ವಿಶ್ವ ಮಾನವ ದಿನದ ಅಂಗವಾಗಿ
ಕುಪ್ಪಳಿಯ ವರಕುವರ ಪುಟ್ಟಪ್ಪ ವರಕವಿಯು
ಚಪ್ಪರಿಸಿ ಮೆದ್ದಿಹರು ಹಲಬಗೆಯ ಕಾವ್ಯ
ಕೊಪ್ಪರಿಗೆ ಹೊನ್ನೆಲ್ಲ ಬರಿಶೂನ್ಯ ಹೋಲಿಸಲು
ಒಪ್ಪಯಿಸಿ ಹೊಳೆದಿರಲು ಸಾಹಿತ್ಯ ಸೂರ್ಯ ||೧||
ಹುಟ್ಟಿರುವ ಕಾವ್ಯಗಳು ತಟ್ಟಿರಲು ಎದೆಕದವ
ಮುಟ್ಟಿಹುದು ಜನಮನದ ಭಾವನೆಯ ಗಂಧ
ಗಟ್ಟಿ ಕಾಳುಗಳೆಲ್ಲ ಸೇರಿಹುದು ಕಣಜದಲಿ
ಬೆಟ್ಟದಾ ಅಚಲತೆಯ ಹೊಂದಿರುವ ಬಂಧ||೨||
ಯುಗದಕವಿ ಜಗದಕವಿ ಆಧುನಿಕ ವಾಲ್ಮೀಕಿ
ಜಗದಗಲ ಪಸರಿಸಿದ ಮಾನವತೆ ಸಾರ
ಪ್ರಗತಿಪರ ಚಿಂತಕರು ಸಂತಕವಿ ಎಂದೆನಿಸಿ
ಭಗವಂತನನು ಕಂಡು ಇಳೆಯಲ್ಲಿ ನೇರ ||೩||
ಮನುಜಮತ ವಿಶ್ವಪಥ ಸರ್ವೋದಯದ ಮಂತ್ರ
ದನಿಯಾಗೆ ದೀನರಿಗೆ ಮಿಡಿದಿರುವ ಹೃದಯ
ಜನತೆಯೂ ಜೀವನವು ಸಾಹಿತ್ಯ ಚಕ್ಷುಗಳು
ಸನಿಹದೊಡನಾಟದಾ ಅಭ್ಯುದಯ ಧ್ಯೇಯ ||೪||
ನೆಲದಲ್ಲಿ ಜಲದಲ್ಲಿ ಹಸಿರಲ್ಲಿ ಉಸಿರಲ್ಲಿ
ಬಲವಿಹುದು ಸಂಪನ್ನ ಕಾವ್ಯಕೃಷಿಯಲ್ಲಿ
ಒಲವಿರಲು ಸಾಧನೆಗೆ ತೊಡಕಾಗದಾ ಶಕ್ತಿ
ಕುಲಗೋತ್ರವೇತಕ್ಕೆ ವೈಷಮ್ಯ ತಳ್ಳಿ||೫||
ರಸಋಷಿಯ ರಸಿಕತೆಯು ಒಡಲನ್ನು ಛೇದಿಸಲು
ಜಸವಿಹುದು ಮಲೆಗಳಲಿ ಮದುಮಗಳ ಜೋಡಿ
ರಸಹೀರೆ ದುಂಬಿಗಳು ಸುಮರಾಜಿ ಚೆಲುವಿನಲಿ
ಹೊಸಬಗೆಯ ಚೇತನವ ಬೆಸೆದಿರುವ ಮೋಡಿ ||೬||
ರವಿವದನವೇ ಶಿವಸದನವೆಂದ ಮೇರುಕವಿ
ಸವಿನಾಡ ಗೀತೆಯಾ ಮೃಷ್ಟಾನ್ನವುಣಿಸಿ
ಭವಿತವ್ಯ ಮರೆಯದಾ ಉಡುಗೊರೆಯನಿತ್ತಿಹರು
ಭವಬಂಧ ಅನುಬಂಧ ಅನುಭಾವ ಹರಿಸಿ ||೭||
ಸಾಹಿತ್ಯ- ಶ್ರೀಮತಿ ಲಕ್ಷ್ಮೀ ವಿ ಭಟ್. ಕೆನರಾ ಹೈಸ್ಕೂಲ್ ಉರ್ವ.
ಸಂಗೀತ - ಶ್ರೀಮತಿ ರಚನಾ ಆರ್ ಕಾಮತ್ , ಕೆನರಾ ಹೈಸ್ಕೂಲ್. ಸಂಗೀತ ಟೀಚರ್
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ