ಬೆಂಗಳೂರು: ಸುಧಾಮೂರ್ತಿ ಹೆಸರು ಕೇಳಿದ ತಕ್ಷಣ ನೆನಪಾಗೋದು ಸರಳ ಜೀವನ, ವಾತ್ಸಲ್ಯ ಹೃದಯ, ಪರೋಪಕಾರವೆಂಬ ಸದ್ಗುಣ. ಇವರು ಇನ್ಫೋಸಿಸ್ ಪ್ರತಿಷ್ಠಾನದ ಮೂಲಕ ಕಳೆದ 25 ವರ್ಷಗಳಲ್ಲಿ ಮಾಡಿದ ಸೇವೆ ಅಪಾರ. ಆದರೆ ಇದೀಗ ಸಮಾಜಮುಖಿ ಕಾರ್ಯಗಳ ಉದ್ದೇಶಕ್ಕಾಗಿ ಹುಟ್ಟುಹಾಕಿದ ಇನ್ಫೋಸಿಸ್ ಪ್ರತಿಷ್ಠಾನದ ಪಯಣವನ್ನು ಮುಗಿಸಲಿದ್ದಾರೆ.
ಡಿಸೆಂಬರ್ 31 ರಂದು ಸುಧಾಮೂರ್ತಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸ್ಥಾನದಿಂದ ನಿವೃತ್ತಿಯಾಗಲಿದ್ದಾರೆ ಎಂದು ಸಂಸ್ಥೆ ಹಲವು ದಿನಗಳ ಹಿಂದೆಯೇ ಘೋಷಿಸಿತ್ತು.
ಇದೀಗ ಆ ಸುದ್ದಿ ನಿಜವಾಗಿದೆ. ಈ ವರ್ಷದ ಕೊನೆಗೆ ಅವರು ತಮ್ಮ ಸ್ಥಾನಕ್ಕೆ ವಿದಾಯವನ್ನು ಹೇಳಲಿದ್ದಾರೆ.
ಆದರೆ ಅವರು " ನಾನು ಸಂಸ್ಥೆಯಿಂದ ನಿವೃತ್ತಿಯಾಗುತ್ತಿದ್ದೇನೆ ಹೊರತು ಸೇವೆಯಿಂದಲ್ಲ. ನನ್ನ ಸ್ವಂತ ಹಣದಲ್ಲಿ ಮೂರ್ತಿ ಪ್ರತಿಷ್ಠಾನ ಸ್ಥಾಪಿಸಿ ಅದರ ಮೂಲಕ ಸೇವೆಯನ್ನು ಮುಂದುವರೆಸಲಿದ್ದೇನೆ. ನನ್ನ ಈ ಪಯಣದಲ್ಲಿ ಬೆಂಬಲವಿತ್ತ ಎಲ್ಲರಿಗೂ ಕೃತಜ್ಞತೆಗಳು " ಎಂದು ಇವರು ಕರ್ತವ್ಯಕ್ಕೆ ವಿದಾಯ ಹೇಳುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದಾರೆ.