ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆಯೋಜಿಸಿದ್ದ ವಿಶ್ವವಿದ್ಯಾ ಟ್ರೋಫಿ-2022 ವಾಲಿಬಾಲ್ ಟೂರ್ನಿಗೆ ಚಾಲನೆ
ಗೋಕರ್ಣ: ವಾಲಿಬಾಲ್, ಕಬಡ್ಡಿ, ಖೋಖೊ ಮುಂತಾದ ದೇಶಿ ಕ್ರೀಡೆಗಳತ್ತ ಯುವಕರು ಹೆಚ್ಚಿನ ಒಲವು ತೋರಬೇಕು ಎಂದು ರಾಜ್ಯ ಪಶು ಸಂಗೋಪನಾ ಖಾತೆ ಸಚಿವ ಪ್ರಭು ಚವ್ಹಾಣ್ ಕರೆ ನೀಡಿದರು.
ಅಶೋಕೆಯ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆಯೋಜಿಸಿದ್ದ ವಿಶ್ವವಿದ್ಯಾ ಟ್ರೋಫಿ-2022 ವಾಲಿಬಾಲ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದ ಸಂಸ್ಕೃತಿ ಅಡಗಿರುವುದು ಗ್ರಾಮೀಣ ಪ್ರದೇಶಗಳಲ್ಲಿ. ಇಂಥ ಗ್ರಾಮೀಣ ಕ್ರೀಡೆಗಳು ನಮ್ಮ ಜನಜೀವನದ ಅವಿಭಾಜ್ಯ ಅಂಗ. ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಮಾಜದ ಪ್ರೋತ್ಸಾಹ ಅಗತ್ಯ. ವಿವಿವಿಯಂಥ ಸಂಸ್ಥೆಗಳು ದೇಶಿ ಕ್ರೀಡೆಗಳ ಬಗ್ಗೆ ವಹಿಸಿರುವ ಆಸಕ್ತಿ ಅನುಕರಣೀಯ ಎಂದು ಅವರು ಅಭಿಪ್ರಾಯಪಟ್ಟರು.
"ಶ್ರೀಮಠ ಗೋವಿನ ಬಗ್ಗೆ, ರಾಷ್ಟ್ರದ ಬಗ್ಗೆ ಮತ್ತು ಶಿಕ್ಷಣದ ಬಗ್ಗೆ ಅಪಾರ ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ. ದೇಶದ ಉದ್ದಗಲಕ್ಕೂ ಶ್ರೀಮಠದ ಅನುಕರಣನೀಯ ಸೇವೆಯ ಅರಿವು ಇದೆ. ಶ್ರೀಮಠದ ಬಹುತೇಕ ಗೋಶಾಲೆಗಳಿಗೆ ನಾನು ಭೇಟಿ ನೀಡಿದ್ದು, ರಾಜಸ್ಥಾನ, ಉತ್ತರ ಪ್ರದೇಶ, ರಾಜಸ್ಥಾನದಂಥ ರಾಜ್ಯಗಳಿಗೂ ನಾನು ಪ್ರವಾಸ ಕೈಗೊಂಡು ಗೋಶಾಲೆ ವೀಕ್ಷಣೆ ಮಾಡಿದ್ದೇನೆ. ಶ್ರೀಮಠದ ಗೋಶಾಲೆ ಎಲ್ಲದಕ್ಕೂ ಮಾದರಿ" ಎಂದು ಹೇಳಿದರು.
ಮಕ್ಕಳಿಗೆ ಬಾಲ್ಯದಲ್ಲೇ ಉತ್ತಮ ಸಂಸ್ಕಾರದ ಜತೆಗೆ, ಬೌದ್ಧಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ. ಆದರ್ಶ ಶಿಕ್ಷಣದ ಮೂಲಕ ಮಾದರಿ ರಾಷ್ಟ್ರವನ್ನು ಕಟ್ಟುವ ಶ್ರೀಗಳ ಸಂಕಲ್ಪಕ್ಕೆ ಎಲ್ಲರೂ ಕೈಜೋಡಿಸೋಣ ಎಂದು ಮನವಿ ಮಾಡಿದರು.
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಧರ್ಮನಿಷ್ಠ, ರಾಷ್ಟ್ರನಿಷ್ಠ ಸಮಾಜದ ನಿರ್ಮಾಣದ ನಿಟ್ಟಿನಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುವ ಸಂಕಲ್ಪದಿಂದ ಆರಂಭವಾಗಿರುವ ವಿವಿವಿಗೆ ಸಮಾಜದಿಂದ ಅದ್ಭುತ ಸ್ಪಂದನೆ ಸಿಕ್ಕಿದೆ. ವಿದ್ಯಾರ್ಥಿಗಳು ಕೇವಲ ಪಠ್ಯವಿಷಯಗಳಿಗೆ ಸೀಮಿತವಾಗದೇ ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕೆ ಇಲ್ಲಿ ಒತ್ತು ನೀಡಲಾಗುತ್ತಿದೆ ಎಂದು ಸ್ವಾಮೀಜಿ ಹೇಳಿದರು.
ಅಂತರರಾಷ್ಟ್ರೀಯ ಗುಣಮಟ್ಟದ ಆಧುನಿಕ ಶಿಕ್ಷಣದ ಜತೆಗೆ ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೆನಿಸಿದ ಪ್ರಾಚೀನ ಕಲೆ ಮತ್ತು ಶಿಕ್ಷಣಕ್ಕೂ ವಿವಿವಿ ಸಮಾನ ಒತ್ತು ನೀಡುತ್ತಿದೆ. ವೇದ, ವಾಸ್ತುಶಾಸ್ತ್ರ, ಜ್ಯೋತಿಷ್ಯ, ಆಯುರ್ವೇದ, ವೃಕ್ಷಾಯುರ್ವೇದ, ಸಮರ ಕಲೆ, ಸಂಗೀತ, ನೃತ್ಯದಂಥ ಹತ್ತು ಹಲವು ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಭಾರತದ ಪರಂಪರೆಗೇ ಒತ್ತು ನೀಡುವ ವಿಶೇಷ ಗುರುಕುಲವನ್ನು ಮುಂದಿನ ವರ್ಷದಿಂದ ಆರಂಭಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಗ್ರಾಮಪಂಚಾಯ್ತಿ ಸದಸ್ಯ ಸಂದೇಶ್, ವಿವಿವಿ ವ್ಯವಸ್ಥಾ ಪರಿಷತ್ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಪ್ರಾಚಾರ್ಯರಾದ ಮಹೇಶ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ