ಮಂಗಳೂರು: ನಗರದ ಹೆಸರಾಂತ ನೃತ್ಯ ಕಲಿಕಾ ಕೇಂದ್ರ 'ಭರತಾಂಜಲಿ'ಯ 27ನೇ ವಾರ್ಷಿಕೋತ್ಸವದ ಅಂಗವಾಗಿ 'ನೃತ್ಯಾಮೃತಂ 2022' ನೃತ್ಯೋತ್ಸವ ನಾಳೆ (ಫೆ.28) ಸಂಜೆ 5 ಗಂಟೆಗೆ ಪುರಭವನದಲ್ಲಿ ನಡೆಯಲಿದೆ.
ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ನಗರ ಉತ್ತರ ವಲಯದ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ, ಮ.ನ.ಪಾ ನಾಮನಿರ್ದೇಶಿತ ಸದಸ್ಯ ಪ್ರಶಾಂತ್ ಮುಡಾಯಿಕೋಡಿ ಮತ್ತು ಭರತಾಂಜಲಿ ನೃತ್ಯ ಸಂಸ್ಥೆಯ ಗೌರವಾಧ್ಯಕ್ಷರಾದ ಮಹಾಬಲ ಪಿ. ಚೌಟ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಾಚಾರ್ಯ ಉಳ್ಳಾಲ ಮೋಹನ ಕುಮಾರ್ (ನಾಟ್ಯನಿಕೇತನ, ಕೊಲ್ಯ) ಮತ್ತು ಉರ್ವದ ನಾಟ್ಯಾಲಯ ಗುರು, ಕಲಾಶ್ರೀ ಪುರಸ್ಕೃತರಾದ ಶ್ರೀಮತಿ ಕಮಲಾ ಭಟ್ ಅವರ ಗೌರವ ಉಪಸ್ಥಿತಿ ಇರಲಿದೆ.
ಕಾರ್ಯಕ್ರಮದಲ್ಲಿ 'ಚಿಗುರು' (8 ವರ್ಷದೊಳಗಿನ ಪುಟಾಣಿ ಪ್ರತಿಭೆಗಳು), ಪಲ್ಲವ, 8ರಿಂದ 15 ವರ್ಷದೊಳಗಿನ ಪ್ರತಿಭೆಗಳು) ಮತ್ತು ಅಂಕುರ (15ರಿಂದ 20 ವರ್ಷದ ಒಳಗಿನ ಪ್ರತಿಭೆಗಳು) ಕಲಾ ಪ್ರದರ್ಶನಗಳನ್ನು ನೀಡಲಿದ್ದಾರೆ.
ಈ ಎಲ್ಲ ಕಾರ್ಯಕ್ರಮಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯಲಿವೆ ಎಂದು ಭರತಾಂಜಲಿಯ ಮ್ಯಾನೇಜಿಂಗ್ ಟ್ರಸ್ಟಿ, ಗುರು ಶ್ರೀಮತಿ ಪ್ರತಿಮಾ ಶ್ರೀಧರ್ ತಿಳಿಸಿದ್ದಾರೆ.
ಶಿವರಾತ್ರಿ ಕಲೋತ್ಸವ:
ಮಾರ್ಚ್ 1ರಂದು ಭರತಾಂಜಲಿ ನೃತ್ಯ ಸಂಸ್ಥೆ ಶಿವರಾತ್ರಿ ಕಲೋತ್ಸವ 2022 ಅನ್ನು ಪ್ರಸ್ತುತಪಡಿಸಲಿದೆ. ಈ ಕಾರ್ಯಕ್ರಮ ಕೂಡ ನಗರದ ಪುರಭವನದಲ್ಲಿ ನಡೆಯಲಿದ್ದು, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಉದ್ಘಾಟಿಸಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ, ಧರ್ಮದರ್ಶಿ ಹರಿಕೃಷ್ಣ ಪುನರೂರು ಮತ್ತು ಭರತಾಂಜಲಿ ಗೌರವಾಧ್ಯಕ್ಷ ಮಹಾಬಲ ಪಿ ಚೌಟ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ