ವಿವೇಕಾನಂದ ಮಹಾವಿದ್ಯಾಲಯದಲ್ಲಿ ವಿವೇಕ ಜಯಂತಿ ಆಚರಣೆ

Upayuktha
0

 

ಐ ಕ್ಯಾನ್ ಎನ್ನುವ ಮೂಲಕ ಸಮಾಜದ ಐಕಾನ್‌ಗಳಾಗಬೇಕು: ಅಕ್ಷಯ ಗೋಖಲೆ


ಪುತ್ತೂರು ಜ.12: ದೇಶಕ್ಕಾಗಿ ಬದುಕುವ ಆದರ್ಶವನ್ನು ಸ್ವಾಮಿ ವಿವೇಕಾನಂದರು ಯುವಜನತೆಗೆ ನೀಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರ ಮಾತುಗಳಿಂದ ಪ್ರೇರಣೆಯನ್ನು ಪಡೆದು ಸಮರ್ಥ ಭಾರತದ ನಿರ್ಮಾಣಕ್ಕೆ ಪಣತೊಡಬೇಕು. ಐ ಕ್ಯಾನ್ ಎನ್ನುವ ಇಚ್ಛಾಶಕ್ತಿಯನ್ನು ಯುವಕರು ಇರಿಸಿಕೊಂಡು, ಸಮಾಜದ ಐಕಾನ್‌ಗಳಾಗಿ ಬೆಳೆಯಬೇಕು ಎಂದು ನಿಟ್ಟೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಅಕ್ಷಯ ಗೋಖಲೆ ಹೇಳಿದರು.


ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿ ಸಂಘ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣಕಾರರಾಗಿ ಭಾಗವಹಿಸಿ ಬುಧವಾರ ಅವರು ಮಾತನಾಡಿದರು.


ಜಗತ್ತಿನ ಜನರು ಸಾವಿನ ಮೊದಲೂ, ಸಾವಿನ ನಂತರವೂ ಬದುಕನ್ನು ಪ್ರೀತಿಸುವುದು ಹೇಗೆ ಎನ್ನುವುದನ್ನು ತಿಳಿಯಬೇಕಾದರೆ ಭಾರತಕ್ಕೆ ಒಮ್ಮೆಯಾದರೂ ಬರಬೇಕು. ತನ್ನ ಅಂತಃಸತ್ವವನ್ನು ಮರೆತ ಭಾರತೀಯರನ್ನು ಬಡಿದೆಚ್ಚರಿಸಿದ ವಿವೇಕಾನಂದರ ಅಧ್ಯಯನದಿಂದ ಭಾರತವನ್ನು ಅರಿಯುತ್ತೇವೆ. ಉಸಿರು ನಿಂತ ನಂತರವೂ ನಮ್ಮ ಚಿಂತನೆಗಳು ನೆಲೆ ನಿಲ್ಲುವಂತೆ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ಸ್ವಾಮಿ ವಿವೇಕಾನಂದರ ಅಧ್ಯಯನ ಸಹಕಾರಿಯಾಗುತ್ತದೆ ಎಂದು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿಕೃಷ್ಣ ಕೆ. ಎನ್ ಮಾತನಾಡಿ, ಈ ನಾಡಿನಲ್ಲಿ ಹಲವು ವ್ಯಕ್ತಿಯಾಧಾರಿತ ಸಿದ್ಧಾಂತಗಳಿದ್ದವು. ಆದರೆ ಕೆಲವು ಸಿದ್ಧಾಂತಗಳು ಮಾತ್ರ ಜನಮಾನಸದಲ್ಲಿ ಸಾರ್ವಕಾಲಿಕವಾಗಿ ಉಳಿಯುತ್ತದೆ. ಸ್ವಾಮಿ ವಿವೇಕಾನಂದರೂ ಕೂಡ ತಮ್ಮ ಚಿಂತನೆಗಳ ಮೂಲಕ ಭಾರತದಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನೂ ಹೇಳಿದ್ದರಿಂದ ಅವರ ಚಿಂತನಗಳು ಸದಾ ಸ್ಮರಣೀಯ ಎಂದರು.


ಈ ಸಂದರ್ಭ ಪದವಿ ಪತ್ರಿಕೋದ್ಯಮ ವಿದ್ಯಾರ್ಥಿಗಳ 'ವಿಕಸನ' ಪತ್ರಿಕೆ, ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳ 'ವಿಕಾಸ', ಎಯು ಕ್ರಿಯೇಷನ್ ಪ್ರಾಯೋಜಕತ್ವದ 'ಸಂಘಧ್ಯೇಯ' ಕಿರುಚಿತ್ರ, ಆಂಗ್ಲ ವಿಭಾಗದ ದೃಷ್ಟಿ ವಾಹಿನಿಯ 'ವಿವೇಕ ದೃಷ್ಟಿ' ವಿಶೇಷ ಸಂಚಿಕೆ ಬಿಡುಗಡೆ ಮಾಡಲಾಯಿತು.


ಕಾರ್ಯಕ್ರಮದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ ಕೆ ಎಸ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ವಚನ್ ಶೆಟ್ಟಿ, ಕಾರ್ಯದರ್ಶಿ ಆಶಿಶ್ ಎನ್ ಎಂ, ಜೊತೆ ಕಾರ್ಯದರ್ಶಿ ತನುಶ್ರೀ ಬೆಳ್ಳಾರೆ ಉಪಸ್ಥಿತರಿದ್ದರು.


ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಅರುಣ್ ಪ್ರಕಾಶ್ ವಂದಿಸಿದರು. ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿ ಮಂಜುನಾಥ್ ಜೋಡುಕಲ್ಲು ಕಾರ್ಯಕ್ರಮ ನಿರ್ವಹಿಸಿದರು.


ಬುಧವಾರ ಪೂರ್ವಾಹ್ನ ಕಾಲೇಜಿನ ಮುಖ್ಯದ್ವಾರದ ಬಳಿಯಿರುವ ವಿವೇಕಾನಂದರ ಮೂರ್ತಿಗೆ ಪುಷ್ಪಾರ್ಚನೆಗೈಯುವ ಮೂಲಕ ವಿವೇಕಾನಂದರ ಜನುಮ ದಿನವನ್ನು ಆಚರಿಸಲಾಯಿತು. ಈ ಸಂದರ್ಭ ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top