|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 81ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2021

81ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2021

 

ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಆಶ್ರಯದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಹಯೋಗದೊಂದಿಗೆ, ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಸಹಭಾಗಿತ್ವದಲ್ಲಿ ಸ್ವರಾಜ್ ಮೈದಾನದಲ್ಲಿ ಆರಂಭಗೊಂಡಿರುವ 81ನೇ ಅಖಿಲ ಭಾರತ ಅಂತರ್‌ವಿಶ್ವವಿದ್ಯಾಲಯ ಪುರುಷರ ಅಥ್ಲೆಟಿಕ್ ಚಾಂಪಿಯನ್‌ಶಿಪ್ ಗೆ ಚಾಲನೆ ನೀಡಲಾಯಿತು.


ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಸರಕಾರ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣ ಗೌಡ, ತಮ್ಮ ಅಧಿಕಾರಾವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಕ್ರೀಡಾ ಕಾರ್ಯಕ್ರಮ ಮೊದಲ ಬಾರಿಗೆ ವೀಕ್ಷಿಸುತ್ತಿರುವುದು ಖುಷಿ ತಂದುಕೊಟ್ಟಿದೆ. ಕ್ರೀಡಾ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ಸರ್ಕಾರ, ಮುಂಚೂಣಿಯಲ್ಲಿದೆ. ರಾಜ್ಯಾದ್ಯಂತ 75 ಕ್ರೀಡಾರ್ಥಿಗಳನ್ನು ದತ್ತು ಪಡೆದು ತರಬೇತಿ ನೀಡಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಸಜ್ಜುಗೊಳಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಕ್ರೀಡಾಕೂಟಕ್ಕೆ ರಾಜ್ಯದಿಂದ 5 ಲಕ್ಷ ನೀಡುವುದಾಗಿ ಘೋಷಿಸಿದರು.


ಕಾರ್ಯಕ್ರಮದಲ್ಲಿ ಒಲಿಂಪಿಯನ್ ಎಂ.ಆರ್ ಪೂವಮ್ಮ ಅವರನ್ನು ಸನ್ಮಾನಿಸಲಾಯಿತು. ಮೊದಲ ದಿನದ ಕ್ರೀಡಾಕೂಟದ 10,000ಮೀ ಓಟದ ವಿಜೇತರನ್ನು ಅಭಿನಂದಿಸಲಾಯಿತು.


ಮಂಗಳೂರು ವಿವಿ ಉಪಕುಲಪತಿ ಡಾ. ಸುಬ್ರಹ್ಮಣ್ಯ ಯಡಪಡಿತ್ತಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಸೊಸೀಯೇಷನ್ ಆಫ್ ಇಂಡಿಯನ್ ಯುನಿವರ್ಸಿಟಿಯ ಜಂಟಿ ಕಾರ‍್ಯದರ್ಶಿ ಡಾ. ಬಲ್ಜೀತ್ ಸಿಂಗ್ ಸೋಖನ್ ಧ್ವಜಾರೋಹಣ ನೆರವೇರಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು, ಕನ್ನಡ ಹಾಗೂ ಸಂಸ್ಕೃತಿ ಇಲಾಖಾ ಸಚಿವ ವಿ ಸುನಿಲ್ ಕುಮಾರ್, ಮೂಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ ಉಮಾನಾಥ್ ಕೋಟ್ಯಾನ್, ಸಮಾಜ ಕಲ್ಯಾಣ ಇಲಾಖಾ ಮಾಜಿ ಕ್ರೀಡಾ ಸಚಿವ ಅಭಯಚಂದ್ರ ಜೈನ್, ಮಾಜಿ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್, ವಿಶೇಷ ಆಹ್ವಾನಿತರಾಗಿ ಅಸೋಸಿಯೇಷನ್ ಆಫ್ ಇಂಡಿಯನ್ ಯೂನಿವರ್ಸಿಟಿಯ ಆಯ್ಕೆ ಸಮಿತಿಯ ಅಧ್ಯಕ್ಷ ಡಾ. ಬಿನು ಜಾರ್ಜ್ ವರ್ಗೀಸ್, ಅದಾನಿ ಗ್ರೂಪ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್, ಉದ್ಯಮಿ ರವೀಂದ್ರ ಆಳ್ವ, ಶಶಿಧರ್ ಶೆಟ್ಟಿ, ಎಂಸಿಸಿ ಬ್ಯಾಂಕ್ ಸಿಇಒ ಚಂದ್ರಶೇಖರ್ ಎಂ, ಕಾರ್ಡೊಲೈಟ್ ಜನರಲ್ ಮ್ಯಾನೇಜರ್ ದಿವಾಕರ್ ಕದ್ರಿ, ಉದ್ಯಮಿ ಶ್ರೀಪತಿ ಭಟ್ ಉಪಸ್ಥಿತರಿದ್ದರು.


ಆಕರ್ಷಕ ಸಾಂಸ್ಕೃತಿಕ ಮೆರವಣಿಗೆ


5ನೇ ಬಾರಿಗೆ ಆಳ್ವಾಸ್ ಅತಿಥ್ಯದಲ್ಲಿ ಜರಗುತ್ತಿರುವ ಕ್ರೀಡಾಕೂಟದ ಉದ್ಘಾಟನೆಯ ಪ್ರಯುಕ್ತ, ಸಂಜೆ ಸ್ವರಾಜ್ ಮೈದಾನದ ಸಿಂಥೆಟಿಕ್ ಟ್ರಾಕ್ ನಲ್ಲಿ ದೇಶದಾದ್ಯಂತ ವಿವಿಧ 248 ವಿಶ್ವವಿದ್ಯಾನಿಲಯಗಳ ಅಥ್ಲೀಟ್ ಗಳು ಆಕರ್ಷಕ ಪಥಸಂಚಲನ ನೆರವೇರಿಸಿದರು. ಪಥಸಂಚಲನದ ಬಳಿಕ ಅದ್ಧೂರಿಯಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ, ರಾಷ್ಟ್ರದ ವಿವಿಧ ಕಲೆ-ಸಂಸ್ಕೃತಿಗಳನ್ನು ಬಿಂಬಿಸುವ 150ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಿದವು. ಮೆರವಣಿಗೆಯ ಮೆರುಗು ಹೆಚ್ಚಿಸಲು ಸುಡುಮದ್ದಿನ ಪ್ರದರ್ಶನವೂ ವಿಶೇಷವಾಗಿತ್ತು.


10,000ಮೀ ಓಟದಲ್ಲಿ ಕೂಟ ದಾಖಲೆ ಬರೆದ ಆಳ್ವಾಸ್‌ನ ಅದೇಶ್


1. ಅದೇಶ್ - ಮಂಗಳೂರು ವಿಶ್ವವಿದ್ಯಾನಿಲಯ (ಕಾಲ: 29ನಿ 15.46ಸೆ) - ನೂತನ ಕೂಟ ದಾಖಲೆ - ( ಆಳ್ವಾಸ್ ಕಾಲೇಜು)


2. ಆರಿಫ್ ಆಲಿ - ಜನನಾಯಕ್ ಚಂದ್ರಶೇಖರ್ ವಿಶ್ವವಿದ್ಯಾನಿಲಯ (ಕಾಲ: 29ನಿ 18.82ಸೆ) - ಬಿಎಮ್‌ಆರ್


3. ರಾಮ್ ವಿನೋದ್ ಯಾದವ್ - ವಿ.ಬಿ.ಎಸ್.ಪಿ.ಯು ಜೌನ್‌ಪುರ್ (ಕಾಲ: 29ನಿ 45ಸೆ) - ಬಿಎಮ್‌ಆರ್


 10,000ಮೀ ಓಟದಲ್ಲಿ ಆಳ್ವಾಸ್‌ನ ಅದೇಶ್ ಯಾದವ್ ಈ ಹಿಂದೆ 2021ರಲ್ಲಿ ನಡೆದ 80ನೇ ಅಖಿಲಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ವಿದ್ಯಾರ್ಥಿ ನರೇಂದ್ರ ಪ್ರತಾಪ್ ಸಿಂಗ್ (ಕಾಲ: 29ನಿ 42.19ಸೆ) ಅವರ ದಾಖಲೆಯನ್ನು ಮುರಿದು ಅಂತರ್ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಆರಿಫ್ ಹಾಗೂ ರಾಮ್ ವಿನೋದ್ ಕೂಡ ಹಿಂದಿನ ದಾಖಲೆಯನ್ನು ಉತ್ತಮಪಡಿಸಿರುವುದು ವಿಶೇಷವಾಗಿದೆ.


 ಆಳ್ವಾಸ್ ಪ್ರತಿಷ್ಠಾನದ ವತಿಯಿಂದ ನೂತನ ಕೂಟ ದಾಖಲೆ ನಿರ್ಮಿಸಿದ ಅದೇಶ್ ಅವರಿಗೆ 25,000 ಹಾಗೂ ಚಿನ್ನದ ಪದಕದ ಸಾಧನೆಗೆ 25,000ರೂ ನೀಡಿ ಪ್ರೋತ್ಸಾಹಿಸಲಾಗಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post