|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾಸರಗೋಡಿನ ಕನ್ನಡ ಸಂತ ಪುರುಷೋತ್ತಮ ಬಿ ಮತ್ತು ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿನಾಡ ರಾಜ್ಯ ಪ್ರಶಸ್ತಿ

ಕಾಸರಗೋಡಿನ ಕನ್ನಡ ಸಂತ ಪುರುಷೋತ್ತಮ ಬಿ ಮತ್ತು ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿನಾಡ ರಾಜ್ಯ ಪ್ರಶಸ್ತಿ


ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಹೋರಾಟಗಾರರಾದ  ಕಯ್ಯಾರ ಕಿಂಞ್ಞಣ್ಣ ರೈ ಮತ್ತು ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಹೆಸರಿನಲ್ಲಿ ಕನ್ನಡ ಹೋರಾಟಗಾರರಿಗೆ/ ಸಂಸ್ಥೆಗಳಿಗೆ ನೀಡುವ ಒಂದು ಲಕ್ಷ ನಗದಿನೊಂದಿಗಿರುವ ರಾಜ್ಯ ಪ್ರಶಸ್ತಿಯನ್ನು ಕ್ರಮವಾಗಿ ಕಾಸರಗೋಡಿನ ಹಿರಿಯ ಕನ್ನಡ ಹೋರಾಟಗಾರ ಬಿ. ಪುರುಷೋತ್ತಮ ಹಾಗೂ ಕರ್ನಾಟಕದ ವಿದ್ಯಾವರ್ಧಕ ಸಂಘವು ಪಡೆದುಕೊಂಡಿದೆ.  


ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ ಭಾ.ಆ.ಸೇ (ನಿ.), ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ, ಸಾಹಿತಿ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಮಲ್ಲೆಪುರಂ ವೆಂಕಟೇಶ್‌, ಶ್ರೀ ಪ್ರದೀಪ್‌ ಕುಮಾರ್‌ ಕಲ್ಕೂರ, ಡಾ, ವಿಜಯಲಕ್ಷ್ಮಿ ಬಾಳೆಕುಂದ್ರಿ, ಕಾಸರಗೋಡಿನ ಡಾ. ರತ್ನಾಕರ ಮಲ್ಲಮೂಲೆ, ಪ್ರೊ. ಗುರುಲಿಂಗಪ್ಪ ದಬಾಲೆ, ಅಕ್ಕಲಕೋಟೆ ಇವರಿದ್ದರು.  


****

ಪುರುಷೋತ್ತಮ ಬಿ.:

ವೈಯಕ್ತಿಕ ಜೀವನಕ್ಕಿಂತಲೂ ಕಾಸರಗೋಡಿನ ಕನ್ನಡದ ಉಳಿವು ಹಾಗೂ ಬೆಳವಣಿಗೆಗಾಗಿ ದುಡಿಯುತ್ತಿರುವ ಬಿ. ಪುರುಷೋತ್ತಮ ಅವರು ಬರೆದಂತೆ, ನುಡಿದಂತೆ ತಮ್ಮ ಬದುಕಿನಲ್ಲೂ ಕನ್ನಡದ ಕಾಳಜಿಯನ್ನು ಅಳವಡಿಸಿಕೊಂಡವರು. ಪುರುಷೋತ್ತಮರೆಂದರೆ ಹಲವರಿಗೆ ಗೊತ್ತಿಲ್ಲದೆ ಇರಬಹುದು. ಆದರೆ ಅವರ ಕನ್ನಡ ದುಡಿಮೆ, ಹೋರಾಟಗಳ ಪರಿಣಾಮವಾಗಿ ಉಂಟಾದ ಫಲವನ್ನು, ಸ್ಥಾನಮಾನವನ್ನು, ಉದ್ಯೋಗವನ್ನು ಹಾಗೂ  ಕನ್ನಡದ ಸವಲತ್ತುಗಳನ್ನು ಅನುಭವಿಸುವವರು ಕಾಸರಗೋಡಿನಲ್ಲಿ ಅನೇಕರಿದ್ದಾರೆ. ಪುರುಷೋತ್ತಮ ಅವರ ಕನ್ನಡದ ದುಡಿಮೆಯನ್ನು ಹತ್ತಿರದಿಂದ ಬಲ್ಲ ಅವರ ಶಿಷ್ಯರು ಹಾಗೂ ಅಭಿಮಾನಿಗಳು ಅವರನ್ನು ಕಾಸರಗೋಡಿನ ಕನ್ನಡ ಸಂತ, ಗಡಿನಾಡ ಕನ್ನಡ ಕಣ್ವ ಎಂದು ಗುರುತಿಸಿದ್ದಾರೆ. ಈಗ ಇರುವ ಇಲ್ಲಿನ ಕನ್ನಡದ ನಿಸ್ವಾರ್ಥ ಹೋರಾಟಗಾರರಲ್ಲಿ ಬಿ. ಪುರುಷೋತ್ತಮ ಅವರು ಅಗ್ರಗಣ್ಯರು.  


1938 ಎಪ್ರಿಲ್‌ 13 ರಂದು ಕಾಸರಗೋಡು ಜಿಲ್ಲೆಯ ಅಣಂಗೂರಿನ ಬಿ ದಾಸಪ್ಪಯ್ಯ ಮತ್ತು ಸರಸ್ವತಿ ದಂಪತಿಯರ ಪುತ್ರನಾಗಿ ಜನಿಸಿದ ಪುರುಷೋತ್ತಮರು, ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೂಡ್ಲು, ಸರಕಾರಿ  ಯು.ಪಿ ಶಾಲೆ ಕಾಸರಗೋಡು ಹಾಗೂ ಬಿ.ಇ.ಎಂ ಶಾಲೆಗಳ ಹಳೆಯ ವಿದ್ಯಾರ್ಥಿ. ಉಜಿರೆ, ಚಿತ್ತಾರಿ, ಬಂಗ್ರ ಮಂಜೇಶ್ವರ, ಮಧೂರು, ಬೆಳ್ಳೂರು, ಪೆರಡಾಲ, ಮಾಯಿಪ್ಪಾಡಿ, ಮೊಗ್ರಾಲ್‌ ಪುತ್ತೂರು ಈ ಮುಂತಾದ ಕಡೆ ಶಾಲಾ ಅಧ್ಯಾಪಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿ, ನಿವೃತ್ತರಾದ ಬಳಿಕ ಕಣ್ಣೂರು ವಿಶ್ವವಿದ್ಯಾಲಯದ ಚಾಲಾ ಬಿ.ಎಡ್ ಕೇಂದ್ರದಲ್ಲಿ  ಅತಿಥಿ ಉಪನ್ಯಾಸಕರಾಗಿ ಹತ್ತು ವರುಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.  ಭಾಷೆ ಸಾಹಿತ್ಯದ ಮೇಲಿನ ವಿಶೇಷ ಆಸಕ್ತಿಯಿಂದ ಖಾಸಗಿಯಾಗಿ ಭಾಷೆ ಸಾಹಿತ್ಯದಲ್ಲೂ, ಶಿಕ್ಷಣದಲ್ಲೂ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡವರು. ಕಾಸರಗೋಡಿನಲ್ಲಿ ಕನ್ನಡ ಮಾಧ್ಯಮ ಅಧ್ಯಾಪಕ ಸಂಘವನ್ನು ಸ್ಥಾಪಿಸಲು ಮುತುವರ್ಜಿ ವಹಿಸಿದವರು. ಕಾಸರಗೋಡಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ಬಂದಾಗ ಅಲ್ಲಿ ಕನ್ನಡ ವಿಭಾಗ ಪ್ರಾರಂಭವಾಗಬೇಕೆಂದು ಸುಮಾರು ಐದು ವರುಷಗಳ ಕಾಲ ಶ್ರಮಿಸಿದರು.  ರಾಜಕೀಯ ಧುರೀಣ ಶ್ರೀಕಾಂತ್‌ ಹಾಗೂ ರತ್ನಾಕರ ಮಲ್ಲಮೂಲೆ ಯವರು ಪುರುಷೋತ್ತಮ ಅವರ ಈ ಪ್ರಯತ್ನಕ್ಕೆ ಜತೆಗೂಡಿದವರು.  


ಮೋಗ್ರಾಲ್‌ ಪುತ್ತೂರಿನಲ್ಲಿರುವ  ತಾಂತ್ರಿಕ ವಿದ್ಯಾಲಯದಲ್ಲಿ ಕನ್ನಡ ಹುದ್ದೆ, ಮರುಸ್ಥಾಪನೆ, ಚಾಲ ಬಿಡ್‌ ಕೇಂದ್ರದಲ್ಲಿ ಸೀಟು ಕಡಿತಗೊಳಿಸಿದಾಗ ಸಂಬಂಧಪಟ್ಟವರನ್ನು ಸಂಪರ್ಕಿಸಿ ಸರಿಪಡಿಸಿದ್ದು, ಕನ್ನಡ ಶಾಲೆಗೆ ಅನ್ಯ ಭಾಷಿಗರ ನೇಮಕವಾದಾಗ ಕಾನೂನಿನ ದಾರಿ ತುಳಿಯಲು ಸಹಕರಿಸಿದ್ದು, ಕನ್ನಡಿಗರಿಂದಲೇ ಕನ್ನಡಕ್ಕೆ ಅಪಚಾರವಾದಾಗ, ಮತ್ತೊಮ್ಮೆ ಹೀಗಾಗದಂತೆ ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಿದ್ದು,  ಕೇರಳ ಲೋಕಸೇವಾ ಆಯೋಗ ಮತ್ತು ಕೇರಳ ಅಂಚೆ ಇಲಾಖೆಯು ಕನ್ನಡಿಗರ ಹುದ್ದೆಗಳಿಗೆ ಸಂಚಕಾರವೊಡ್ಡಿದಾಗ ಸರಿಪಡಿಸಲು ಪ್ರಯತ್ನಿಸಿದ್ದು, ಸ್ಥಳನಾಮ ವಿರೂಪಗೊಂಡಾಗ, ಕಂದಾಯ ಇಲಾಖೆಯ ಅಧಿಕಾರಿಗೆ ನಿರಂತರ ಮನವಿ ಬರೆದು, ತಪ್ಪುಗಳನ್ನು ಎತ್ತಿ ಹೇಳಿದ್ದು, ಜಿಲ್ಲಾಧಿಕಾರಿಯವರು ಕನ್ನಡ ಭಾಷಾ ಅಲ್ಪಸಂಖ್ಯಾಕ ಸಭೆ ಕರೆಯಬೇಕಾದ ಮಹತ್ವವನ್ನು ಆಗಾಗ ತಿಳಿಸಿದ್ದು, ಮಲೆಯಾಳ ಕಡ್ಡಾಯದಿಂದ ಕಾಸರಗೋಡಿನ ಕನ್ನಡಿಗರು ಪಡುವ ಬವಣೆಗಳ ಕುರಿತು ಎಚ್ಚರಿಸಿದ್ದು,ಮಂಜೇಶ್ವರ ಕ್ಯಾಂಪಸ್‌ ನಲ್ಲಿರುವ ಕಟ್ಟಡಗಳು ಕಾರ್ಯಶೂನ್ಯ ಆಗುವುದರ ಬಗ್ಗೆಯೂ ಅಲ್ಲಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಎಂಎ ಪ್ರಾರಂಭ ಮಾಡಬೇಕಾದ ಅಗತ್ಯದ ಕುರಿತು ಅಧಿಕೃತರ ಗಮನ ಸೆಳೆದುದು.  


ಕನ್ನಡ ಬಲ್ಲ ಗುಮಾಸ್ತ ಹುದ್ದೆಗಳನ್ನು ಪುನರ್ಸ್ಥಾಪಿಸುವಲ್ಲಿನ ಪ್ರಯತ್ನ, ಕನ್ನಡ ಸಮನ್ವಯ ಸಮಿತಿಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡಿಗರನ್ನು ಒಗ್ಗೂಡಿಸುವ ಕೆಲಸ ಮಾಡಿದ್ದು, ಕಾಸರಗೋಡಿನ ಕನ್ನಡಿಗರ ಅಸ್ಮಿತೆಗಾಗಿ ನಿರಂತರ ಮಾಧ್ಯಮಗಳ ಮೂಲಕ ಜಾಗೃತಿ, ಸಾಕ್ಷರತಾ ಮಿಷನ್‌ ನವರ ಸಮತ್ವ ಯೋಜನೆಯನ್ನು ಉನ್ನತ ಹಂತಕ್ಕೂ ವಿಸ್ತರಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿ ಯಶಸ್ವಿಯಾದುದು ಅವರ ಅನೇಕ ಕನ್ನಡ ಸಾಧನೆಗಳಲ್ಲಿ ಕೆಲವು. 


ಕನ್ನಡ ಮಧ್ಯಮ ಶಾಲೆಯಲ್ಲಿ ಕಲಿಸುತ್ತಿರುವ ಅಧ್ಯಾಪಕರ ಮಕ್ಕಳು ಕನ್ನಡ ಮಾಧ್ಯಮ ಶಾಲೆಯಲ್ಲಿಯೇ ಕಲಿತು ಸಮಾಜದ ಉಳಿದ ಕನ್ನಡಿಗರಿಗೆ ಮಾದರಿಯಾಗಬೇಕೆಂದು ಸದಾ ಕಾಲ ಪುರುಷೋತ್ತಮ ಅವರು ನುಡಿಯುತ್ತಾರೆ. ಕಾಸರಗೋಡಿನ ಕನ್ನಡ ಶಾಲೆಗಳು ಇಲ್ಲಿನ ಕನ್ನಡದ ಜೀವನಾಡಿಯಾದ ಕಾರಣ, ಈ ಶಾಲೆಗಳನ್ನು ಉಳಿಸಿ ಬೆಳೆಸುವ ಗುರುತರ ಹೊಣೆ ಇಲ್ಲಿನ ಕನ್ನಡ ಅಧ್ಯಾಪಕರಿಗೂ ಪ್ರಾಧ್ಯಾಪಕರಿಗೂ ಇದೆ ಎಂಬುದನ್ನು ತಮ್ಮ ಬರವಣಿಗೆಯ ಮೂಲಕ ಮತ್ತು ಉಪನ್ಯಾಸಗಳ ಮೂಲಕ ಎಲ್ಲೆಡೆ ಬಿತ್ತರಿಸಿ ಜಾಗೃತಿ ಮೂಡಿಸಲು ಅವರಿಗೆ ಸಾಧ್ಯವಾಗಿದೆ.


ಕರ್ನಾಟಕದ ವೃತ್ತಿಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗಿರುವ ಸವಲತ್ತುಗಳನ್ನು ಅಡ್ಡದಾರಿಯ ಮೂಲಕ ಇತರರು ಕಬಳಿಸಲು ಪ್ರಯತ್ನಿಸಿದಾಗ ಪುರುಷೋತ್ತಮ ಅವರ ಮನವಿಗಳು ಸಕಾಲದಲ್ಲಿ ಎಚ್ಚರಿಸಿದ್ದಿವೆ. ಪರಿಹಾರ ಒದಗಿಸಿದ್ದೂ ಇವೆ. ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಯಕ್ಷಗಾನ ಸಂಶೋಧನ ಕೇಂದ್ರ ಸ್ಥಾಪನೆಯಾಗುವಲ್ಲಿಯೂ ಅದರ ಅನಂತರದ ಈ ಸಂಸ್ಥೆಯ ಬೆಳವಣಿಗೆಯಲ್ಲಿಯೂ ಪುರುಷೋತ್ತಮ ಅವರ ಶ್ರಮವಿದೆ. ಡಯಟ್‌ ಮಾಯಿಪ್ಪಾಡಿ ಇಲ್ಲಿನ ಸ್ಥಳಗಳ ಬಗ್ಗೆ ಚಾರಿತ್ರಿಕ ವಿಷಯ ವಿಚಾರಗಳನ್ನು ಹೊರಗೆಡುಹುವ ಅಧ್ಯಯನ ಮತ್ತು ಅವೆಲ್ಲವೂ ಇಲ್ಲಿನ ಕನ್ನಡಿಗರ ಅಸ್ಮಿತೆಯನ್ನು ಎತ್ತಿ ಹಿಡಿಯುವ ದಾಖಲೆಗಳು ಪುರುಷೋತ್ತಮರಲ್ಲಿದೆ. 


ಕಣ್ಣೂರು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯಲ್ಲಿ ಕನ್ನಡ ಪ್ರತಿನಿಧಿಗಳು ಬೇಕೆಂದು ಹಲವು ವರುಷಗಳಿಂದ ಬೇಡಿಕೆಯಿಡುತ್ತಾ ಬಂದ ಪುರುಷೋತ್ತಮರು ಅದಕ್ಕಾಗಿ ಸಲ್ಲಿಸಿದ ಮನವಿಗಳು ಅನೇಕ. ಅನೇಕ ಸಲ ಈ ಬಗ್ಗೆ ಅಧಿಕಾರಿಗಳನ್ನು ಭೇಟಿಯೂ ಆಗಿದ್ದಾರೆ.


ಕಾಸರಗೋಡಿನ ಸರ್ವೋತೋಮುಖ ಅಭಿವೃದ್ಧಿಯನ್ನು ಲಕ್ಷ್ಯವಾಗಿರಿಸಿಕೊಂಡು ಕೇರಳ ಸರಕಾರವು ಡಾ. ಪ್ರಭಾಕರನ್‌ ಆಯೋಗವನ್ನು ಕಾಸರಗೋಡಿಗೆ ಕಳಿಸಿಕೊಟ್ಟಾಗ ಆಯೋಗದ ಜತೆಗೆ ಪುರುಷೋತ್ತಮ ಅವರು ಮಾತನಾಡಿದ್ದಾರೆ. ಇಲ್ಲಿನ ಕನ್ನಡಿಗರ ಭಾಷೆ ಸಾಹಿತ್ಯ ಸಂಸ್ಕೃತಿ ಉಳಿದರೆ ಮಾತ್ರ ಕಾಸರಗೋಡಿನ ಸರ್ವೋತೋಮುಖ ಅಭಿವೃದ್ಧಿ ಸಾಧ್ಯ, ಎಂದವರು. ಕನ್ನಡದ ಧ್ವನಿ ಎಲ್ಲಿಯೆಲ್ಲ ಮೊಳಗಬೇಕೋ ಅಲ್ಲಿಯೆಲ್ಲ ಪುರುಷೋತ್ತಮರ ಹಾಜರಿಯಿರುತ್ತದೆ. ಇದು ಅವರ ವಿಶೇಷ. ಆದ ಕಾರಣವೇ ಅವರು ಕಾಸರಗೋಡಿನ ಕನ್ನಡ ಸಂತ, ಗಡಿನಾಡಿನ ಕನ್ನಡ ಕಣ್ವ.


ಕನ್ನಡ ಭಾಷಾ ಅಲ್ಪಸಂಖ್ಯಾಕರಿಗೆ ಸಿಗಬೇಕಾದ ಸವಲತ್ತುಗಳನ್ನು ದೊರಕಿಸಿಕೊಡಲು, ದುಡಿದವರು. ಕಾಸರಗೋಡಿನಲ್ಲಿ ಮಲೆಯಾಳ ಕಡ್ಡಾಯ ಆದೇಶ ಬಂದಾಗ, ಜನರನ್ನು ಒಗ್ಗೂಡಿಸಿ ನ್ಯಾಯಕ್ಕಾಗಿ ಇತರ ಕನ್ನಡ ಸಂಸ್ಥೆಗಳೊಂದಿಗೆ ಹೋರಾಡಿದರು. ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಔದ್ಯೋಗಿಕ ಹೀಗೆ ಹಲವು ಕನ್ನಡ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ದುಡಿದ ಅವರು ಸ್ಥಾನಮಾನ, ಪ್ರಶಸ್ತಿಗಳಿಗೆ ಹಂಬಲಿಸದೆ ಎಲೆಮರೆಯ ಕಾಯಿಯಾಗಿಯೇ ಉಳಿದವರು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮನ್ನಣೆಗಳು ಪುರುಷೋತ್ತಮರಿಗೆ ಈ ಮೊದಲೇ ಲಭ್ಯವಾಗಬೇಕಿತ್ತು. ಆದರೆ ಯಾವುದನ್ನೂ ಹೊರಗೆ ಹೇಳಲು ಸಂಕೋಚ ಪಡುವ ಈ ಹಿರಿಯ ಪ್ರಾಮಾಣಿಕ ವ್ಯಕ್ತಿಗೆ ಅವರ ವಿದ್ಯಾರ್ಥಿಗಳು ಸೇರಿ ಮಾಡಿದ ಒಂದು ದಿನದ ಅಭಿನಂದನೆ ಕಾರ್ಯಕ್ರಮ (ಸಿರಿಚಂದನ ಕನ್ನಡ ಯುವಬಳಗ ಕಾಸರಗೋಡು), ಕಸಾಪ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, ಕೇರಳ ಪ್ರಾಂತ್ಯ ಕನ್ನಡ ಅಧ್ಯಾಪಕರ ಸಂಘದ ಗೌರವ, ಕನ್ನಡ ಭವನ ಈ ಮುಂತಾದ ಸಂಘಸಂಸ್ಥೆಗಳ ಆದರ ಗೌರವಗಳು ಮಾತ್ರ ಲಭಿಸಿವೆ. ಇವು ಬಿಟ್ಟರೆ ರಾಜ್ಯ ಮಟ್ಟದ ಯಾವ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿಲ್ಲ.  


ಶ್ರೀ ಬಿ ಪುರುಷೋತ್ತಮ ಅವರು, ತಮ್ಮ ವೈಯಕ್ತಿಕ ಸುಖ ಸೌಖ್ಯಕ್ಕಿಂತಲೂ ಹೆಚ್ಚು ಮಹತ್ವವನ್ನು ಕಾಸರಗೋಡಿನ ಕನ್ನಡದ ಉಳಿವು ಮತ್ತು ಬೆಳವಣಿಗೆಗಾಗಿ ಮೀಸಲಿಟ್ಟು ತುಡಿಯುತ್ತಿರುವ ಹಿರಿಯ ಚೇತನ. ಕಳ್ಳಿಗೆ ಮಹಾಬಲ ಭಂಡಾರಿ, ಯು.ಪಿ ಕುಣಿಕುಳ್ಳಾಯರು, ಕಯ್ಯಾರ ಕಿಂಞ್ಞಣ್ಣ ರೈ ಈ ಮುಂತಾದ ಹಿರಿಯ ಕನ್ನಡ ಹೋರಾಟಗಾರರೊಂದಿಗೆ ದುಡಿದ ಅನುಭವ ಪುರುಷೋತ್ತಮ ಅವರಿಗಿದೆ. ಕಯ್ಯಾರ ಕಿಂಞ್ಞಣ್ಣ ರೈಯವರ ಜತೆ ನಾಲ್ಕು ದಶಕಗಳ ಮೊದಲು ಬದಿಯಡ್ಕದಲ್ಲಿ  ಕನ್ನಡ ಜಾಗೃತಿ ಮೂಡಿಸಲು ಬ್ಯಾನರ್‌ ಬರೆಯಲು ಹೋದ ಮೆಲುಕನ್ನು ಇಂದಿಗೂ ನೆನಪಿಸುತ್ತಾರೆ.


ಪುರುಷೋತ್ತಮರಿಗೆ ಕನ್ನಡದ ಕ್ರಿಯಾತ್ಮಕ ಕೆಲಸ ಮಾಡಲು ಸಮಯದ ಅಭಾವವಿಲ್ಲ, ವೃದ್ಧಾಪ್ಯದ ಬಳಲಿಕೆಯಿಲ್ಲ; ಆರೋಗ್ಯದ ಕಡೆ ಗಮನವಿಲ್ಲ; ಹೆಸರು ಸನ್ಮಾನ ಪ್ರಶಸ್ತಿಗಳ ಹಂಗಿಲ್ಲ. ಈಗಲಾದರೂ ಅವರಿಗೆ ಈ ಪ್ರಶಸ್ತಿ ಬಂದುದು ಕಾಸರಗೋಡಿನ ಕನ್ನಡಕ್ಕೆ ಲಭಿಸಿದ ಬಹುದೊಡ್ಡ ಗೌರವ. ಕಯ್ಯಾರರ ಒಡನಾಟದೊಂದಿಗೆ ಬೆಳೆದ ಶ್ರೀ ಪುರುಷೋತ್ತಮ ಅವರಿಗೆ, ಕರ್ನಾಟಕ ಘನ ಸರಕಾರದ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ೨೦೨೧ ನೇ ವರುಷದಿಂದ ಪ್ರಾರಂಭಿಸಿರುವ, ಕನ್ನಡ ಹೋರಾಟಗಾರರಾದ ಸನ್ಮಾನ್ಯ ಶ್ರೀ ಕಯ್ಯಾರ ಕಿಂಞಣ್ಣ ರೈ ಅವರ ಹೆಸರಿನಲ್ಲಿ ಕೊಡಮಾಡುವ ರಾಜ್ಯಪ್ರಶಸ್ತಿಯನ್ನು, ನೀಡಿ ಗೌರವಿಸಿರುವುದು ಅತ್ಯಂತ ಅಭಿಮಾನದ ವಿಷಯ.  


ಅದೇ ರೀತಿಯಲ್ಲಿ ಕರ್ನಾಟಕದ ಏಕೀಕರಣ ಹೋರಾಟದಿಂದ ತೊಡಗಿ ಇವತ್ತಿನವರೆಗೂ ಕನ್ನಡ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ದುಡಿಯುತ್ತಿರುವ ಧಾರವಾಡ ವಿದ್ಯಾವರ್ಧಕ ಕನ್ನಡ ಸಂಘಕ್ಕೆ,ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಹೋರಾಟಗಾರ್ತಿ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಹೆಸರಲ್ಲಿ ಕೊಡಮಾಡುವ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post