|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಕರ ಸಂಕ್ರಮಣ: ಆಧ್ಯಾತ್ಮಿಕ ಪುಣ್ಯಕಾಲ, ದೇವಯಾನದ ಆರಂಭ

ಮಕರ ಸಂಕ್ರಮಣ: ಆಧ್ಯಾತ್ಮಿಕ ಪುಣ್ಯಕಾಲ, ದೇವಯಾನದ ಆರಂಭ


ಸಾಂಸ್ಕೃತಿಕ ಸಂಭ್ರಮಗಳಿಗೆ ಕಾಂತಿ ಹೆಚ್ಚುವ, ಧಾರ್ಮಿಕ ಆಚರಣೆಗಳಿಗೆ ಪ್ರಶಸ್ತವೆನಿಸುವ, ಆಧ್ಯಾತ್ಮಿಕವಾಗಿ 'ಪುಣ್ಯಕಾಲ' ಎಂದು ನಂಬಲಾಗುವ 'ಉತ್ತರಾಯಣ'ವು ಮಕರ ಸಂಕ್ರಮಣದಿಂದ ಆರಂಭವಾಗುತ್ತದೆ.


ಮಿಥುನ ಮಾಸ ಕಳೆದು ಕರ್ಕಾಟಕ ಮಾಸ ಪ್ರಾರಂಭವಾಗುವಾಗ ದಕ್ಷಿಣಾಯನ ಮೊದಲಿಡುತ್ತದೆ. ಆರು ತಿಂಗಳ ಬಳಿಕ ಧನುರಾಶಿಯಿಂದ ಸೂರ‍್ಯ ಮಕರ ರಾಶಿಗೆ ಪ್ರವೇಶಿಸುತ್ತಿರುವಂತೆಯೇ ಉತ್ತರಾಯಣ ಸನ್ನಿಹಿತವಾಗುತ್ತದೆ. ದಕ್ಷಿಣಾಯನವು 'ಪಿತೃಯಾನ'ವೆಂದೂ, ಉತ್ತರಾಯಣವು 'ದೇವಯಾನ'ವೆಂದೂ ವಿಭಾಗಿಸಲ್ಪಟ್ಟಿವೆ. ಉಪನಿಷತ್ತು, ಭಗವದ್ಗೀತೆ, ಮಹಾಭಾರತಗಳಲ್ಲಿ ದೇವಯಾನದ ಉಲ್ಲೇಖವಿದೆ. ಪ್ರಾಶಸ್ತ್ಯದ ವಿವರಣೆ ಇದೆ. ಭೀಷ್ಮರಂತಹ ಮಹನೀಯರು ಶರಶಯ್ಯೆಯಲ್ಲಿ ಮಲಗಿಯೇ ತನ್ನ ನಿಷ್ಕ್ರಮಣಕ್ಕೆ ಉತ್ತರಾಯಣವನ್ನು ನಿರೀಕ್ಷಿಸುತ್ತಾ ಕಾಲ ಕಳೆದರು.


ಪ್ರಕೃತಿಯ ರಮ್ಯಾದ್ಭುತ ಸ್ಥಿತ್ಯಂತರಗಳನ್ನು ಗಮನಿಸುತ್ತಲೇ ತನ್ನ ಬದುಕಿಗೊಂದು ಸುಂದರ ಸಂವಿಧಾನವನ್ನು ರೂಪಿಸಿಕೊಂಡ ಮಾನವ ಈ ನಿಷ್ಕರ್ಷೆಗೆ ಶತಮಾನ ಶತಮಾನಗಳಷ್ಟು ದೀರ್ಘ ಅವಧಿಯಲ್ಲಿ ಅಧ್ಯಯನ (ಗಮನಿಸಿ ಪಡೆದ ಅನುಭವ) ನಡೆಸಿರಬೇಕು, ಕೊನೆಗೊಂದು ನಿರ್ಧಾರಕ್ಕೆ ಬಂದಿರಬೇಕು. ಆದರೆ ಕಾಲಗಣನೆಗೆ ವ್ಯವಸ್ಥೆ ಒದಗಿದರೂ ಕಾಲದ ಗತಿಯನ್ನು ನಿರ್ಧರಿಸಲಾಗದೆ, ಪಥವನ್ನು ನಿಖರವಾಗಿ ನಿರೀಕ್ಷಿಸಲಾಗದೆ, 'ಕಾಲಯ ತಸ್ಮೈ ನಮಃ' ಎಂದಿರಬೇಕು. ಎಲ್ಲ ಕಾಲವು ಸಂದರ್ಭಾನುಸಾರ, ಸಂಭವ ವಿಧಾನದಿಂದ ಪ್ರಶಸ್ತವೇ ಆದರೂ ಕೆಲವು ತಿಂಗಳು, ಪರ್ವ ದಿನಗಳು, ಸಂಕ್ರಮಣ, ಅಮಾವಾಸ್ಯೆ, ಹುಣ್ಣಿಮೆಗಳು ಹೆಚ್ಚು ಪ್ರಶಸ್ತವೆಂದು ನಮ್ಮ ಪೂರ್ವಸೂರಿಗಳು ನಿರ್ಧರಿಸಿದ ಆಚರಣೆಗಳಿರುತ್ತವೆ ಅಥವಾ ಸಂಭ್ರಮದ ಹಬ್ಬಗಳಿರುತ್ತವೆ 


ಭೂಮಿ, ಆಕಾಶ ಈ ನಡುವೆ ಹೇಗೆ ಪ್ರಕೃತಿಯನ್ನು ಅನುಸರಿಸುತ್ತಾ ಮಾನವನು ಭೂಮಿಯನ್ನು ವಾಸಯೋಗ್ಯವಾಗುವಂತೆ ಬಳಸಿಕೊಂಡನೊ ಅಂತೆಯೇ ಆಕಾಶವನ್ನು ಗಮನಿಸುತ್ತಾ ನಿತ್ಯ ಉದಯಿಸಿ ಅಸ್ತಮಿಸುವ ಸೂರ‍್ಯನನ್ನು ತಲೆಎತ್ತಿ ನೋಡುತ್ತಲೆ ಖಗೋಳ ಜ್ಞಾನವನ್ನು ಪಡೆದ. ಈ ನಿರಂತರ ಅಧ್ಯಯನವೇ ಆದಿಮದಿಂದ ಶಿಷ್ಟದವರೆಗೆ ಸಾಗಿ ಬಂದು ಮನುಕುಲದ ವ್ಯವಸ್ಥಿತ ಜೀವನ ವಿಧಾನ ಸ್ಥಾಯಿಯಾಯಿತು ಎನ್ನಬಹುದು.

ಕಳೆ ಏರುವುದು:

ದೀಪಾವಳಿಯಿಂದ ಆಚರಣೆಗಳು ಆರಂಭವಾಗುತ್ತದೆ. ಕೋಲ-ನೇಮಗಳು, ಉತ್ಸವ ಮಹೋತ್ಸವಗಳು, ನಾಗ-ದೈವಗಳ ಪೂಜೆಗಳು ವೈಭವದಿಂದ ಪ್ರಾರಂಭವಾಗುತ್ತವೆ. ಆದರೆ ಮಕರ ಸಂಕ್ರಮಣದ ಬಳಿಕ ಮಳೆ ಆರಂಭದ ತನಕ (ಬೇಶದ 10ನೇ ದಿನದ ಪತ್ತನಾಜೆಯವರೆಗೆ) ಈ ಆಚರಣೆಗಳಲ್ಲಿ ಹೆಚ್ಚಿನ ಉತ್ಸಾಹ ಎದ್ದು ಕಾಣುತ್ತದೆ. ಶುಭ್ರ ಆಕಾಶ, ವಾತಾವರಣದ ಪೂರಕ ಪ್ರೋತ್ಸಾಹ, ಕೃಷಿಯ ಧಾವಂತಕ್ಕೆ ಸ್ವಲ್ಪ ವಿರಾಮವೂ ಇರುವುದರಿಂದ ಕರಾವಳಿಯ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಸಂಭ್ರಮಗಳಿಗೆ ಕಳೆ ಏರುವುದೇ ಮಕರಸಂಕ್ರಮಣದಿಂದ.


ಮದುವೆ, ನೂತನಗೃಹ ಪ್ರವೇಶ, ದೇವಾಲಯಗಳಲ್ಲಿ ಪ್ರತಿಷ್ಠೆ-ಬ್ರಹ್ಮಕಲಶಾಭಿಷೇಕ, ಹೊಸತಾಗಿ ನಿರ್ಮಿಸಲಾಗುವ ದೈವಸ್ಥಾನಗಳ ಒಕ್ಕಲು, ದೈವಸಾನ್ನಿಧ್ಯ ವಿಜೃಂಭಣೆಗೆ ಉತ್ತರಾಯಣ ಪ್ರಶಸ್ತವೆಂಬುದು ಪ್ರಾಚೀನ ಒಡಂಬಡಿಕೆ. ಈಗ ಗಮನಿಸಿದರೆ ದಕ್ಷಿಣಾಯನದಲ್ಲಿ ಒಂದು ಕಾಲಕ್ಕೆ ನಿಷಿದ್ದವಾಗಿದ್ದ ಎಲ್ಲ ಶುಭ ಶೋಭನಾದಿಗಳು, ಸತ್ಕಾರ್ಯಗಳು ನೆರವೇರುತ್ತದೆ. ಮಾನವ ಸ್ವೀಕರಿಸಿದ ವೇಗದ ಜೀವನ ಶೈಲಿಗೆ, ಆಧುನಿಕ ಚಿಂತನೆಗೆ ಎಲ್ಲವೂ ಸಕಾಲ. ಬೇಕು ಎನ್ನಿಸಿದಾಗ ಪಡೆಯುವುದು ಅಥವಾ ಆಚರಿಸುವುದು. ನಿಧಾನವಾದರೆ ಏನೋ ಆದೀತೆಂಬ ಆತಂಕ ಅಥವಾ ಅಂತಹ ಚಿಂತನೆಗಳ ಅಗತ್ಯವೇ ಇಲ್ಲದಿರುವುದು ಇಂದಿನ ಬದುಕು. ಆದರೂ ಉಳಿದು ಬಂದಿವೆ ಕೆಲವು ಆಚರಣೆಗಳು, ನೆನಪುಗಳು, ಪೂರ್ವ ನಿರ್ಧರಿತ ಕಟ್ಟುಪಾಡುಗಳು, ಮಕರ ಸಂಕ್ರಮಣ ಅಂತಹ ಒಂದು ನೆನಪಾಗಿ ಉಳಿದಿದೆ, ಆಚರಿಸಲ್ಪಡುತ್ತಿದೆ.


ತೀರ್ಥಸ್ನಾನ, ಸಪ್ತೋತ್ಸವ:

ಕದ್ರಿಯ ಗೋ ಮುಖದಲ್ಲಿ ವಿಶೇಷ ತೀರ್ಥಸ್ನಾನಕ್ಕೆ ಮಕರಸಂಕ್ರಮಣ ಪುಣ್ಯಕಾಲ. ನಿತ್ಯೋತ್ಸವದ ದೇವಾಲಯಗಳ ನಗರ ಉಡುಪಿಯಲ್ಲಿ ಸಪ್ತೋತ್ಸವದ ಭವ್ಯ ಅನಾವರಣ. ಉಡುಪಿಯ ರಥಬೀದಿ ನಿಜ ಅರ್ಥದ ನಡೆ ದೇಗುಲಗಳು ಗಂಭೀರವಾಗಿ ಹಾದುಹೋಗುವ ದೃಶ್ಯಾವಳಿಗೆ ಸಾಕ್ಷಿಯಾಗುತ್ತದೆ. ಎಳ್ಳು-ಬೆಲ್ಲ ಬೀರುವ ಸಂಪ್ರದಾಯ ಮೂಲತಃ ತುಳು ನಾಡಿನಲ್ಲಿಲ್ಲ, ಆದರೆ ಈಗ ಈ ಶಿಷ್ಟಾಚಾರವೂ ರೂಢಿಯಲ್ಲಿದೆ.


ಮಕರಸಂಕ್ರಮಣದಿಂದ ಮುಂದೆ ಧರೆಗಿಳಿಯುವ ದೇವ ದೇವರುಗಳು, ನೆಲದ ಸತ್ಯಗಳು ಎದ್ದು ಬರುವ ದೈವಲೋಕದ ಅನಾವರಣ, ನಾಗ-ಬ್ರಹ್ಮರ ಅಲೌಕಿಕ ಸೃಷ್ಟಿಗಳಿಗೆಲ್ಲ ಅಮಿತ ಉತ್ಸಾಹ. ಕಾರಣ ಪರಿಸರ; ಮಾವು, ಗೇರು ಮುಂತಾದ ಮರಗಳು ಹೂ ಬಿಡುತ್ತವೆ; ವಾತಾವರಣ ’ಪ್ರಚೋದಕವಾಗಿರುತ್ತದೆ. ಹೊಸ ಹರುಷ ತುಂಬಿರುತ್ತದೆ.


ಇತ್ತೀಚೆಗಿನ ವರ್ಷಗಳಲ್ಲಿ ಶಬರಿಮಲೆ ಯಾತ್ರೆ ಜನಪ್ರಿಯವಾಗುತ್ತಿದೆ. ಪ್ರತಿ ಮನೆಯಿಂದಲೋ ಒಂದು ಕುಟುಂಬದಿಂದಲೋ ಓರ್ವ ಭಕ್ತ ವ್ರತಸ್ಥನಾಗಿ 'ಸ್ವಾಮಿ' ಎನಿಸಿ ಅಯ್ಯಪ್ಪ ದರ್ಶನಕ್ಕೆ ಸಾಗಿ ಮಕರ ಸಂಕ್ರಮಣದ ದಿನ ಗೋಚರಿಸುವ 'ಮಕರಜ್ಯೋತಿ'ಯನ್ನು ಕಂಡು, ಧನ್ಯತಾಭಾವದೊಂದಿಗೆ ಮರಳಿ ಬಂದು ಪ್ರಸಾದ ಹಂಚುವ ಧಾರ್ಮಿಕ ಮನೋಭಾವ ಈ ಕಾಲದಲ್ಲಿ ಪ್ರತಿ ಊರಿನಲ್ಲೂ ಕಾಣುತ್ತೇವೆ. ಒಂದು ಸ್ಥಿತ್ಯಂತರ ಉತ್ಕರ್ಷಗಾಮಿಯಾಗಿ ಸಾಗಬೇಕು. ಹಾಗೆ ಮಕರಸಂಕ್ರಮಣ ಸ್ವೀಕರಿಸಲ್ಪಡುತ್ತಿದೆ.

ಬಡಕಾಯಿ ಪೋಪಿನಿ:

ತುಳುವರಿಗೆ ಈ ಪರ್ವಕಾಲ ಪ್ರಾಕೃತಿಕ ಸ್ಥಿತ್ಯಂತರದ ಜ್ಞಾನವಿದೆ ಎಂಬ ನೆನಪಾಗಿ ಮಾತ್ರ ಇರುತ್ತದೆ. ಸಂಭ್ರಮದ ಆಚರಣೆಗಳಲ್ಲಿ ಸುಮಾರು ಮೂಲ್ಕಿ ಹೊಳೆಯವರೆಗೆ ರೂಢಿಯಲ್ಲಿರುವ ಒಂದು ವಿಧಿಯಾಚರಣೆ ಮಾರಣಕಟ್ಟೆಗೆ ಹೋಗುವುದು ಅಥವಾ 'ಬಡಕಾಯಿ ಪೋಪಿನಿ'. ಅಲ್ಲಿ ಹೂ ಒಪ್ಪಿಸುವುದು, ಹರಿವಾಣ ನೈವೇದ್ಯ ಸಮರ್ಪಿಸುವುದು. ಪ್ರಸಾದ ತಂದು ಮನೆಯಲ್ಲಿ ’ಗಡಿ ಆಹಾರ’ ಕೊಡುವ ಒಂದು ವಿಶೇಷ ಪದ್ಧತಿ ರೂಢಿಯಲ್ಲಿದೆ. 'ಎಡೆಬಡಿಸಿ' ಇಟ್ಟು ಕುಟುಂಬಸ್ಥರು, ನೆಂಟರಿಷ್ಟರು ಸೇರಿ ನಡೆಯುವ ಈ ಆಚರಣೆ ಇಂದಿಗೂ ಶ್ರದ್ಧೆ ಭಕ್ತಿಯಿಂದ ವಾರ್ಷಿಕವೆಂಬಂತೆ ನೆರವೇರುತ್ತದೆ. ಇದಕ್ಕೆ ಮಕರ ಸಂಕ್ರಮಣ ಪ್ರಶಸ್ತಕಾಲ.

ಮಾರಣಕಟ್ಟೆಯ ಹೆಸರು ಹೇಳಿ ಯಾರೂ ಶಾಪ ಹಾಕಲಾರರು. ವಾಕ್‌ದೋಷ ನಿವಾರಣೆ ಈ ಸಂದರ್ಭದಲ್ಲಿ ಮಾಡಿಸಿಕೊಳ್ಳುವ ಪರಿಪಾಠವಿದೆ.

-ಕೆ.ಎಲ್.ಕುಂಡಂತಾಯ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم