ಪುತ್ತೂರು: ಹಿಂದೂ ದೇವಳಗಳನ್ನು ಕೂಡ ಖಾಸಗಿ ದೇವಳಗಳ ವ್ಯವಸ್ಥೆಗೆ ತರುವ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಇದಕ್ಕೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಅವರು, ಕಾಂಗ್ರೆಸಿನ 60 ವರ್ಷಗಳ ಆಡಳಿತಾವಧಿಯಲ್ಲಿ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.
ನೀವು ಈ ತನಕ ಒಳ್ಳೆಯ ಕೆಲಸ ಮಾಡಿಲ್ಲ. ನಾವು ಒಳ್ಳೆಯ ಕೆಲಸ ಮಾಡುತ್ತಿದ್ದೇವೆ. ನೋಡಲು ಕಷ್ಟವಾದರೆ ಮಾತನಾಡದೆ ಕುಳಿತುಕೊಳ್ಳಿ ಎಂದು ತೀಕ್ಷ್ಣ ಹೇಳಿಕೆ ನೀಡಿದರು.
ಪುತ್ತೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈವರೆಗೆ ಕಳೆದ 60 ವರ್ಷಗಳಲ್ಲಿ ಯಾವ ಹಿಂದೂ ದೇವಳಗಳ ಅಭಿವೃದ್ಧಿ ಮಾಡಿಲ್ಲ. ನಮ್ಮ ಸರ್ಕಾರ ಧಾರ್ಮಿಕವಾಗಿರುವ ಹಿಂದೂಗಳ ಭಾವನೆಗಳನ್ನು ಅರ್ಥಮಾಡಿಕೊಂಡು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿರುವ ನೆಲಗಟ್ಟುಗಳನ್ನು ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಪೂರಕ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.
ಅಡಿಕೆ ಹಳದಿ ರೋಗ ಸಂಕಷ್ಟಕ್ಕೆ ಸ್ಪಂದನೆ:
ಹಳದಿ ರೋಗದಿಂದ ಕಂಗೆಟ್ಟ ಬೆಳೆಗಾರರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಲಿದೆ. ಜಿಲ್ಲೆಯ ಸುಳ್ಯ,ಪುತ್ತೂರು ಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿರುವ ಅಡಿಕೆ ತೋಟದಲ್ಲಿ ಹಳದಿ ರೋಗ ಕಾಣಿಸಿಕೊಂಡಿದ್ದು, ಈ ಬಗ್ಗೆ ರಾಜ್ಯ ತೋಟಗಾರಿಕಾ ಸಚಿವರಲ್ಲೂ ಮಾತನಾಡಿದ್ದೇನೆ. ಹಳದಿ ರೋಗಕ್ಕೆ ಸಂಬಂಧಿಸಿದಂತೆ ಮುಂದಿನ ೧೦ ದಿನಗಳ ಒಳಗಾಗಿ ತೋಟಗಾರಿಕಾ ಇಲಾಖೆಯ ಸಚಿವರೇ ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ ಎಂದು ಸಚಿವ ಎಸ್.ಅಂಗಾರ ಅವರು ತಿಳಿಸಿದರು.
ಪರ್ಯಾಯ ಕೃಷಿ ಯೋಜನೆ:
ಹಳದಿ ರೋಗದಿಂದ ಕಂಗೆಟ್ಟ ಕೃಷಿಕರಿಗೆ ಪರ್ಯಾಯ ಕೃಷಿಯನ್ನು ಪರಿಚಯಿಸುವ ಕಾರ್ಯವನ್ನು ಮೀನುಗಾರಿಕೆ, ಒಳನಾಡು ಸಾರಿಗೆ ಇಲಾಖೆಯ ಮೂಲಕ ಮಾಡಲಾಗುವುದು. ಅಡಿಕೆ ಬೆಳೆಗೆ ಬದಲಿ ಕೃಷಿಯ ಅನಿವಾರ್ಯತೆಯೂ ಇದ್ದು, ಈ ನಿಟ್ಟಿನಲ್ಲಿ ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ ಎಂದು ಸಚಿವ ಎಸ್.ಅಂಗಾರ ಅವರು ತಿಳಿಸಿದರು.
ಜಿಲ್ಲೆಯ ಮೀನಿನ ತಳಿಗಳಾದ ಮಡಂಜಿ ಸೇರಿದಂತೆ ವಿವಿಧ ತಳಿಗಳ ಅಭಿವೃದ್ಧಿಗೆ ಪೂರಕ ವ್ಯವಸ್ಥೆಯನ್ನು ಮಾಡುವ ಜತೆಗೆ ವಿವಿಧ ತಳಿಯ ಮೀನು ಸಾಕಾಣಿಕೆಗೂ ವಿಶೇಷ ಒತ್ತು ನೀಡಲಾಗಿದೆ ಎಂದರು. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಂದಿನ ೧೫ ದಿನಗಳಲ್ಲಿ ವಿವಿಧ ವಿಶ್ವವಿದ್ಯಾನಿಲಯಗಳ ತಜ್ಞರನ್ನು ಸೇರಿಸಿಕೊಂಡು ಕಾರ್ಯಾಗಾರವನ್ನು ನಡೆಸಲಾಗುವುದು. ಈ ಯೋಜನೆಯ ಅನುಷ್ಟಾನದ ರೂಪುರೇಷೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಮೂಲಕ ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುವುದು.ಅಲ್ಲದೆ ಅಡಿಕೆಯ ಜತೆಗೆ ಮೀನು, ಮುತ್ತು ಮತ್ತು ಪಾಚಿ ಕೃಷಿಯನ್ನು ಮಾಡಲು ಪ್ರೋತ್ಸಾಹ ನೀಡಲಾಗುವುದು ಎಂದು ಅವರು ತಿಳಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ