|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿವಿ ಕಾಲೇಜು: ಹಿಂದಿಯಲ್ಲಿ ರ‍್ಯಾಂಕ್‌ ಪಡೆದವರಿಗೆ ನಗದು ಬಹುಮಾನ

ವಿವಿ ಕಾಲೇಜು: ಹಿಂದಿಯಲ್ಲಿ ರ‍್ಯಾಂಕ್‌ ಪಡೆದವರಿಗೆ ನಗದು ಬಹುಮಾನ

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ಹಿಂದಿ ವಿಭಾಗ ಮತ್ತು ಬ್ಯಾಂಕ್‌ ಆಫ್‌ ಬರೋಡಾದ ಮಂಗಳೂರು ಪ್ರಾದೇಶಿಕ ಕಚೇರಿಯ ಸಹಯೋಗದಲ್ಲಿ ಕಾಲೇಜಿನ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬ್ಯಾಂಕ್‌ ಆಫ್‌ ಬರೋಡಾದ ಮಂಗಳೂರು ಪ್ರಾದೇಶಿಕ ಕಚೇರಿ ಉಪಮುಖ್ಯಸ್ಥ ಆರ್‌. ಗೋಪಾಲ ಕೃಷ್ಣ, ಕರಾವಳಿ ಜನರಿಗೆ ವಿಜಯಾ ಬ್ಯಾಂಕ್‌ ಜೊತೆಯಿದ್ದ ಬಾಂಧವ್ಯ, ವಿಲೀನದ ಬಳಿಕ ಬ್ಯಾಂಕ್‌ ಆಫ್‌ ಬರೋಡಾದ ಮೂಲಕ ಮುಂದುವರಿದಿದೆ, ಎಂದರು. ʼದಕ್ಷಿಣ ಭಾರತದಲ್ಲಿ ಹಿಂದಿʼ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಸಂತ ಆಗ್ನೇಸ್‌ ಕಾಲೇಜಿನ ಡಾ. ನಾಗೇಶ್‌, ಅಡ್ಡಿ ಆತಂಕಗಳ ನಡುವೆಯೂ ದಕ್ಷಿಣ ಭಾರದಲ್ಲಿ ಹಿಂದಿಯ ಬೆಳವಣಿಗೆಯ ಕುರಿತು ಸಂತಸ ವ್ಯಕ್ತಪಡಿಸಿದರಲ್ಲದೆ ಹಿಂದಿ ವಿದ್ಯಾರ್ಥಿಗಳಿಗಿರುವ ಅಪಾರ ಉದ್ಯೋಗಾವಕಾಶಗಳನ್ನು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ಸ್ನಾತಕೋತ್ತರ ಹಿಂದಿ ಕಲಿಕೆಗೆ ಪದವೀದರರು, ವಿಶೇಷವಾಗಿ ವಿದ್ಯಾರ್ಥಿನಿಯರು ತೋರುತ್ತಿರುವ ಆಸಕ್ತಿಗೆ ಮೆಚ್ಚುಗೆ ಸಲ್ಲಿಸಿದರು. ಹಿಂದಿ ಕಲಿಕೆಯನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ಬ್ಯಾಂಕ್‌ ಆಫ್‌ ಬರೋಡಾದ ಅಧಿಕಾರಿಗಳಿಗೆ ಧನ್ಯವಾದ ಸಮರ್ಪಿಸಿದರು.


ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ಸುಮಾ ಟಿ ಆರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ. ಯತೀಶ್‌ ಕುಮಾರ್‌ ಧನ್ಯವಾದ ಸಮರ್ಪಿಸಿದರು. ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ನಾಗರತ್ನ ಎನ್‌ ರಾವ್‌, ಬ್ಯಾಂಕ್‌ ಆಫ್‌ ಬರೋಡಾದ ಹಿಂದಿ ಅಧಿಕಾರಿಗಳಾದ ಮಾಯಾ ಮತ್ತು ರಾಜೇಶ್ವರಿ, ವಿಭಾಗದ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಖಿತಾ ಕಾರ್ಯಕ್ರಮ ನಿರೂಪಿಸಿದರು.


ರ‍್ಯಾಂಕ್‌ ವಿಜೇತರಿಗೆ ಬಹುಮಾನ


ವಿವಿ ಕಾಲೇಜಿನ ಸ್ನಾತಕೋತ್ತರ ಹಿಂದಿ ಕಲಿಕೆಯಲ್ಲಿ ಪ್ರಥಮ ಮತ್ತು ದ್ವಿತೀಯ ರ‍್ಯಾಂಕ್‌ ಪಡೆದವರಿಗೆ ಬ್ಯಾಂಕ್‌ ಆಫ್‌ ಬರೋಡಾ 2016 ರಿಂದ ನಗದು ಬಹುಮಾನ ನೀಡುತ್ತಿದೆ. ಕಳೆದ ಬಾರಿ ಪ್ರಥಮ ರ‍್ಯಾಂಕ್‌ ಪಡೆದ ಹೊನ್ನಾವರದ ಆಶಿಕಾ ಮತ್ತು ದ್ವಿತೀಯ ರ‍್ಯಾಂಕ್‌ ಪಡೆದ ಮಂಗಳೂರಿನ ರೋಹಿಣಿ ಈ ಬಾರಿ ಕ್ರಮವಾಗಿ ರೂ.11,000 ಮತ್ತು ರೂ. 7500 ನಗದು ಬಹುಮಾನ ಪಡೆದುಕೊಂಡರು. ಇದೇ ವೇಳೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬ್ಯಾಂಕ್‌ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೂ ಬಹುಮಾನ ವಿತರಿಸಲಾಯಿತು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post