||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವೈದ್ಯಲೋಕಕ್ಕೆ ಕಳಂಕ ತರುವ ಮೆಡಿಕಲ್ ಜೌಸ್ಟಿಂಗ್

ವೈದ್ಯಲೋಕಕ್ಕೆ ಕಳಂಕ ತರುವ ಮೆಡಿಕಲ್ ಜೌಸ್ಟಿಂಗ್ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಜಗತ್ತಿನಲ್ಲಿ ಮೆಡಿಕಲ್ ಜೌಸ್ಟ್ಟಿಂಗ್ ಟೆಸ್ಟಿಂಗ್, ಹೆಚ್ಚು ಹೆಚ್ಚು ಕಂಡು ಬರುತ್ತಿದೆ. ಚಾರಿತ್ರಿಕವಾಗಿ ಹೇಳುವುದಾದಲ್ಲಿ ಮದ್ಯಕಾಲೀನ ಕ್ರೀಡಾ ಸ್ಪರ್ದೆಯಲ್ಲಿ ಕುದುರೆಯ ಮೇಲೆ ಇಬ್ಬರು ವಿರೋಧಿಗಳು ಅಥವಾ ಯೋಧರು ಈಟಿಗಳನ್ನು ಬಳಸಿ ಮಾಡುವ ಯುದ್ದವನ್ನು “ಜೌಸ್ಟ್ಟಿಂಗ್' ಎನ್ನುತ್ತಾರೆ. ಆದರೆ ಈಗಿನ ಕಾಲದಲ್ಲಿ ಒಬ್ಬ ವೈದ್ಯ ತನ್ನ ಸಹೋದ್ಯೋಗಿ ಅಥವಾ ಇನ್ನೊಂದು ಸಮಕಾಲೀನ ವೈದ್ಯರ ಚಿಕಿತ್ಸೆ ಬಗ್ಗೆ ಅಥವಾ ಚಿಕಿತ್ಸೆ ವಿಚಾರದ ಬಗ್ಗೆ ಕೀಳಂದಾಜಿಸುವುದು ಅತವಾ ತಪ್ಪು ಮಾಹಿತಿ ನೀಡುವುದು ಅಥವಾ ಉಡಾಫೆಯಿಂದ ವರ್ತಿಸುವುದನ್ನು ಮೆಡಿಕಲ್ ಜೌಸ್ಟ್ಟಿಂಗ್ ಎನ್ನುತ್ತಾರೆ. ಇದೊಂದು ಕಳವಳಕಾರಿ ಬೆಳವಣಿಗೆ ಆಗಿದ್ದು, ರೋಗಿಗಳ ಮತ್ತು ಸಮಾಜದ ಹಿತದೃಷ್ಠಿಯಿಂದ ಒಳ್ಳೆಯ ಆರೋಗ್ಯಕಾರಿ ಬೆಳವಣಿಗೆ ಅಲ್ಲ.


ಯಾಕಾಗಿ ಮಾಡುತ್ತಾರೆ?

(1) ತನ್ನ ಸಹೋದ್ಯೋಗಿಯ ಉನ್ನತಿಯನ್ನು ಅಥವಾ ಶೀಘ್ರಗತಿಯ ಬೆಳವಣಿಗೆಯನ್ನು ಕಂಡು ಹೊಟ್ಟೆ ಉರಿಯಿಂದ ಅಥವಾ ಮತ್ಸರದಿಂದ ಅವರ ಬಗ್ಗೆ ಕೆಟ್ಟ ಮಾತನಾಡುವುದು ಮತ್ತು ತಪ್ಪು ಮಾಹಿತಿಯನ್ನು ಸಮಾಜದಲ್ಲಿ ಹರಿ ಬಿಡುವುದು.

(2) ಒಬ್ಬ ವೈದ್ಯ ತನಗಿಂತ ಜಾಸ್ತಿ ರೋಗಿಗಳನ್ನು ಇನ್ನೊಬ್ಬ ವೈದ್ಯ ಉಪಚರಿಸಿದಾಗ ಆತನ ಬಗ್ಗೆ ಕೀಳಾಗಿ ಮಾತನಾಡುವುದು.

(3) ಒಬ್ಬ ವೈದ್ಯ ತನ್ನ ಬುದ್ದಿಮತ್ತೆಯ ಬಗ್ಗೆ ಕೀಳರಿಮೆ ಹೊಂದಿದ್ದಾಗ ಅಥವಾ ಇನ್ನೋರ್ವ ವೈದ್ಯರ ಬುದ್ದಿಮತ್ತೆಯ ಮತ್ತು ಕೌಶಲ್ಯದ ಬಗ್ಗೆ ಅರಿವು ಹೊಂದಿರದೇ ಇದ್ದಾಗ ಈ ರೀತಿ ಕೀಳು ಮಟ್ಟದ ಮೆಡಿಕಲ್ ಜೌಸ್ಟ್ಟಿಂಗ್‍ಗೆ ಮೊರೆ ಹೋಗುತ್ತಾರೆ.

(4) ಒಂದು ವ್ಯದ್ಯ ಪದ್ದತಿಯ ವೈಧ್ಯರು ಇನ್ನೊಂದು ವೈದ್ಯಕೀಯ ಪದ್ದತಿಯ ವೈದ್ಯರ ಬಗ್ಗೆ ಗೌಪ್ಯ ಮಾಹಿತಿ ಇಡದೆ ಈ ರೀತಿ ಮಾಡುತ್ತಾರೆ. ಉದಾಹಣೆಗೆ ಅಯೋಪತಿ ವೈದ್ಯರು, ಆಯುರ್ವೇದ ವೈದ್ಯ ಪದ್ದತಿ ಬಗ್ಗೆ ಅಥವಾ ಅಯುರ್ವೇದ ವೈದ್ಯರು ಹೋಮಿಯೋಪತಿ ವ್ಯದ್ಯರ ಬಗ್ಗೆ ಕೀಳು ಮಾತನಾಡುವುದು. ಸಾಮಾನ್ಯವಾಗಿ ಒಂದು ವೈದ್ಯ ಪದ್ದತಿಯ ವೈದ್ಯರಗೆ ಇನ್ನೊಂದು ವೈದ್ಯ ಪದ್ದತಿಯ ಚಿಕಿತ್ಸೆ ವಿಧಾನದ ಬಗ್ಗೆ, ಚಿಕಿತ್ಸೆಯ ಪರಿಣಾಮಕತ್ವದ ಬಗ್ಗೆ ಮಾಹಿತಿ ಇರದೆ ಈ ರೀತಿ ತಪ್ಪು ಕಲ್ಪನೆಯಿಂದ “ಮೆಡಿಕಲ್ ಔಸ್ಟಿಂಗ್ ಆಗುವ ಸಾಧ್ಯತೆಯೂ ಇರುತ್ತದೆ.

(5) ಮಾತನಾಡುವ ಭರದಲ್ಲಿ ತನಗರಿವಿಲ್ಲದೇ ತನ್ನದೇ ಸಹೋದ್ಯೋಗಿಗಳ ಬಗ್ಗೆ ಲೂಸ್‍ಟಾಕ್ ಅಥವಾ ಕೆಟ್ಟ ಮಾತನಾಡುವುದು.


ಹೇಗೆ ವೈದ್ಯಕೀಯ ಕೀಳೆಂದಾಜು (ಜೌಸ್ಟಿಂಗ್) ನಡೆಯುತ್ತದೆ?

ಸಾಮಾನ್ಯವಾಗಿ ವೈದ್ಯಕೀಯ ಕೀಳಂದಾಜು ಬಹಳ ಸುಲಭವಾಗಿ ನಮಗರಿವಿಲ್ಲದೆ ನಡೆಯುತ್ತದೆ.  ವೈದ್ಯರುಗಳು- ಮಾತನಾಡುವಾಗ ಬಹಳ ಜಾಗೃತರಾಗಿರಬೇಕು. ಬೆಣ್ಣೆಯಿಂದ ಕೂದಲು ತೆಗೆದಂತೆ ಬಹಳ ನಾಜೂಕಾಗಿ ರೋಗಿಗಳ ಜೊತೆ ವ್ಯವಹರಿಸಬೇಕು ಹಾಗೂ ಮಾತನಾಡಬೇಕಾಗುತ್ತದೆ. ನಮ್ಮ ಒಂದು ಸಣ್ಣ  ತಪ್ಪು ಮಾತಿನಿಂದ ಇನ್ನೋರ್ವ ವೈದ್ಯ ಸಹದ್ಯೋಗಿಯ ಚಿಕಿತ್ಸಾ ಕೌಶಲ್ಯ, ತಂತ್ರಗಾರಿಕೆ, ಯೋಗ್ಯತೆ ಮತ್ತು  ಚಿಕಿತ್ಸೆಯ ಪರಿಶುದ್ಧತೆಯ ಬಗ್ಗೆ ರೋಗಿಯಲ್ಲಿ ಗೊಂದಲ ಮೂಡಿಸಿ ಆತನನ್ನು ಗಲಿಬಿಲಿಗೊಳಿಸುತ್ತದೆ. ಮುಂದೆ ಅದೇ ರೋಗಿ ಯಾವುದೇ ವೈದ್ಯರನ್ನು ನಂಬದಂತೆ ಮಾಡುತ್ತದೆ. ವೈದ್ಯಕೀಯ ಕೀಳಂದಾಜು ಈ ಕೆಳಗಿನಂತಿದೆ.


1) ಅವರು ಯಾಕಾಗಿ ಕ್ಷ-ಕಿರಣ (X-ray) ತೆಗೆದಿಲ್ಲ?

2) ಅವರು ಯಾಕಾಗಿ ರಕ್ತ ಪರೀಕ್ಷೆ ಮಾಡಿಲ್ಲ?

3) ಆ ವೈದ್ಯರು ನಿಮ್ಮನ್ನು ಪರಿಪೂರ್ಣವಾಗಿ ಪರೀಕ್ಷಿಸಿದ್ದಾರೆಯೇ?

4) ಅವರು ಮಾಡಿದ ಸರ್ಜರಿ ಸರಿಯಾಗಿ ಆಗಿದೆಯೇ? ಏನಾದರೂ ತೊಂದರೆ ಉಂಟಾಗಿದೆಯೇ?

5) ಯಾಕಾಗಿ ಆ ವೈದ್ಯರು ಆ ರೀತಿಯ ಅರಿವಳಿಕೆ ನೀಡಿದರು?

6) ನಿಮಗೆ ಚಿಕಿತ್ಸೆ ನೀಡುವ ಮೊದಲು ಆ ವೈದ್ಯರು, ಇನ್ನೊಂದು ವೈದ್ಯರಿಂದ ಎರಡನೇ ಅಭಿಪ್ರಾಯ ಯಾಕಾಗಿ ಪಡೆದಿಲ್ಲ?

7) ನಿಮ್ಮ ವೈದ್ಯರಿಗೆ ಚಿಕಿತ್ಸೆ ಮಾಡುವ ಮೊದಲು ಸರಿಯಾಗಿ ಯಾವ ರೋಗ ಎಂದು ನಿರ್ಧರಿಸಿದ್ದಾರೆಯೇ  ಮತ್ತು ಯಾವ ಚಿಕಿತ್ಸೆ ಎಂದು ನಿಮಗೆ ವಿವರಿಸಿದ್ದಾರೆಯೇ?

8) ನೀವು ಮೊದಲೇ ನನ್ನ ಬಳಿ ಬಂದಿದ್ದರೆ ನಾನು ಆ ರೀತಿಯ ಚಿಕಿತ್ಸೆ ಮಾಡುತ್ತಿರಲಿಲ್ಲ!!

9) ಈ ರೋಗಕ್ಕೆ ಸರ್ಜರಿಯ ಅಗತ್ಯವೇ ಇಲ್ಲ!!!

10) ನಿಮ್ಮ ರೋಗ ಈಗ ಉಲ್ಬಣಿಸಿದೆ, ನಾನು ಏನೂ ಮಾಡುವ ಸ್ಥಿತಿಯಲ್ಲಿಲ್ಲ.

11) ಆ ವೈದ್ಯರ ಚಿಕಿತ್ಸೆಯಿಂದ ನಿಮ್ಮ ರೋಗ ಬಿಗಡಾಯಿಸಿದೆ. ನಾನು ಈಗ ಏನೂ ಮಾಡಲು ಸಾಧ್ಯವಿಲ್ಲ.

12) ನಿಮ್ಮ ಮುಖದಲ್ಲಿ ಕಾಣುವ ‘ಕಲೆ ಬಹಳ ಅಸಹ್ಯವಾಗಿದೆ. ನಾನು ಮಾಡಿರುತ್ತಿದ್ದರೆ ಖಂಡಿತಾ ಈ ರೀತಿ ಆಗುತ್ತಿರಲಿಲ್ಲ.


ಮೇಲೆ ತಿಳಿಸಿದ ಎಲ್ಲಾ ಪ್ರಶ್ನೆಗಳು ಮತ್ತು ವಿಚಾರಗಳು, ಒಬ್ಬ ರೋಗಿ ನಮ್ಮ ಒಳ ಬಂದಾಗ, ನಾವು ಮೇಲಿನಂತೆ ಕೇಳಿದಾಗ ಮೊದಲೇ ಗಲಿಬಿಲಿಗೊಂಡ ರೋಗಿಗೆ ಮತ್ತಷ್ಟು ನೋವು, ನಿರಾಶೆ, ಹತಾಶೆಯನ್ನು  ಉಂಟು ಮಾಡುತ್ತದೆ. ಪ್ರತಿಯೊಬ್ಬ ವೈದ್ಯರು ವೃತ್ತಿಯ ರಾಜಧರ್ಮವನ್ನು ಪಾಲಿಸಬೇಕು. ನಮ್ಮ ಬಳಿ ಬಂದ ರೋಗಿಗಳಿಗೆ ಮಾನಸಿಕವಾಗಿ  ನೆಮ್ಮದಿ ಸಿಗುವಂತೆ ಸಾಂತ್ವನದ ಮಾತು ಆಡಬೇಕು. ಯಾವ ವೈದ್ಯರೂ ಅನಗತ್ಯವಾಗಿ ಚಿಕಿತ್ಸೆ, ಪರೀಕ್ಷೆ ಮತ್ತು ವೆಚ್ಚ ರೋಗಿಗೆ ಮಾಡಲು ಇಚ್ಛಿಸುವುದಿಲ್ಲ. ಆದರೆ ಕೆಲವೊಮ್ಮೆ ನಮಗರಿವಿಲ್ಲದೆ ಈ ಮೇಲೆ ತಿಳಿಸಿದಂತಹ ಮಾತುಗಳಿಂದ ರೋಗಿಯ ಮನಸ್ಸಿನ ಮೇಲೆ ಅಗಾಧವಾದ ಋಣಾತ್ಮಕ ಪರಿಣಾಮ ಉಂಟು ಮಾಡಬಹುದು.


ಎಲ್ಲಿ ಇದು ನಡೆಯುತ್ತದೆ?

ಸಾಮಾನ್ಯವಾಗಿ ವೈದ್ಯರು ರೋಗಿಯನ್ನು ಪರೀಕ್ಷಿಸುವಾಗ ಚರಿತ್ರೆ ತೆಗೆದುಕೊಳ್ಳುವಾಗ ರೋಗಿಯ ಸಂದರ್ಶನ ಕೊಠಡಿಯಲ್ಲಿ ಈ ರೀತಿಯ ‘ವೈದ್ಯಕೀಯ ಕೀಳಂದಾಜು’ ಆಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ  ರೋಗಿಗಳು ಮತ್ತು ಅವರ ಸಂಬಂಧಿಗಳ ಎದುರೇ ಈ ಪ್ರಕ್ರಿಯೆ ನಡೆದು ಹೋಗುತ್ತದೆ. ವೈದ್ಯಕೀಯ ಪರಿಷತ್ತು ಇದರ ನಿಯಮಾವಳಿ ಪ್ರಕಾರ ರೋಗಿಗಳ ಎದುರು ವೈದ್ಯರು, ತಮ್ಮ ಸಹೋದ್ಯೋಗಿಗಳ ಮೇಲಿನ ಮತ್ಸರ, ಶತ್ರುತ್ವ ಹಾಗೂ ದ್ವೇಷವನ್ನು ತೋರಿಸಲೇ ಬಾರದು. ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಎಲ್ಲವನ್ನು  ಮರೆತು ಕೇವಲ ರೋಗಿಯ ರೋಗದ ಬಗ್ಗೆ ಮಾತ್ರ ಚಿಂತಿಸಬೇಕು ಮತ್ತು ಮಂಥಿಸಬೇಕು. ಅದೇ ರೀತಿ ವೈದ್ಯ-ರೋಗಿಯ ಸಂಬಂಧ ಅತ್ಯಂತ ಪವಿತ್ರವಾಗಿದ್ದು, ರೋಗಿಯ ರೋಗದ ಬಗ್ಗೆಯೂ ಎಲ್ಲಿಯೂ ಹೇಳಿಕೊಳ್ಳಬಾರದು. ರೋಗದ ಗೌಪ್ಯತೆ, ರೋಗಿಯು ಗೌಪ್ಯತೆಯನ್ನು ಕಾಯ್ದುಕೊಳ್ಳಬೆಕು. ಇತರ ವೈದ್ಯರ  ಸಾಮಥ್ರ್ಯದ ಬಗ್ಗೆ, ಚಿಕಿತ್ಸಾ ಕೌಶಲ್ಯದ ಬಗ್ಗೆ ತಮ್ಮ ರೋಗಿಗಳ ಮುಂದೆ ಹೇಳಿಕೊಳ್ಳಲೇಬಾರದು. ಹೀಗೆ ಮಾಡಿದ್ದಲ್ಲಿ ಆ ರೋಗಿ ತನ್ನ ವೈದ್ಯರ ಮೇಲೆ ನಂಬಿಕೆ ಹಾಗೂ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಒಂದು ವೇಳೆ ವೈದ್ಯರು ಮಾತನಾಡುವ ಭರದಲ್ಲಿ ಹೇಳಿದ ಅಭಿಪ್ರಾಯವನ್ನು ರೋಗಿ ರೆಕಾರ್ಡ್ ಮಾಡಿ, ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಲ್ಲಿ ವೈದ್ಯರು ಮತ್ತಷ್ಟು ಕಾನೂನು ಸಮಸ್ಯೆಗೆ ಸಿಲುಕುತ್ತಾರೆ.  ಒಟ್ಟಿನಲ್ಲಿ ವೈದ್ಯರು ತಮ್ಮ ವೃತ್ತಿಯ ಪಾವಿತ್ರ್ಯತೆಯ ದೃಷ್ಟಿಯಿಂದ ರೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ಸಮಾಜದ ಸಾಸ್ಥ್ಯದ ಕಾರಣದಿಂದ, ತಮ್ಮ ರೋಗಿಗಳ ಹಾಗೂ ರೋಗದ ಗೌಪ್ಯತೆ ಕಾಪಾಡಿಕೊಂಡು, ತನ್ನ ಸಹೋದ್ಯೋಗಿಗಳ ವೃತ್ತಿ ಕೌಶಲ್ಯವನ್ನು ಗೌರವಿಸಿದಲ್ಲಿ ಮುಂದೆ ಉಂಟಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ.


ತಡೆಗಟ್ಟುವುದು ಹೇಗೆ?

ಜಿನಿವಾ ಒಪ್ಪಂದ ಅಥವಾ ಡಿಕ್ಲರೇಷನ್ ಇದರಂತೆ ಪ್ರತಿ ವೈದ್ಯರು ತನ್ನ ಸಹೋದ್ಯೋಗಿಗಳನ್ನು ತನ್ನದೇ ಸಹೋದರ ಮತ್ತು ಸಹೋದರಿಯಂತೆ ಗೌರವಿಸಬೇಕು. ಅದರ ಬಗ್ಗೆ ಯಾವತ್ತೂ ಕೀಳಂದಾಜಿಸಬಾರದು, ನಿಮಗೆ ಬಂದಂತಹ ರೋಗಿಯ ಚಿಕಿತ್ಸೆಯಲ್ಲಿ ನಿಮಗೆ ಸಂದೇಹÀವಿದ್ದಲ್ಲಿ ರೋಗಿಗಳ ಜೊತೆ ಅಥವಾ ಸಂಗಡಿಗರ ಜೊತೆ ವ್ಯವಹರಿಸುವುದರ ಬದಲು ಚಿಕಿತ್ಸೆ ನೀಡಿದ ವೈದ್ಯರ ಬಳಿ ಮಾತನಾಡಿ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದು ಅವರ ಅನುಮತಿಯೊಂದಿಗೆ ಮುಂದಿನ ಹೆಜ್ಜೆ ಇಡುವುದು ಒಳಿತು, ಆ ಬಳಿಕ ರೋಗಿ ಬಳಿ ಚಿಕಿತ್ಸೆ ಬಗ್ಗೆ, ಚಿಕಿತ್ಸೆಯ ತೊಂದರೆ ಬಗ್ಗೆ ತಿಳಿಹೇಳಬೇಕು. ರೋಗಿಯನ್ನು ಸಂದರ್ಶಿಸಿ ಅವನನ್ನು ತಮ್ಮ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಆತನಿಗೆ ಚಿಕಿತ್ಸೆ ಬಗ್ಗೆ ಪರಿಪೂರ್ಣ ಮಾಹಿತಿ ನೀಡಿ, ಆತನ ಗೊಂದಲ ನಿವಾರಣೆ ಮಾಡಿ ಬಳಿಕವಷ್ಟೇ ಮುಂದುವರಿಯಬೇಕು. ಅದು ಬಿಟ್ಟು ರೋಗಿಯ ಎದುರೇ ಮೊದಲು ಚಿಕಿತ್ಸೆ ನೀಡಿದ ವೈದ್ಯರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು, ಲೂಸ್ ಟಾಕ್ ಅಂದರೆ ವಿನಾ ಕಾರಣ ನಾಲಗೆ ಹರಿಬಿಡುವುದನ್ನು ನಿಲ್ಲಿಸಬೇಕು. ಅದೇ ರೀತಿ ವೈದ್ಯಕೀಯ ಸಮಸ್ಯೆಗಳನ್ನು ಅಥವಾ ವೈದ್ಯಕೀಯ ಅಡ್ಡಪರಿಣಾಮವನ್ನು ವೈದ್ಯಕೀಯಕ್ಕೆ ಸಂಬಂಧವಿಲ್ಲದವರ ಎದುರು ವೈಭವೀಕರಿಸಿ ರೋಗಿಯನ್ನು ಗಲಿಬಿಲಿಗೊಳಿಸಿ, ಮತ್ತಷ್ಟು ಹೆದರಿಸುವುದು ಒಳ್ಳೆ ವೈದ್ಯರ ಗುಣಲಕ್ಷಣವಲ್ಲ. ಒಬ್ಬ ವೈದ್ಯ ತಮ್ಮ ಸಹದ್ಯೋಗಿಯ ಬಗ್ಗೆ  ನಾಲಿಗೆ ಹರಿಬಿಡುತ್ತಿದ್ದಾನೆ ಎಂದರೆ, ಆ ವೈದ್ಯರ ನಂಬಿಕೆಗೆ ಅರ್ಹರಲ್ಲ ಎಂಬುದು ತಜ್ಞರ ಅಭಿಮತವಾಗಿರುತ್ತದೆ, ರೋಗದ  ಬಗ್ಗೆ ತಿಳಿ ಹೇಳಿ, ರೋಗದ ಬಗೆಗಿನ ಎಲ್ಲಾ ವಿವರಣೆಯನ್ನು ರೋಗಿಗೆ ತಿಳಿಸಿ, ರೋಗಿಯ ಸಂಶಯವನ್ನು ನಿವಾರಣೆ ಮಾಡಿ ವೃತ್ತಿಯ ರಾಜಧರ್ಮವನ್ನು ಪಾಲಿಸುವವನೇ ನಿಜವಾದ ವೈದ್ಯನಾಗಿರುತ್ತಾನೆ.


ಕೊನೆಮಾತು:

ವೈದ್ಯಕೀಯ ಚಿಕಿತ್ಸೆಯಲ್ಲಿ ರೋಗಿ ಮತ್ತು ವೈದ್ಯರ ನಡುವಿನ ಸಂಬಂಧಕ್ಕೆ ಬಹಳ ವಿಶೇಷವಾದ ಸ್ಥಾನವಿದೆ. ಒಂದು ಅಧ್ಯಯನಗಳ ಪ್ರಕಾರ ಸುಮಾರು 20 ಶೇಕಡಾ ರೋಗದ ಚಿಕಿತ್ಸೆ ನಂಬಿಕೆಯ ತಳಹದಿಯ ಮೇಲೆ ನಿರ್ಧರಿಸಲಾಗುತ್ತದೆ. ಪ್ಲಾಸೆಬೋ ಚಿಕಿತ್ಸೆಯನ್ನು ನಮ್ಮ ಭಾರತ ದೇಶದಲ್ಲಿ ಪುರಾತನ ಕಾಲದಿಂದಲೂ  ಅನುಸರಿಸಿಕೊಂಡು ಬರಲಾಗುತ್ತದೆ. ಕುಟುಂಬ ವೈದ್ಯ ಪದ್ಧತಿಯನ್ನು ಕೂಡಾ ವೈದ್ಯಲೋಕಕ್ಕೆ ಪರಿಚಯಿಸಿದ್ದು, ನಮ್ಮ ಭಾರತ ದೇಶವೇ ಆಗಿರುತ್ತದೆ, ವೈದ್ಯ ಮತ್ತು ರೋಗಿಯ ನಡುವಿನ ಅಚಲವಾದ ವಿಶ್ವಾಸ ನಂಬಿಕೆ  ಚಿಕಿತ್ಸೆಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ ಎಂದು ಹಲವಾರು ಸಂಶೋಧನೆಗಳಿಂದ  ಸಾಬೀತಾಗಿದೆ.  ಆದರೆ ಈಗ ಬದಲಾದ ವೈದ್ಯಕೀಯ ಪದ್ಧತಿ, ವಾತಾವರಣ, ಆವಿಷ್ಕಾರಗಳು, ಸಂಶೋಧನೆಗಳು ಮತ್ತು ಚಿಕಿತ್ಸೆ ಪದ್ಧತಿಯಿಂದಾಗಿ ಪರಿಸ್ಥಿತಿ ಮೊದಲಿನಂತಿಲ್ಲ. ಹೆಚ್ಚಿನ ರೋಗಿಯು ವೈದ್ಯರನ್ನು ನಂಬುವ ಪರಿಸ್ಥಿತಿಯಲ್ಲಿಲ್ಲ. ಪ್ರತಿ ರೋಗಕ್ಕೂ ಸೆಕೆಂಡ್ ಒಪಿನಿಯನ್ (ಎರಡನೆ ಅಭಿಪ್ರಾಯ) ಪಡೆಯಲು ಇಚ್ಛಿಸುತ್ತಾರೆ.


ವೈದ್ಯಕೀಯ ಕ್ಷೇತ್ರ ಕವಲುದಾರಿಯಲ್ಲಿರುವ ಈ ಸಂದಿಗ್ದ ಕ್ಷಣಗಳಲ್ಲಿ‘ವೈದ್ಯಕೀಯ ಕೀಳಂದಾಜು ಮತ್ತಷ್ಟು ಋಣಾತ್ಮಕ ಪರಿಣಾಮ ಉಂಟು ಮಾಡಲು ಸಾಧ್ಯವಿದೆ. ವೈದ್ಯರ ಮೇಲಿನ ಹೆಚ್ಚುತ್ತಿರುವ ದಾಳಿ, ದೌರ್ಜನ್ಯಗಳಿಗೂ ಇದೇ ಮೂಲ ಕಾರಣವಿರಲೂಬಹುದು. ಇದೊಂದು ರೀತಿಯ ವಿಷ ವರ್ತುಲದಂತಾಗಿದೆ. ರೋಗಿಯ ಮತ್ತು ಆತನ ಸಂಬಂಧಿಕರ ದಾಳಿಯನ್ನು ತಪ್ಪಿಸಲು ವೈದ್ಯರು ಮತ್ತಷ್ಟು ಹೆಚ್ಚು ಹೆಚ್ಚು ಜಾಗರೂಕನಾಗಿ ಅಗತ್ಯವಿಲ್ಲದಿದ್ದರೂ ಕೆಲವೊಂದು ಪರೀಕ್ಷೆಗಳಿಗೆ ಮೊರೆ ಹೋಗುತ್ತಾನೆ. ಚಿಕಿತ್ಸೆಯ ವೆಚ್ಚ ಆತನ ಕೈಮೀರಿ ಹೋಗುತ್ತದೆ. ಇಲ್ಲಿ ವೈದ್ಯ ಮತ್ತು ರೋಗಿಗಳ ನಡುವೆ ಮತ್ತಷ್ಟು ಕಂದಕ/ಬಿರುಕು ಉಂಟಾಗುತ್ತದೆ. ಈ ಕಾರಣದಿಂದ ವೈದ್ಯರು ಮತ್ತಷ್ಟು ಜಾಗರೂಕರಾಗಿ ವೈದ್ಯಕೀಯ ಕೀಳಂದಾಜು ಪ್ರಕ್ರಿಯೆಗೆ ಅವಕಾಶ ನೀಡಲೇಬಾರದು. ರೋಗಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಅವರ ಮಾನಸಿಕ ಗೊಂದಲ ನಿವಾರಿಸಿ ವೃತ್ತಿಯ ರಾಜಧರ್ಮ ಪಾಲಿಸಿದಲ್ಲಿ ಮಾತ್ರ ಸುಂದರ ಸುದೃಢ ಸಮಾಜ ನಿರ್ಮಾಣವಾಗಬಹುದು.


-ಡಾ|| ಮುರಲೀ ಮೋಹನ್ ಚೂಂತಾರು

BDS, MDS,DNB,MOSRCSEd(U.K), FPFA, M.B.A

ಸುರಕ್ಷಾದಂತ ಚಿಕಿತ್ಸಾಲಯ

ಹೊಸಂಗಡಿ – 671 323

ಮೊ: 9845135787


(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post