ಮಂಗಳೂರು: ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ಸಂಘ (ಎಪಿಟಿಎಂಯು) ದ ವತಿಯಿಂದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ಕುರಿತ ವಿಶೇಷ ಉಪನ್ಯಾಸ ಮತ್ತು ವಾರ್ಷಿಕ ಮಹಾಸಭೆಯು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಇತ್ತೀಚೆಗೆ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಡೀನ್, ವಸ್ತುವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಮಂಜುನಾಥ ಪಟ್ಟಾಭಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ರಡಿ ಬದಲಾದ ಭೌತಶಾಸ್ತ್ರ ಪಠ್ಯಕ್ರಮ ಮತ್ತು ಪ್ರಯೋಗಗಳನ್ನು ಬೋಧಿಸಲು ಬಳಸಬಹುದಾದ ಸರಳ ವಿಧಾನಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಯೋಜನಗಳು, ತೆರೆದುಕೊಳ್ಳುವ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ರಾಜ್ಯ ಮಟ್ಟದ ಭೌತಶಾಸ್ತ್ರ ಪಠ್ಯಕ್ರಮ ಸಮಿತಿಯ ಸದಸ್ಯ ಡಾ. ನಾರಾಯಣ ಭಟ್ ಪಠ್ಯಕ್ರಮದ ಕುರಿತು ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಡಾ. ಎ ಪಿ ರಾಧಾಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಡಾ. ಜಗನ್ನಾಥ ಎನ್ ಅತಿಥಿಗಳನ್ನು ಸ್ವಾಗತಿಸಿದರು. ಸಂಘದ ಖಜಾಂಜಿ ವೆಂಕಟೇಶ ಭಟ್ ವಂದಿಸಿದರು. ವಿವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಡಾ. ಮಹೇಂದ್ರ ಕಾರ್ಯಕ್ರಮ ನಿರೂಪಿಸಿದರು.
ಸಂಘದ 2021-22 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ವಿವಿ ಕಾಲೇಜಿನ ಶ್ರೀಮತಿ ಅರುಣಾ ಕುಮಾರಿ ಅಧ್ಯಕ್ಷರಾಗಿ, ವೆಂಕಟೇಶ ಭಟ್ ಕಾರ್ಯದರ್ಶಿಯಾಗಿ, ಶೈಲಜಾ ಖಜಾಂಜಿಯಾಗಿ ಆಯ್ಕೆಯಾದರು. ಪಿಲಿಕುಳ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ. ಕೆ ವಿ ರಾವ್ ಭಾಗವಹಿಸಿ ಸಂಘದ ಉದ್ದೇಶ ಮತ್ತು ಚಟುವಟಿಕೆಗಳನ್ನು ವಿವರಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ