ಸಮಗ್ರ ಶೈಕ್ಷಣಿಕ ಬದಲಾವಣೆ ಅಗತ್ಯ: ಡಾ.ರಾಜಶ್ರೀ ಬಿ
ಬೆಳ್ತಂಗಡಿ: ಆಧುನಿಕ ಶಿಕ್ಷಣ ಕ್ಷೇತ್ರ ಸಂಕ್ರಮಣ ಸ್ಥಿತಿಯಲ್ಲಿದ್ದು, ಸಮಗ್ರ ಬದಲಾವಣೆಯ ಹೆಜ್ಜೆಗಳ ಅನುಷ್ಠಾನಕ್ಕೆ ಇದು ಸಕಾಲ ಎಂದು ಮೂಡುಬಿದಿರೆಯ ಮೂಡುಮಾರ್ನಾಡು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಡಾ.ರಾಜಶ್ರೀ ಬಿ ಹೇಳಿದರು.
ಬೆಳ್ತಂಗಡಿ ತಾಲೂಕಿನ ವೇಣೂರಿನ ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಜಿರೆ ಎಸ್.ಡಿ.ಎಂ ತಾಂತ್ರಿಕ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ ಬರೆದ 'ನೆನಪಿನಂಗಳದಲ್ಲಿ' ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದಿನ ಶಿಕ್ಷಣ ವ್ಯವಸ್ಥೆ ಕೇವಲ ಪಠ್ಯಕ್ಕೆ ಸೀಮಿತವಾಗಿರದೆ ಪಠ್ಯೇತರ ಚಟುವಟಿಕೆಗಳಿಗೂ ಆಧ್ಯತೆ ನೀಡಬೇಕು. ನಮ್ಮ ಜೀವನದಲಾಗುವ ಮೊದಲ ಅನುಭವಗಳು ನಮಗೆ ನೆನಪಿನಲ್ಲಿ ಉಳಿಯುವಂಥವಾಗಿರುತ್ತವೆ. ಬಾಲ್ಯ ಕಾಲದ ಸುಮಧುರ ಸಂದರ್ಭಗಳು ರಸವತ್ತಾಗಿ ಈ ಪುಸ್ತಕದಲ್ಲಿ ದಾಖಲಾಗಿವೆ ಎಂದು ತಿಳಿಸಿದರು.
ಕೃತಿಯನ್ನು ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೀಲಾ. ಎಸ್ ಹೆಗ್ಡೆ ಮಾತನಾಡಿದರು. ಚಿಕ್ಕವರಿದ್ದಾಗಲೇ ದೈನಂದಿನ ಚಟುವಟಿಕೆಯ ಕುರಿತು ಹವ್ಯಾಸ ರೂಢಿಸಿಕೊಂಡಿದ್ದ ಸುಬ್ರಹ್ಮಣ್ಯ ಭಟ್ 'ನೆನಪಿನಂಗಳದಲ್ಲಿ' ಎಂಬ ಮಹತ್ವದ ಕೃತಿಯನ್ನು ಬರೆದುಕಲಿಕೆಯ ಸಂದರ್ಭದ ಕ್ಷಣಗಳನ್ನು ದಾಖಲಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಲೇಖಕ ಡಾ.ಸುಬ್ರಹ್ಮಣ್ಯ ಭಟ್ ಮಾತನಾಡಿ ಕೃತಿಯ ರಚನೆಯ ಹಿನ್ನೆಲೆಯನ್ನು ವಿವರಿಸಿದರು. "ನನ್ನ ಬಾಲ್ಯದ ಬಸ್ ಪ್ರಯಾಣ, ಸ್ನೇಹಿತರೊಂದಿಗೆ ಮಾಡಿದ ತುಂಟಾಟಗಳು ಎಲ್ಲವೂ ಈ ಪುಸ್ತಕದಲ್ಲಿದೆ. ಇದನ್ನುಓದಿದರೆ ತಮ್ಮ ಬಾಲ್ಯದ ನೆನಪು ಮರುಕಳಿಸುತ್ತದೆ" ಎಂದರು.
ತಾನು ಬರೆದ ಈ ಚೊಚ್ಚಲ ಪುಸ್ತಕವನ್ನು ಮಾರಾಟ ಮಾಡಿ ಇದರಲ್ಲಿ ಬರುವಂತಹ ಎಲ್ಲಾ ಹಣವನ್ನುಇಬ್ಬರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡುವುದಾಗಿ ಡಾ. ಸುಬ್ರಹ್ಮಣ್ಯ ಭಟ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ವಿದ್ಯೋದಯ ಶಿಕ್ಷಣ ಸಂಸ್ಥೆಯ ಸಂಚಾಲಕ ಶಿವರಾಮ್ ಹೆಗ್ಡೆ, ಗ್ರಾಮದ ಮುಖಂಡರು, ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ರತ್ನಾಕರ ಆರಿಗ ವಂದಿಸಿದರು ಹಾಗೂ ಜಗನ್ನಾಥ ದೇವಾಡಿಗ ನಿರ್ವಹಿಸಿದರು.
ವರದಿ: ಪೌದನ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ