|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಷ್ಟ್ರೀಯ ಯುವ ದಿನಾಚರಣೆ: ಜಾಗೃತ ಯುವ ಭಾರತದ ಅಂತಃಶಕ್ತಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನ

ರಾಷ್ಟ್ರೀಯ ಯುವ ದಿನಾಚರಣೆ: ಜಾಗೃತ ಯುವ ಭಾರತದ ಅಂತಃಶಕ್ತಿ ಸ್ವಾಮಿ ವಿವೇಕಾನಂದರ 159ನೇ ಜನ್ಮದಿನ



ಹಿಂದೂ ಧರ್ಮದ ಹಿರಿಮೆಯನ್ನು ಜಗದುದ್ದಗಲಕ್ಕೆ ಪಸರಿಸಿ, ಭಾರತದ ನವಯುವಚೈತನ್ಯವನ್ನು, ಆಧ್ಯಾತ್ಮಿಕ ಶಕ್ತಿಯನ್ನೂ ಮುಗಿಲೆತ್ತರಕ್ಕೆ ಎತ್ತರಿಸಿದ ವೀರ ಸನ್ಯಾಸಿಯಾದ ಸ್ವಾಮಿ ವಿವೇಕಾನಂದರ  ಜನ್ಮದಿನವಿಂದು.


1985ರ ನಂತರ ಭಾರತದಲ್ಲಿ ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬವನ್ನು "ರಾಷ್ಟ್ರೀಯ ಯುವ ದಿನ" ಎಂದು ಘೋಷಿಸಲಾಗಿದ್ದು, ಈ ದಿನ ದೇಶದಾದ್ಯಂತ ಶಾಲಾ, ಕಾಲೇಜುಗಳಲ್ಲಿ ಅಲ್ಲಲ್ಲಿ ಮೆರವಣಿಗೆ, ಪ್ರಬಂಧ ಸ್ಪರ್ಧೆ, ಭಾಷಣ, ಚರ್ಚಾಕೂಟ, ಯುವಜನೋತ್ಸವ ಹೀಗೆ ಅನೇಕ ಕಾರ್ಯಕ್ರಮಗಳು ರೂಢಿಯಲ್ಲಿದೆ.


ಯುವ ಶಕ್ತಿಸಾಮರ್ಥ್ಯದ ಬಗ್ಗೆ ಅಪಾರಅರಿವು ಹೊಂದಿದ್ದ ವಿವೇಕಾನಂದರು, ತಮ್ಮೆಲ್ಲ ಬೋಧನೆಗಳಲ್ಲಿ ಯುವಜನತೆ ಮತ್ತು ದೇಶವನ್ನು ಕೇಂದ್ರೀಕರಿಸುತ್ತಿದ್ದರು.


ಸ್ವಾಮಿ ವಿವೇಕಾನಂದರ ಸನ್ಯಾಸ ಸ್ವೀಕಾರದ ಮೊದಲು ಪೂರ್ವಾಶ್ರಮದ ಹೆಸರು ನರೇಂದ್ರನಾಥ ದತ್ತ, 1863 ನೇ ಜನವರಿ 12 ರಂದು ಕಲ್ಕತ್ತಾದಲ್ಲಿ ಭುವನೇಶ್ವರಿ ದೇವಿ ಹಾಗೂ ವಿಶ್ವನಾಥದತ್ತರ ಮಗನಾಗಿ ಜನಿಸಿದ ಇವರು, ಬಾಲ್ಯದಲ್ಲಿಯೇ ತನ್ನ ತಾಯಿಯ ಮೂಲಕ ರಾಮಯಣ, ಮಹಾಭಾರತ ಪುರಾಣಗಳನ್ನು ತಿಳಿದುಕೊಂಡಿದ್ದರು,


ಆ ಮೂಲಕವಾಗಿ ನರೇಂದ್ರನಿಗೆ ದೈವಭಕ್ತಿ, ಆತ್ಮವಿಶ್ವಾಸ, ದೇಶಪ್ರೇಮ, ಸದೃಢತೆ ಜನ್ಮದತ್ತವಾಗಿ ಲಭಿಸಿತ್ತು.


ಬಾಲ್ಯದಲ್ಲೇ ನರೇಂದ್ರ ಬಹಳ ತುಂಟನಾಗಿದ್ದ  ಜೊತೆಗೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ತೀವ್ರವಾದ ಆಸಕ್ತಿಯೂ ಇತ್ತು. ರಾಮ-ಸೀತೆ ಮತ್ತು ಶಿವನ ಪ್ರತಿಮೆಗಳನ್ನು ಪೂಜಿಸುವುದಾಗಲೀ, ಧ್ಯಾನಿಸುವುದಾಗಲೀ ಇವನಿಗೊಂದು ಆಟವಾಗಿತ್ತು. ಇವನ ತಾಯಿ ಹೇಳುತ್ತಿದ್ದ ರಾಮಾಯಣ, ಮಹಾಭಾರತಗಳ ಕಥೆಗಳು ಇವನ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿದವು. ಧೈರ್ಯ, ಬಡವರ ಬಗ್ಗೆ ಕನಿಕರ, ಸಂನ್ಯಾಸಿಗಳನ್ನು ಕಂಡರೆ ಅಪಾರ ಆಕರ್ಷಣೆ ಈ ಲಕ್ಷಣಗಳು ಇವನಲ್ಲಿ ಸಹಜವಾಗಿ ಕಾಣಿಸಿಕೊಂಡವು.


 ನರೇಂದನು ಚಿಕ್ಕವನಾಗಿದ್ದಾಗ ತಾಯಿಗೆ ಹನುಮಂತ ಎಲ್ಲಿದ್ದಾನೆ ತೋರಿಸು ಎಂದು ಹಠ ಹಿಡಿದನು, ಆಗ ತಾಯಿ ಊರಂಚಿನ ಬಾಳೆಯ ತೋಟದಲ್ಲಿದ್ದಾನೆ ಎಂದು ಹೇಳಿದರೆ ಇವ ಸುಮ್ಮನಿದ್ದಾನು ಎಂದು ಸುಳ್ಳು ಹೇಳಿದರು. ಆದರೆ ತಾಯಿಯ ಮಾತನ್ನು ವೇದ ವಾಕ್ಯ ಎಂದು ತಿಳಿದ ನರೇಂದ್ರ ಬಾಳೆಯ ತೋಟಕ್ಕೆ ಹೋಗಿ ಹುಡುಕಾಡಿದನು, ಹನುಮನಿಗಾಗಿ ಕಾದು ಕುಳಿತನು ಸಂಜೆಯಾಯಿತು, ರಾತ್ರಿಯಾಯಿತು ವಿಚಲಿತನಾಗದೆ ಮಾರುತಿ ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದನು.


ನಂತರ ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಹುಡುಕಾಡಿದ ತಾಯಿ ಭುವನೇಶ್ವರಿ ದೇವಿ ಬಾಳೆಯ ತೋಟಕ್ಕೆ ಹೋಗಿ, ಶ್ರೀರಾಮರ ಆಣತಿಯ ಮೇರೆಗೆ ಹನುಮ ಇಂದು ಬೇರೆಡೆ ಹೋಗಿದ್ದಾನೆ ಇನ್ನೊಂದು ದಿನ ಕಾಣಿಸುತ್ತಾನೆ ಬಾ ಎಂದು ಮಗನನ್ನು ಸಮಾಧಾನ ಮಾಡಿ ಮನೆಗೆ ಕರೆತಂದರು. ತನ್ನ ಮಾತಿನ ಬಗ್ಗೆ, ದೇವರ ಬಗ್ಗೆ ಮಗನಿಗಿರುವ ನಂಬಿಕೆಗೆ ತಾಯಿ ಆಶ್ಚರ್ಯಚಕಿತರಾದರು.


ಹೀಗೆ ಭಗವಂತನ ಅನ್ವೇಷಣೆಯಲ್ಲಿದ್ದ ನರೇಂದ್ರನಿಗೆ ಭಗವಂತನಿದ್ದಾನೆಂಬ ಉತ್ತರ ಸಿಕ್ಕಿದ್ದು ಶ್ರೀರಾಮಕೃಷ್ಣರ ಶಿಷ್ಯರಾದ ಬಳಿಕ. ನರೇಂದ್ರರನ್ನು 1886ರಲ್ಲಿ ಪರಮಹಂಸರು ದೈವಸಾಕ್ಷಾತ್ಕಾರ ಮಾಡಿಸಿದ್ದರು. 1887ರ ಜನವರಿಯಲ್ಲಿ ವಿರಾಜಹೋಮದ ಮೂಲಕ ಸನ್ಯಾಸ ಸ್ವೀಕರಿಸಿದ ನರೇಂದ್ರರು ಮೊದಲಿಗೆ ಸಚ್ಚಿದಾನಂದ ಎಂಬ ಹೆಸರು ಪಡೆದರು, ನಂತರ ವಿವಿಧೀಶಾನಂದ ಎಂಬ ಹೆಸರು ಪಡೆದು ದೇಶ ಪರ್ಯಟನೆ ಕೈಗೊಂಡರು. 1897 ರಲ್ಲಿ ಕನ್ಯಾಕುಮಾರಿಗೆ ಬಂದು ಕೊರೆಯುವ ಚಳಿಯಲ್ಲಿ ಸಮುದ್ರದಲ್ಲಿ ಈಜಿ ಕನ್ಯಾಕುಮಾರಿಯ ಬೆಟ್ಟದ ಮೇಲೆ ಶಿಲೆಯಂತೆ ನಿಂತು ಅಖಂಡ ಭಾರತವನ್ನು ಅಡಿಯಿಂದ ಮುಡಿಯವರೆಗೆ ದರ್ಶಿಸಿದರು.  


ನಂತರ ಅಮೆರಿಕದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರ್ಧಾರ ಮಾಡಿದರು. ಆಗ ಆ ವಿದೇಶ ಪ್ರವಾಸಕ್ಕೆ ನೆರವು ನೀಡಿದ ಖೇತಡಿಯ ಮಹಾರಾಜ ಅಜಿತ್‌ಸಿಂಹ  ವಿವಿಧೀಶಾನಂದ(ನರೇಂದ್ರ)ರಿಗೆ ವಿವೇಕಾನಂದ ಎಂಬ ಹೆಸರು ನೀಡಿದರು.


ವಿವೇಕಾನಂದರು 1893ರ ಸೆಪ್ಟೆಂಬರ್ 11ರಂದು ಸೋಮವಾರ ಚಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೆಲವೇ ನಿಮಿಷಗಳ ಭಾಷಣ ಅವರನ್ನು ಯುಗಪುರುಷನನ್ನಾಗಿ ಮಾರ್ಪಡಿಸಿತು.


‘ಅಮೇರಿಕಾದ ಸಹೋದರ ಸಹೋದರಿಯರೇ’ ಎಂಬ ಸಂಬೋಧನೆಯೊಂದಿಗೆ ಪ್ರಾರಂಭವಾದ ವಿವೇಕಾನಂದ ಭಾಷಣ ಅಲ್ಲಿನೆರೆದಿದ್ದ ಅಸಂಖ್ಯ ಜನರ ಚಿತ್ತವನ್ನು ಗೆದ್ದಿತ್ತು. ಪಾಶ್ಚಾತ್ಯರಿಂದ ‘ವಿಚಿತ್ರ ಧರ್ಮ’ ಎಂದು ಕರೆಯಿಸಿಕೊಂಡಿದ್ದ ಹಿಂದೂ ಧರ್ಮದ ನಿಜವಾದ ಅರ್ಥವನ್ನು,ಸಿದ್ಧಾಂತಗಳನ್ನು ಪಾಶ್ಚಾತ್ಯರಿಗೆ ಮನದಟ್ಟು ಮಾಡುವಲ್ಲಿ ಸ್ವಾಮಿ ವಿವೇಕಾನಂದ ಯಶಸ್ವಿಯಾದರು.


ಸ್ವಾಮೀಜಿ ಬದುಕಿದ್ದು, ಕೇವಲ 39 ವರ್ಷಗಳಾದರೂ ಅವರ ಪ್ರಭಾವ ಮಾತ್ರ ಭರತ ಭೂಮಿ ಇರುವವರೆಗೂ


ದೇಶ, ವಿದೇಶದ ಅನೇಕ ಇತಿಹಾಸಕಾರರು ಹಾಗೂ ಲೇಖಕರು ಇವರ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ಭಾರತದ ಅನೇಕ ಸ್ವಾತಂತ್ರ್ಯ ಹೋರಾಟಗಾರರು ಇವರಿಂದ ಪ್ರಭಾವಿತರಾಗಿದ್ದರು.


ಸುಭಾಷ್‌ಚಂದ್ರ ಬೋಸ್‌, ಅರವಿಂದೋ ಘೋಷ್‌, ಭಾಘ್‌ ಜತಿನ್‌, ಮಹಾತ್ಮ ಗಾಂಧಿ, ರವಿಂದ್ರನಾಥ ಠಾಗೋರ್‌, ಚಕ್ರವರ್ತಿ ರಾಜಗೋಪಾಲಚಾರಿ, ಜವಾಹರ ಲಾಲ್‌ ನೆಹರು, ಬಾಲ ಗಂಗಾಧರ ತಿಳಕ್‌, ಜಮ್ಷಡ್‌ಜೀ ಟಾಟಾ, ನಿಕೋಲಾ ಟೆಸ್ಲಾ, ಸಾರಾ ಬರ್ಮಹಾರ್ಡಿಟ್‌, ಎಮ್ಮಾ ಕ್ಲೇವ್‌, ಜಗದೀಶ್‌ ಚಂದ್ರ ಬೋಸ್‌, ಆ್ಯನಿಬೆಸಂಟ್‌, ರೊಮಿನ್‌ ರೊಲಾಂಡ್‌, ಇವರಿಂದ ಪ್ರಭಾವಿತರಾಗಿದ್ದರು.


ರವೀಂದ್ರನಾಥ ಠಾಗೂರರು ಒಮ್ಮೆ ಹೀಗೆ ವಿವರಿಸಿದ್ದರು, 'ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀ ವಿವೇಕಾನಂದರನ್ನು ಓದಿ' ಎಂದು. ಅಂದರೆ ಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ.


ಹೀಗಾಗಿಯೇ ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ, ವಿವೇಕವಾಣಿಯನ್ನು ಕೇಳುತ್ತಿದ್ದರೆ, ವಿವೇಕಾನಂದರ ಸಂದೇಶಗಳನ್ನು ಓದುತ್ತಿದ್ದರೆ, ಮೈ ಪುಳಕಿತವಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ತನುಮನಗಳಲ್ಲಿ ಹೊಸ ಚೈತನ್ಯ ಮೂಡುತ್ತದೆ. ಇಂಥ ಮಹಾನ್ ವ್ಯಕ್ತಿಯ ಜೀವನ ಚರಿತ್ರೆ ಓದಿದರೆ ಯುವಕರಲ್ಲಿ ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ  ಮೂಡುವುದರಲ್ಲಿ ಸಂಶಯವಿಲ್ಲ.



-ಕೆ ರಾಘವೇಂದ್ರ ಭಟ್


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post