|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವೇಕಾನಂದ ಮಹಾವಿದ್ಯಾಲಯದಲ್ಲಿ ಭವಿಷ್ ಘಟಕದ ವಾರ್ಷಿಕ ಚಟುವಟಿಕೆ ಉದ್ಘಾಟನೆ ಮತ್ತು ಗುರುವಂದನೆ

ವಿವೇಕಾನಂದ ಮಹಾವಿದ್ಯಾಲಯದಲ್ಲಿ ಭವಿಷ್ ಘಟಕದ ವಾರ್ಷಿಕ ಚಟುವಟಿಕೆ ಉದ್ಘಾಟನೆ ಮತ್ತು ಗುರುವಂದನೆ

 

ಪುತ್ತೂರು ಡಿ.20: ಮಾನವ ಸಂಪನ್ಮೂಲಗಳನ್ನು ಬೆಳೆಸಿಕೊಳ್ಳಲು ಮತ್ತು ಸಮರ್ಥವಾಗಿ ಉಳಿಸಿಕೊಳ್ಳಲು ಅನೇಕ ಪರಂಪರೆಗಳಿವೆ. ಸಮಾಜವು ನಿಗದಿತ ಚೌಕಟ್ಟಿನಲ್ಲಿ ವರ್ತಿಸದೆ ಇದ್ದರೆ ಅಲ್ಲಿ ಶಾಸನಬದ್ಧ ಹಾಗೂ ಶಿಸ್ತು ಬದ್ಧ ಚೌಕಟ್ಟನ್ನು ನಿರ್ಮಿಸಲಾಗುತ್ತದೆ. ಅಂತೆಯೇ ಸಮಾಜದ ಬದಲಾವಣೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗುರುಗಳ ಪಾತ್ರ ಬಹುಮುಖ್ಯವಾಗಿದೆ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.


ಅವರು ಕಾಲೇಜಿನ ಐಕ್ಯೂಎಸಿ ಘಟಕ ಹಾಗೂ ಭವಿಷ್ ಘಟಕ ಆಯೋಜಿಸಿದ, ಭವಿಷ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸೋಮವಾರ ಮಾತನಾಡಿದರು.


ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಸಾಮಾಜಿಕ ಮೌಲ್ಯಗಳು ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಭವಿಷ್ ಘಟಕವು ಸ್ಥಾಪಿತವಾಗಿದೆ. ವಿದ್ಯಾರ್ಥಿಗಳಲ್ಲಿ ವೈಯಕ್ತಿಕ ಬೆಳವಣಿಗೆ ಹಾಗೂ ಸಮಗ್ರ ವ್ಯಕ್ತಿತ್ವವನ್ನು ರೂಪಿಸುವ ಮೂಲಕ ರಾಷ್ಟ್ರ ನಿರ್ಮಾಣದ ಹಾದಿಯಲ್ಲಿ ಹಾಗೂ ಸಮಾಜದ ತೊಡಕುಗಳನ್ನು ದೂರ ಮಾಡುವಲ್ಲಿ ಈ ಸಂಘಟನೆ ಮಾದರಿಯಾಗಲಿ ಎಂದರು.


ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್, ಸಮಾಜವನ್ನು ತಿದ್ದುವ ಕಾರ್ಯ ಒಬ್ಬ ಶಿಕ್ಷಕ ನಿಂದ ಸಾಧ್ಯ. ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ. ಒಬ್ಬ ಶಿಕ್ಷಕನಿಂದ ಹಲವು ಪ್ರತಿಭಾನ್ವಿತ ವಿದ್ಯಾರ್ಥಿಗಳು ಸಮಾಜಕ್ಕೆ ನೀಡಲು ಸಾಧ್ಯ. ಹಾಗಾಗಿ ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡ ವಿದ್ಯಾರ್ಥಿ ಗಳ ನಿರ್ಧಾರ ಶ್ಲಾಘನೀಯ ಎಂದು ನುಡಿದರು.


ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕ ಮೇಜರ್ ಎಂ.ಎನ್ ಚೆಟ್ಟಿಯಾರ್ ಹಾಗೂ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಶ್ರೀಧರ್ ಭಟ್ ಬಡೆಕ್ಕಿಲ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಗುರುವಂದನೆಯನ್ನು ಸ್ವೀಕರಿಸಿ ಮಾತನಾಡಿದ ನಿವೃತ್ತ ಆಂಗ್ಲ ಭಾಷಾ ಉಪನ್ಯಾಸಕ ಮೇಜರ್ ಎಂ.ಎನ್ ಚೆಟ್ಟಿಯಾರ್, ವಿದ್ಯಾರ್ಥಿಗಳ ಪ್ರೀತಿಯನ್ನು ಗಳಿಸುವುದು ಬೋಧನಾ ವೃತ್ತಿಯಲ್ಲಿ ಕ್ಲಿಷ್ಟಕರವಾದ ಸಂಗತಿ. ಆದರ್ಶ ಅಧ್ಯಾಪಕರಾಗಲು ಎಲ್ಲರಿಂದಲೂ ಸಾಧ್ಯವಿಲ್ಲ ಆದರೆ ಸತತ ಪರಿಶ್ರಮದಿಂದ ಈ ಕಾರ್ಯ ಸಾಧ್ಯ.ವಿದ್ಯಾರ್ಥಿಗಳು ಓದುವ, ಕೇಳುವ, ಮಾತನಾಡುವ ಹಾಗೂ ಬರವಣಿಗೆಯ ಕಲೆಯನ್ನು ಮೈಗೂಡಿಸಿಕೊಳ್ಳಬೇಕು.ವಿದ್ಯಾರ್ಥಿಗಳು ಉಪನ್ಯಾಸಕರಿಗೆ ವಿಧೇಯರಾಗಿದ್ದು ಅವರಿಂದ ಸ್ಫೂರ್ತಿದಾಯಕವಾದ ವಿಷಯಗಳನ್ನು ಕಲಿಯಬೇಕು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ವಿದ್ಯಾರ್ಥಿಗಳಿಂದ ಗುರುವಂದನೆಯನ್ನು ಸ್ವೀಕರಿಸಿದ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಶ್ರೀಧರ್ ಭಟ್ ಬಡೆಕ್ಕಿಲ ಮಾತನಾಡಿ, ವಿದ್ಯಾರ್ಥಿಗಳಿಗೆ ಗುರುವಿನ ಕಲ್ಪನೆ ಹಾಗೂ ಮೌಲ್ಯವನ್ನು ನೀಡುವ ಕಾರ್ಯಕ್ರಮ ಇದಾಗಿದೆ. ಆಚಾರ್ಯ ದೇವೋ ಭವ ಎಂಬ ಮಾತಿನಂತೆ ಗುರುವಿಗೆ ಮಹತ್ವವಾದ ಸ್ಥಾನವಿದೆ. ಗುರುವಿನ ಸ್ಥಾನದಲ್ಲಿರುವವರಿಗೆ ಗೌರವ ನೀಡಿದರೆ ಶಿಕ್ಷಣವು ಹೆಚ್ಚಿನ ಮಹತ್ವವನ್ನು ಹೊಂದುತ್ತದೆ. ಪಾಶ್ಚಾತ್ಯರು ಗುರುಗಳನ್ನು ಏಕವಚನದಲ್ಲಿ ಹಾಗೂ ಹೆಸರಿನಿಂದ ಕರೆಯುತ್ತಾರೆ. ಆದರೆ ಈ ಕಾರ್ಯಕ್ರಮವು ಗೌರವ ನಮನ ಸಲ್ಲಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಬಿಂಬಿಸುತ್ತಿದೆ.


ಉತ್ತಮ ಅಧ್ಯಾಪಕನಾಗಲು ಮೂರು ಸರಳ ಸೂತ್ರಗಳನ್ನು ಪಾಲಿಸಬೇಕು. ವೃತ್ತಿಯನ್ನು ಪ್ರೀತಿಸುವುದರಿಂದ ಅದು ನಮಗೆ ತೃಪ್ತಿಯನ್ನು ನೀಡುತ್ತದೆ. ಪಾಠ ಮಾಡುವ ವಿಷಯದ ಬಗೆಗಿನ ಒಲವನ್ನು ಹೊಂದಿರಬೇಕು ಹಾಗೂ ವಿದ್ಯಾರ್ಥಿಗಳನ್ನು ಪ್ರೀತಿಸಬೇಕು. ಯಾವ ಶಿಕ್ಷಕ ವಿದ್ಯಾರ್ಥಿಗಳನ್ನು ಪ್ರೀತಿಸುತ್ತಾನೋ ಆ ಶಿಕ್ಷಕನಿಗೆ ವಿದ್ಯಾರ್ಥಿಗಳಿಂದ ಪ್ರೀತಿ ದೊರೆಯುತ್ತದೆ. ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಲ್ಲ, ಅಂತೆಯೇ ವಿದ್ಯಾರ್ಥಿಗಳಿಲ್ಲದೆ ಶಿಕ್ಷಕರಿಲ್ಲ. ವಿದ್ಯಾರ್ಥಿ ಹಾಗೂ ಶಿಕ್ಷಕರ ಸಂಬAಧ ಪವಿತ್ರವಾದದ್ದು. ಉತ್ತಮ ಶಿಕ್ಷಕನಾಗಬೇಕಾದರೆ ಒಳ್ಳೆಯ ವಿದ್ಯಾರ್ಥಿಯಾಗಿರಬೇಕು. ಶಿಕ್ಷಕರು ಸಂವಹನ ಕೌಶಲ್ಯವನ್ನು ಹೊಂದಿರಬೇಕು, ಇದರಿಂದ ಶಿಕ್ಷಕರ ಮಾತು ವಿದ್ಯಾರ್ಥಿಗಳ ಮನ ಮುಟ್ಟುತ್ತದೆ. ಅಧ್ಯಾಪಕರಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ಸಾಹ ಹಾಗೂ ಚೈತನ್ಯ ತುಂಬಿರಬೇಕು ಎಂದು ತಿಳಿಸಿದರು.


ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಹೆಚ್. ಜಿ. ಗುರುವಂದನೆ ಸ್ವೀಕರಿಸಿದ ಪ್ರಾಧ್ಯಾಪಕರನ್ನು ಇಂದಿನ ವಿದ್ಯಾರ್ಥಿಗಳಿಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ದ್ವಿತೀಯ ಬಿ.ಸಿ.ಎ. ವಿದ್ಯಾರ್ಥಿನಿ ವಿಭಾಶ್ರೀ ಗುರುಗಳ ಮಹತ್ವವನ್ನು ಸಾರುವ ಗೀತೆಯನ್ನು ಹಾಡಿದರು. ವೇದಿಕೆಯಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಶಿವಪ್ರಸಾದ್ ಕೆ.ಎಸ್. ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಭವಿಷ್ ಘಟಕದ ಸಂಯೋಜಕರು, ಸದಸ್ಯರು, ಕಾಲೇಜಿನ ಪದವಿ ಹಾಗೂ ಸ್ನಾತಕೋತ್ತರ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು, ಉಪಸ್ಥಿತರಿದ್ದರು.


ತೃತೀಯ ಬಿ.ಎ. ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಕೆ. ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಪ್ರಸ್ತಾವನೆಗೈದರು. ಭವಿಷ್ ಘಟಕದ ಸಂಯೋಜಕಿ ಲಾವಣ್ಯ ಸಿ.ಕೆ. ಸ್ವಾಗತಿಸಿದರು. ಪ್ರಥಮ ಬಿ.ಕಾಂ ವಿದ್ಯಾರ್ಥಿ ನವೀನಕೃಷ್ಣ ವಂದಿಸಿದರು. ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿ ಮನೀಷಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post