ಬೆಂಗಳೂರು: ಓಮಿಕ್ರಾನ್ ಭೀತಿ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಲು ಸರ್ಕಾರ ಎಲ್ಲಾ ರೀತಿಯಲ್ಲಿ ಯೋಜನೆ ರೂಪಿಸಿದೆ. ಹೊಸ ವರ್ಷಕ್ಕೆ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಬೆಂಗಳೂರಿನ ಎಂ.ಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಕ್ಕೆ ಬ್ರೇಕ್ ಹಾಕಲಾಗಿದೆ.
ಸಂಜೆ 6 ಗಂಟೆಗೆ ಈ ರಸ್ತೆಗಳನ್ನು ಬಂದ್ ಮಾಡಲಾಗುತ್ತದೆ. ಹೋಟೇಲ್ , ಪಬ್, ರೆಸ್ಟೋರೆಂಟ್ ಗಳಲ್ಲಿ ಮೊದಲೇ ಬುಕ್ ಮಾಡಿದವರಿಗಷ್ಟೇ ಅವಕಾಶ ನೀಡಲಾಗುತ್ತದೆ. ಯಾವುದೇ ಸಂಭ್ರಮಾಚರಣೆಗೂ ಅವಕಾಶ ನಿರಾಕರಿಸಲಾಗಿದೆ. ಪ್ರತಿಯೊಬ್ಬರು ಎರಡು ಡೋಸ್ ಲಸಿಕೆ ಪಡೆದಿರುವುದು ಕಡ್ಡಾಯವಾಗಿದೆ.
ಪಬ್ ಗೆ ಬಂದವರ ಸಂಪೂರ್ಣ ಜವಾಬ್ದಾರಿ ಅದರ ಮಾಲೀಕರದ್ದಾಗಿರುತ್ತೆ. 10 ಗಂಟೆಯ ನಂತರವೂ ಯಾರಾದರೂ ಪಬ್ ನಲ್ಲಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ. ಹೋಟೆಲ್ ಗಳನ್ನು ಕರ್ಫ್ಯೂ ಪ್ರಾರಂಭವಾಗುವ ಮೊದಲೇ ಬಂದ್ ಮಾಡಬೇಕಾಗುತ್ತದೆ ಎಂದು ಪೊಲೀಸರು ಖಡಕ್ ಎಚ್ಚರಿಕೆ ನೀಡಿದ್ದಾರೆ.