|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಥೆ: ತೀರ್ಥ ಯಾತ್ರೆ

ಕಥೆ: ತೀರ್ಥ ಯಾತ್ರೆ


ಪಾರ್ವತಮ್ಮನವರು ತಮ್ಮ ಜೀವಿತ ಕಾಲದಲ್ಲಿ ಇಂದಿನಷ್ಟು ಖುಷಿಯಾಗಿ ಯಾವತ್ತೂ ಇರಲಿಲ್ಲ. ತಮ್ಮ ಗತ ಬದುಕಿನಲ್ಲಿ ಬಡತನದ ಹಲವು ಮಜಲುಗಳನ್ನು ಶ್ರೀಮಂತ ಮನಸ್ಸಿನಿಂದ ದಾಟಿ ಅನುಭವದ ಮೂಟೆಗಳನ್ನೇ ಪೇರಿಸಿಟ್ಟವರು. ಪ್ರತಿಯೊಂದು ಹಂತದಲ್ಲೂ ಯಾವುದೇ ಸೋಲನ್ನು ಒಪ್ಪಿಕೊಳ್ಳದೆ ಮೆಟ್ಟಿ ನಿಂತವರು ಮಾತ್ರವಲ್ಲ ಕಾಯದಲ್ಲೂ ಗಟ್ಟಿಯಾಗಿದ್ದರು. ಹಾಗೆಯೇ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಬದರಿ ಕೇದಾರಕ್ಕೆ ಹೋಗಬೇಕೆಂದು ಹಲವಾರು ವರ್ಷಗಳಿಂದಲೇ ಸಂಕಲ್ಪ ಮಾಡಿಕೊಂಡಿದ್ದರು. ಅದಕ್ಕಾಗಿ ಯಾವುದೇ ಕಷ್ಟಗಳನ್ನು ಎದುರಿಸಲೂ ಸಿದ್ಧರಾಗಿದ್ದರು. ಆದರೆ ಬಡತನದ ಬದುಕು ಅಂಥ ದೊಡ್ಡ ಆಸೆಯನ್ನು ಅಷ್ಟು ಬೇಗ ಪೂರೈಸೀತೇ? ಅದರ ಅರಿವು ಪಾರ್ವತಮ್ಮನವರಿಗೂ ಇತ್ತು. ಆದರೆ ಮನುಷ್ಯನಿಗೆ ಅಸಾಧ್ಯವಾದುದು ಯಾವುದೂ ಇಲ್ಲವಾದರೂ ಕಾಲಕ್ಕೆ ನಾವು ಕಾಯಬೇಕೆಂಬ ತಿಳಿವೂ ಇದ್ದುದರಿಂದ ಪಾರ್ವತಮ್ಮ ಆಶಾವಾದಿಯೇ ಆಗಿದ್ದರು. ಆಪತ್ಕಾಲಕ್ಕೆ ಆಗಬಹುದೆಂದು ಹಲವಾರು ವರ್ಷಗಳಿಂದ ಚಾಚೂ ತಪ್ಪದೆ ಜೀವವಿಮೆಗೆ ಕಟ್ಟಿದ ಹಣ ಲಕ್ಷಕ್ಕೂ ಮಿಕ್ಕಿ ಕೈ ಸೇರಿದ್ದರಿಂದ ಪಾರ್ವತಮ್ಮನವರ ಆಸೆಗೆ ಮತ್ತೊಮ್ಮೆ ಜೀವ ಬಂದಿತು. ಅದರಂತೆ ತಮ್ಮ ಗಂಡನಾದ ಸದಾಶಿವರಾಯರಲ್ಲಿ ಈ ಪ್ರಸ್ತಾಪವನ್ನು ಹೇಳಿದಾಗ ಅವರು ಕೂಡ ಖುಷಿಯಿಂದಲೇ ಒಪ್ಪಿಕೊಂಡಿದ್ದರು. ಅದಕ್ಕೆ ಕಾರಣವೂ ಇದ್ದಿತ್ತು. ಜೀವನದ ಎಲ್ಲ ಕಷ್ಟ ಸುಖಗಳನ್ನು ತಮ್ಮ ಪತ್ನಿಯೊಂದಿಗೆ ಅನುಭವಿಸಿ ಮಾಗಿದ ಜೀವಕ್ಕೆ ಹೆಚ್ಚಿನ ಯಾವ ಆಸೆ ಆಕಾಂಕ್ಷೆಗಳೂ ಇರಲಿಲ್ಲ  

ಆದರೆ ಪಾರ್ವತಮ್ಮನ ಬದರಿ ಕೇದಾರ ಯಾತ್ರೆ ಇನ್ನೂ ಪೂರೈಸಲಾಗಲಿಲ್ಲವೆಂಬ ಕೊರಗೊಂದು ಸದಾ ಕಾಡುತ್ತಿತ್ತು. ತಮ್ಮ ವೃದ್ಧಾಪ್ಯದ ಜೀವನಕ್ಕೆ ಆರ್ಥಿಕವಾಗಿ ಅಂಥದ್ದೇನೂ ತೊಂದರೆಗಳಿರದ ಕಾರಣ ಹಾಗೂ ಮುಂದಿನ ಬದುಕಿನ ಅವಧಿಯೂ ಬಹಳಷ್ಟಿರದ ಕಾರಣ ಯಾತ್ರೆಯನ್ನು ಬೇಡವೆನ್ನಲು ಯಾವುದೇ ಕಾರಣಗಳಿರಲಿಲ್ಲ. ಪರಸ್ಪರ ಗಂಡ ಹೆಂಡತಿಯರಿಬ್ಬರೂ ಯಾತ್ರೆಗೆ ಹೋಗುವುದೆಂದೇ ನಿರ್ಧರಿಸಿಕೊಂಡರು. 


ಸದಾಶಿವರಾಯ ದಂಪತಿಗಳಿಗೆ ಗಂಡು ಮಕ್ಕಳಿರಲಿಲ್ಲ. ಮೂರು ಜನ ಹೆಣ್ಣು ಮಕ್ಕಳೇ ಅವರ ಆಸ್ತಿ. ದೇವರ ದಯದಿಂದ ಎಲ್ಲರಿಗೂ ಮದುವೆ ಆಗಿ ಗಂಡ ಮಕ್ಕಳೊಂದಿಗೆ ಅವರವರದ್ದೇ ಆದಂಥ ವ್ಯಾಪಾರ ವ್ಯವಹಾರಗಳಲ್ಲಿ ಆರಾಮವಾಗಿಯೇ ಇದ್ದಾರೆಂಬುದೂ ಒಂದು ಸಮಾಧಾನವಿತ್ತು ದಂಪತಿಗಳಿಗೆ. ಯಾತ್ರೆಯ ವಿಚಾರವನ್ನು ಮಕ್ಕಳಲ್ಲಿ ಹೇಳಿದಾಗಲೂ ಅವರು ಕೂಡ ಒಪ್ಪಿಗೆ ಕೊಟ್ಟಿದ್ದರು. ಯಾಕೆಂದರೆ ತಂದೆ ತಾಯಿಯ ಆಸೆ ನೆರವೇರುವುದೆಂಬ ಸಂಭ್ರಮದ ಜತೆ ಇಬ್ಬರೂ ವಯೋಸಹಜವಾದ ಸಣ್ಣ ಪುಟ್ಟ ದೌರ್ಬಲ್ಯದ ಹೊರತಾಗಿ ಆರೋಗ್ಯವಂತರೇ ಆಗಿದ್ದರು. ಅದೂ ಅಲ್ಲದೆ ಹಲವಾರು ವರ್ಷಗಳಿಂದ ಯಶಸ್ವೀ ಯಾತ್ರೆಗಳನ್ನು ಮಾಡಿಸುವಂಥ ಹೆಸರಾಂತ ಸಂಸ್ಥೆಯ ಮೇಲೆ ವಿಶ್ವಾಸವಿರುವುದರಿಂದ ಜವಾಬ್ದಾರಿಗೇನೂ ಕೊರತೆ ಇರಲಿಲ್ಲ. ಹದಿನೈದು ದಿವಸದ ಯಾತ್ರೆಗೆ ಮಕ್ಕಳೇ ವ್ಯವಸ್ಥೆ ಮಾಡಿ ಕಳುಹಿಸಿ ಕೊಟ್ಟರು. ಯಾತ್ರೆಗೆ ಹೋಗುವ ಮುನ್ನ ಮನೆಯಲ್ಲಿ ಎಲ್ಲರೂ ಸೇರಿ ಹಬ್ಬದ ವಾತಾವರಣವೇ ಸೃಷ್ಟಿಯಾಗಿತ್ತು. ಎಲ್ಲರಿಂದ ಬೀಳ್ಕೊಂಡು ಬಸ್ಸನ್ನೇರುವಾಗ ಮಾತ್ರ ಸದಾಶಿವರಾಯರಿಗೂ ಪಾರ್ವತಮ್ಮನವರಿಗೂ ಕಣ್ಣಿಂದ ಧಾರಾಕಾರ ನೀರು ಹರಿದದ್ದು ಬೇಸರದಿಂದಂತೂ ಅಲ್ಲ. ಇನ್ನೂ ಬಹಳ ಸಮಯ ಮನೆ ಮಠ ತೊರೆದು ಇರಬೇಕಲ್ಲ ಎಂಬ ಕ್ಷಣಿಕ ಭಾವವಷ್ಟೆ. ಆ ಒಂದು ಕ್ಷಣ ಈ ಯಾತ್ರೆ ಬೇಕಿತ್ತ ಎಂಬುದು ಕೂಡ ಪಾರ್ವತಮ್ಮನವರಿಗೆ ಅನ್ನಿಸಿತ್ತು. ಆದರೆ ಜನ್ಮದ ಒಂದು ಆಸೆ ನೆರವೇರುವ ಕಾಲ ಸನ್ನಿಹಿತವಾದಾಗ ಇದನ್ನೆಲ್ಲ ಬದಿಗೆ ಸರಿಸಿ ಮುಂದೆ ಹೋಗಲೇಬೇಕೆಂಬ ಗಟ್ಟಿ ಮನಸ್ಸು ಮಾಡಿ ಹೊರಟೇ ಬಿಟ್ಟರು.  


ಹಾಗೆಂದು ಬಸ್ಸಿನಲ್ಲಿದ್ದ ಯಾತ್ರಾರ್ಥಿಗಳಲ್ಲಿ ಹೆಚ್ಚಿನವರೆಲ್ಲ ಪರಸ್ಪರ ಗುರುತು ಪರಿಚಯ ಇರುವಂಥವರೇ ಆದ್ದರಿಂದ ಪರಕೀಯ ಭಾವ ಬರುವಂತೆಯೂ ಇರಲಿಲ್ಲ. ಒಂದೇ ಸಂಸಾರವೆಂಬಂತೆ ಎಲ್ಲರೂ ಸಂತೋಷದಿಂದಲೇ ಯಾತ್ರೆಯನ್ನು ಪ್ರಾರಂಭಿಸಿದರು. ಹೆಚ್ಚಿನವರು ತಮ್ಮಂತೆ ವೃದ್ಧಾಪ್ಯದಂಚಿನಲ್ಲಿರುವವರೇ. ಕೆಲವರು ತುಂಬಾ ಮಾತುಗಾರರಾದರೆ, ಇನ್ನು ಕೆಲವರು ಮೌನಿ ಬಾಬಾಗಳು. ಕೆಲವರು ರಸಿಕರಾದರೆ, ಕೆಲವರು ಆಧ್ಯಾತ್ಮವಾದಿಗಳು. ಇನ್ನು ಕೆಲವರು ಸಿಡುಕರಂತೆ ಕಂಡರೆ, ಕೆಲವರು ಪ್ರಪಂಚದ ಸಮಸ್ಯೆಗಳು ತಮ್ಮಲ್ಲೇ ಆವಿರ್ಭವಿಸಿದಂತೆ ಮುಗುಮ್ಮಾಗಿರುವವರು. ಅಂತು ಎಲ್ಲ ತರಹದ ಸ್ವಭಾವದವರ ಒಡನೆ ಬೆರೆತು ಇನ್ನೂ ಹದಿನೈದು ದಿನಗಳನ್ನು ಕಳೆಯುವುದು ಸದಾಶಿವರಾಯ ದಂಪತಿಗಳಿಗೆ ಕಷ್ಟವೆಂದೆನಿಸಲಿಲ್ಲ. ಯಾಕೆಂದರೆ ಇವರು ಯಾರೊಡನೆಯೂ ಬೆರೆಯಬಲ್ಲಂಥ ಅಪರೂಪ ಸ್ವಭಾವದವರು. ದಿನಗಳು ಉರುಳುತ್ತಿದ್ದವು. ಜತೆಗೇ ಮುಂಬಯಿ, ಗುಜರಾತ್, ಜಯಪುರ, ದೇಹಲಿ ಮುಂತಾದ ಊರುಗಳ ದರ್ಶನವನ್ನೂ ಮಾಡಿಕೊಂಡು ಹೃಷೀಕೇಶಕ್ಕೆ ತಲುಪಿದರು. ನಿಜವಾದ ಚಳಿಯ ಅನುಭವವಾದದ್ದೇ ಇಲ್ಲಿ. ಸದಾಶಿವರಾಯ ದಂಪತಿಗಳಿಗೆ ತಮ್ಮ ಜೀವಮಾನದಲ್ಲೇ ಈ ಪರಿಯ ಚಳಿಯಾಗಲಿ ಅಥವಾ ಹೀಗೂ ಒಂದು ವಾತಾವರಣ ಇರಬಹುದೆಂಬ ಕಲ್ಪನೆಯಾಗಲಿ ಇರಲೇ ಇಲ್ಲ. ಆದರೂ ಪೂರ್ವತಯಾರಿಯಿಂದಲೇ ಬಂದಿರುವುದರಿಂದ ಅಷ್ಟೇನೂ ಕಷ್ಟವಾಗಲಿಲ್ಲ. ಕುದಿಯುವಂಥ ಚಾಯ ಕುಡಿದರೂ ಬಾಯಿ ಸುಡದಷ್ಟು ಚಳಿ, ಬೆಂಕಿಗೆ ಬಿಸಿಯೇ ಇಲ್ಲವೇನೋ ಎನ್ನುವಷ್ಟು ತಂಪು, ಸೂರ್ಯನಂಥ ಸೂರ್ಯನೂ ಚಳಿಯಲ್ಲಿ ಮುದುಡಿಕೊಂಡಿರವನೋ ಎನ್ನುವಷ್ಟು ಮುಸುಕು.. ಅಂತು ದಂಪತಿಗಳಿಗೆ ಇಂಥ ಅನುಭವ ಜನ್ಮದಲ್ಲಿ ಮೊದಲ ಸಲವಾದರೂ ಇನ್ನು ಬದರಿ ಕೇದಾರ ಹೇಗೋ ಎಂಬ ಆತಂಕದ ಜತೆ ಸ್ವಲ್ಪ ಭಯವನ್ನು ಹುಟ್ಟಿಸಿದ್ದಂತು ಖಂಡಿತ.   


ಮುಂದೆ ಬದರಿ ಕೇದಾರ ಯಾತ್ರೆಯೂ ಯಾವುದೇ ಅತಿಯಾದ ಸಮಸ್ಯೆಗಳಿಲ್ಲದೆ ಮುಗಿದು ಹೋದಾಗ ಜನ್ಮ ಸಾರ್ಥಕವಾದಂಥ ಅನುಭವ. ಗಡಗಡ ನಡುಗಿಸಿದ ಚಳಿ ಎಂಬ ಕ್ರಿಯೆಯು ಜನ್ಮಾಂತರದ ಪಾಪಗಳನ್ನು ಗುಡಿಸಿ ತೆಗೆದಂತಾಗಿ  ತನು ಮನ ಶುದ್ಧವಾಗಿ ಜೀವನ ಪೂರ್ತಿ ಅನುಭವಿಸಿದ ಅಥವಾ ಘಟಿಸಿದ ಯಾವತ್ತೂ ದೋಷಗಳು ಭಸ್ಮವಾಗಿ ಶುಚಿರ್ಭೂತವಾದಂಥ ವಿಶೇಷ ಅನುಭವದೊಂದಿಗೆ ಆನಂದಮಯವಾಗಿತ್ತು ವೃದ್ಧ ದಂಪತಿಗಳ ಭಾವ. ಪುನಃ ಹೃಷೀಕೇಶಕ್ಕೆ ಬಂದು ಅಲ್ಲಿಂದ ಮಧುರಾ, ವೃಂದಾವನ ಅಯೋಧ್ಯೆಗಾಗಿ ವಾರಣಾಸಿಯಲ್ಲಿ ವಸತಿ. ಮರುದಿನ ಕಾಶಿ ವಿಶ್ವನಾಥನ ದರ್ಶನದ ಕಾರ್ಯಕ್ರಮ. ಎಲ್ಲರೂ ತಮ್ಮ ತಮ್ಮ ಇದುವರೆಗಿನ ಯಾತ್ರಾನುಭವವನ್ನು ಮೆಲುಕು ಹಾಕುತ್ತ, ನಾಳೆ ವಿಶ್ವನಾಥನ ದರ್ಶನ ಮಾಡುವ ಕನಸನ್ನು ಕಾಣುತ್ತ ಖುಷಿ ಖುಷಿಯಲ್ಲೇ ನಿದ್ದೆಗೆ ಜಾರಿದರು. ಇತ್ತ ಸದಾಶಿವರಾಯ ದಂಪತಿಗಳಿಗೆ ನಿದ್ದೆ ಬಾರದು. ಅದ್ಯಾಕೋ ಇಂದಿನವರೆಗೂ ಆಗದೇ ಇರುವಂಥ ಅನುಭವಗಳು ಅವರಿಬ್ಬರಿಗೂ ಆಗುತ್ತಿತ್ತು. ಹೌದೆನೆ ನಾಳೆಯ ದಿನ ನಮ್ಮ ಜೀವನದ ಅತ್ಯಂತ ಸಂತೋಷದಾಯಕವಾದುದು. ಬಹುಷಃ ಯಾತ್ರೆಯ ಕೊನೆಯೂ ಹೌದು. ಜಗದ್ರಕ್ಷಕ ವಿಶ್ವನಾಥನ ದರ್ಶನವಾದ ಮೇಲೆ ನಮಗೆ ಜೀವನದಲ್ಲಿ ಯಾವ ಆಸೆಯೂ ಉಳಿಯದು ಏನಂತಿ? ಎಂದು ಸದಾಶಿವರಾಯರು ಪಾರ್ವತಮ್ಮನವರಲ್ಲಿ ಹೇಳಿದಾಗ ಅವರು ಕೂಡ ಅದೇ ಗುಂಗಿನಲ್ಲಿದ್ದರು. ಯಾವಾಗ ಬೆಳಗಾದೀತು ಯಾವಾಗ ವಿಶ್ವನಾಥನ ದರ್ಶನವಾದೀತೆಂಬ ಉದ್ವೇಗದಲ್ಲಿ ದಂಪತಿಗಳಿಬ್ಬರೂ ಮಾತುಕತೆಯಲ್ಲಿಯೇ ರಾತ್ರಿ ಕಳೆದರು. ಅಂತೆಯೇ ಬೆಳಗ್ಗಿನ ಜಾವದಲ್ಲಿ ದಂಪತಿಗಳು ಗಂಗಾಸ್ನಾನಕ್ಕೆಂದು ನದಿ ತೀರಕ್ಕೆ ಹೊರಟರು. ಗಂಗಾಮಾತೆಯಲ್ಲಿ ಅಷ್ಟೊಂದು ಸೆಳೆತವಿಲ್ಲದಿದ್ದರೂ ಅಗಾಧವಾದ ವಿಸ್ತಾರ ಮಾತ್ರ ಯಾರನ್ನೇ ಆದರೂ ದಿಗ್ಭ್ರಮೆಗೊಳಿಸುವಂತೆ ಇರುವುದಂತು ಸಹಜವೆ. ಇಬ್ಬರೂ ಕೈಕೈ ಹಿಡಿದು ನದಿ ತೀರದಲ್ಲಿ ಮೊಣಕಾಲು ನೀರು ಬರುವಲ್ಲಿವರೆಗೂ ಇಳಿದು ಅಲ್ಲಿಂದಲೇ ನೀರನ್ನು ಮೈಮೇಲೆ ಹಾಕಿ ಸ್ನಾನವನ್ನು ಪೂರೈಸಿ, ಜತೆಗೇ ತಮ್ಮೆಲ್ಲ ಪಾಪಗಳೂ ತೊಳೆದು ಹೋದವೆಂದು ಭಾವಿಸಿ ನಿಧಾನವಾಗಿ  ಮೇಲೆ ಬಂದು ಕಾಶಿ ವಿಶ್ವನಾಥನ ದರ್ಶನ ಮಾಡಿ ಜನ್ಮ ಪಾವನಗೊಳಿಸಲು ಅಣಿಯಾದರು. ವಿಶ್ವನಾಥನ ದರ್ಶನದಿಂದ ದಂಪತಿಗಳಿಗೆ ಆದಂಥ ಅನುಭವ ಮಾತ್ರ ಏಕಪ್ರಕಾರವಾಗಿತ್ತು. ತಮ್ಮ ಸುದೀರ್ಘ ದಾಂಪತ್ಯ ಜೀವನದಲ್ಲಿ ದೇವರು ಕೊಟ್ಟಂಥ ಅವಕಾಶಗಳೂ ಅನಂತವಾಗಿದ್ದವು. ಅದೇರೀತಿ ಇದೊಂದು ಬಾಕಿ ಇತ್ತು. ಅದೂ ಇವತ್ತಿಗಾಗುವಾಗ ಪೂರ್ಣವಾಯಿತು ಎಂಬಲ್ಲಿಗೆ ಇಬ್ಬರಿಗೂ ಸಂಪೂರ್ಣ ತೃಪ್ತಿಯೂ ಇತ್ತು.  ವಿಶ್ವನಾಥನಲ್ಲಿ ಬೇಡಿಕೊಂಡದ್ದು ಕೂಡ ಯಾವುದೇ ಧನ, ಧಾನ್ಯ, ಸಂಪತ್ತು ಆಯುಷ್ಯವನ್ನಲ್ಲ ಬದಲಾಗಿ ತಮಗೆ ಈ ಪ್ರಪಂಚದಲ್ಲಿ ಇವತ್ತಿನವರೆಗೂ ಸಂಪೂರ್ಣ ತೃಪ್ತಿಯಿಂದ ಬಾಳುವ ಅವಕಾಶ ಕೊಟ್ಟಿದ್ದಕ್ಕೆ ಅರ್ಪಿಸಿದ್ದು ಧನ್ಯತಾ ಭಾವವನ್ನು ಮಾತ್ರ.  


ಆ ದಿವಸ ಕಾಶಿ ವಿಶ್ವನಾಥನ ಸನ್ನಿಧಿಯಲ್ಲೇ ಕಳೆಯುವುದಿತ್ತು. ಅದರಂತೆ ಎಲ್ಲರೂ ಅವರವರಿಗೆ ಬೇಕಾದಂಥ ಖರೀದಿಗೋ, ಸುಮ್ಮನೆ ಶಹರವನ್ನು ತಿರುಗಲಿಕ್ಕೋ, ಅಥವಾ ಸಣ್ಣ ಪುಟ್ಟ ಇತರ ಗುಡಿಗಳನ್ನು ಸುತ್ತಲಿಕ್ಕೋ ಹೊರಟರೆ, ಸದಾಶಿವರಾಯ ದಂಪತಿಗಳು ಸುಮ್ಮನೆ ತಿರುಗಿ ಕಾಲಹರಣ ಮಾಡುವುದಕ್ಕಿಂತ ಇನ್ನೊಮ್ಮೆ ಗಂಗಾಮಾತೆಯನ್ನು ಕಣ್ತುಂಬ ನೋಡಿ ಆನಂದಿಸೋಣವೆಂದುಕೊಂಡು ಗಂಗಾ ತಟಕ್ಕೆ ಹೋದರು. ಬೆಳಿಗ್ಗೆ ಬಂದು ಸ್ನಾನ ಮಾಡಿದಲ್ಲಿ ಯಾವ ಜನಸಂದಣಿಯೂ ಇಲ್ಲದ್ದರಿಂದ ಹಾಗೂ ಸಂಜೆಯ ನೆರಳು ತಂಪಾಗಿದ್ದರಿಂದ ನೀರಲ್ಲಿ ಕಾಲಾಡಿಸುತ್ತ ಸಣ್ಣ ಮಕ್ಕಳ ತೆರದಲ್ಲಿ ಗಂಗಾಮಾತೆಯ ಸೊಬಗನ್ನು, ಆಕೆಯ ಮಹಾತ್ಮ್ಯವನ್ನು ನೆನೆದುಕೊಂಡು ಖುಷಿ ಖುಷಿಯಾಗಿ ಪ್ರಪಂಚವನ್ನೇ ಮರೆತವರಂತಿದ್ದರು. ನೀರಿನ ಹರಿವನ್ನು ಏಕಪ್ರಕಾರವಾಗಿ ನೋಡುತ್ತಿರಬೇಕಾದರೆ ಸದಾಶಿವರಾಯರಿಗೆ ಇದ್ದಕ್ಕಿದ್ದಂತೆ ತಲೆ ಸುತ್ತುವ ಅನುಭವವಾಯಿತು. ಮೈವಾಲುತ್ತಲಿದೆ ಎನ್ನುವಾಗ ಬಳಿಯಲ್ಲಿದ್ದಂಥ ಪಾರ್ವತಮ್ಮನವರ ಕೈಯನ್ನೇ ಬಲವಾಗಿ ಹಿಡಿದುಕೊಂಡರು. ಇದು ಯಾವದರ ಅರಿವಿಲ್ಲದ ಪಾರ್ವತಮ್ಮನವರು ಗಾಬರಿಯಿಂದ ನೋಡನೋಡುತ್ತಿದ್ದಂತೆ ಸದಾಶಿವರಾಯರ ಮುಷ್ಟಿಯು ಗಟ್ಟಿಯಾಗತೊಡಗಿತು ಜತೆಗೆ ಪಾರ್ವತಮ್ಮನವರ ಸಹಿತ ಗಂಗೆಯ ಸೆಳೆತಕ್ಕೆ ಬೀಳುವ ಅನುಭವವಾಗತೊಡಗಿತು ಇತ್ತ ರಾಯರ ಮುಷ್ಟಿಯ ಬಲ, ಅತ್ತ ಗಂಗಾಮಾತೆಯ ಸೆಳೆತ. ಪಾರ್ವತಮ್ಮನವರಿಗೆ ಅರಿವಾಗತೊಡಗಿತು ತಮ್ಮ ಕೊನೆಯು ಸಮೀಪಿಸುತ್ತದೆ. ಇಷ್ಟು ದೀರ್ಘ ಕಾಲ ಜತೆಯಲ್ಲಿದ್ದದ್ದು ಮಾತ್ರವಲ್ಲ ಕೊನೆಗಾಲದಲ್ಲೂ ಜತೆಯಾಗಿಯೇ ಇರುವಂತೆ ಆ ವಿಶ್ವನಾಥನೇ ಸಂಕಲ್ಪ ಮಾಡಿದಂತೆನಿಸಿತು. ಇಷ್ಟೆಲ್ಲ ಯೋಚನೆಗಳು ಬರುವಾಗ ದಂಪತಿಗಳು ಪರಸ್ಪರ ಅಪ್ಪಿಕೊಂಡು ಒಬ್ಬರನ್ನು ಬಿಟ್ಟರೆ ಇನ್ನೊಬ್ಬರಿಗೆ ಅಸ್ತಿತ್ವವೇ ಇಲ್ಲವೆಂಬಂತೆ ಗಂಗೆಯ ತೆಕ್ಕೆಯೊಳಗೆ ಸೇರಿ ಬಿಟ್ಟರು.  


"ಸುತ್ತಮುತ್ತಲೂ ನೀರು. ಆಧಾರ ಪರಸ್ಪರ ಹಿಡಿದುಕೊಂಡಂಥ ಶರೀರಗಳಷ್ಟೆ. ಎಲ್ಲಿ ನೋಡಿದರೂ ಬಿಳಿ ಬಿಳಿಯಾದ ಪಾರದರ್ಶಕವೋ ಅಪಾರದರ್ಶಕವೋ ಎಂಬುದರಿಯದ ಬೆಳಕಿನ ಪುಂಜ, ಯಾವ ಕಾಲಕ್ಕೂ ಬಿಟ್ಟಿರಲಾರೆ ಎಂದು ಸಪ್ತಪದಿ ತುಳಿದಾಗ ಕೊಟ್ಟಂಥ ವಚನ ಈ ರೀತಿಯೂ ಘಟಿಸುವ ಪರಿಯ ಅನುಭವ, ಇದುವರೆಗೂ ನಾವೆಷ್ಟೇ ಸುಖಿಗಳು ಎನಿಸಿಕೊಂಡರೂ ಯಾವುದೋ ಬಂಧನಕ್ಕೊಳಗಾಗಿರುವಂತಿದ್ದೆವು. ಅದು ಅಂದಿನ  ಅನುಭವ. ಆದರೆ ಈ ಕ್ಷಣದಲ್ಲಿ..!! ಬಂಧವೇ ಇಲ್ಲದ ಈ ಸುಖದ ಮುಂದೆ ಅದು ಯಾವ ಸುಖವೂ ಸಮನಲ್ಲವೆಂಬ ಸತ್ಯದರಿವು. ಏನೋ ವಿಚಿತ್ರ ಗೊಂದಲ.. ನನ್ನ ತೋಳಲ್ಲಿ ನೀನು, ನಿನ್ನ ತೋಳಲ್ಲಿ ನಾನು. ಆದರೂ ಪರಸ್ಪರ ಕಾಣದಂಥ ನೀರಿನ ಸೆಳೆತ. ಮಾತಾಡಬೇಕು.. ಸಾಧ್ಯವಾಗದು, ನೋಡಬೇಕು...ಕಾಣಿಸದು, ಆಧಾರ ಬೇಕು... ನೆಲವೇ ಸಿಗದು, ನಿನ್ನ ಕೈ ಬಿಟ್ಟರೆ ನಾನಿಲ್ಲ.. ನನ್ನ ಕೈ ಬಿಟ್ಟರೆ ನೀನಿಲ್ಲ.. ಇದ್ದರೂ ಅರಿವಾಗುವುದಿಲ್ಲ. ಆದರೂ ಬಂಧನಗಳ ಸಡಿಲಿಕೆಯ ಅರಿವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತದೆ. ಮಾತೆಯ ಮಡಿಲಲ್ಲಿ ಮಲಗಿದ ಬಾಲ್ಯದ ನೆನಪುಗಳು, ಕಷ್ಟ ಸುಖಗಳ ಅಪಾರ ಅನುಭವಗಳು.., ಯಾತ್ರೆಯ ಆ ಕೊನೆ ಕೊನೆಯ ದಿನಗಳು.., ಪೂರ್ಣ ಬೆಳವಣಿಗೆಯ ನಂತರ ನಾಶವೇ ಗತಿ ಎಂಬ ಅರಿವಿದ್ದರೂ, ನಮ್ಮದು ಪೂರ್ಣ ಬಾಳೆಂಬ ಭಾವವಿದ್ದರೂ ಮುಂದೆ ಈ ರೀತಿಯ ನಾಶವಾಗಬಹುದೆಂಬ ಕಲ್ಪನೆಯೂ ಇರದ ಮಾಯೆ.., ಒಂದೇ ಎರಡೇ ವಿಶ್ವನಾಥನೇ ಎದುರು ನಿಂದು ನಿಮ್ಮ ಬದುಕು ಸಂಪೂರ್ಣವಾಗಿದೆ ಅದಕೆಂದೇ ನಾನು ನಿಮ್ಮನ್ನು ಗಂಗಾಮಾತೆಯ ಮೂಲಕ ಕರಕೊಂಡಿಹೆನು ಎಂದು ನುಡಿದಂತೆ" ಸತ್ಯವೋ ಭ್ರಮೆಯೋ ಬಂಧ ಮುಕ್ತರಾಗುತ್ತಿರುವ, ಜತೆಗೆ ದಾಂಪತ್ಯವೆಂಬ ಬಂಧವೂ ಕಡಿದು ಹೋಗುವ ತೆರದಿ ಹಿಡಿದುಕೊಂಡಂಥ ಬಾಹುಬಲವೂ ಕ್ಷೀಣವಾಗಿ ಯಾರೋ ಬಂದು ಬಿಡಿಸಿ ಸ್ವತಂತ್ರಗೊಳಿಸಿದಂತೆ ಸದಾಶಿವರಾಯ ಮತ್ತು ಪಾರ್ವತಮ್ಮ ಎಂದು ಗುರುತಿಸಲ್ಪಟ್ಟಂಥ ಕಾಯಗಳು ಗಂಗೆಯಲ್ಲಿ ಲೀನವಾಗಿ, ಚೇತನಗಳು ನಶಿಸಿ ಹೋಗಿ ಚೈತನ್ಯಗಳು ಪಂಚಭೂತದ ಒಳಗೆ ಲೀನವಾಗಿ ಹೋದವು... 

**********

-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post