ನಿದ್ರಿಸಲು ಬಿಡದ ಯೋಚನೆಯ
ಭಿನ್ನ ತೆರನಾದ ಭಾವಲೋಕವ
ಜಗತ್ತು ಸರಿಯಾಗಿ ಅರ್ಥೈಸುವ
ಸರಿ ತಪ್ಪುಗಳ ವಿವೇಚಿಸುವ
ಯೌವ್ವನ ಇಷ್ಟು ಬೇಗ ಬರಬಾರದಿತ್ತಲ್ಲವೇ
ಸಮಾಜ ತಪ್ಪಿದ್ದಲ್ಲಿ ಚುಚ್ಚುವುದು ಹೆಚ್ಚು
ಸರಿದಾರೀಲಿ ನಡೆದಾಗ ಅಟ್ಟಕೇರಿಸುವುದು ಹೆಚ್ಚು
ಹೆಚ್ಚು ಹೆಚ್ಚಾಗಿ ಹುಚ್ಚು ಹಿಡಿದಂತೆ ಮೆಚ್ಚುಗೆಯ
ಗಳಿಸುವಲ್ಲಿ ಸಮರಗೈಯ್ಯುವ ಈ ಕಿಚ್ಚು ಹಿಡಿಸುವ
ಯೌವ್ವನ ಇಷ್ಟು ಬೇಗ ಬರಬಾರದಿತ್ತಲ್ಲವೇ
ವಿದ್ಯೆಯಂತೆ ಉದ್ಯೋಗವಂತೆ
ಅವನಿಗೆ ಇಷ್ಟು ಆದಾಯವಂತೆ
ಇವಳಿಗೇಕೆ ಕಮ್ಮಿಯಂತೆ
ಅಂತೆ ಕಂತೆಗಳಿಗೆ ವಸ್ತುವಾಗುವ ಈ
ಯೌವ್ವನ ಇಷ್ಟು ಬೇಗ ಬರಬಾರದಿತ್ತಲ್ಲವೇ
ಜವಾಬ್ದಾರಿ ಹೆಚ್ಚಾದಾಗ
ಕನಸುಗಳು ಸೋಲಲ್ಪಟ್ಟಾಗ
ಬದುಕೇ ಶೂನ್ಯವೆನಿಸಿದಾಗ
ಮತ್ತೆ ಕಾಡುವ ಒಂದೇ ಪ್ರಶ್ನೆ
ಯೌವ್ವನ ಇಷ್ಟು ಬೇಗ ಬರಬಾರದಿತ್ತಲ್ಲವೇ...?
- ಅರ್ಪಿತಾ ಕುಂದರ್