|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹುತಾತ್ಮ ಎಂದಾಗ ನನಗೆ ನೆನಪಾಗುವುದು ಮಹಾತ್ಮ ಗಾಂಧಿ, ಜೊತೆಗೆ ಪುತ್ತೂರು ಅಜ್ಜನವರು

ಹುತಾತ್ಮ ಎಂದಾಗ ನನಗೆ ನೆನಪಾಗುವುದು ಮಹಾತ್ಮ ಗಾಂಧಿ, ಜೊತೆಗೆ ಪುತ್ತೂರು ಅಜ್ಜನವರು

ಇಂದು ಹುತಾತ್ಮರ ದಿನ


ನಾನು ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಸೇರುವ ಮೊದಲಿನ ದಿನಗಳು. ಪುತ್ತೂರು ಅಜ್ಜನವರ ಪರಿಚಯ ಆಗಿ ಸ್ವಲ್ಪ ಸಮಯ ಕಳೆದು ಹೋಗಿತ್ತು. ಆಗಿನ ನನ್ನ ಸ್ಥಿತಿ ಹೇಗಿತ್ತೆಂದರೆ, ಹದಿಹರೆಯದ ತಲ್ಲಣಗಳು,  ಆತಂಕಗಳು, ಒತ್ತಡಗಳು, ಬೌದ್ಧಿಕತೆಯ ಅಹಂಕಾರ ಎಲ್ಲವೂ ಸೇರಿ ಉಂಟಾಗಿದ್ದ ಒಂದು ಮನಸ್ಥಿತಿ.


ಒಂದು ದಿನ ಪುತ್ತೂರಿನಲ್ಲಿ ಪೇಟೆಯ ಒಳಗೆ ಅವರ ಭೇಟಿ ಆಯಿತು. ನಂತರ ಅವರೇ ಹೇಳಿದರು" ನಾವು ಅಲ್ಲಿಗೆ ಹೋಗುವ" ಎಂದು ಹೇಳುತ್ತಲೇ ಪುತ್ತೂರಿನ ವೆಂಕಟರಮಣ ದೇವಸ್ಥಾನದ ಹೊರಜಗಲಿಯ ಬಳಿ ಕರೆದುಕೊಂಡು ಹೋಗಿ ಕುಳ್ಳಿರಿಸಿದರು. ಅದು ಹೇಗಿತ್ತೆಂದರೆ ತಾಯಿಯೊಬ್ಬಳು ಜೋಪಾನವಾಗಿ ತನ್ನ ಮಗುವನ್ನು ಕರೆದು ಕೊಂಡು ಹೋದಂತೆ ಇತ್ತು." ಇಲ್ಲಿ ಕುಳಿತುಕೋ" ಎಂದು ಹೇಳಿದರು. ಕುಳಿತುಕೊಂಡೆ. ನಂತರ ಕೇಳಿದರು- "ಮನಸ್ಸು ಹೇಗುಂಟು? "... ನಾನೆಂದೆ- "ತುಂಬ ಒತ್ತಡಗಳು. ಮನಸ್ಸು ಒಂದು ವಿಷಯದಲ್ಲಿ ಏಕಾಗ್ರತೆ ಸಾಧಿಸುವುದಿಲ್ಲ. ತಲೆಯೆಲ್ಲ ಹಿಡಿದುಕೊಂಡಂತೆ ಆಗುತ್ತದೆ". ತಕ್ಷಣ ಅದಕ್ಕೆ ಅವರು ಏನನ್ನೂ ಹೇಳಲಿಲ್ಲ. ಬದಲಿಗೆ ಒಂದು ಕಿರು ಹೊತ್ತಗೆಯನ್ನು ನನ್ನ ಕೈಗಿತ್ತು "ಇದನ್ನು ಓದು" ಎಂದರು. ಆ ಹೊತ್ತಗೆಯ ಮುಖ ಪುಟದಲ್ಲಿ  ಮಹಾತ್ಮ ಗಾಂಧೀಜಿಯವರು ಕುಳಿತುಕೊಂಡು ಕಣ್ಣು ಮುಚ್ಚಿ ಧ್ಯಾನಸ್ಥರಾದ ಭಾವಚಿತ್ರವಿತ್ತು. ಪುಸ್ತಕದ ಹೆಸರು "ಪ್ರಾರ್ಥನೆ" ಎಂದು ಬರೆದಿತ್ತು. ಒಳಪುಟದಲ್ಲಿ ನೋಡಿದಾಗ ಅದನ್ನು ಮುದ್ರಿಸಿ ಹಂಚಿ ದವರು" ಕೂಡಿಗೆ ವಿಠಲ  ಶೆಣೈ ಮತ್ತು ಗೆಳೆಯರು" ಎಂದು ಬರೆದಿತ್ತು. ನಂತರ ಸ್ವಲ್ಪ ಹೊತ್ತು ಅವರು ಮೌನದಲ್ಲಿ ಕುಳಿತರು. ನಾನೂ ಮೌನದಲ್ಲಿ ಕುಳಿತೆ. ಮತ್ತೆ ಸ್ವಲ್ಪ ಹೊತ್ತಿನ ನಂತರ ಇಬ್ಬರೂ ಎದ್ದು  ಹೊರಟೆವು. 


ಆ ಪುಸ್ತಕವು ನಾನು ಕೇಳಿದ ಪ್ರಶ್ನೆಗೆ, ಮತ್ತು ನನ್ನ ಬದುಕಿಗೆ ಪೂಜ್ಯ ಅಜ್ಜನವರು ಕೊಟ್ಟ ಉತ್ತರ ಮತ್ತು ಪರಿಹಾರ ಆಗಿತ್ತು.  ಮಹಾತ್ಮ ಗಾಂಧೀಜಿಯವರು ಪ್ರಾರ್ಥನೆಯ ಕುರಿತಾಗಿ ಹೇಳಿದ ಎಲ್ಲಾ ಮಾತುಗಳು ಆ ಹೊತ್ತಗೆಯಲ್ಲಿ ಸಂಗ್ರಹ ರೂಪದಲ್ಲಿದ್ದವು. ಬಹುಶಹ ಮನಶ್ಯಾಂತಿಯನ್ನು ಅರಸುವ ಪ್ರತಿಯೊಬ್ಬನೂ ಕೂಡ ಎಲ್ಲಿಂದ ಆರಂಭಿಸಬೇಕು ಎಂದು ಕೇಳಿದರೆ, ಪ್ರಾರ್ಥನೆಯಿಂದ ಎಂಬುದೇ ಎಲ್ಲಾ ಮಹಾತ್ಮರ ಉತ್ತರ.  ಆದರೆ ಪ್ರಾರ್ಥನೆ ಎಂದರೇನು? ಸರಿಯಾದ ಪ್ರಾರ್ಥನೆ ಯಾವುದು? ಎಂದೆಲ್ಲಾ ಪ್ರಶ್ನೆಗಳು  ನಮ್ಮಲ್ಲಿ ಹುಟ್ಟಿಕೊಳ್ಳುವುದು ಸಹಜ." ಪ್ರಾರ್ಥನೆಯೆಂದರೆ ಬೇಡುವುದು ಅಲ್ಲ, ನಮ್ಮ ದೌರ್ಬಲ್ಯದ ಅರಿವು. ಪ್ರಾರ್ಥನೆ ಇಲ್ಲದೆ ಇದ್ದರೆ ನಾನು ಹುಚ್ಚ ನಾಗುತ್ತಿದ್ದೆ. ನನ್ನನ್ನು ಪ್ರತಿಯೊಂದು ಸಂಕಷ್ಟಗಳಿಂದ ಪಾರು ಮಾಡಿರುವುದು ಪ್ರಾರ್ಥನೆ. ಹೃದಯದ ಅಂತರಾಳದಿಂದ ನಾನು ಮಾಡಿದ ಪ್ರಾರ್ಥನೆ ಒಮ್ಮೆಯೂ ಕೂಡ ಉತ್ತರಿಸದೇ ಹೋದ ಪ್ರಸಂಗ ನನಗೆ ನೆನಪಿಲ್ಲ." ಇತ್ಯಾದಿ ಗಾಂಧೀಜಿಯವರ ಮಾತುಗಳು ನಿತ್ಯ ಮನನ ಮಾಡಬೇಕಾದ ವಿಚಾರಗಳು. ಗಾಂಧೀಜಿಯವರು ಈ ಕುರಿತು, ಮಗುವಿಗೆ ತಿಳಿ ಹೇಳುವಂತೆ ಆಡಿದ ಮಾತುಗಳ ಸಂಗ್ರಹ ರೂಪ ನನ್ನ ಮನಸ್ಸಿನಲ್ಲಿ ಬದಲಾವಣೆಯನ್ನು ತರುವುದಕ್ಕೆ ತೊಡಗಿದವು. ನಂತರದ ದಿನಗಳಲ್ಲಿ ಪೂಜ್ಯ ಅಜ್ಜನವರು ಮಾತ್ರವಲ್ಲ, ಮಹಾತ್ಮಗಾಂಧಿಯವರು ಕೂಡ ನಾವು ತಿಳಿದುಕೊಂಡಂತೆ ಒಬ್ಬ ವ್ಯಕ್ತಿಯಲ್ಲ, ಒಂದು ಶಕ್ತಿ ಎಂಬ ಅರಿವು ಕೂಡ ಉಂಟಾಯಿತು. ಪೂಜ್ಯ ಅಜ್ಜ ನವರಿಗೂ (ರಬ್ಬಿ ನಿತ್ಯಾನಂದಂ) ಮಹಾತ್ಮ ಗಾಂಧೀಜಿಯವರಿಗೂ ಇರುವ ಅವಿನಾಭಾವ ಅಂತ ಸಂಬಂಧದ ಎಳೆಗಳು, ಅಜ್ಜನವರ ಮಾತಿನ ಮೂಲಕ ಮತ್ತು ಅಜ್ಜ ನವರಿಂದ ಉದ್ದೀಪಿತರಾದ, ಅವರ ಸಾನ್ನಿಧ್ಯದಲ್ಲಿ ಜ್ಞಾನವೆಂಬ ಅಗಾಧವಾದ ಸಾಗರದಲ್ಲಿ ಮುಳುಗಿ ಮುತ್ತುರತ್ನಗಳನ್ನು ಕಂಡ ಡಾ. ದೇವದಾಸ್ ನಾಯಕ್ (ಪುತ್ತೂರಿನ ಮುಖ್ಯರಸ್ತೆಯಲ್ಲಿ ಶಾಫಿ ಬಿಲ್ಡಿಂಗ್ ಎದುರುಗಡೆ ಸಣ್ಣ ಚಿಕಿತ್ಸಾಲಯವನ್ನು ಹೊಂದಿದ್ದರು) ಇವರ ಮೂಲಕ ತೆರೆದುಕೊಂಡವು.  


ಹುತಾತ್ಮ ಆಗದೆ ಮಹಾತ್ಮರಾಗಲು ಸಾಧ್ಯವಿಲ್ಲ. ಅಥವಾ ಹುತಾತ್ಮ ಆಗುವಲ್ಲಿ ಮಹಾತ್ಮ ಆಗಬೇಕೆಂಬ ಸಂಕಲ್ಪವೂ ಇಲ್ಲ. ಜೀವನು  ತನ್ನದಾದ ಸಂಕುಚಿತ ಅಸ್ತಿತ್ವವನ್ನು ಕಳೆದುಕೊಂಡು ವಿಶಾಲ ಆತ್ಮ ನಾಗದೆ  ಹುತಾತ್ಮ ಎಂದು ಎನಿಸಿಕೊಳ್ಳುವುದಿಲ್ಲ ಕೂಡ. ಅದನ್ನು ಸಾಕ್ಷಾತ್ಕರಿಸಿಕೊಳ್ಳುವ ದಾರಿ ಮತ್ತು ರೂಪುರೇಷೆಗಳು ಕಾಣಬಹುದಾದ ಒಂದು ಮಾದರಿ ರೂಪ ಮಹಾತ್ಮ ಗಾಂಧಿ. ರಾಜಕೀಯ ಅಥವಾ ಲೌಕಿಕ ದೃಷ್ಟಿಕೋನದಿಂದ ನೋಡಿದರೆ ಕೆಲವೊಂದು ವಿರೋಧಾಭಾಸ ಎಂಬಂತೆ ಕಾಣುವ ಕೆಲವೊಂದು ನಡೆಗಳು, ನಮ್ಮಲ್ಲಿ ಸೂಕ್ಷ್ಮತೆ ಇಲ್ಲದಿದ್ದರೆ ಅಪಾರ್ಥಕ್ಕೆ ಕಾರಣ ಆಗಬಹುದಾದ ಸಂದರ್ಭಗಳನ್ನು  ಮತ್ತು ಘಟನೆಗಳನ್ನು ಒಡಲೊಳಗೆ ಬಚ್ಚಿಟ್ಟುಕೊಂಡ ಬದುಕು ಮಹಾತ್ಮ ಗಾಂಧೀಜಿಯವರದ್ದು. ಆಧ್ಯಾತ್ಮಿಕ ದೃಷ್ಟಿಕೋನದಿಂದ, ಆಂತರಿಕವಾದ ಅನುಸಂಧಾನ ಪೂರ್ವಕವಾಗಿ ಕಂಡುಕೊಂಡಾಗ ಮಾತ್ರ ಹೊಳೆಯ ಬಹುದಾದ ಸತ್ಯಗಳಿಂದ ಕೂಡಿರುವಂಥದ್ದು ಗಾಂಧೀಜಿಯವರ ಬದುಕು. ಅರ್ಥವಾಗಿದೆ ಎಂದರು ಅರ್ಥವಾಗದ ನಿಗೂಢತೆ ಗಾಂಧೀಜಿಯವರಲ್ಲಿ ಇದ್ದದ್ದು ಮಾತ್ರ ಖಂಡಿತ.  


"ಭಾರತಕ್ಕೆ ಸ್ವಾತಂತ್ರ್ಯ ಬಂದದ್ದು ಗಾಂಧೀಜಿಯವರಿಂದ ಅಲ್ಲ" ಎಂದ ಒಬ್ಬರ ಮಾತನ್ನು ಪೂಜ್ಯ ಅಜ್ಜನವರ ಬಳಿ ಹಂಚಿಕೊಂಡೆ. ಅದಕ್ಕೆ ಅವರು ಕೊಟ್ಟ ಉತ್ತರವೇನು ಗೊತ್ತೇ? "ಸ್ವಾತಂತ್ರ್ಯ ಕೊಟ್ಟವರು ಏನು ಹೇಳುತ್ತಾರೆ?" ಎಂದು ಕೇಳಿದರು. ಈ ಮಾತಿಗೆ ಬೇರೆ ವ್ಯಾಖ್ಯಾನ ಬೇಕಿಲ್ಲ ಎಂದುಕೊಳ್ಳುತ್ತೇನೆ.  ಅಹಿಂಸೆಯಿಂದ ಸ್ವಾತಂತ್ರ್ಯ ಸಾಧನೆ ಆದದ್ದು ಅಲ್ಲ ಎಂದು ವಾದಿಸುವವರು ಕೂಡ  ಪಾತಂಜಲ ಯೋಗಸೂತ್ರ  ಹೇಳಿದ ಒಂದು ವಾಕ್ಯವನ್ನು ಗಮನಿಸಬೇಕು. "ಅಹಿಂಸಾ ಪ್ರತಿಷ್ಠಾಯಾಂ ತತ್ಸನ್ನಿಧೌ ವೈರ ತ್ಯಾಗಃ". ಅಹಿಂಸೆಯಲ್ಲಿ ಸ್ಥಿತ ನಾದವನ ಸನ್ನಿಧಿಯಲ್ಲಿ ವಿರೋಧಿಗಳು ತಮ್ಮ ವಿರೋಧವನ್ನು ತ್ಯಜಿಸುವರು ಎಂಬುದು ಆ ಮಾತಿನ ಅರ್ಥ. ಅಜ್ಜನವರು ಕೇಳಿದ ಪ್ರಶ್ನೆಯಲ್ಲಿ ಈ ದ್ವನಿಯು ಅಡಗಿತ್ತು. ಬ್ರಿಟೀಶರು  ತಮ್ಮ ವಿರೋಧ, ಕ್ರೌರ್ಯ ಎಲ್ಲವನ್ನೂ ಬದಿಗಿಟ್ಟು ಭಾರತ ಬಿಟ್ಟು ತೆರಳಬೇಕಾದರೆ, ಆ ಪರಿಣಾಮವನ್ನು ಕಾಣಬೇಕಾದರೆ ಗಾಂಧೀಜಿಯವರ ಅಹಿಂಸೆಯ ಪರಿಣಾಮವನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ.  ಅರ್ಥೈಸಿಕೊಳ್ಳುವ ಪ್ರಕ್ರಿಯೆಯು ಕೇವಲ ತಾರ್ಕಿಕವಾದ, ಬೌದ್ಧಿಕವಾದ ಸರ್ಕಸ್ ಗಳಿಂದ ಆಗುವಂಥದ್ದಲ್ಲ.  ಅದಕ್ಕೆ ಒಂದು ರೀತಿಯ ಅಂತರ್ಮುಖತೆ ಅಥವಾ ಧ್ಯಾನದ ಅಗತ್ಯ ಖಂಡಿತ ಇದೆ ಎಂಬುದಾಗಿ ಅವರ  ಒಡನಾಟದಲ್ಲಿದ್ದ, ಅಜ್ಜನವರ ಸತ್ಯಗಳನ್ನು ಅಂತರಂಗದಲ್ಲಿ ಅನುಭವಿಸಿದ ಡಾ. ದೇವದಾಸ್  ನಾಯಕ್ ಅವರು ಹೇಳಿದ್ದು ಈಗಲೂ ನನಗೆ ನೆನಪಾಗುತ್ತಿದೆ. ಈ ನೆನಪಿನ ತುಣುಕುಗಳನ್ನು, ಇಂದು ಹುತಾತ್ಮರ ದಿನದಂದು ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.

 


ಕೊನೆಯದಾಗಿ, ಒಂದು ಸಣ್ಣ ಘಟನೆ ನೆನಪಿಸಿ ಕೊಳ್ಳುತ್ತೇನೆ. ಪುತ್ತೂರಿನಲ್ಲಿ ಅಜ್ಜರ ಸಾನ್ನಿಧ್ಯದಲ್ಲಿ ಕುಳಿತುಕೊಂಡಿದ್ದೆ.  ಇದ್ದಕ್ಕಿದ್ದಂತೆ ಧರ್ಮ ಎಂಬುದರ ಕುರಿತಾದ ಒಂದು ಜಿಜ್ಞಾಸೆ. ಮಹಾತ್ಮ ಗಾಂಧೀಜಿಯವರ ಕುರಿತಾದ ವಿಚಾರ ಕೂಡ ಪ್ರಸ್ತಾಪವಾಯಿತು. ಕೊನೆಯಲ್ಲಿ ಅಜ್ಜನವರು ಒಂದು ಪ್ರಶ್ನೆ ಕೇಳಿದರು-" ಮಹಾತ್ಮ ಗಾಂಧೀಜಿಯವರಿಂದ ನಾವು ಕಲಿಯುವಂತಹದ್ದು ಏನು". ನಾನೆಂದೆ"  ಪ್ರಾರ್ಥನೆ, ಸತ್ಯ, ಅಹಿಂಸೆ". ಆಗ ಅಜ್ಜನವರು ಹೇಳಿದರು- "ಮಹಾತ್ಮ ಗಾಂಧೀಜಿಯವರಿಂದ ಕಲಿಯಬೇಕಾದದ್ದು ಸಾಧನ ಚತುಷ್ಟಯ"... ಈ" ಸಾಧನ ಚತುಷ್ಟಯ" ಎಂಬ ಶಬ್ದ ಸರಿಯಾಗಿ ಅರ್ಥವಾಗಬೇಕಾದರೆ ಮತ್ತೆ  ಶಂಕರಾಚಾರ್ಯರ ಕಡೆಗೆ ಮುಖ ಮಾಡಬೇಕಾಗುತ್ತದೆ. ಒಂದನೆಯದು, ನಿತ್ಯಾನಿತ್ಯ ವಸ್ತು ವಿವೇಕ, ಎರಡನೆಯದು, ವೈರಾಗ್ಯ. ಮೂರನೆಯದು ಶಮಾದಿ ಷಟ್ ಸಂಪತ್ತಿ, ನಾಲ್ಕನೆಯದು ಮುಮುಕ್ಷುತ್ವ. ಸುದ್ದಿ ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ: 7019126946 ಅಂದರೆ ಗಾಂಧೀಜಿಯವರ ಬದುಕನ್ನು ಒಂದೇ ಶಬ್ದದಲ್ಲಿ ಹೇಳಿದ್ದರು ಪೂಜ್ಯ ಅಜ್ಜನವರು. ಅದರಲ್ಲೂ ಕೂಡ ವಿಶೇಷವೆಂದರೆ ಅದು ಉಪನಿಷತ್ ಪ್ರಣೀತವಾದ, ಆಚಾರ್ಯರಿಂದ ಉಲ್ಲೇಖಿಸಲ್ಪಟ್ಟ ಶಬ್ದ. ಹಾಗಾದರೆ ಗಾಂಧೀಜಿಯವರನ್ನು ಸರಿಯಾದ ಪಾರಮಾರ್ಥಿಕ ವಾದ ಪರಿಭಾಷೆಯಲ್ಲಿ ಅಥವಾ ದೃಷ್ಟಿಕೋನದಲ್ಲಿ ಅರ್ಥೈಸಿಕೊಳ್ಳುವುದಿದ್ದರೆ ಹಾಗೂ ಅರ್ಥಮಾಡಿಕೊಳ್ಳಬಹುದು. ಅಲ್ಲವೇ? ಆದರೆ ಅದು ನಮ್ಮ ಹೊಯ್ದಾಡುವ ಮನಸ್ಸಿಗೆ ನಿಲುಕ ಬೇಕಲ್ಲವೇ? ಕೊನೆಯಪಕ್ಷ ಅರ್ಥವಾಗುವುದಿಲ್ಲವಲ್ಲ ಎಂಬ ನಮ್ರತೆಯೋ, ತಲ್ಲಣವೋ ಅಂತರಂಗದಲ್ಲಿ ಹುಟ್ಟಿಕೊಳ್ಳಬೇಕು ಅಲ್ಲವೇ? ಯೋಗಕ್ಕೆ ಅರ್ಜುನನ ವಿಷಾದವೂ ಪೂರ್ವಪೀಠಿಕೆ ಯಾದಂತೆ. 


-ಡಾ. ಆರ್.ಪಿ. ಬಂಗಾರಡ್ಕ

 ಪ್ರಸಾದಿನೀ ಆಯುರ್ನಿಕೇತನ

 ನರಿಮೊಗರು, ಪುತ್ತೂರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post