|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜಗದಿ ಹೊಸ ಕ್ರಾಂತಿ ಹರಡಲು ಬಂದಿದೆ ಸಂಕ್ರಮಣ

ಜಗದಿ ಹೊಸ ಕ್ರಾಂತಿ ಹರಡಲು ಬಂದಿದೆ ಸಂಕ್ರಮಣ

 ಮಕರ ಸಂಕ್ರಮಣ ವಿಶೇಷ ಲೇಖನ


ಸಂಕ್ರಾಂತಿ ಇದು ಸೂರ್ಯನಿಗೆ ಸಂಬಂಧಿಸಿದ ಹಬ್ಬ. ಸಂಕ್ರಾಂತಿ ಎಂದರೆ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಸಂಧಿಕಾಲಕ್ಕೆ ಸಂಕ್ರಾಂತಿ ಅಥವಾ ಸಂಕ್ರಮಣ ಎಂದು ಹೆಸರು. ಸೌರಮಾನದ ಪ್ರಕಾರ ಸೂರ್ಯನು ಹನ್ನೆರಡು ರಾಶಿಗಳನ್ನು ಪ್ರವೇಶಿಸುವಾಗಲೂ ಸಂಕ್ರಾಂತಿ ಬರುತ್ತದೆ. ಆದರೆ ಕರ್ಕಾಟಕ ಹಾಗೂ ಮಕರ ಸಂಕ್ರಾಂತಿಗಳು `ದಕ್ಷಿಣಾಯನ’  ಹಾಗೂ `ಉತ್ತರಾಯಣ’ಗಳ ಪ್ರಾರಂಭದ ದಿನಗಳಾದ್ದರಿಂದ ವಿಶೇಷ ಮಹತ್ವ ಹೊಂದಿದೆ. ಹಾಗಾಗಿ ಸಂಕ್ರಾಂತಿ ಎಂದರೆ ಸೂರ್ಯಾರಾಧನೆ ಎಂದು ಅರ್ಥೈಸಬಹುದು.


ಸೂರ್ಯನು ಮಕರರಾಶಿಗೆ ಪ್ರವೇಶಿಸಿ ದಕ್ಷಿಣದಿಂದ ಉತ್ತರಾಭಿಮುಖವಾಗಿ 6 ತಿಂಗಳ ಪ್ರಯಾಣ ಬೆಳೆಸುತ್ತಾನೆ. ಈ ದಿನವನ್ನು ಮಕರ ಸಂಕ್ರಾಂತಿ ಎಂದು ಕರೆಯುವುದು. ಹೀಗೆ ಸೂರ್ಯಪಥ ಗಮನದಿಂದ ಭಾರತ, ಅರೇಬಿಯಾ, ಸಿರಿಯಾ, ಬೆಬಿಲೋನ್, ರೋಮ್ ಮೊದಲಾದ ದೇಶಗಳಿಗೆ ಕೊರೆಯುವ ಚಳಿ ಕೊನೆಯಾಗಿ ಹಗಲು ಹೆಚ್ಚು ಸಂಭವಿಸುವ ಕೃಪೆ ದೊರೆಯುವುದು. ಹಿಂದೂಗಳು ಈ ದಿನವನ್ನು ಉತ್ತರಾಯಣ ಪುಣ್ಯಕಾಲವೆಂದು ಭಾವಿಸುವರು. ದಕ್ಷಿಣಾಯನದಲ್ಲಿ ಮುಚ್ಚಿದ ಸ್ವರ್ಗದ ಬಾಗಿಲು ಈ ಉತ್ತರಾಯಣದಲ್ಲಿ ತೆರೆಯುತ್ತದೆ. ಅದಕ್ಕಾಗಿಯೇ ಭೀಷ್ಮ ಪಿತಾಮಹರು ದೇಹ ತ್ಯಜಿಸಲು, ಉತ್ತರಾಯಣ ಮರಣದ ಕಾಲದವರೆಗೂ, ಶರಶಯ್ಯೆಯಲ್ಲಿ ಹರಿಸ್ಮರಣೆ ಮಾಡುತ್ತಾ ಕಾದಿದ್ದರು. ಈ ದಿನ ಸ್ವರ್ಗದ ಬಾಗಿಲು ತೆರೆಯುತ್ತದೆಂದು ನಮ್ಮವರ ನಂಬುಗೆ. ಉತ್ತರಾಯಣದಿಂದ ಮುಂದೆ ಬರುವ ದಿನಗಳೇ ಪ್ರಶಸ್ತವಾದ ದಿನಗಳು.


ಮಕರ ಸಂಕ್ರಾಂತಿ ದಿನದಿಂದ ದೇವತೆಗಳಿಗೆ ಹಗಲು, ರಾಕ್ಷಸರಿಗೆ ರಾತ್ರಿ ಆಗುವುದೆಂದು ಪುರಾಣಗಳ ಹೇಳಿಕೆ. ಈ ಆನಂದಕ್ಕಾಗಿ ಎಳ್ಳು, ಬೆಲ್ಲ, ತಿಂದು ಒಳ್ಳೆಯ ಮಾತನಾಡೋಣವೆಂದು ಎಳ್ಳು, ಬೆಲ್ಲ ಹಂಚುವುದುಂಟು. ಭೋಗಿ, ಸಂಕ್ರಮಣ ಮತ್ತು ಕನು ಹಬ್ಬ ಎಂದು ಮೂರು ದಿನಗಳ ಕಾಲ ಈ ಹಬ್ಬವನ್ನು ಆಚರಿಸುವುದುಂಟು. ಸುಗ್ಗಿಯ ಕಾಲದ ಹಿಗ್ಗು ಬಂದಿರುತ್ತದೆ. ಕಬ್ಬು ಸಮೃದ್ಧಿಯಾಗಿ ಈ ವೇಳೆಗೆ ಬರುವುದುಂಟು. 

ಮನೆಯಲ್ಲಿ ಮಕ್ಕಳಿಗೆ ಅಭ್ಯಂಜನ ಮಾಡಿಸಿ ಮಕ್ಕಳ ತಲೆಯ ಮೇಲೆ ಭೋಗಿ ಹಣ್ಣು ಎಂದರೆ ಬೋರೆಹಣ್ಣು, ಕಬ್ಬು ಮೊದಲಾದವುಗಳನ್ನು ಎರೆದು ಆರತಿ ಮಾಡುವುದುಂಟು. ಪೇಟೆಗಳಲ್ಲಂತೂ ಒಂದೆರಡು ದಿನ ಎಳ್ಳು ಬೆಲ್ಲ ಹಂಚುವ ಬಾಲಕಿಯರ ಸಂಭ್ರಮವೇ ಜರುಗುತ್ತದೆ. 


ಈ ದಿನ ಕೆಲವೆಡೆ ಹಸು, ಎಮ್ಮೆ, ಮೊದಲಾದ ಜಾನುವಾರಗಳ ಕೋಡಿಗೆ, ಮೈಗೆ ಬಣ್ಣ ಬಳಿದು ದೃಷ್ಟಿ ದೋಷ ನಿವಾರಣೆಗಾಗಿ ಬೆಂಕಿಯ ಮೇಲೆ ಓಡಿಸುವುದುಂಟು. ಕೆಲವೆಡೆ ದೇವಸ್ಥಾನಗಳಲ್ಲಿ ದೇವರ ಮುಂದೆ ಮೊಲಕ್ಕೆ ಅರಿಶಿನ-ಕುಂಕುಮ ಬಳಿದು ಹೂವು ಮುಡಿಸಿ, ಪೂಜೆ ಮಾಡಿ ಬಿಡುವ ಪದ್ಧತಿಯುಂಟು.

ಆಂಧ್ರದಲ್ಲಿಯೂ ಈ ಹಬ್ಬದ ಸಂಭ್ರಮದ ಆಚರಣೆಯುಂಟು, ಶ್ರೀರಾಮನು ರಾವಣನನ್ನು ಕೊಂದು ಸೀತೆಯನ್ನು ತಂದ ದಿನವೆಂದು ಭಾವಿಸಿ ಮನೆಮನೆಯ ಮುಂದೆ ಉರಿಯನ್ನು ಹಾಕಿ ರಾವಣ ದಹನ ನಡೆಸುತ್ತಾರೆ. ಇದನ್ನು ಭೋಗಿಮಂಟ ಎಂದು ಕರೆಯುವರು. ಸ್ವರ್ಗಸ್ಥರಾದ ಪಿತೃಗಳು ಅದೃಶ್ಯರಾಗಿ ಸ್ವರ್ಗಲೋಕದಿಂದ ತಮ್ಮ ಮನೆಯಂಗಳಕ್ಕೆ ಆಗಮಿಸುವರೆಂದು ಅವರ ನಂಬಿಕೆ.


ತಮಿಳುನಾಡಿನಲ್ಲಿ ಮಕರ ಸಂಕ್ರಾಂತಿಯ ಹಬ್ಬವನ್ನು ಪೊಂಗಲ್ ಎನ್ನುತ್ತಾರೆ. ಪೊಂಗಲನ್ನು ಬೇಯಿಸಿ ಕಬ್ಬಿನ ಜಲ್ಲೆಗಳನ್ನಿರಿಸಿ ಪೂಜೆ ಮಾಡುತ್ತಾರೆ. ಸೂರ್ಯನಿಗೆ ನೈವೇದ್ಯ ಮಾಡುತ್ತಾರೆ. ಅವರಿಗೆ ಇದು ಬಹು ಸಂಭ್ರಮದ ಹಬ್ಬ.


ಉತ್ತರ ಭಾರತದಲ್ಲಿಯೂ ಸಂಕ್ರಾಂತಿಯನ್ನು ಆಚರಿಸುವುದುಂಟು. ಅಲಹಾಬಾದಿನಲ್ಲಿ ಈ ವೇಳೆಗೆ ಸುಪ್ರಸಿದ್ಧವಾದ ಕುಂಭಮೇಳ ನಡೆಯುವುದು. 

ಈ ದಿನದಂದು ಹಗಲು ಪೂರ್ತಿ ಅಂದರೆ ಸೂರ್ಯೋದಯದಿಂದ, ಸೂರ್ಯಾಸ್ತದವರೆಗೆ ಪುಣ್ಯ ಕಾಲವಿರುತ್ತದೆ. ಈ ಪುಣ್ಯ ಕಾಲದಲ್ಲಿ ಕಪ್ಪು ಎಳ್ಳಿನೊಂದಿಗೆ ಸ್ನಾನ ಮಾಡಿ, ಎಳ್ಳು ದಾನ ಮಾಡಬೇಕು. ದೇವಸ್ಥಾನಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚಬೇಕು. ಮಾಡಿದ ದಾನಕ್ಕೆ ಜನ್ಮ ಜನ್ಮದಲ್ಲೂ ಸದಾ ನಮಗೆ ಫಲ ಸಿಗುವಂತೆ ಸೂರ್ಯನು ಅನುಗ್ರಹಿಸುತ್ತಾನೆ. ಇದಕ್ಕಾಗಿಯೇ ಎಳ್ಳು ಬೆಲ್ಲ ಹಂಚುವುದು.


ಎಳ್ಳು ಬೆಲ್ಲ ಶೀತ ವಾತದಿಂದ ಉಂಟಾಗುವ ಜಡ್ಡು, ಆಲಸ್ಯಗಳನ್ನು ದೂರ ಮಾಡುವ ಸ್ನೇಹ ದ್ರವ್ಯಗಳ ಹಂಚಿಕೆ, ಸೇವನೆ, ದಾನ ಈ ಸಂಕ್ರಾಂತಿಯ ವೈಶಿಷ್ಟ. ಎಳ್ಳು ಬೆಲ್ಲದೊಂದಿಗೆ ಒಳ್ಳೊಳ್ಳೆ ಮಾತು ಎಂಬ ನಾಣ್ಣುಡಿಯನ್ನು ಎಲ್ಲರೂ ಪಾಲಿಸೋಣ.... 


ಎಳ್ಳು ಬೆಲ್ಲ:

ಸಂಕ್ರಾಂತಿ ಎಂದರೆ ಎಳ್ಳು-ಬೆಲ್ಲ ಬೀರುವುದು ಎಂಬದೂ ಇದೆ. ಕಡ್ಲೆ, ಬೆಲ್ಲ ಹಾಗೂ ಎಳ್ಳು ಮಿಶ್ರಣವನ್ನು ಹಂಚಲಾಗುತ್ತದೆ. ಎಳ್ಳು-ಬೆಲ್ಲ ನೀಡುವಾಗಲೂ ತಿಂದು ಒಳ್ಳೆಯದು ಮಾತನಾಡು ಎಂದು ಹೇಳಲಾಗುತ್ತದೆ. ಇದು ಸಾಂಪ್ರದಾಯಿಕವಾಗಿಯೂ ನಡೆಯುತ್ತ ಬಂದಿದೆ. ಅಲ್ಲದೇ ಹೆಚ್ಚು ಚಳಿ ಇರುವುದರಿಂದ ಜೀರ್ಣಕ್ರಿಯೆ ಸೂಕ್ತವಾಗಿ ಆಗಲು ಕಬ್ಬು ತಿನ್ನುತ್ತಾರೆ. ಇದೇ ವೇಳೆ ಕಬ್ಬಿನ ಕಟಾವು ನಡೆಯುವುದರಿಂದ ಆಗ ತಾನೆ ಮಾರುಕಟ್ಟೆಗೆ ಕಬ್ಬು ಹೇರಳವಾಗಿ ಬಂದಿರುತ್ತದೆ. ಕಬ್ಬು ತಿನ್ನುವುದರಿಂದ ಹಲ್ಲುಗಳು ಸ್ವಚ್ಚವಾಗುವುದರ ಜತೆಗೆ ಜೀರ್ಣಶಕ್ತಿ ಹೆಚ್ಚಿಸಿ ಹೊಟ್ಟೆಯನ್ನು ಶುದ್ದಗೊಳಿಸುತ್ತದೆ. ಕಾಮಾಲೆ ಮುಂತಾದ ಕಾಯಿಲೆಗಳನ್ನು ಕಬ್ಬು ಹೊರಗಟ್ಟುತ್ತದೆ.


ಕಿಚ್ಚು ಹಾಯಿಸುವುದು; ಇದೇ ಸಂದರ್ಭದಲ್ಲಿ ಪಶುಗಳಿಗೆ ಶೃಂಗಾರ ಮಾಡಿ, ಜೂಲ ಹಾಕಿ ಕಿಚ್ಚು(ಅಗ್ನಿ)ಹಾಯಿಸುವ ಸಂಪ್ರದಾಯಗಳು ಬೆಳೆದು ಬಂದಿವೆ. ಧನುರ್ಮಾಸದ ಚಳಿಗೆ ಮೈಮೇಲೆ ಧೂಳು ಅಡರಿಕೊಂಡು ಆರ್ದ ಹವಾಮಾನದಿಂದ ಕಿರಿಕಿರಿ ಅನುಭವಿಸಿತ್ತಿದ್ದರೆ ತಿಲ(ಎಣ್ಣೆ)ಮೈಗೆ ಲೇಪಿಸಿ ಕೊಳ್ಳುವ ಮೂಲಕ  ಹೊಲಸನ್ನು ತೆಗೆದು ಹಾಕುವ ಪ್ರಕ್ರಿಯೆಗೂ ನಾಂದಿಯಾಗುತ್ತದೆ. ಇದೆ ಕಾರಣ ದಿಂದಲೇ ತಿಲಸ್ನಾನ, ತಿಲದಾನ ಮತ್ತು ತಿಲವೇ ಪ್ರಧಾನವಾಗಿಸಿ ಪೂಜೆ ಹೋಮ ಹವನಗಳನ್ನು ನಡೆಸಲಾಗುತ್ತದೆ.


ಸ್ನಿಗ್ಧತೆ ಅಪ್ಪಿಕೊಳ್ಳುವ ಇಲ್ಲವೇ ಅಂಟಿಕೊಳ್ಳುವ ಸಂಕೇತವಾಗಿದ್ದರೆ, ಬೆಲ್ಲ ಸಿಹಿಯನ್ನು ನೀಡುವ ವಸ್ತು ಕೊಂಚ ಕಹಿಯ ತಿಲವನ್ನು ಬೆಲ್ಲದೊಂದಿಗೆ ಸೇರಿಸಿ ತಿನ್ನುವುದರಿಂದಲೂ ದೇಹಕ್ಕೆ ಹಿತ ಎಂದು ಆರ್ಯುವೇದವು ಹೇಳುತ್ತದೆ. ಹೀಗಾಗಿ ಪರಂಪರೆಯಲ್ಲಿ ಎಳ್ಳು ಬೆಲ್ಲದ ವಿನಿಮಯ ಪ್ರೀತಿ ಸ್ನೇಹ ಮತ್ತು ಬಾಂದವ್ಯಗಳನ್ನು ಗಟ್ಟಿಗೊಳಿಸುವದಕ್ಕಾಗಿಯೇ ಸಂಕ್ರಾಂತಿಯಂದು ಎಳ್ಳು_ಬೆಲ್ಲ ಹಂಚುವ ಸಂಭ್ರಮ ನಡೆದುಕೊಂಡು ಬಂದಿದೆ. 


ತೇಜಿ ಮಂದಿ ಮುನ್ಸೂಚನೆ: ಜ್ಯೋತಿಷ್ಯದ ಪ್ರಕಾರ ಈ ದಿನ ನಿತ್ಯ ವ್ಯವಹಾರ ಹಾಗೂ ವ್ಯಾಪಾರ  ವಹಿವಾಟುಗಳಲ್ಲದೆ ಬದುಕಿಗೆ ಅಗತ್ಯ ವಸ್ತುಗಳ ಏರಿಕೆ ಇಳಿಕೆಯ ಮುನ್ಸುಚನೆ ನೀಡುತ್ತದೆ ಎನ್ನುತ್ತಾರೆ.ಮಕರ ದೇವಿ ಎಂದೇ ಹೇಳುವ ಕಾಲ್ಪನಿಕ ದೇವಿಯೊಬ್ಬಳ ಸೃಷ್ಟಿಯಾಗುತ್ತಾಳೆ. ಹೀಗಾಗಿ ಆ ಸಂಕ್ರಾಂತಿ ದೇವಿ ಉಡುವ ವಸ್ತ್ರ, ಉಣ್ಣುವ ಆಹಾರ, ತೊಡುವ ವಸ್ತ್ರ, ಧರಿಸುವ ಅಲಂಕಾರಿಕ ವಸ್ತುಗಳ ಮೇಲಿಂದ ಮುಂದಿನ ದಿನಗಳಲ್ಲಿ ಯಾವ ಯಾವ ವಸ್ತುಗಳು ತುಟ್ಟಿಯಾಗುತ್ತದೆ ಎಂದು ಹೇಳಲಾಗುತ್ತದೆ.


ಸುಗ್ಗಿ ಹಬ್ಬದ ಸಂಭ್ರಮ ಸಡಗರ: ಕೊಯ್ಲು ಕೆಲಸ ಬಹುತೇಕ ಮುಗಿಯುವ ಹಂತಕ್ಕೆ ಬಂದಿದೆ. ಕೊರೆಯುವ ಚಳಿಯ ಹಿಡಿತವು ನಿಧಾನವಾಗಿ ಸಡಿಲವಾಗುತ್ತಿದೆ... ಸೂರ್ಯ ಪಥ ಬದಲಿಸುವ ಈ ಸುಮುಹೂರ್ತದಲ್ಲಿ ಮನೆ ತುಯುವಷ್ಟು ಹೊಸ ಬೆಳೆ ಬಂದಿದೆ. ರೈತ ಸಂಭ್ರಮದಲ್ಲಿದ್ದಾನೆ. ಬೆಳೆ ಕಂಡು ಖುಷಿಯಾಗಿದ್ದಾನೆ, ಮಂಡ್ಯ ಭತ್ತ ಮತ್ತು ಬೆಲ್ಲದ ಜಿಲ್ಲೆ, ಈ ಜಿಲ್ಲೆಗೆ ಹೊಸ ಖುಷಿ ಮತ್ತು ಚೈತನ್ಯ ನೀಡುವ ಹಬ್ಬ ಸಂಕ್ರಾಂತಿ. ವರ್ಷ ಪೂರ್ತಿ ದುಡಿದ ರಾಸುಗಳಿಗೆ ವಿಶೇಷ ಗೌರವ ಸೂಚಿಸಿ, ಅವುಗಳನ್ನು ಪೂಜಿಸುವ ಸುಸಮಯ ಕಾಲವೂ ಹೌದು.


ತಮಿಳುನಾಡಿನಲ್ಲಿದ್ದಂತೆ ಹೊಸ ಅಕ್ಕಿಯಿಂದ ಸಾಮೂಹಿಕವಾಗಿ ಪೊಂಗಲ್ಮಾಡುವ ವಾಡಿಕೆ ಮಂಡ್ಯದಲ್ಲಿ ಕಂಡುಬರುವದಿಲ್ಲ. ಆದರೂ ಪ್ರತ್ಯೇಕವಾಗಿ ಮನೆ ಮನೆಗಳಲ್ಲಿ ಹೊಸ ಅಕ್ಕಿಯ ಪೊಂಗಲ್ ಸಿದ್ದವಾಗುತ್ತದೆ. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಮಕ್ಕಳು, ದೊಡ್ಡವರು ಹೊಸ ಬಟ್ಟೆ ಹಾಕಿಕೊಂಡು ಸಂಭ್ರಮಿಸುತ್ತಾರೆ. ರಾಸುಗಳನ್ನು ತೊಳೆದು, ಬಣ್ಣ ಹಚ್ಚಿ ಸಿಂಗರಿಸಿ ಸಂಜೆ ಸೂರ್ಯ ಮುಳುಗುವ ಸಮಯಕ್ಕೆ ಪ್ರಮುಖ ಬೀದಿಗಳಲ್ಲಿ ಕಿಚ್ಚು ಹಾಯಿಸಲಾಗುತ್ತದೆ. ಹೊಸ ಭತ್ತದ ಹುಲ್ಲಿನ ರಾಶಿಯನ್ನು ರಸ್ತೆಗೆ ಹರಡಿ ಆಳುದ್ದಕ್ಕೆ ಬೆಂಕಿ ಹಚ್ಚಿ ದನ ಹಸು ಕರುಗಳನ್ನು ಓಡಿಸಿಕೊಂಡು ಬಂದು, ಬೆಂಕಿಯಲ್ಲಿ ನುಗ್ಗಿಸುವುದು ನಡೆದು ಬಂದ ಕ್ರಮ. ಇದರಿಂದ ಕೆಟ್ಟ ದೃಷ್ಟಿ ನಿವಾರಣೆಯಾಗಿ ರಾಸುಗಳು ಮುಂದಿನ ಹದದ ಬೇಸಾಯಕ್ಕೆ ಸಜ್ಜಾಗುತ್ತವೆ. ಎನ್ನುವುದು ರೈತರ ನಂಬಿಕೆ. ಕಿಚ್ಚುಹಾಯಲು  ರಾಸುಗಳು ಸಿದ್ದವಾಗುವ ಬಗೆಯೇ ಸೋಜಿಗದ್ದು ಇದರ ಮೈ ಉಜ್ಜಿ ತೊಳೆದು, ಅರಿಶಿಣ ಹಚ್ಚಿ ಕೊಂಬಿಗೆ ಹೊಸ ಬಣ್ಣ ಬಳಿದು, ಕುತ್ತಿಗೆಗೆ ಹೂಹಾರ ಹಾಕಿ, ಕತ್ತರಿಸಿದ ಹೊಳೆಯುವ ಬಣ್ಣ ಬಣ್ಣದ ಬ್ಯಾಗಡೆ ಕಾಗದದ ತುಂಡುಗಳನ್ನು ಅಂಟಿಸಿ, ಸಿಂಗರಿಸಲಾಗುತ್ತದೆ. ಕೆಲವಡೆ ಕೊಂಬಿಗೆ ಬಲೂನು, ಬಾಳೆಹಣ್ಣಿನ ಚಪ್ಪು, ಕೊಬ್ಬರಿ ಕಟ್ಟಿ ಗಂಧದಕಡ್ಡಿಗಳನ್ನು ಸಿಕ್ಕಿಸುವುದೂ ಉಂಟು.


ರಾಸುಗಳನ್ನು ಓಡಿಸಿಕೊಂಡು ಬಂದು, ಬೆಂಕಿ ಹಾಯುವ ಗಂಡುಗಳು ಸಹ ಗಟ್ಟಿಮುಟ್ಟಾಗಿರಬೇಕು. ಒಮ್ಮೊಮ್ಮೆ ರಾಸು ಗಾಬರಿಯಿಂದ ಓಡಿ, ಇದರ ಹಗ್ಗ ಹಿಡಿದವರು ಜಾರಿ ಬಿದ್ದು ಸುಟ್ಟಗಾಯಗಳಿಗೆ ಒಳಗಾಗುವುದೂ ಉಂಟು. ಆದರೆ ಈಚಿನ ದಿನಗಳಲ್ಲಿ ಮುಂಜಾಗ್ರತೆ ಹೆಚ್ಚು ತೆಗೆದುಕೊಳ್ಳುತ್ತಿರುವುದರಿಂದ ಇಂತಹ ಅವಘಡಗಳ ಸಂಖ್ಯೆ ಕಡಿಮೆಯಾಗುತ್ತಿವೆ. ಒಟ್ಟಾರೆಯಾಗಿ ಸಂಕ್ರಾಂತಿ ರೈತರ ಬದುಕಿನಲ್ಲಿ ಹೊಸ ಅಧ್ಯಾಯ ತೆರೆಯುವ ಸಡಗರದ ಹಬ್ಬ. ವರ್ಷ ಪೂರ್ತಿ ತಮಗಾಗಿ ದುಡಿದ ರಾಸುಗಳಿಗೆ ಗೌರವ ತೋರುವ, ಅವುಗಳನ್ನು ಸಿಂಗರಿಸಿ ಪೂಜಿಸಿ ಧನ್ಯತೆ ಮೆರೆಯುವ ಹಬ್ಬ ಹೀಗಾಗಿಯೇ ಇದು ವಿಶೇಷ.


-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) 

ಸಂಸ್ಕೃತಿ ಚಿಂತಕರು

ಫ್ಯ್ಲಾಟ್ ನಂ 307, 3ನೇ ಮಹಡಿ, ವಿ2 ಸ್ನೇಹ ಅರ್ಪಾಟ್ಮೆಂಟ್, 

14ನೇ ಅಡ್ಡ ರಸ್ತೆ, ಗಿರಿನಗರ ಬಿಡಿಎ ಆವಲಹಳ್ಳಿ ಲೇಔಟ್,

ಬೆಂಗಳೂರು-560 085

ಇ-ಮೇಲ್: padmapranava@yahoo.com

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم