||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೀತಾ ವಾಕ್ಯ: ಪರಸ್ಪರಂ ಭಾವಯಂತಃ- ಏನಿದರ ಅರ್ಥ?

ಗೀತಾ ವಾಕ್ಯ: ಪರಸ್ಪರಂ ಭಾವಯಂತಃ- ಏನಿದರ ಅರ್ಥ?


ಇದು ಗೀತಾ ವಾಕ್ಯ. ಹೊಂದಾಣಿಕೆಯೇ ಜೀವನ ಎನ್ನುವ ಪರಿಕಲ್ಪನೆ ಶ್ರೀಕೃಷ್ಣ ಸಾವಿರಾರು ವರ್ಷಗಳ ಹಿಂದೆಯೇ ತಿಳಿಸಿದ್ದಾನೆ. ಯಾವನು ತನ್ನ ಅನಿವಾರ್ಯತೆಯನ್ನು ಮಿಕ್ಕಿ ವಸ್ತು, ವಿಷಯಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತಾನೋ ಆತ, ಯಾರಿಗೆ ಯಾವುದರ ಅನಿವಾರ್ಯತೆಯಿದೆಯೋ ಎಂಬುದನ್ನರಿತು ತನ್ನಿಂದಾದ ಸಹಾಯವನ್ನು ಮಾಡುವನೋ ಅದೇ ಪರಸ್ಪರರನ್ನು ಅರಿತುಕೊಂಡು ಬಾಳುವ ರೀತಿ. ಇಲ್ಲಿ ಕೊಡುವವನೆಂಬ ಅಹಂಕಾರವೂ ಇರಬಾರದು. ಕೊಳ್ಳುವವನೆಂಬ ಕೀಳರಿಮೆಯೂ ಇರಬಾರದು. ಯಾಕೆಂದರೆ ಈ ಪ್ರಪಂಚದಲ್ಲಿ ಕೊಡು ಕೊಳ್ಳುವಿಕೆ ಪ್ರಕ್ರಿಯೆ ಇಲ್ಲದೆ ಒಂದು ಜೀವಿಯೂ ಒಂದು ಕ್ಷಣವೂ ಬದುಕುಳಿಯದು. ಯಾರೊಬ್ಬರೂ ಸ್ವತಂತ್ರರಲ್ಲ ಪರಮಾತ್ಮನ ಹೊರತಾಗಿ. ನನ್ನಲ್ಲಿ ಕೊಡುವ ಶಕ್ತಿ ಇದೆ ಎಂದರೆ ಅದು ಪರಮಾತ್ಮನ ಕೊಡುಗೆ. ಅಹಂಕಾರಕ್ಕೆ ಅಲ್ಲಿ ಅವಕಾಶವೇ? ಸಲ್ಲದು.  ಅದೇರೀತಿ ಪರಸ್ಪರಂ ಭಾವಯಂತಃ ಅಂದರೆ ವಸ್ತು, ವಿಷಯಗಳನ್ನು ಕೊಂಡು ಕೊಳ್ಳುವಲ್ಲಿ ಯಾವುದೇ ತಪ್ಪಿಲ್ಲ ಮಾತ್ರವಲ್ಲ ಅವಶ್ಯವೇ.  


ಯಾರಲ್ಲಿಯೂ ಸಿರಿತನವೆಷ್ಟೇ ಇರಲಿ ಅಥವಾ ರಾಜನೇ ಆಗಿರಲಿ ಆತ ಕೂಡ ಇನ್ನೊಬ್ಬರನ್ನು ಅರಿತು ಬಾಳಿದರೆ ಮಾತ್ರ ಸುಖ. ಅದಿಲ್ಲ ತನ್ನ ಸುಖವನ್ನೇ ಪ್ರಧಾನವೆಂದರಿತರೆ ಅದು ದುಃಖವನ್ನೇ ತರುವುದು. ಸರ್ವಜ್ಞ ಹೇಳಿದ್ದೂ ಅದನ್ನೇ.  ಇಚ್ಛೆಯನರಿತು ನಡೆವ ಸತಿ ಇದ್ದರೆ ಸ್ವರ್ಗಸುಖವೆಂದು. ಆದರೆ ಇದು ಪತಿಗೂ ಅನ್ವಯವಾಗುತ್ತದೆ. ಯಾವ ಸಂಸಾರದಲ್ಲಿ ಗಂಡನಿಗೆ ಹೆಂಡತಿ, ಹೆಂಡತಿಗೆ ಗಂಡ,  ಹೆತ್ತವರಿಗೆ ಮಕ್ಕಳು, ಮಕ್ಕಳಿಗೆ ಹೆತ್ತವರು ಹಾಗೆಯೇ  ಹಿರಿಯರು ಕಿರಿಯರು ಪರಸ್ಪರ ಭಾವನೆಗಳನ್ನು, ಅವಶ್ಯಕತೆಗಳನ್ನು, ಅನಿವಾರ್ಯತೆಗಳನ್ನು ಅರಿತು ಬದುಕಬೇಕೆಂಬುದೇ ಈ ವಾಕ್ಯದ ಆಶಯ. ಯಾವುದೇ ಒಂದು ಯಂತ್ರವಾದರೂ ಅದರ ಎಲ್ಲ ಭಾಗಗಳೂ ಪರಸ್ಪರ ಹೊಂದಿಕೊಂಡಿರುವಾಗ  ಸರಾಗವಾಗಿ ಕಾರ್ಯ ನಿರ್ವಹಿಸುತ್ತದೆ. ಯಾವುದಾದರೊಂದು ಭಾಗ ತಟಸ್ಥವಾದರೆ ಪೂರ್ಣ ಯಂತ್ರವೇ ಸ್ಥಗಿತವಾಗುವುದು. ಅಂತೆಯೇ ಮನುಜನ ವ್ಯವಹಾರವೂ. ಆರೋಗ್ಯದ ಕೊರತೆಯಾದಾಗ   ವೈದ್ಯರ ಕೊಡುಗೆ, ರಕ್ಷಣೆಯ ಕೊರತೆಯಾದಾಗ ರಕ್ಷಕರ ಕೊಡುಗೆ, ಜ್ಞಾನದ ಕೊರತೆಯಾದಾಗ ಜ್ಞಾನಿಗಳ ಕೊಡುಗೆ ಅಂತೆಯೇ ದೇವತೆಗಳಿಗೆ ಯಜ್ಞ ಯಾಗದಿಂದ ಸಂತೃಪ್ತಿ ಗೊಳಿಸಿದರೆ, ಆ ದೇವತೆಗಳು ಕಾಲಕಾಲಕ್ಕೆ ಮಳೆ ಬೆಳೆಗಳನ್ನು ಕರುಣಿಸಿದರೆ, ಅದರಿಂದ ಜೀವಕುಲ ಬದುಕಿ ಬಾಳಿದರೆ ಅದೊಂದು ವ್ಯವಸ್ಥಿತವಾದ ವ್ಯವಹಾರವಾಗುತ್ತದೆ. ಯಾವಾಗ ನಾವು ಇದನ್ನು ನಮ್ಮ ಜಿವನದಲ್ಲಿ ಅಳವಡಿಸಲಾರದೆ ಹೋದೆವೋ ಆಗಲೇ ನಮ್ಮ ಅಧೋಗತಿಯ ಪ್ರಾರಂಭ.    


ನಾವು ಸಣ್ಣವರಿರುವಾಗ ಶಾಲೆಯ ಪಠ್ಯದಲ್ಲಿ ' ನೀ ನನಗಿದ್ದರೆ ನಾ ನಿನಗೆ' ಎಂಬ ಒಂದು ಪದ್ಯವಿತ್ತು ಅದರಲ್ಲಿ ಕೂಡ ನೀತಿ ಕೃಷ್ಣನದ್ದೇ. ಪರಸ್ಪರಂ ಭಾವಯಂತಃ.... ಎಷ್ಟೊಂದು ವೈಜ್ಞಾನಿಕ ಸತ್ಯ ಈ ಒಂದು ವಾಕ್ಯದಲ್ಲಿ ಅಡಗಿದೆ ಎಂದರೆ ಇದನ್ನು ಬಿಟ್ಟು ಜೀವನ ಕನಸಿನಲ್ಲೂ ಎಣಿಸಲಾಗದು. ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ ಮಾಡುವಾಗ ಈ ಮಾತು ಬಹಳ ಹೊಂದಿ ಬರುತ್ತದೆ. ವೈದ್ಯರು, ಸಹಾಯಕರು, ದಾದಿಯರು, ರೋಗಿ.. ಇವರು ಯಾರೂ ಮಾತಾಡುವುದಿಲ್ಲ. ಮುಖಕ್ಕೆ ಮಾಸ್ಕ್ ಹಾಕಿಕೊಂಡು ಶಸ್ತ್ರಚಿಕಿತ್ಸೆ ಮುಂದುವರಿಸುತ್ತಾರೆ. ಹಾಗಿರುವಾಗ ಶಸ್ತ್ರಚಿಕಿತ್ಸೆ ಮಾಡುವ ಮುಖ್ಯ ವೈದ್ಯನ ಅವಶ್ಯಕತೆಗನುಗುಣವಾಗಿ ಯಾವ ಯಾವ ಶಸ್ತ್ರಗಳು ಬೇಕು ಯಾವ ಯಾವ ಸೂಚನೆಗಳನ್ನು ಅನುಸರಿಸಬೇಕು ಎಂಬುದನ್ನೆಲ್ಲ ಬರಿದೆ ವೈದ್ಯನ ಮುಖಭಾವ ಅಥವಾ ಶಸ್ತ್ರಚಿಕಿತ್ಸೆಯ ಹಂತಗಳಿಗನುಗುಣವಾಗಿ  ಭಾವನೆಗಳಿಂದಲೇ ಗ್ರಹಿಸಿ ಒದಗಿಸಿಕೊಡಬೇಕಾಗುತ್ತದೆ. ಇದನ್ನು ನುರಿತ ವೈದ್ಯರು ಮತ್ತು ಸಹಾಯಕರು ಮಾತ್ರ ಯಶಸ್ವಿಯಾಗಿ ನಿರ್ಶಹಿಸುತ್ತಾರೆ. ಅಂದರೆ ಇಲ್ಲಿ ಪ್ರತಿಯೊಬ್ಬರೂ ಪರಸ್ಪರಂ ಭಾವಯಂತಃ... ಎನ್ನುವ ಸೂತ್ರಕ್ಕಂಟಿಕೊಂಡಿರಲೇಬೇಕು ಆದಾಗಲೇ ರೋಗಿಯು ಬದುಕು ಮುಂದುವರೆದೀತು, ವೈದ್ಯನ ಶ್ರಮಕ್ಕೆ ಬೆಲೆ ಬಂದೀತು. ಅದಿಲ್ಲದೆ ಒಬ್ಬನ ಒಂದು ಕ್ಷಣದ ನ್ಯೂನತೆ ಕೂಡ ಪ್ರಾಣಕ್ಕೇ ಸಂಚಕಾರ ತಂದೀತು.   


ಇವತ್ತು ಪ್ರಪಂಚದಲ್ಲಿ ಈ ಸೂತ್ರವನ್ನು ಪ್ರತಿಯೊಬ್ಬರೂ ಪಾಲಿಸಿದರೆ ಭೂಲೋಕವೆಂಬುದು ಸ್ವರ್ಗಕ್ಕಿಂತಲೂ ಸುಖವನ್ನು ತರುವುದರಲ್ಲಿ ಸಂಶಯವಿಲ್ಲ. ಆದರೆ ಇದು ಸಾಧ್ಯವೇ? ಯಾಕೆಂದರೆ ಇನ್ನೊಬ್ಬರನ್ನು ಹಣಿಯುವುದರಲ್ಲೇ ಎಲ್ಲರೂ ತೊಡಗಿಕೊಂಡಾಗ ಹೊಂದಾಣಿಕೆಯ ಪ್ರಶ್ನೆಯೇ ಬಾರದು. ಒಂದೇ ಮನೆಯೊಳಗೆ ಹಲವಾರು ಅಭಿಪ್ರಾಯಗಳು, ಒಂದೇ ದೇಶದಲ್ಲಿ ಪರಸ್ಪರ ಪಕ್ಷಗಳನ್ನು ದೂರಿ ರಾಜಕೀಯದಲ್ಲಿ ರಾಡಿ ಎಬ್ಬಿಸುವ ಸ್ವಾರ್ಥದ ಪ್ರವೃತ್ತಿಗಳು. ದೇಶ ದೇಶಗಳೊಳಗೆ ಜಗಳಗಳು. ಅಂತು ಪರಸ್ಪರರರನ್ನು ಅರಿತುಕೊಳ್ಳುತ್ತಾರೆ ಆದರೆ ಉದ್ಧಾರಕ್ಕೋಸ್ಕರ ಅಲ್ಲ ಬದಲಾಗಿ ಅನ್ಯರ ದೌರ್ಬಲ್ಯಗಳ ಮೇಲೆ ಸವಾರಿ ಮಾಡಲೆಂದು. ಇವತ್ತಿನ ಅಂದರೆ ವರ್ತಮಾನದಲ್ಲಿ ಭಗವದ್ಗೀತೆಯ ಇಂಥ ಉದಾತ್ತ ವಿಚಾರಗಳನ್ನು ಮಕ್ಕಳಿಗೆ ಮನನ ಮಾಡಿಸುವ ಅವಶ್ಯಕತೆ ಖಂಡಿತ ಬಹಳಷ್ಟಿದೆ. ಯಾವ ವಿದ್ಯಾರ್ಥಿ ಭಗವದ್ಗೀತೆ ಎಂಬಂಥ ಜೀವನ ಧರ್ಮವನ್ನು ಅಭ್ಯಾಸ ಮಾಡುತ್ತಾನೋ, ಯಾರಿಗೆ ಅದು ಮನನವಾಗಿದೆಯೋ ಅಂತಹವನು ನೂರಕ್ಕೆ ನೂರು ಪಾಲು ಒಬ್ಬ ಸತ್ಪ್ರಜೆಯಾಗಿ,  ಲೋಕೋದ್ಧಾರಕನಾಗಿ, ಜೀವನವನ್ನು ಸಾರ್ಥಕಗೊಳಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಜೈ ಶ್ರೀಕೃಷ್ಣ 

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post