|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಹುಮುಖ ಪ್ರತಿಭೆ ಯಕ್ಷಗಾನ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಯತೀಶ್ ರೈ

ಬಹುಮುಖ ಪ್ರತಿಭೆ ಯಕ್ಷಗಾನ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಯತೀಶ್ ರೈ

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ



ಇವರಿಗೆ ಪ್ರಚಾರದ ಹಂಗಿಲ್ಲ, ಪ್ರಶಸ್ತಿ ಸನ್ಮಾನಗಳ ಹಂಗಿಲ್ಲ. ಹೀಗೆ ಯಕ್ಷಗಾನ  ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಸಿಕೊಂಡಿರುವ ಬಹುಮುಖ ಪ್ರತಿಭೆ ಯಕ್ಷಗಾನ ನಿರ್ದೇಶಕಿ  ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಕಲಾವಿದೆ ಶ್ರೀಮತಿ ಪೂರ್ಣಿಮಾ ಯತೀಶ್ ರೈ.


ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಸುರತ್ಕಲ್ ನ ಶ್ರೀಮತಿ ಶಾರದಾ ಎಸ್ ಶೆಟ್ಟಿ ಹಾಗೂ ಶ್ರೀ ಸೇಸಪ್ಪ ಬಿ ಶೆಟ್ಟಿ ಬಾಳ ಇವರ ಮಗಳಾಗಿ ಇವರ ಜನನ. ಬಿ.ಕಾಂ ಇವರ ವಿದ್ಯಾಭ್ಯಾಸ. ಹವ್ಯಾಸಿ ಯಕ್ಷಗಾನ ಕಲಾವಿದರು,ಸಂಘಟಕ ಶ್ರೀಯುತ ಮಾಧವ ಎಸ್ ಶೆಟ್ಟಿ ಬಾಳ ಇವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ. ಶ್ರೀ ರಮೇಶ್ ಶೆಟ್ಟಿ ಬಾಯಾರು ಹಾಗೂ ಶ್ರೀ ಶಿವರಾಮ್ ಪಣಂಬೂರು ಇವರ ಯಕ್ಷಗಾನ ಗುರುಗಳು. ಶ್ರೀ ಹರಿನಾರಾಯಣ ಬೈಪಡಿತ್ತಾಯ, ಶ್ರೀ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಶ್ರೀಮತಿ ಲೀಲಾವತಿ ಬೈಪಡಿತ್ತಾಯ ಇವರ ಹಿಮ್ಮೇಳದ ಗುರುಗಳು. 1988 ಡಿಸೆಂಬರ್ ತಿಂಗಳು "ಪುಣ್ಯಕೋಟಿ ಪ್ರಸಂಗದ" ಗಂಗೆ ಪಾತ್ರ ಹಾಗೂ 1989 ರಂದು ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ ತಂಡದ ಪ್ರಥಮ ಪ್ರದರ್ಶನ "ಅಭಿಮನ್ಯು ಕಾಳಗ" ಪ್ರಸಂಗದ "ಸೌಮಿತ್ರಿ" ಪಾತ್ರದ ಮೂಲಕ ಯಕ್ಷಗಾನ ರಂಗಪ್ರವೇಶವನ್ನು ಮಾಡುತ್ತಾರೆ.


ಯಕ್ಷಗಾನದ ಪರಂಪರೆಯನ್ನು ಶ್ರೀ ರಮೇಶ್ ಶೆಟ್ಟಿ ಬಾಯಾರು ಇವರಿಂದ ಎಲ್ಲಾ ವಿಧದಲ್ಲೂ ಕೇಳಿ ತಿಳಿದೆ. ಪ್ರಸಂಗಗಳ ಬಗ್ಗೆ ಅವರಿಂದ ಸಂಪೂರ್ಣ ಕೇಳಿ ಕಲಿತು ಆ ಬಳಿಕ ರಂಗಕ್ಕೆ ಹೋಗುವುದು ಕ್ರಮ. 2000 ದಲ್ಲಿ ಕಾಂತಾವರದಲ್ಲಿ ನಡೆದ ಸ್ಪರ್ಧೆಯಲ್ಲಿ ಹಿರಿಯರಿಂದ ಪ್ರಶಂಸೆಗೆ ಒಳಪಟ್ಟಿದ್ದೆ. ಹಾಗಾಗಿ ಪ್ರಥಮವಾಗಿ ಪರಂಪರೆಯನ್ನು ಪ್ರದರ್ಶಿಸಿದ ಮಹಿಳಾ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗಾಗಿ ಯಕ್ಷಗಾನದ ಪಾತ್ರದ ಬಗ್ಗೆ ಹಿರಿಯ ಕಲಾವಿದರಿಂದಲೂ ಕೇಳಿ ರಂಗ ಪ್ರವೇಶ ಮಾಡುತ್ತೇನೆ. ಪ್ರತೀ ಪಾತ್ರದ ಬಗ್ಗೆ ಅದರ ಪರಂಪರೆ, ಪಾತ್ರ ಚಿತ್ರಣದ ಬಗ್ಗೆ ಅಧ್ಯಯನ ಮಾಡಿ ಇವರು ಹಾಗೂ ತಂಡದ ಕಲಾವಿದರಿಗೆ ಮಾಹಿತಿ ನೀಡಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿ ಆಗಿದ್ದೇನೆ ಎಂದು ರೈ ಅವರು ಹೇಳುತ್ತಾರೆ.




ಇವರ ಮಹಿಷಾಸುರ ಪಾತ್ರವನ್ನು ಮೆಚ್ಚಿ ನುಡಿದ ದಿ. ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರನ್ನು ಸ್ಮರಿಸುತ್ತೇನೆ ಎಂದು ಹೇಳುತ್ತಾರೆ. ಬಾಲ್ಯದಿಂದಲೂ ಅವರ ಮಹಿಷಾಸುರ ಪಾತ್ರ ಕಂಡ ನಾನು ಆಕರ್ಷಿತಳಾಗಿ ಮಹಿಷಾಸುರನ ಪಾತ್ರದ ಬಗ್ಗೆ ಅತೀವ ಸಂತೋಷ ಪಟ್ಟಿದ್ದೇನೆ. ಹರಿನಾರಾಯಣ ಭಟ್ ಎಡನೀರು, ಶ್ರೀ ಸದಾಶಿವ ಶೆಟ್ಟಿಗಾರ ಅವರ ಮಹಿಷಾಸುರ ಪಾತ್ರ ತುಂಬಾ ಅಚ್ಚುಮೆಚ್ಚು. ನಿಜಕ್ಕೂ ಅನುಕರಣೆ ಅಲ್ಲ ಅನುಸರಿಸಿದ್ದು ಶ್ರೀ ಗಂಗಯ್ಯ ಶೆಟ್ಟಿ ಹಾಗೂ ಶ್ರೀ ಹರಿನಾರಾಯಣ ಭಟ್ ಮಹಿಷಾಸುರ ಪಾತ್ರದ ನಡೆಗಳನ್ನು ಎಂದರೆ ತಪ್ಪಾಗಲಿಕ್ಕಿಲ್ಲ.


ಅಭಿಮನ್ಯು ಕಾಳಗ, ದಕ್ಷ ಯಜ್ಞ, ವೀರಮಣಿ ಕಾಳಗ, ಅಗ್ರಪೂಜೆ, ಕೃಷ್ಣಲೀಲೆ ಕಂಸ ವಧೆ, ರತಿ ಕಲ್ಯಾಣ, ಗಧಾ ಯುದ್ಧ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.


ಶ್ರೀ ದೇವಿ, ಕೌಶಿಕೆ, ಗಂಗೆ, ಮಹಿಷಾಸುರ, ದಕ್ಷ, ಅರ್ಜುನ, ದೇವದೂತ, ಮಾಲಿನಿದೂತ,ಜಾಂಬವ, ವೀರಮಣಿ, ಕಂಸ, ಈಶ್ವರ, ದೇವೇಂದ್ರ, ಮುರಸುರ, ಲಕ್ಷಣಕುಮಾರ,ನಾಗ,ಮಧು,ಭಸ್ಮಸುರ ಇತ್ಯಾದಿ ಇವರು ಅಭಿನಯಿಸಿದ ಪಾತ್ರಗಳು.


ಯಕ್ಷಗಾನ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಕಲೆ ಶ್ರೀಮಂತವಾಗಿದೆ ಹಿಂದೆ ಆ ಕಾಲಕ್ಕೆತಕ್ಕಂತೆ ಪ್ರದರ್ಶನಗಳು ನಡೆಯುತ್ತಾ ಇತ್ತು. ಪರಂಪರೆಯಿಂದ ಕೂಡಿದ ಪ್ರದರ್ಶನಗಳು ನಡೆಯುತ್ತಿತ್ತು. ಕಟೀಲು, ಧರ್ಮಸ್ಥಳ ಮೇಳಗಳು ರಾತ್ರಿಯಿಂದ ಬೆಳಗ್ಗಿನ ತನಕ ಯಕ್ಷಗಾನ ಆಡಿ ತೋರಿಸುತ್ತಿದ್ದರು ಇದರಿಂದ ಸಂಪೂರ್ಣ ಪ್ರಸಂಗ ಅರ್ಥವಾಗುತ್ತಿತ್ತು. ನೋಡುವುದಕ್ಕೂ ತುಂಬಾ ಖುಷಿಯಾಗುತ್ತಿತ್ತು. ಕಲಾವಿದರ ಬದುಕು ಸಹ ಕಷ್ಟಕರವಾಗಿತ್ತು. ಆದರೆ ಹತ್ತು ಹದಿನೈದು ವರ್ಷಗಳಿಂದ ಯಕ್ಷಗಾನ ಬಹಳಷ್ಟು ಪ್ರಸಿದ್ಧಿ ಪಡೆದಿದೆ. ಕಾರಣ ಮಹಿಳಾ ತಂಡಗಳು, ಮಕ್ಕಳ ತಂಡಗಳು, ಶಾಲಾ ಕಾಲೇಜಿನಲ್ಲಿ ಯಕ್ಷಗಾನ ತರಗತಿಗಳು ಹವ್ಯಾಸಿ ಮೇಳ ಬಳಷ್ಟು ಯಕ್ಷಗಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಯಕ್ಷಗಾನ ಬೆಳವಣಿಗೆ ಕಾಣುತ್ತಿದೆ. ಆದರೂ ಪರಂಪರೆ ಕಾಣ ಸಿಗುವುದಿಲ್ಲ. ಕಾಲಮಿತಿಯಿಂದ ಕಥೆಗಳು ಅಪೂರ್ಣವಾದಂತೆ ಕಾಣುತ್ತಿದೆ. ಕೆಲವೊಂದು ಪಾತ್ರಗಳು ಕಾಣಲು ಸಿಗುವುದಿಲ್ಲ. ಕೇವಲ ಕಟೀಲು ಮೇಳ (ತೆಂಕು)  ಹೊರತು ಬೇರೆ ಯಾವುದು ಇಲ್ಲ. ಪ್ರೇಕ್ಷಕರ ಬಗ್ಗೆ ಯೋಚಿಸಿದರೆ ಅಭಿಮಾನಿಗಳ ಸಂಖ್ಯೆ ಅತಿಯಾಗಿದೆ. ಆದರೆ ಆಗಿನ ಕಾಲದಲ್ಲಿ ಊರಿನವರು ಪ್ರೇಕ್ಷಕರು ಮಾತ್ರ ತುಂಬಾ ಶಿಸ್ತುಬದ್ಧವಾಗಿ ಕತೆಯನ್ನು ಆಲಿಸುತ್ತಿದ್ದರು. ತುಂಬಾ ಪ್ರಸಿದ್ಧ ಹಿರಿಯ ಕಲಾವಿದರನ್ನು, ಹಿಮ್ಮೇಳದವರನ್ನು ನೆನಪಿಸುತ್ತಿದ್ದರು. ಈಗಿನ ಪ್ರೇಕ್ಷಕರಲ್ಲಿ 100 ರಲ್ಲಿ 50 ಮಂದಿ ಯಕ್ಷಗಾನದ ಒಲವಿನಿಂದ ಬಂದರೆ ಸ್ವಲ್ಪ ಜನ ಹೀಗೆ ಬಂದು ಹೋಗುವವರು ಇದ್ದಾರೆ. ಹೊರ ರಾಜ್ಯಗಳಲ್ಲಿ ಯಕ್ಷಗಾನ ಪ್ರೇಕ್ಷಕರು ಬಹಳ ಇದ್ದಾರೆ ತುಂಬಾ ಪ್ರೋತ್ಸಾಹ ನೀಡುತ್ತಾರೆ. ನಮ್ಮೂರಿಗಿಂತ ಹೊರ ರಾಜ್ಯಗಳಲ್ಲಿ ಮರ್ಯಾದೆ ಜಾಸ್ತಿ. ಇತ್ತೀಚಿಗೆ ವಿದ್ಯಾವಂತರು ಅತಿಯಾಗಿ ಯಕ್ಷಗಾನ ಅಧ್ಯಯನ, ವಿಶೇಷ ಪ್ರಯೋಗ, ವಿಭಿನ್ನವಾಗಿ ಸಂಯೋಜನೆ ಮಾಡಿ ಯಕ್ಷಗಾನದ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ. ಪರಂಪರೆಯ ಒಡ್ಡೋಲಗದ ಬಗ್ಗೆ ಆಸಕ್ತಿ ತೋರಿ ಅದನ್ನು ಪ್ರದರ್ಶನ ಮಾಡುತ್ತಾರೆ. ಹವ್ಯಾಸಿ ತಂಡಗಳು ಪೂರ್ವರಂಗದ ಅಭ್ಯಾಸದಲ್ಲಿ ನಿರತರಾಗಿದ್ದಾರೆ ಎಂದು ರೈ ಅವರು ಹೇಳುತ್ತಾರೆ.


ಯಕ್ಷಗಾನ ರಂಗದಲ್ಲಿ ಮುಂದಿನ ಯೋಜನೆ ಬಗ್ಗೆ ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ರಂಗದಲ್ಲಿ ತೊಡಗಿಸಿ ಸತತ ೩೩ ವರುಷ (1988 ರಿಂದ 2021) ಕಳೆದು ಹೋದದ್ದೇ ತಿಳಿಯಲಿಲ್ಲ. ಕಲಾವಿದೆಯಾಗಿ, ಹಿಮ್ಮೇಳವಾದಿಕೆಯಾಗಿ, ಸಂಘಟಕಿಯಾಗಿ, ಗುರುವಾಗಿ ನನ್ನ ಜೀವನದಲ್ಲಿ ತುಂಬಾ ಪಡೆದಿದ್ದೇನೆ. ಮಹಿಳೆಯಾದ ಕಾರಣ ಅನಿರೀಕ್ಷಿತವಾಗಿ ವೇಷದಿಂದ ವಿಮುಕ್ತಿ ಪಡೆಯುವ ಸಂದರ್ಭ ಬಂದರೂ, ಸಂಘಟಕಿಯಾಗಿ, ಗುರುವಾಗಿ ಯಕ್ಷಗಾನವನ್ನು ಉಳಿಸಬೇಕೆಂದು ಮನದಿಚ್ಛೆ.

ಶ್ರೀ ಮಹಾಗಣಪತಿ ಮಹಿಳಾ ಯಕ್ಷಗಾನ ಸಂಘ ಬಾಳ ಕಾಟಿಪಳ್ಳ, ಶ್ರೀ ಮಹಾಗಣಪತಿ ಮಕ್ಕಳ ಮತ್ತು ಮಹಿಳಾ ಯಕ್ಷಗಾನ ಮಂಡಳಿ  ಹಾಗೂ ಯಕ್ಷಮಣಿ ಕಲಾ ತಂಡ ಚೇಳ್ಯಾರು ಮತ್ತು ಅಧ್ಯಯನ ಕೇಂದ್ರ ಗೋವಿಂದದಾಸ ಕಾಲೇಜಿನ ನಿರ್ದೇಶಕಿಯಾಗಿ ಮುಂದುವರೆದು ಯಕ್ಷಗಾನ ಬೆಳವಣಿಗೆಗೆ ನನ್ನಿಂದಾದ ಕೊಡುಗೆ ನೀಡಬೇಕು ಎಂದು ಬಯಸುತ್ತಾರೆ.


ಯಕ್ಷಗಾನ, ಜನಪದ ನೃತ್ಯ ,ನಾಟಕ, ಕ್ರೀಡೆ ಇವರ ಹವ್ಯಾಸಗಳು.

ಕರ್ನಾಟಕ ಸಂಘ ದೆಹಲಿ, ಕರ್ನಾಟಕ ಸಂಘ ಚೆನ್ನೈ, ಕರ್ನಾಟಕ ಬಯಲಾಟ ಅಕಾಡಮಿ ಕಾರ್ಯಕ್ರಮ ಹಾಗೇ ಕೇರಳ, ಕರ್ನಾಟಕ, ಪುಣೆ, ಮಹಾರಾಷ್ಟ್ರ ಹಾಗೂ ಧಾರ್ಮಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಕ್ರಮಗಳ ಪ್ರತಿಷ್ಠಿತ ವೇದಿಕೆಯಲ್ಲಿ ಪ್ರದರ್ಶನವನ್ನು ನೀಡಿರುತ್ತಾರೆ.


2015-16 ರಲ್ಲಿ ಕರ್ನಾಟಕ ಸರ್ಕಾರ "ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ", ಕರ್ನಾಟಕ ಯಕ್ಷ ಮಹಿಳಾ ರತ್ನ ಪ್ರಶಸ್ತಿ, ಯಕ್ಷ ಲಕ್ಷ್ಮೀ ಪ್ರಶಸ್ತಿ, ಯಕ್ಷ ರತ್ನ ಪ್ರಶಸ್ತಿ, ಯಕ್ಷ ಧ್ರುವ ಪ್ರಶಸ್ತಿ, ಯಕ್ಷ ಕಲಾರಾಧಕಿ ಪ್ರಶಸ್ತಿ, ಯಕ್ಷ ಪ್ರತಿಭೆ ಪ್ರಶಸ್ತಿ, ಪ್ರೇಮ ನಾರಾಯಣ ಪ್ರಶಸ್ತಿ, ಯಕ್ಷ ಸಾಧಕಿ ಪ್ರಶಸ್ತಿ, ಯಕ್ಷ ಪ್ರಮೀಳಾ ಪ್ರಶಸ್ತಿ, Outstanding young person 2004 Award, "ಯಕ್ಷಪೂರ್ಣಿಮಾ" ಬಿರುದು ಹಾಗೂ ಅನೇಕ ಸಂಘ ಸಂಸ್ಥೆಗಳು ಇವರ ಸಾಧನೆಯನ್ನು ನೋಡಿ ಸನ್ಮಾನ ಹಾಗೂ ಪುರಸ್ಕಾರ ನೀಡಿ ಗೌರವಿಸಿದ್ದಾರೆ.


ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸತತ ಆರು ವರ್ಷದಿಂದ ಯಕ್ಷಗಾನ ಕಲಾ ಸೇವೆಯಲ್ಲಿ ತೊಡೆಗಿಸಿಕೊಂಡಿದ್ದಾರೆ ಶ್ರೀಮತಿ ಪೂರ್ಣಿಮಾ ರೈ ಅವರು.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯಿಂದ ಕರ್ನಾಟಕ ಸರ್ಕಾರ ನೀಡಿದ 25000 ಮೊತ್ತವನ್ನು ಕಲಾವಿದರ ಆಶ್ರಯ ಯೋಜನೆಗೆ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಇದರ ಅಧ್ಯಕ್ಷರಾದ ಸತೀಶ್ ಶೆಟ್ಟಿ ಪಟ್ಲ ಅವರಿಗೆ ಹಸ್ತಾಂತರಿಸಿ ಕಲಾ ಸೇವೆಯನ್ನು ಮಾಡಿರುತ್ತಾರೆ.


ಪೂರ್ಣಿಮಾ ರೈ ಅವರು ಯತೀಶ್ ರೈ ಅವರನ್ನು ವಿವಾಹವಾಗಿ ಇಬ್ಬರು ಮಕ್ಕಳಾದ ಸಾಕ್ಷ ರೈ ಹಾಗೂ ಸತ್ವಿಕ್ ರೈ ಜೊತೆಗೆ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

Photos_By:- Chandrika Bhat movvar, Kiran vitla photography, Krishna Kumar.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post