ಉಜಿರೆ: ಧರ್ಮಸ್ಥಳದಲ್ಲಿ ಶನಿವಾರ ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಸಮವಸರಣ ಪೂಜೆ ನಡೆಯಿತು. ಪಂಚನಮಸ್ಕಾರ ಮಂತ್ರ ಪಠಣ, ಭಜನೆ, ಸ್ತೋತ್ರ ಹಾಗೂ ಪೂಜಾ ಮಂತ್ರ ಪಠಣದೊಂದಿಗೆ ಅಷ್ಟವಿಧಾರ್ಚನೆ ಪೂಜೆ ನಡೆಯಿತು.
ಸುಶ್ರಾವ್ಯಗಾಯನ ಪೂಜೆಗೆ ವಿಶೇಷ ಮೆರುಗನ್ನು ನೀಡಿತು. ಶ್ರೀ ಬಾಹುಬಲಿ ಸೇವಾ ಸಮಿತಿಯ ಸದಸ್ಯರು ಸಹಕರಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಶ್ರೀಮತಿ ಶ್ರದ್ಧಾಅಮಿತ್, ಡಿ. ಸುರೇಂದ್ರಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರಕುಮಾರ್ ಮತ್ತು ಕುಟುಂಬಸ್ಥರು ಉಪಸ್ಥಿತರಿದ್ದರು.
ಅನೇಕಾಂತವಾದದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಗೇರುಕಟ್ಟೆ ಸರ್ಕಾರಿ ಪದವಿ ಪೂರ್ವಕಾಲೇಜಿನ ಶಿಕ್ಷಕ ಅಜಿತ್‌ಕುಮಾರ್ ಕೊಕ್ರಾಡಿ ಮಾತನಾಡಿ, ಮನ, ವಚನ ಮತ್ತು ಕಾಯದಿಂದ ಆಚಾರದಲ್ಲಿ ಅಹಿಂಸೆ ಮತ್ತು ವಿಚಾರದಲ್ಲಿಅನೇಕಾಂತ ವಾದ ಪಾಲನೆ ಮಾಡಿದರೆ ಆತ್ಮಕಲ್ಯಾಣದೊಂದಿಗೆ ಲೋಕ ಕಲ್ಯಾಣವೂ ಆಗುತ್ತದೆ. ತನ್ಮೂಲಕ ವಿಶ್ವಶಾಂತಿ ಲಭಿಸುತ್ತದೆ ಎಂದು ಹೇಳಿದರು.
ಅಹಿಂಸೆ, ಅನೇಕಾಂತವಾದ ಮತ್ತು ಅಪರಿಗ್ರಹ ಜೈನಧರ್ಮದ ಶ್ರೇಷ್ಠ ತತ್ವಗಳಾಗಿದ್ದು ಇವುಗಳ ಅನುಷ್ಠಾನದಿಂದ ವಿಶ್ವಶಾಂತಿ ಉಂಟಾಗುತ್ತದೆ. ವ್ಯವಹಾರಧರ್ಮ ಮತ್ತು ನಿಶ್ಚಯಧರ್ಮದ ಸಮನ್ವಯದಿಂದ ಎಲ್ಲರೂ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಪಾಕತಜ್ಷರಾದ ಪೆರಾಡಿಯ ನಾಗರಾಜ ಶೆಟ್ಟಿ ಮತ್ತು ಕನ್ನಡಿಕಟ್ಟೆಯ ಶಶಿಕಾಂತ ಜೈನ್ ಅವರನ್ನು ಸನ್ಮಾನಿಸಲಾಯಿತು.
ಮಹಾವೀರ ಜೈನ್ ಇಚ್ಲಂಪಾಡಿ ಕಾರ್ಯಕ್ರಮ ನಿರ್ವಹಿಸಿ ಕೊನೆಯಲ್ಲಿ ಧನ್ಯವಾದವಿತ್ತರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ