ಮೂಡುಬಿದಿರೆ: ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸ್ನಾತಕೋತ್ತರ ಎಂಬಿಎ ವಿಭಾಗದ ವತಿಯಿಂದ 2022ನೇ ಸಾಲಿನ ಕೇಂದ್ರ ಬಜೆಟ್ ವಿಶ್ಲೇಷಣೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಲ್ಬಾವಿ ಕ್ಯಾಶ್ಯೂಸ್‌ನ ಮ್ಯಾನೇಜಿಂಗ್ ಪಾರ್ಟ್ನರ್ ಪ್ರಕಾಶ್ ಕಲ್ಬಾವಿ ಮಾತನಾಡಿ, ದೇಶದಲ್ಲಿ ಅತ್ಯುತ್ತಮ ಯುವ ನಾಯಕರು ಹಲವು ಆತಂಕಗಳ ಮಧ್ಯೆಯೂ ಶ್ರೇಷ್ಠವಾದುದನ್ನು ಸಾಧಿಸಲು ಹೊರಟಿದ್ದಾರೆ. ಪ್ರಸ್ತುತ ಜಗತ್ತಿನಲ್ಲಿ ತಂತ್ರಜ್ಞಾನಗಳ ಅಳವಡಿಕೆ ಉನ್ನತ ಮಟ್ಟದಲ್ಲಿ ಮಾಡಿ, ಬ್ಯುಸಿನೆಸ್ ಮಾಡೆಲ್‌ಗಳನ್ನು ಹುಟ್ಟುಹಾಕಬೇಕೆಂದರು.
ಉದ್ಘಾಟನೆಯ ಬಳಿಕ ನಡೆದ ಪ್ಯಾನೆಲ್ ಡಿಸ್ಕಶನ್‌ನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರಕ್ಕೆ ಬಜೆಟ್ ಕೊಡುಗೆಯ ಕುರಿತು ಮಾತನಾಡಿ ದೇಶದಲ್ಲಿ ನೀತಿಗಳನ್ನು ಪರಿಚಯಿಸುವುದು ಸುಲಭವಾಗಿ ಆಗುತ್ತಿದೆ. ಆದರೆ ಅವುಗಳ ಅನುಷ್ಠಾನ ವಿವಿಧ ಕಾರಣಗಳಿಂದ ನಿಧಾನ ಗತಿಯಲ್ಲಿ ಸಾಗುತ್ತಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ 36 ಟ್ರಿಲಿಯನ್‌ನಷ್ಟು ಕ್ರೆಡಿಟ್‌ಗಳ ಅಗತ್ಯವಿದೆ ಜತೆಗೆ ಇವುಗಳನ್ನು ಮೇಲ್ವಿಚಾರಣೆ ನಡೆಸಲು ಇಂಡಿಪೆಂಡೆಂಟ್ ರೆಗ್ಯುಲೇಟರಿ ಸಿಸ್ಟಮ್ ಹಾಗೂ ಇ-ಲಿಂಕಿಂಗ್ ವ್ಯವಸ್ಥೆಯನ್ನು ಪರಿಚಯಿಸಬೇಕು ಎಂದರು.
ಕೃಷಿ ಹಾಗೂ ರೈತರ ಕಲ್ಯಾಣ ವಿಷಯದ ಕುರಿತು ಮಾತನಾಡಿದ ಪ್ರಗತಿಪರ ಕೃಷಿಕ ಹಾಗೂ ರಾಜಕೀಯ ಕಾರ್ಯಕರ್ತ ವಿಶ್ವೇಶ್ವರ ಭಟ್ ಮಾತನಾಡಿ, ಈ ಬಾರಿಯ ಬಜೆಟ್ ದೇಶದ ಅಭಿವೃದ್ಧಿಗೆ ಕೇಂದ್ರಿಕೃತವಾಗಿದೆ. ಕಳೆದ ಸಾಲಿನ ಬಜೆಟ್‌ಗಿಂತ ಈ ಬಾರಿಯ ಬಜೆಟ್‌ನಲ್ಲಿ ಶೇಕಡಾ 4.5ರಷ್ಟು ಹೆಚ್ಚಿನ ಅನುದಾನವನ್ನು ಕೃಷಿಗೆ ನೀಡಲಾಗಿದ್ದು, ಈ ಮೂಲಕ ಶೇಕಡಾ 63ರಷ್ಟಿರುವ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಯುವ ಕೃಷಿಕರಿಗೆ ಪೂರಕ ಕೌಶಲ್ಯಗಳನ್ನು ಕಲಿಸುವ ನಿಟ್ಟಿನಲ್ಲಿ ಸ್ಕಿಲ್ ಇಂಡಿಯಾ ಯೋಜನೆ ಇನ್ನಷ್ಟು ಕಾರ್ಯೋನ್ಮುಖಗೊಳ್ಳಬೇಕು ಎಂದರು.
ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಯೂನಿಯನ್ ಬ್ಯಾಂಕ್ ಡೈರೆಕ್ಟರ್ ಜನರಲ್ ಮ್ಯಾನೇಜರ್ ಹಾಗೂ ಪ್ರಾದೇಶಿಕ ಮುಖ್ಯಸ್ಥ ಜೆ. ಮಹೇಶ್ ಮಾತನಾಡಿ, ಕೊರೊನಾ ಸಾಂಕ್ರಮಿಕ ಸಮಯದಲ್ಲಿ ಎಮರ್‌ಜೆನ್ಸಿ ಕ್ರೆಡಿಟ್ ಲೈನ್ ಸ್ಕೀಮ್ ಮುಖಾಂತರ ಶೇ. 10ರಷ್ಟು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ನೀಡಿ ಪ್ರೋತ್ಸಾಹಿಸಲಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಶೇ. 20ರಷ್ಟು ನೀಡಲಾಗಿದೆ. ಕೃಷಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಿಗೆ ಸಬ್ಸಿಡಿ ನೀಡಿದರೆ ಮಾರುಕಟ್ಟೆಯಲ್ಲಿ ದೀರ್ಘಾವಧಿಗೆ ಪ್ರಯೋಜನಕಾರಿಯಾಗಲಿದೆ ಎಂದರು.
ಕ್ಯಾಪಿಟಲ್ ಎಕ್ಸ್ಪೆಂಡಿಚರ್ ಕುರಿತು ಮಾತನಾಡಿದ ನಿವೃತ್ತ ಐಆರ್‌ಎಸ್ ಅಧಿಕಾರಿ ಜಯಪ್ರಕಾಶ್ ರಾವ್, ಬಜೆಟ್‌ನ್ನು ರಾಜಕೀಯ ದೃಷ್ಟಿಯಿಂದ ನೋಡದೆ ವಿಶ್ಲೇಷಣಾತ್ಮಕವಾಗಿ ಅರ್ಥೈಸಿಕೊಳ್ಳಬೇಕು. ಬಜೆಟ್‌ನಲ್ಲಿ ನಗರಗಳ ಮೂಲ ಸೌಕರ್ಯಗಳು ಹಾಗೂ ಅಭಿವೃದ್ಧಿಗೆ ಗಮನ ನೀಡಲಾಗಿದ್ದು, ಬೆಳೆಯುತ್ತಿರುವ ಜನಸಂಖ್ಯೆಯನ್ನು ಪರಿಗಣಿಸಲಾಗಿಲ್ಲ. ಸ್ಮಾರ್ಟ್ ಸಿಟಿಗೆ ಒತ್ತು ಕೊಡುವ ಸರಕಾರವು ಸ್ಮಾರ್ಟ್ ಸಿಟಿಝನ್ ಕಲ್ಪನೆಯನ್ನೂ ಹೊಂದಬೇಕೆಂದರು.
ಡೈರೆಕ್ಟ್ ಹಾಗೂ ಇನ್‌ಡೈರೆಕ್ಟ್ ಟ್ಯಾಕ್ಸ್ ಕುರಿತು ಮಾತನಾಡಿದ ಮಂಗಳೂರಿನ ಸಿಎ ನಿತಿನ್ ಜೆ ಶೆಟ್ಟಿ ಮಾತನಾಡಿ ಹಣ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆಗೊಳಿಸಲು ಕ್ರಿಪ್ಟೋ ಕರೆನ್ಸಿಗಳನ್ನು ಸರಿಯಾದ ಆಡಿಟ್ ಟ್ರಯಲ್‌ನೊಂದಿಗೆ ಕ್ರಮಬದ್ಧಗೊಳಿಸಬೇಕಾಗಿದೆ ಎಂದರು.
ವರ್ಚುವಲ್ ಡಿಜಿಟಲ್ ಅಸೆಟ್ಸ್ ಬಗ್ಗೆ ಮಾತನಾಡಿದ ಸಿಎ ಅನ್ವೇಶ್ ಶೆಟ್ಟಿ, ಪ್ರಸ್ತುತ ಕಾಲಕ್ಕೆ ಡಿಜಿಟಲ್ ಅಸೆಟ್ಸ್ಗಳ ಅಗತ್ಯತೆ ಬಹಳಷ್ಟು ಇದೆ. ಈ ರೀತಿಯ ಆರ್ಥಿಕ ವ್ಯವಸ್ಥೆ ಇನ್ನಷ್ಟು ಪ್ರಚಲಿತವಾಗಬೇಕಿದೆ ಎಂದರು.
ಕಾನ್‌ಫೆಡೆರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಉಪಾಧ್ಯಕ್ಷ ಗೌರವ್ ಹೆಗ್ಡೆ, ಪ್ರಸ್ತುತ ಬಜೆಟ್‌ನಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿಲ್ಲ, ಪ್ರವಾಸೋದ್ಯಮಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಅಭಿವೃದ್ಧಿ ಇನ್ನಷ್ಟು ಆಗಬೇಕಿದೆ ಎಂದರು.
ಅರ್ಥಶಾಸ್ತಜ್ಞ ಡಾ. ಜಿ.ವಿ ಜೋಷಿ ಹಾಗೂ ನಿಟ್ಟೆ ಸಂಸ್ಥೆಯ ಪ್ರಾಧ್ಯಾಪಕ ಡಾ. ಜ್ಞಾನೇಶ್ವರ್ ಎಂ. ಪೈ ಪ್ಯಾನೆಲ್ ಡಿಸ್ಕಶನ್‌ನ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಶುಕ್ರವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪೋಸ್ಟರ್ ಪ್ರೆಸೆಂಟೇಶನ್ ಹಾಗೂ ಗ್ರೂಪ್ ಡಿಸ್ಕಶನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಎಂಬಿಎ ವಿಭಾಗ ಮುಖ್ಯಸ್ಥೆ ಪ್ರಿಯಾ ಸಿಕ್ವೇರಾ ಉಪಸ್ಥಿತರಿದ್ದರು. ಜಾನ್ಸನ್ ಫೆರ್ನಾಂಡಿಸ್ ಅತಿಥಿಗಳನ್ನು ಪರಿಚಯಿಸಿ, ಉಪನ್ಯಾಸಕಿ ಹರ್ಷಿತಾ ವಂದಿಸಿದರು. ಪುನೀತ್ ಕೆ ಜೆ ಹಾಗೂ ದೀಪಕ್ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ