ಕುವೆಂಪು ವೈಚಾರಿಕತೆಗೆ ಮಾನವತೆಯೇ ಆಧಾರ: ಪ್ರೊ. ಪಿ ಎಸ್‌ ಯಡಪಡಿತ್ತಾಯ

Upayuktha
0

 

ಮಂಗಳೂರು: ಕುವೆಂಪು ಅವರು ಭಾರತೀಯ ಪರಂಪರೆಯಿಂದ, ವಿವೇಕಾನಂದ, ಅರವಿಂದ ಮೊದಲಾದ ಸಂತರ ಚಿಂತನೆಗಳಿಂದ, ಪಾಶ್ಚಾತ್ಯ ಸಾಹಿತ್ಯದಿಂದ ಪ್ರಭಾವಿತರಾಗಿದ್ದರು ಮಾತ್ರವಲ್ಲ ಪರಂಪರೆಯ ಮನುಷ್ಯ ವಿರೋಧಿ ನಿಲುವುಗಳನ್ನು ಪ್ರಶ್ನಿಸುತ್ತಿದ್ದರು. ಮಾನವತೆಯೇ ಅವರ ವೈಚಾರಿಕತೆ ಆಧಾರ ಸ್ತಂಭ, ಎಂದು ಮಂಗಳೂರು ವಿವಿಯ ಕುಲಪತಿ ಪ್ರೊ. ಪಿ.ಎಸ್ ಯಡಪಡಿತ್ತಾಯ ಅಭಿಪ್ರಾಯಪಟ್ಟರು.


ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ನಡೆದ 'ಆಗು ನೀ ಅನಿಕೇತನ' ಎಂಬ ಕುವೆಂಪು ನೆನಪು ಕಾರ್ಯಕ್ರಮ ಹಾಗೂ ಪ್ರಸಾರಾಂಗ ಪ್ರಕಟಿಸಿದ 'ಸಾಹಿತ್ಯ ಮಂಗಳ ೧' ಪದವಿ ಕನ್ನಡ ಐಚ್ಛಿಕ ಪಠ್ಯಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಇಂದು ಸಾಮಾಜಿಕ ಸ್ಥಿತಿ ಜಾತಿಗಳಿಗೆ ನಮ್ಮನ್ನು ಒತ್ತಾಯಪೂರ್ವಕ ಅಂಟಿಸಿ ನೋಡುವ ಪ್ರವೃತ್ತಿ ಬೆಳೆಯುತ್ತಿದೆ. ಜಾತಿ, ಮತ, ಧರ್ಮಗಳನ್ನು ಮೀರಿದ ಕುವೆಂಪು ಅವರ ವಿಶ್ವಮಾನವ ಸಂದೇಶ ನಮ್ಮ ಕಣ್ತೆರೆಸಲಿ, ಎಂದು ಅವರು ಆಶಿಸಿದರು.


ವಿಶೇಷ ಉಪನ್ಯಾಸ ನೀಡಿದ ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್ ಜಿ. ಶ್ರೀಧರ್, ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಂಡಿದ್ದ ಕುವೆಂಪು ಅದನ್ನು ಆಕ್ರಮಣಶೀಲವಾಗಿ ಮಾಡದೇ ಹೃದಯ ಪರಿವರ್ತನೆಯ ದಾರಿ ತುಳಿದರು. ಪರಂಪರೆಯ ಹೊಕ್ಕುಳ ಬಳ್ಳಿಯನ್ನು ಕಡಿದುಕೊಂಡು ಬದಲಾವಣೆ ಹೊಂದುವುದು ಸಾಧ್ಯವಿಲ್ಲ. ಪ್ರಶ್ನಿಸದೇ ಸ್ವಂತಿಕೆ ಹೊಂದುವುದು ಸಾಧ್ಯವಿಲ್ಲ ಎಂಬುದು ಅವರ ವೈಚಾರಿಕತೆಯ ತಿರುಳು ಎಂದರು. ಗಾಂಧಿವಾದದಿಂದ ಪ್ರಭಾವಿತರಾಗಿದ್ದ ಕುವೆಂಪು ಸಸ್ಯಾಹಾರದ ಪ್ರಬಲ ಪ್ರತಿಪಾದಕರಾಗಿದ್ದರು. ಶಿಕ್ಷಣದಲ್ಲಿ ಕನ್ನಡ ಮಾಧ್ಯಮವಾಗಬೇಕು ಎಂಬ ಆಕಾಂಕ್ಷೆ ಇಂದಿಗೂ ಸಾಕಾರಗೊಂಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.


ಅಧ್ಯಕ್ಷತೆ ವಹಿಸಿದ್ದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಡಾ. ಸೋಮಣ್ಣ ಹೊಂಗಳ್ಳಿ, ಕುವೆಂಪು ಅವರ ಬರಹಗಳಲ್ಲಿ ಪ್ರಕೃತಿ ಪ್ರೀತಿ ಮತ್ತು ಮನುಷ್ಯ ಪ್ರೀತಿಯ ಹಲವು ಆಯಾಮಗಳಿವೆ ಎಂದರು. ಪ್ರಸಾರಾಂಗದ ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಸಾಹಿತ್ಯ ಮಂಗಳ ಪಠ್ಯ ಪುಸ್ತಕದ ಕಾರ್ಯನಿರ್ವಾಹಕ ಸಂಪಾದಕ ಡಾ. ಮಾಧವ ಎಂ.ಕೆ, ಬೆಳ್ತಂಗಡಿ ಸರಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.


ಸಮಾರಂಭದಲ್ಲಿ ಪ್ರಸಾರಾಂಗ ಪ್ರಕಟಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿಯ ನೂತನ ಪಠ್ಯಕ್ರಮಕ್ಕೆ ಅನುಗುಣವಾಗಿ ರೂಪಿಸಿದ ಪದವಿ ಕನ್ನಡ ಐಚ್ಛಿಕ ಪಠ್ಯಪುಸ್ತಕ 'ಸಾಹಿತ್ಯ ಮಂಗಳ ೧' ಕೃತಿಯನ್ನು ಕುಲಪತಿಗಳು ಬಿಡುಗಡೆಗೊಳಿಸಿದರು. ಸಂಶೋಧನಾರ್ಥಿ ಚಂದನಾ ಕೆ.ಎಸ್ ಸ್ವಾಗತಿಸಿದರು. ನವ್ಯಶ್ರೀ ಎಸ್ ನಿರೂಪಿಸಿದರು. ಚೇತನ್ ಮುಂಡಾಜೆ ವಂದಿಸಿದರು.


ಕುವೆಂಪು ನಾಟಕ, ಗೀತೆಗಳ ಪ್ರಸ್ತುತಿ


ಕಾರ್ಯಕ್ರಮದಲ್ಲಿ ರಾಮಾಂಜಿ ಕುವೆಂಪು ನಾಟಕದ ಆಯ್ದ ಭಾಗಗಳನ್ನು, ಶ್ರೀವಾಣಿ ಕಾಕುಂಜೆ ಕುವೆಂಪು ಗೀತೆಗಳನ್ನು, ಮಧುಕುಮಾರ್ ಮತ್ತು ಅಶ್ವಿನಿ ಕುವೆಂಪು ಅವರ ಸಪ್ತಸೂತ್ರ ಮತ್ತು ವಿಶ್ವಮಾನವ ಸಂದೇಶಗಳನ್ನು ಪ್ರಸ್ತುತಪಡಿಸಿದರು. ಬಳಿಕ ಕುವೆಂಪು ಕಾದಂಬರಿ ಆಧಾರಿತ ಚಲನಚಿತ್ರ 'ಕಾನೂರು ಹೆಗ್ಗಡತಿ' ಪ್ರದರ್ಶನ ನಡೆಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top