿತು.


ತನ್ನ ಆಲೋಚನಾ ಸರಣಿಗೆ ಭಂಗವಾಗಿದ್ದಕ್ಕೆ ಗೊಣಗಿದ ನಾನು ಕೋಲಿಗೆ ಸಿಲುಕಿದ ಆ ಓತಿಕ್ಯಾತವನ್ನು ಬೀಸಿ ಎಸೆದು ಮುಂದೆ ನಡೆದರು. ಮುಳ್ಳುಪೊದೆಯ ಮೇಲೆ ಬಿದ್ದ ಅದು ರೋದಿಸುತ್ತ, ‘ಅಯ್ಯಾ! ಮಹಾನುಭಾವರೇ, ಸ್ವಲ್ಪ ನಿಲ್ಲಿ. ನನ್ನನ್ನು ಬೀಸಿ ಎಸೆದು ಸಂಬಂಧವೇ ಇಲ್ಲದಂತೆ ಹೋಗುತ್ತಿದ್ದೀರಲ್ಲ, ಇದು ಸರಿಯೇ?’ ಎಂದಾಗ ನಾನು ‘ಇದರಲ್ಲಿ ನನ್ನದೇನು ತಪ್ಪಿದೆ? ನನ್ನ ಕೋಲಿಗೆ ಸಿಲುಕಿದ್ದು ನೀನೇ ತಾನೆ?!ಎಂದಾಗ ‘ಹೌದು! ಸಿಲುಕಿದ್ದು ನಾನೇ. ಆದರೆ ನರಳುತ್ತಿದ್ದ ನನ್ನ ಸ್ಥಿತಿಯನ್ನು ನೋಡಿಯೂ ಮುಳ್ಳಿನ ಪೊದೆಯ ಮೇಲೆ ಎಸೆದಿರಲ್ಲ, ಇದು ನೀವು ತಿಳಿದೂ ಮಾಡಿದ ತಪ್ಪಲ್ಲವೇ? ಹಾಗಾಗಿ ನೀವೂ ನಿಮ್ಮ ಅಂತ್ಯಕಾಲಕ್ಕೆ ಶರಶಯ್ಯೆಯಲ್ಲಿ ನನ್ನಂತೆ ನರಳಿ ಸಾಯುವಂತಾಗಲಿ’ ಎಂದು ಶಪಿಸಿತು. ನನಗೆ ಆಗ ನನ್ನ ತಪ್ಪಿನ ಅರಿವಾಗಿತ್ತು. ಕ್ಷಮೆ ಬೇಡುತ್ತ ಆ ಮುಳ್ಳಿನ ಬೇಲಿಯಿಂದ ಓತಿಕ್ಯಾತವನ್ನು ಮೇಲೆತ್ತಿ ಕಾಪಾಡಲು ಧಾವಿಸಿದರು. ಆದರೆ ಕಾಲ ಮಿಂಚಿತ್ತು. ರಕ್ತಸ್ರಾವಗೊಂಡ ಅದು ಅದಾಗಲೇ ಪ್ರಾಣ ಬಿಟ್ಟಿತು!


ಭೀಷ್ಮಾಚಾರ್ಯರಿಗೆ ವಿಷ್ಣುಸಹಸ್ರನಾಮದ ಶಕ್ತಿ ಸ್ವಯಂ ವೇದ್ಯವಾಗಿತ್ತು. ಅವರು ಮೃತ್ಯುವನ್ನೂ ಸಹ ಆ ಶಕ್ತಿಯಿಂದ ದೂರ ಇಟ್ಟಿದ್ದರು. ಅಷ್ಟೇ ಅಲ್ಲ ಅವರ ಭಕ್ತಿಯ ಶಕ್ತಿಯಿಂದ ಶ್ರೀ ಕೃಷ್ಣ ಪರಮಾತ್ಮ ಅವರು ಮಲಗಿದ್ದ ಕಡೆಗೆ ಬಂದು ದರ್ಶನ, ಸ್ಪರ್ಶನ ಭಾಗ್ಯನೀಡಿದ. ಭೀಷ್ಮಾಚಾರ್ಯರು ಹೇಳುತ್ತಾರೆ. ‘ನ ವಾಸುದೇವ ಭಕ್ತಾನಾಮ್ ಅಶುಭಂ ವಿದ್ಯತೇಕ್ಪಚಿತ್’ ಇದನ್ನು ಪಾರಾಯಣ ಮಾಡುವವರು, ಪರಿಹರಿಸಲಾಗದ ಪರಿಪರಿಯ ಕಷ್ಟಗಳಿಂದ ಬಿಡುಗಡೆ ಹೊಂದುತ್ತಾರೆ. ಅಷ್ಟೇ ಅಲ್ಲ, ವಾಸುದೇವನ ಭಕ್ತರಿಗೆ ಅಶುಭವೆಂಬುದೇ ಇರುವುದಿಲ್ಲ. ಅವರಿಗೆ ಅಪಮೃತ್ಯು, ಮರಣ, ಮುಪ್ಪು ಹಾಗೂ ರೋಗಗಳ ಭಯವಿರುವುದಿಲ್ಲ ಎನ್ನುತ್ತಾರೆ.

- ಡಾ.ಗುರುರಾಜ ಪೋಶೆಟ್ಟಿಹಳ್ಳಿ, 9035618076


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top