||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೃಷಿಕರ ಅನ್ವೇಷಣೆ: ಹೊರುವ ಭಾರದ ಮೂಟೆ, ಹಗುರಾಗಿಸಿದೆ ಈ ರಾಟೆ

ಕೃಷಿಕರ ಅನ್ವೇಷಣೆ: ಹೊರುವ ಭಾರದ ಮೂಟೆ, ಹಗುರಾಗಿಸಿದೆ ಈ ರಾಟೆ


ಕರಾವಳಿ ಮತ್ತು ಕಾಸರಗೋಡು ಪ್ರದೇಶ ಭೌಗೋಳಿಕವಾಗಿ ಏರು-ತಗ್ಗು. ಇಲ್ಲಿನ ಹೆಚ್ಚಿನ ಕೃಷಿಕರ ಮನೆ ಮತ್ತು ಅಂಗಳ ಎತ್ತರದಲ್ಲಿ ಇದ್ದರೆ ತೋಟವಿರುವುದು ಮೂವತ್ತು ನಲವತ್ತು ಅಡಿ ಕೆಳಗೆ... ಕೃಷಿಗೆ ಬೇಕಾದ ಗೊಬ್ಬರ ಇತ್ಯಾದಿ ಮೇಲಿನಿಂದ ಕೆಳಕ್ಕೆ ಹೊರುವ ಕಷ್ಟ ಒಂದೆಡೆಯಾದರೆ ಅಡಿಕೆ, ತೆಂಗು, ಬಾಳೆ ಇತ್ಯಾದಿ ಕೃಷಿ ಉತ್ಪನ್ನಗಳನ್ನು ಕೆಳಗಿನ ತೋಟದಿಂದ ಮನೆಯೆದುರಿನ ಅಂಗಳಕೆ ತರುವ, ಹೊರುವ ಕೆಲಸ ತ್ರಾಸದಾಯಕ ಮತ್ತು ಕಷ್ಟಕರ. ಅಡಿಕೆ ಕೊಯಿಲಿನ ಸಮಯದಲ್ಲಿ ಮತ್ತು ತೆಂಗಿನಕಾಯಿ ಕೊಯ್ದು ಅಂಗಳಕ್ಕೆ ತರುವಾಗ ಕೆಲಸದಾಳುಗಳು ಸುಸ್ತು, ಜೊತೆಗೆ ಕೃಷಿಕನೂ ಹೈರಾಣ!


ಇಂದಿನ ದಿನಗಳ ಕಾರ್ಮಿಕರ ಕೊರತೆ, ಸಮಯ ಮತ್ತು ತ್ರಾಸವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ, ತೋಟದಲ್ಲಿ ಬೆಳೆದ ಕೃಷಿ ಉತ್ಪನ್ನಗಳನ್ನು ಮತ್ತು ಗೊಬ್ಬರವನ್ನು ಕೆಳಗಿನಿಂದ ಮೇಲಕ್ಕೆ ಮತ್ತು ಮೇಲಿನಿಂದ ಕೆಳಕ್ಕೆ ಸುಲಭವಾಗಿ ಸಾಗಿಸಲು ರಾಟೆ ಸಾಧನ ಅಳವಡಿಸಿ ಯಶ ಮತ್ತು ಸಮಾಧಾನ ಕಂಡುಕೊಂಡವರು ಪ್ರಗತಿಪರ ಕೃಷಿಕ ಶ್ರೀಯುತ ಸಜಂಗದ್ದೆ ಶ್ರೀಹರಿ ಭಟ್. ಇವರು ತಮ್ಮ ಕೃಷಿ ಜಮೀನಿನಲ್ಲಿ ಅಳವಡಿಸಿರುವ ರಾಟೆಯ ರೋಪ್ ವೇ ಕೃಷಿಕರ ಗಮನ ಸೆಳೆಯುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ-ಸದ್ದು ಎರಡೂ ಮಾಡುತ್ತಿದೆ!


ಪ್ರತಿಷ್ಠಿತ ಕ್ಯಾಂಪ್ಕೋ ಸಂಸ್ಥೆಯ ಮಾಜಿ ನಿರ್ದೇಶಕರು, ಪೆರ್ಲ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಮತ್ತು ನಿರ್ದೇಶಕರು, ಪ್ರಗತಿಪರ ಕೃಷಿಕ, 69ರ ಶ್ರೀಹರಿ ಭಟ್ ತಮ್ಮ ಕೃಷಿ ಜಮೀನಿನಲ್ಲಿ "ರಾಟೆಯ ರೋಪ್ ವೇ" ಅಳವಡಿಸಿ ಸೈ ಎನಿಸಿಕೊಂಡಿದ್ದಾರೆ, ಪ್ರಯೋಜನ ಕಂಡುಕೊಂಡಿದ್ದಾರೆ. ಸುಮಾರು ಮೂರೂವರೆ ಎಕರೆ ಎತ್ತರ ತಗ್ಗಿರುವ ಅಡಿಕೆ ತೋಟದಿಂದ ಸುಮಾರು 50-55 ಅಡಿ ಎತ್ತರದ ಮನೆಯ ಬದಿಯಲ್ಲಿರುವ ಅಂಗಳಕ್ಕೆ ಕ್ಷಣಾರ್ಧದಲ್ಲಿ ಅಡಿಕೆ ಮೂಟೆ, ತೆಂಗಿನಕಾಯಿ ಗೋಣಿ ಹೆಚ್ಚಿನ ತ್ರಾಸವಿಲ್ಲದೆ ಈ ಸಾಧನದಿಂದ ಎಳೆಯಲು ಸಾಧ್ಯವಾಗುತ್ತಿದೆ.


ಮುಂಡಾಜೆ ಗ್ರಾಮದ ಪ್ರಗತಿಪರ ಕೃಷಿಕ ಶ್ರೀ ಗಜಾನನ ವಜೆ ಇವರ ಇದೇ ರೀತಿಯ ಸಾಧನದ ವಿಷಯ ತಿಳಿದು, ಸ್ವತಃ ಅಲ್ಲಿಗೆ ಭೇಟಿ ಕೊಟ್ಟು, ಅದರ ಪರಿಕರಗಳನ್ನೆಲ್ಲ ಮಂಗಳೂರಿನ ಮಾರುಕಟ್ಟೆಯಲ್ಲಿ ಖರೀದಿಸಿ ತಂದು, ಊರಿನ ಸ್ನೇಹಿತ ಸೈಪಂಗಲ್ಲು ಮುರಳಿ ಇವರ ಸಿವಿಲ್ ಇಂಜಿನಿಯರಿಂಗ್ ಅನುಭವದಿಂದ ಮತ್ತು ಒಂದು ಆಳು ಕೆಲಸದ ಮೂಲಕ ಈ ರಾಟೆ ಸಾಧನ ನಿರ್ಮಾಣಗೊಂಡಿದೆ. /p>


ಇದಕ್ಕೆ ಬೇಕಾದ ಸಾಮಗ್ರಿಗಳು, ಮತ್ತು ಅಳವಡಿಸುವ ವಿಧಾನ:

ಎರಡು ರಾಟೆಗಳು, ಕ್ಲಾಂಪ್'ಗಳು ಜೊತೆಗೆ ಮನೆಯ ಅಂಗಳದಲ್ಲಿ ಒಂಭತ್ತು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಕಬ್ಬಿಣದ ಗಟ್ಟಿ ಸಲಾಕೆ, ಇನ್ನೊಂದು ಸುಮಾರು ಐವತ್ತು ಅಡಿ ತಗ್ಗಿನಲ್ಲಿ ಇರುವ ತೋಟದಲ್ಲಿ ಏಳು ಅಡಿ ಉದ್ದದ, ಮೂರಡಿ ಮಣ್ಣಿನೊಳಗೆ ಇಳಿಸಿರುವ ಗಟ್ಟಿ ಸಲಾಕೆ. ಇವೆರಡರ ನಡುವೆ 8 ಎಂ.ಎಂ ದಪ್ಪದ ಕಬ್ಬಿಣದ ಕೇಬಲ್ ಎಳೆದು ಕಟ್ಟಿ, ಅದರ ಮೇಲೆ ಚಲಿಸುವ ರಾಟೆ ಅಳವಡಿಸಿದ್ದಾರೆ. ಕೇಬಲ್ ಮೇಲೆ ಚಲಿಸುವ ರಾಟೆ ಇದ್ದರೆ ಅಂಗಳದ ಕಂಬದ ಬಳಿ ಸ್ಥಿರ ರಾಟೆ ಅಳವಡಿಸಿ ನೈಲಾನ್ ಹಗ್ಗ ಅಳವಡಿಸಲಾಗಿದೆ. ಸ್ಥಿರ ರಾಟೆಯಿಂದ ಕೆಬಲ್ ಮೇಲಿನ ರಾಟೆ ಎಳೆಯಲು ಸಂಪರ್ಕ ಕೊಡಲಾಗಿದೆ. ಇದರ ಗರಿಷ್ಠ ಸಾಮರ್ಥ್ಯ, ಅನಾಯಾಸವಾಗಿ ಇನ್ನೂರು ಕೇಜಿಗಿಂತಲೂ ಅಧಿಕ. ಸುಮಾರು ನಲವತ್ತು-ಐವತ್ತು ಕಿಲೋ ಭಾರದ ಅಡಿಕೆಯ ಮೂಟೆ ನಿಮಿಷಾರ್ಧದಲ್ಲಿ ತೋಟದಿಂದ ಅಂಗಳಕ್ಕೆ ಅನಾಯಾಸವಾಗಿ ತಲುಪುತ್ತದೆ.


'ತೋಟದ ಮೂಲೆ ಮೂಲೆ ತಲುಪಲು ತೋಟದ ನಡುವೆ ಮಾರ್ಗ ನಿರ್ಮಿಸಿದ್ದೇವೆ. ಜೊತೆಗೆ ಎರಡು ಚಕ್ರದ ಮಾನವ ಚಾಲಿತ ಕೈಗಾಡಿ ಅದಾಗಲೇ ಇದೆ. ಎಲ್ಲಾ ಕಡೆಯಿಂದ ಹೆಚ್ಚಿನ ಪ್ರಯಾಸವಿಲ್ಲದೆ ತೋಟದ ರಾಟೆಯ ಜಾಗಕ್ಕೆ ಅಡಿಕೆ ಮೂಟೆ ಬರುತ್ತವೆ, ಅಲ್ಲಿಂದ ರಾಟೆ ಗೆ ಸಿಕ್ಕಿಸಿ ಎಳೆದರೆ ಮೂಟೆ ಅಂಗಳದಲ್ಲಿ! ಎರಡೂ ಕಡೆ ಅಳವಡಿಸಿದ ಗಟ್ಟಿಯಾದ ಕಂಬಿಗಳನ್ನೂ ಸೇರಿಸಿ ನನಗೆ ತಗುಲಿದ ವೆಚ್ಚ ಸುಮಾರು ಇಪ್ಪತ್ತೈದು ಕೇಜಿ ಚೋಲ್ ಅಡಿಕೆಯ ಬೆಲೆಯಷ್ಟು! ಈ ಸಾಧನ ನನ್ನ ಪ್ರಕಾರ ಸುಮಾರು 75% ಕೆಲಸವನ್ನು ಹಗುರಾಗಿಸಿದೆ, ಸುಲಭವಾಗಿಸಿದೆ, ಸರಳವಾಗಿಸಿದೆ. ನಮ್ಮ ಪ್ರದೇಶದ ಹೆಚ್ಚಿನ ಕೃಷಿ ಜಮೀನುಗಳು ಭೌಗೋಳಿಕವಾಗಿ ಹೀಗೇ ಏರು-ತಗ್ಗಾಗಿವೆ, ಅವರೆಲ್ಲರಿಗೂ ಈ ಸಾಧನ ಹೊರೆ ಹಗುರಾಗಿಸುವುದರಲ್ಲಿ ಸಂದೇಹವೇ ಇಲ... ಈ ಸಾಧನ ನನ್ನ ತಲೆಯ ಮೇಲಿನ ಭಾರದ ಜೊತೆ-ಜೊತೆಗೆ ತಲೆಯೊಳಗಿನ ಭಾರವನ್ನೂ ಹಗುರಾಗಿಸಿದೆ...' ಎನ್ನುವಾಗ ಶ್ರೀಹರಿ ಭಟ್ ಇವರ ಮುಖದಲ್ಲಿ ಮೂಡಿದ ಮಂದಹಾಸ ಎಲ್ಲವನ್ನೂ ಹೇಳುತ್ತಿತ್ತು.


ರಾಟೆಯ ಸಮರ್ಪಕ ಉಪಯೋಗಕ್ಕೆ ಈ ಕೆಳಗಿನ ವ್ಯವಸ್ಥೆ ಇದ್ದರೆ ಚೆನ್ನ:

1. ಏರು ತಗ್ಗಿನ ತೋಟದ ಮೂಲೆ-ಮೂಲೆಗೆ ಮಾನವ ಚಾಲಿತ/ಮೋಟಾರ್ ಚಾಲಿತ ಸಣ್ಣ ಗಾಡಿ ಹೋಗುವ ರಸ್ತೆಯಾಕಾರದ ರಚನೆ

2. ತೋಟದೊಳಗಿನ ರಸ್ತೆಯಾಕಾರದ ರಚನೆಯಲ್ಲಿ ರೋಪ್ ವೇಯ ತೋಟದಲ್ಲಿ ಅಳವಡಿಸಿದ ಆರಂಭಿಕ ಹಂತಕ್ಕೆ ತಂದರೆ ಅಡಿಕೆ, ಅಡಿಕೆ ಗೊನೆ, ತೆಂಗಿನಕಾಯಿ ತರಲಾಗುವಂಥಾ ಮಾನವ ಚಾಲಿತ/ಮೋಟಾರ್ ಚಾಲಿತ ಸಣ್ಣ ಗಾಡಿ.


ಇವೆರಡೂ ವ್ಯವಸ್ಥೆಗಳನ್ನು ತೋಟದೊಳಗೆ ಮಾಡಿಕೊಂಡರೆ ರೋಪ್ ವೇ ಸಾಧನದ ಉಪಯೋಗ ಬಹುಪಾಲು.


ಈ ರಾಟೆ ಸಾಧನದ ಕುರಿತಾದ ಹೆಚ್ಚಿನ ಮಾಹಿತಿಗೆ, ಸ್ಥಳ ಪರಿಶೀಲನೆ ಮತ್ತು ವಿಕ್ಷಣೆಗಾಗಿ ಶ್ರೀಹರಿ ಭಟ್ ಸಜಂಗದ್ದೆ ಇವರ 9446281914 ಮೊಬೈಲ್ ಸಂಖ್ಯೆ ಸಂಪರ್ಕಿಸಿ.


(ಉಪಯುಕ್ತ ನ್ಯೂಸ್)

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ0 Comments

Post a Comment

Post a Comment (0)

Previous Post Next Post