|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಏನಿದು ಟಿನಿಟಸ್ (ಕಿವಿಮೊರೆತ)

ಏನಿದು ಟಿನಿಟಸ್ (ಕಿವಿಮೊರೆತ)


ಕಿವಿಮೊರೆತ ಎನ್ನುವುದು ಅತ್ಯಂತ ಅಸಹನೀಯವಾದ ಮತ್ತು ಮಾನಸಿಕ ನೆಮ್ಮದಿಯನ್ನು ಹಾಳು ಮಾಡುವ ವಿಶಿಷ್ಟ ಖಾಯಿಲೆಯಾಗಿರುತ್ತದೆ, ಆಂಗ್ಲ ಭಾಷೆಯಲ್ಲಿ ಇದನ್ನು ಟಿನಿಟಸ್ ಎಂದೂ ಕರೆಯುತ್ತಾರೆ.


ದಿನೇ ದಿನೇ ನಗರ ಪ್ರದೇಶಗಳಲ್ಲಿ ಮತ್ತು ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಹೆಚ್ಚುತ್ತಿರುವ  ಶಬ್ಧಮಾಲಿನ್ಯದ ಕಾರಣದಿಂದಾಗಿ ಹೆಚ್ಚಿನವರಿಗೆ ಈ ಸಮಸ್ಯೆ ಕಂಡು ಬರುತ್ತಿದೆ. ಶಬ್ಧ ಮಾಲಿನ್ಯ ಎನ್ನುವುದು ನಮ್ಮ ಈಗಿನ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ. ಎಲ್ಲೆಂದರಲ್ಲಿ ವಾಹನಗಳ ಶಬ್ಧ, ಕಾರ್ಖಾನೆಯ ಶಬ್ಧ, ಕರ್ಕಶವಾದ ಹಾರ್ನ್‍ಗಳು, ಟ್ರಾಫಿಕ್ ಶಬ್ಧ, ಮಸೀದಿ ಮಂದಿರಗಳ ಘಂಟೆ ಶಬ್ಧ, ಮೊಬೈಲ್ ರಿಂಗಿಂಗ್‍ಗಳ ಶಬ್ಧ, ಥಿಯೇಟರ್‌ಗಳ ಶಬ್ಧ ಹೀಗೆ ಶಬ್ಧ ಮಾಲಿನ್ಯದ ನೂರಾರು ಕಾರಣಗಳು ಇದೆ. ಪ್ರಶಾಂತವಾದ ನಿಶ್ಚಬ್ಧ ವಾತಾವರಣ ಬೇಕಾದಲ್ಲಿ ಬಹುಶ: ಕಾಡಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.


ಈ ನಿರಂತರವಾದ ಕರ್ಕಶ ಶಬ್ಧದಿಂದ ನಿಮ್ಮ ಕಿವಿಗಳ ಮೇಲೆ ಅಪಾರವಾದ ಹಾನಿ ಉಂಟಾಗುತ್ತಿದೆ. ನಗರ ಪ್ರದೇಶಗಳಲ್ಲಿಯೂ ಈ ಈ ಶಬ್ಧ ಮಾಲಿನ್ಯದ ನಡುವೆಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹೆಚ್ಚಿನ ಜನರು ಇದನ್ನು ನಿರ್ಲಕ್ಷಿಸುತ್ತಾರೆ. ಈ ನಿರಂತರ ಶಬ್ಧ ಮಾಲಿನ್ಯದ ಪರಿಣಾಮವಾಗಿ ನೀವು ಆ ಶಬ್ಧದ ವಾತಾವರಣದಿಂದ ಹೊರಬಂದ ಮೇಲೂ ನಿಮ್ಮ ಕಿವಿ ನಿರಂತರವಾಗಿ ಮೊರೆಯುತ್ತಿರುತ್ತದೆ ಅಥವಾ  ಗುಂಯ್‍ಗುಟ್ಟುತ್ತಿರುತ್ತದೆ. ಇದನ್ನೇ ಟಿನಿಟಸ್ ಅಥವಾ ಕಿವಿಮೊರೆತ ಎನ್ನಲಾಗುತ್ತದೆ. ಇತ್ತೀಚಿನ ವರದಿಗಳ ಪ್ರಕಾರ ಪ್ರತಿ 10ರಲ್ಲಿ ಒಬ್ಬ ಈ ಟಿನಿಟಸ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಇದನ್ನು ನಿರ್ಲಕ್ಷಿಸಿದರೆ ಶಾಶ್ವತ ಕಿವುಡುತನ ಬರಲೂ ಬಹುದು. ಏಕೆಂದರೆ ಟಿನಿಟಸ್ ಎನ್ನುವುದು ಕಿವುಡುತನದ ಖಾಯಿಲೆಯ ಮುನ್ಸೂಚನೆ ಎಂದರೂ ತಪ್ಪಾಗಲಾರದು.


ಟಿನಿಟಸ್ ಎಂದರೇನು?

ಭೌತಿಕವಾಗಿ ಯಾವುದೇ ಶಬ್ಧ ಇಲ್ಲದಿದ್ದರೂ ಕಿವಿಯಲ್ಲಿ ನಿರಂತರವಾಗಿ ಶಬ್ಧ ಮೊರೆತ ಕೇಳಿಸುವುದು, ಗುಂಯ್ ಗುಡುವುದು, ಝೇಂಕಾರದ ಶಬ್ಧ ಕೇಳಿ ಬರುವುದನ್ನು ಕಿವಿಮೊರೆತ ಅಥವಾ ಟಿನಿಟಸ್ ಎನ್ನಲಾಗುತ್ತದೆ. ಅಂದರೆ ಒಬ್ಬ ಮಹಿಳೆ ಅಥವಾ ಪುರುಷ ಅತೀ ಹೆಚ್ಚು ಶಬ್ಧ ಮಾಲಿನ್ಯವಿರುವ ಜಾಗದಲ್ಲಿ ದಿನದ ಹೆಚ್ಚು ಸಮಯವನ್ನು ಕಳೆದಾಗ ಆ ಶಬ್ಧದಿಂದ ಹೊರ ಬಂದ ಬಳಿಕವೂ ಏಕಾಂತದಲ್ಲಿರುವಾಗಲೂ ನಿರಂತರವಾಗಿ ಕಿವಿಯಲ್ಲಿ ಗುಂಯ್ ಎಂಬ ಶಬ್ಧ ಕೇಳಿಸುವಂತಹ ಸ್ಥಿತಿಯನ್ನೇ ಕಿವಿಮೊರೆತ ಎನ್ನಲಾಗುತ್ತದೆ. ಉದಾಹರಣೆಗೆ ಕಾರ್ಖಾನೆಯಲ್ಲಿ ಕೆಲಸ ಮಾಡುವವರು, ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುವವರು, ಕಾಲ್‍ಸೆಂಟರ್‍ಗಳಲ್ಲಿ ಕೆಲಸ ಮಾಡುವವರು, ಕೆಲಸ ಮುಗಿಸಿ ಮನೆಗೆ ಬಂದ ಬಳಿಕವೂ ಅವರ ಕಿವಿಯಲ್ಲಿ ಈ ‘ಮೊರೆತ’ ಕೇಳಿಸುತ್ತಲೇ ಇರುತ್ತದೆ.


ಕಾರಣ ಏನು?

ಶಬ್ಧದ ತರಂಗಗಳನ್ನು ಗ್ರಹಿಸಿ ಕೇಂದ್ರೀಯ ನರಮಂಡಲಕ್ಕೆ ತಲುಪಿಸಿ ಶಬ್ಧ ಕೇಳುವಂತೆ ಮಾಡುವ ಕೆಲಸವನ್ನು 12 ಕೇಂದ್ರೀಯ ನರಗಳ ಪೈಕಿ 8ನೇ ನರವಾದ ‘ಒಲ್ಫಾಕ್ಟರಿ’ ನರ ಮಾಡುತ್ತದೆ ಶಬ್ಧದ ಅಲೆಗಳು ಕಿವಿ ತಮಟೆಯನ್ನು ತಲುಪಿ, ಅಲ್ಲಿಂದ ನಮ್ಮ ನರಮಂಡಲಕ್ಕೆ ಸಂದೇಶ ಈ ನರಗಳ ಮುಖಾಂತರ ತಲುಪಲ್ಪಟ್ಟು ಶಬ್ಧವಾಗಿ ನಮಗೆ ಕೇಳಿಸುತ್ತದೆ. ಯಾವಾಗ 80 ಡಿಸಿಬಲ್‍ಗಳಿಗಿಂತ ಹೆಚ್ಚಿನ ಶಬ್ಧವನ್ನು ಪದೇಪದೇ ಕೇಳುತ್ತಲೇ ಇದ್ದಾಗ, ಕಿವಿಯಲ್ಲಿದ್ದ  ಈ ನರಗಳಿಗೆ ಕಿರಿಕಿರಿಯುಂಟಾಗುತ್ತದೆ. ಈ ಶಬ್ಧ ವಾಹಕ 8ನೇ ನರಕ್ಕೆ ಪದೇ ಪದೇ ಕಿರಿಕಿರಿಯಾದಾಗ ಟಿನಿಟಸ್ ಸಮಸ್ಯೆ ಉದ್ಭವಿಸುತ್ತದೆ. ತಕ್ಷಣವೇ ಗುರುತಿಸಿ ಚಿಕಿತ್ಸೆ ಪಡೆಯಬೇಕಾಗುತ್ತದೆ. ಇಲ್ಲವಾದಲ್ಲಿ ಮುಂದೆ ಶಾಶ್ವತವಾದ ಕಿವಿಡುತನಕ್ಕೆ ಕಾರಣವಾಗಬಹುದು.


ಲಕ್ಷಣಗಳು ಏನು?

ಕಿವಿಯೊಳಗೆ ರಿಂಗಣಿಸಿದಂತೆ, ಸೀಟಿ ಹೊಡೆದಂತೆ ಅಥವಾ ಪಿಸುಗುಟ್ಟಿದಂತೆ ಕೇಳಿಸುವ ವಿಚಿತ್ರ ಅನುಭವವನ್ನೇ ಟಿನಿಟಸ್ ಎನ್ನಲಾಗುತ್ತದೆ. ಈ ಶಬ್ಧಗಳು ಯಾವುದೇ ಬಾಹ್ಯ ಶಬ್ಧದ ಮೂಲದಿಂದಲ್ಲದೆ, ಕಿವಿಯೊಳಗೆ  ಕೇಳಿಸುವಂತಹ ಸ್ಥಿತಿಯಾಗಿರುತ್ತದೆ. ಇದರ ತೀವ್ರತೆ ಕೆಲವರಲ್ಲಿ ಕಡಿಮೆ ಇರಬಹುದು. ಇನ್ನು ಕೆಲವರಿಗೆ ತೀವ್ರ ತರಂಗಗಳಲ್ಲಿ ಅಥವಾ ಕೀರಲು ಧ್ವನಿಯಲ್ಲಿ ಆಗಿರಲೂಬಹುದು ಅಥವಾ ಕ್ಷೀಣವಾಗಿರಲೂ ಬಹುದು. ವಿಶ್ವದಾದ್ಯಂತ ಲಕ್ಷಾಂತರ ಮಂದಿ ಈ ರೋಗದಿಂದ ಬಳಲುತ್ತಿದ್ದಾರೆ.


ಕೇವಲ ಒಂದು ಅಥವಾ ಎರಡು ದಿನ ಕಿವಿ ಗುಂಯ್‍ಗುಡುತ್ತಿದ್ದಲ್ಲಿ ಅದು ಟಿನಿಟಸ್ ಎಂದು ಹೇಳಲಾಗದು. ಬದಲಾಗಿ ನಿರಂತರವಾಗಿ  ತಿಂಗಳುಗಳ ಕಾಲ ಗುಂಯ್‍ಗುಡುತ್ತಿರುವುದು ಮುಂದುವರಿದರೆ ಅದು ‘ಟಿನಿಟಸ್’  ಆಗಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರ ಜೊತೆಗೆ ಕಿವಿ ಸ್ವಲ್ಪ ಕಡಿಮೆ  ಕೇಳಿಸುವುದಕ್ಕೆ ಪ್ರಾರಂಭವಾಗುತ್ತದೆ. ಇದರ ಜೊತೆಗೆ  ಮೆದುಳಿನಲ್ಲಿ  ಕಿರಿಕಿರಿ, ತಲೆಸುತ್ತುವಿಕೆ, ತಲೆನೋವು, ಕೆಲಸದಲ್ಲಿ  ಆಸಕ್ತಿ ಇಲ್ಲದಂತಾಗುವುದು, ನಿದ್ರಾಹೀನತೆ, ಮಾನಸಿಕ ಅಸ್ಥಿರತೆ, ಶಾಶ್ವತ ಕಿವುಡುತನ ಮುಂದುವರಿದ  ಹಂತದಲ್ಲಿ ಕಂಡುಬರಬಹುದು. ನಿರಂತರವಾಗಿ ಕಿವಿ ಮೊರೆತದಿಂದ, ಖಿನ್ನತೆ ಮತ್ತು ಆತ್ಮಹತ್ಯಾ ಪ್ರೇರೇಪಣೆಗೂ ಕಾರಣವಾಗಬಹುದು.


ಕಾರಣಗಳು: 

1) ವಿಪರೀತ ಶಬ್ಧಮಾಲಿನ್ಯ

2) ಕಿವಿಯಲ್ಲಿ ಸೋಂಕು 

3) ಥೈರಾಯ್ಡ್ ತೊಂದರೆಗಳು, ಮೈಗ್ರೇನ್ ಸಮಸ್ಯೆ

4) ಹೃದಯ ಸಂಬಂಧ ಕಾಯಿಲೆಗಳು, ಮಧುಮೇಹ, ರಕ್ತಹೀನತೆ

5) ಅತಿಯಾದ ಇಯರ್ ಫೋನ್‍ಗಳ ಬಳಕೆ

6) ಕಿವಿಯಲ್ಲಿ ಮೇಣ ತುಂಬಿರುವುದು

7) ಆಸ್ಫರಿನ್, ಮಲೇರಿಯಾ ನಿರೋಧಕ ಔಷಧಿ ಮತ್ತು  ಖಿನ್ನತೆ ಶಮನಕಾರಿ ಔಷಧಿ ಸೇವನೆ

8) ಅಪಘಾತದಿಂದ ಕಿವಿಯ ನರಕ್ಕೆ ಗಾಯವಾದಾಗ


ಟಿನಿಟಸ್‍ನಲ್ಲಿ ಎರಡು ವಿಧಗಳಿದ್ದು, ಅಲ್ಪಾವಧಿ ಟಿನಿಟಸ್ ಮತ್ತು ದೀರ್ಘಾವಧಿ ಟಿನಿಟಸ್ ಎಂಬುದಾಗಿರುತ್ತದೆ.

ಅಲ್ಪಾವಧಿ ಟಿನಿಟಸ್: ಇದು ಹೆಸರೇ ಸೂಚಿಸುವಂತೆ ಸಂದರ್ಭಾನುಸಾರ ಕೊಂಚ ಹೊತ್ತು ಇರುತ್ತದೆ. ಬಳಿಕ ಸರಿಯಾಗುತ್ತದೆ.

ಉದಾಹರಣೆಗೆ ಒಂದು ದೊಡ್ಡ ಸಂಗೀತ ಕಛೇರಿ, ಕರ್ಕಶವಾದ ಶಬ್ಧವಿರುವ ಪಾರ್ಟಿ ಅಥವಾ ಇನ್ನಾವುದೇ  ಗದ್ದಲದ ಸಮಾರಂಭ ಮುಗಿಸಿದ ಬಳಿಕ ಈ ರೀತಿ  ಆಗುವ ಸಾಧ್ಯತೆ ಇರುತ್ತದೆ. ಸಮಸ್ಯೆಗೆ ಚಿಕಿತ್ಸೆ ಅಗತ್ಯವಿರುವುದು.

ದೀರ್ಘಾವಧಿ ಟಿನಿಟಸ್: ಕಿವಿ ಮೊರೆತ ದಿನವಿಡೀ ಕೇಳಿಸುತ್ತಿದ್ದಲ್ಲಿ ವೈದ್ಯರ ಸಲಹೆ ಅತೀ ಅಗತ್ಯ. ನಿರಂತರ  ಶಬ್ಧ ಮಾಲಿನ್ಯದ ಪ್ರದೇಶಗಳಲ್ಲಿ ತಿಂಗಳುಗಳ ಕಾಲ ಕೆಲಸ ಮಾಡಿದಲ್ಲಿ ಈ ಸಮಸ್ಯೆ ಕಂಡು ಬರುತ್ತದೆ.  ಈ ರೀತಿಯ ಸಮಸ್ಯೆಗೆ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅಗತ್ಯವಾಗಿರುತ್ತದೆ.


ಯಾರಿಗೆ ಕಿವಿಮೊರೆತ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ?

1) ಮಧುಮೇಹಿಗಳು, ಧೂಮಪಾನ ಮತ್ತು ಮದ್ಯಪಾನ ಸೇವಿಸುವವರು ಕಿವಿಮೊರೆತ ಸಮಸ್ಯೆಗೆ ಹೆಚ್ಚು ತುತ್ತಾಗುತ್ತಾರೆ.

2) ವಯಸ್ಸು ಹೆಚ್ಚಾದಂತೆ ಈ ಸಮಸ್ಯೆ ಬಿಗಡಾಯಿಸುತ್ತದೆ. ನರದ ಸಮಸ್ಯೆ, ವಯಸ್ಕರಲ್ಲಿ ಜಾಸ್ತಿ ಇರುತ್ತದೆ. ಪುರುಷರಲ್ಲಿ ಜಾಸ್ತಿ ಕಂಡು ಬರುತ್ತದೆ.

3) ಶಬ್ಧ ಮಾಲಿನ್ಯ ಜಾಸ್ತಿ ಇರುವ ಜಾಗಗಳಾದ ಕಟ್ಟಡ ನಿರ್ಮಾಣದ ಕೆಲಸಗಾರರು, ಕಾರ್ಖಾನೆ ಕೆಲಸಗಾರರು, ಸಂಗೀತ ಪ್ರಿಯರು ಮತ್ತು ಸೈನಿಕರಲ್ಲಿ ಹೆಚ್ಚು ಕಂಡು ಬರುತ್ತದೆ.

4) ಅತಿಯಾದ ಬೊಜ್ಜು, ಹೃದಯ ತೊಂದರೆ ಇರುವವರು, ಅಧಿಕ ರಕ್ತದೊತ್ತಡ, ಸಂಧಿವಾತ ಹಾಗೂ  ಗಂಟು ನೋವು ಇರುವವರಲ್ಲಿ ಕಿವಿ ಮೊರೆತ ಹೆಚ್ಚು ಎಂದು ಅಂಕಿ ಅಂಶಗಳಿಂದ ತಿಳಿದು ಬಂದಿದೆ.

5) ಖಿನ್ನತೆಗೆ ಔಷಧಿ ಸೇವನೆ ಮಾಡುವವರಿಗೆ ಮತ್ತು ಅನಗತ್ಯವಾಗಿ ಅತಿಯಾಗಿ ನೋವು ನಿವಾರಕ  ಔಷಧಿ ಸೇವನೆ ಮಾಡುವವರಿಗೆ ಈ ಸಮಸ್ಯೆ ಜಾಸ್ತಿ ಕಂಡುಬರುತ್ತದೆ.

6) ರಕ್ತಹೀನತೆ, ಮಧುಮೇಹ ಮತ್ತು ರಸದೂತಗಳ ಸಮಸ್ಯೆ ಇರುವ ವ್ಯಕ್ತಿಗಳಿಗೆ ಟಿನಿಟಸ್ ಸಮಸ್ಯೆ  ಇತರರಿಗಿಂತ ಜಾಸ್ತಿ ಎಂದೂ ತಿಳಿದುಬಂದಿದೆ.


ಪತ್ತೆ ಹಚ್ಚುವುದು ಹೇಗೆ?

ಸಾಮಾನ್ಯವಾಗಿ ಕಿವಿಮೊರೆತ ತೊಂದರೆಯನ್ನು ಕಿವಿ, ಮೂಗು, ಗಂಟಲು ತಜ್ಞರು  ಪ್ರಾಥಮಿಕವಾಗಿ ರೋಗಿಯ ರೋಗದ ಚರಿತ್ರೆ, ರೋಗಿಯ ಉದ್ಯೋಗ ಮತ್ತು ರೋಗದ ತೀವ್ರತೆ ಹಾಗೂ ಲಕ್ಷಣಗಳನ್ನು ಅಭ್ಯಸಿಸಿ ಪತ್ತೆ ಹಚ್ಚುತ್ತಾರೆ. ಕೂಲಂಕುಷವಾಗಿ ಕಿವಿ ಪರೀಕ್ಷೆ, ಕಿವಿ ತಮಟೆ ಪರೀಕ್ಷೆ ಮಾಡುತ್ತಾರೆ. ‘ಆಡಿಯೋ ಮೆಟ್ರಿ’ ಪರೀಕ್ಷೆ ನಡೆಸಿ ರೋಗವನ್ನು ಪತ್ತೆ ಹಚ್ಚುತ್ತಾರೆ. ಯಾವ ಕಾರಣದಿಂದ ಕಿವಿಮೊರೆತ ಉಂಟಾಗಿದೆ ಎಂಬುದನ್ನು ಪತ್ತೆ ಹಚ್ಚುತ್ತಾರೆ.


ಚಿಕಿತ್ಸೆ ಹೇಗೆ?

ರೋಗದ ಲಕ್ಷಣಗಳಿಗೆ ಹೊಂದಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಕಾಲಿಕ ಟಿನಿಟಸ್‍ನ್ನು ಸುಲಭವಾಗಿ ಚಿಕಿತ್ಸೆ ನೀಡಿ ಸರಿಪಡಿಸಲಾಗುತ್ತದೆ. ಟಿನಿಟಸ್‍ಗೆ ಕಾರಣವಾದ ಅಂಶವನ್ನು ಹೋಗಲಾಡಿಸಿ ಮತ್ತೆ ಮರುಕಳಿಸದಂತೆ  ಮಾಡಲಾಗುತ್ತದೆ. ದೀರ್ಘಾವಧಿ ಟಿನಿಟಸ್ ಯಾವ ಕಾರಣದಿಂದ  ಬಂದಿದೆ ಎಂದು ತಿಳಿದು ಅದಕ್ಕೆ ಚಿಕಿತ್ಸೆ  ನೀಡುತ್ತಾರೆ. ಕಿವಿ ಗುಗ್ಗೆಯ ಕಾರಣದಿಂದ ಕಿವಿಯ ಆಂತರಿಕ ಒತ್ತಡ ಜಾಸ್ತಿಯಾಗಿದ್ದಲ್ಲಿ ಅದನ್ನು ಸರಿಪಡಿಸಲಾಗುತ್ತದೆ. ಮಧುಮೇಹ, ರಸದೂತ ಸಮಸ್ಯೆ, ನರದ ಸಮಸ್ಯೆ, ಬೊಜ್ಜಿನ ಸಮಸ್ಯೆ ಇದ್ದಲ್ಲಿ ಅದನ್ನು  ಮೊದಲು ಸರಿಪಡಿಸಿ ಕಿವಿಮೊರೆತಕ್ಕೆ ಕಾರಣವಾದ ಅಂಶವನ್ನು ಪತ್ತೆ ಹಚ್ಚಿ ಅದನ್ನು ಸರಿಪಡಿಸಲಾಗುತ್ತದೆ.

ಕಿವಿ ಮೊರೆತ ಇದ್ದವರಲ್ಲಿ ಕಿವುಡುತನ ಉಂಟಾದಾಗ ಕೆಲವೊಮ್ಮೆ ಸ್ಠಿರಾಯ್ಡ್ ಔಷಧಿಯನ್ನು ಇಂಜೆಕ್ಷನ್  ರೂಪದಲ್ಲಿ ನೀಡುತ್ತಾರೆ. ಆದರೆ ಮಧುಮೇಹಿ ರೋಗಿಗಳಿಗೆ ಇದನ್ನು ನೀಡಲು ಕಷ್ಟವಾಗಬಹುದು. ನಿರಂತರ ಶಬ್ಧ ಮಾಲಿನ್ಯದ ಕಾರಣದಿಂದಾಗಿ ಕಿವಿಮೊರೆತ ಉಂಟಾಗಿದ್ದಲ್ಲಿ ಅಂತಹ ಶಬ್ಧ ಮಾಲಿನ್ಯ ಇರುವ ಕೆಲಸದ  ವಾತಾವರಣದಿಂದ ಶಾಶ್ವತವಾಗಿ ಹೊರ ಬರುವಂತೆ ಸೂಚಿಸಲಾಗುತ್ತದೆ. ಹೆಚ್ಚಿನ ಟಿನಿಟಸ್‍ಗಳನ್ನು ಈ ರೀತಿಯ ಆಕ್ಯುಪೇಷನಲ್ ಥೆರಪಿಯ ಮುಖಾಂತರ ಗುಣಪಡಿಸಲಾಗುತ್ತದೆ. ಒಟ್ಟಿನಲ್ಲಿ ಕಿವಿಮೊರೆತಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ ನಿವಾರಿಸಿದಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಿದೆ.


ಕೊನೆಮಾತು:

ಇತ್ತೀಚಿನ ದಿನಗಳಲ್ಲಿ ಶಬ್ಧ ಮಾಲಿನ್ಯ ಎನ್ನುವುದು ದಿನೇ ದಿನೇ ಹೆಚ್ಚುತ್ತಲೇ ಇದೆ.  ಹೆಚ್ಚುತ್ತಿರುವ ಶಬ್ಧ ಮಾಲಿನ್ಯದಿಂದಾಗಿ ಪರಿಸರ ಸಮತೋಲವನ್ನು ತಪ್ಪಿ ಹೋಗುತ್ತಿದೆ. ಈ ಭೂಮಂಡಲ ಎನ್ನುವುದು ಬರೀ ಮನುಷ್ಯರಿಗೆ ವಾಸಿಸಲು ಇರುವ  ಜಾಗವಲ್ಲ. ಪ್ರಾಣಿಪಕ್ಷಿ ಸಂಕುಲಗಳು ಬದುಕಲು ನಾವು ಅವಕಾಶ ನೀಡಬೇಕು. ಮೊದಲೆಲ್ಲಾ ಹೆಚ್ಚು ಕಂಡು ಬರುತ್ತಿದ್ದ ಗುಬ್ಬಚ್ಚಿಗಳು ಈಗ ಸಂಪೂರ್ಣವಾಗಿ ನಶಿಸಿ ಹೋಗಿದೆ. ಅತಿಯಾದ ವಿಕಿರಣ, ಶಬ್ಧ ಮಾಲಿನ್ಯ, ಟೆಲಿಫೋನ್ ಶಬ್ಧ ತೀತ ತರಂಗಗಳು ಬರೀ ಶಬ್ಧ ಮಾಲಿನ್ಯ ಮಾತ್ರವಲ್ಲದೆ, ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತಿದೆ. ಹೆಚ್ಚುತ್ತಿರುವ ಅಸಹನೆ, ಮಾನಸಿಕ ಕಿರಿಕಿರಿ, ಆತ್ಯಹತ್ಯಾ ಪ್ರಚೋದನೆ, ಪ್ರಾಣಿ ಸಂಕುಲಗಳ  ನಾಶ ಇವೆಲ್ಲದಕ್ಕೂ ಶಬ್ಧ ಮಾಲಿನ್ಯ ಮುಖ್ಯವಾದ ಕಾರಣ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಸೇರಿ ಆದಷ್ಟು ಶಬ್ಧಮಾಲಿನ್ಯವನ್ನು ತಡೆಗಟ್ಟಬೇಕಾಗಿದೆ. ಪ್ರಶಾಂತವಾದ ಶಬ್ಧ ಮಾಲಿನ್ಯ ರಹಿತವಾದ ವಾತಾವರಣ  ನಿರ್ಮಿಸಬೇಕಾದ ಅನಿವಾರ್ಯತೆ ಇದೆ. ಆಗ ಮಾತ್ರ ಈ ಭೂಮಿ ನಮಗೆ ಹಾಗೂ ಇತರ ಪ್ರಾಣಿ ಸಂಕುಲಗಳಿಗೆ ಬದುಕಲು ಯೋಗ್ಯವಾಗಲೂಬಹುದು. ಅದರಲ್ಲಿ ನಮ್ಮೆಲ್ಲರ ಒಳಿತು ಹಾಗೂ ಹಿತ ಅಡಗಿದೆ.


-ಡಾ|| ಮುರಲೀ ಮೋಹನ್‍ಚೂಂತಾರು

BDS, MDS,DNB,MOSRCSEd(U.K), FPFA, M.B.A

ಮೊ : 9845135787

drmuraleechoontharu@gmail.com


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم