|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಜಯ್ ದಿವಸ್ ಮಹತ್ವವನ್ನು ಅರಿಯೋಣ ಬನ್ನಿ

ವಿಜಯ್ ದಿವಸ್ ಮಹತ್ವವನ್ನು ಅರಿಯೋಣ ಬನ್ನಿ

 

ಪ್ರತಿ ವರ್ಷ ಭಾರತದಾದ್ಯಂತ ಡಿಸೆಂಬರ್ 16 ರಂದು ವಿಜಯ್ ದಿವಸ್ ಎಂದು ಆಚರಿಸಿ, ಸಂಭ್ರಮಿಸಲಾಗುತ್ತದೆ. ಇದೇ ದಿನ 1971, ಡಿಸೆಂಬರ್ 16 ರಂದು ಭಾರತ ಪಾಪಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ 13 ದಿನಗಳ ಕಾದಾಟದ ಬಳಿಕ, ಭಾರತ ಸೇನೆಗೆ ಶರಣಾಗತಿಯಾಗಿತ್ತು. ಈ ಯುದ್ಧದಲ್ಲಿ ದೇಶಕ್ಕಾಗಿ ಜೀವ ತೆತ್ತು ಅಮರರಾದ ಸೈನಿಕರನ್ನು ನೆನೆಯುವ ಸಲುವಾಗಿ ಈ ವಿಜಯ ದಿವಸ ಆಚರಣೆಯನ್ನು ಆರಂಭಿಸಲಾಯಿತು. ಆಗಿನ ಪಾಕಿಸ್ತಾನದ ಸೇನಾಪಡೆಯ ನಾಯಕ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ ಭಾರತ ಮತ್ತು ಬಾಂಗ್ಲಾದೇಶಗಳ ಸಂಯುಕ್ತ ಪಡೆಗಳಿಗೆ ತನ್ನ 93,000 ಸೈನಿಕರೊಂದಿಗೆ ಶರಣಾಗತಿಯಾದ ಐತಿಹಾಸಿಕ ದಿನವಾಗಿದೆ.


ಇದು ಜಾಗತಿಕ ಯುದ್ಧಗಳ ಇತಿಹಾಸದಲ್ಲಿ, ಎರಡನೇ ಮಾಹಾಯುದ್ಧದ ಬಳಿಕ ಜಗತ್ತಿನ ಅತಿ ದೊಡ್ಡ ಮಿಲಿಟರಿ ಶರಣಾಗತಿ ಎಂದು ಚರಿತ್ರೆಯಲ್ಲಿ ದಾಖಲಾಗಿದೆ. ಆಗ ನಮ್ಮ ದೇಶದ ಪ್ರಧಾನ ಮಂತ್ರಿಯಾಗಿ ಶ್ರೀಮತಿ ಇಂದಿರಾ ಗಾಂಧಿ ಅವರು ಕೆಚ್ಚೆದೆಯಿಂದ ಹೋರಾಡಲು ಭಾರತ ಮತ್ತು ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಈ ಯುದ್ಧದ ಬಳಿಕ ಪೂರ್ವ ಪಾಕಿಸ್ತಾನ, ಪಾಕಿಸ್ತಾನದ ಬಿಗಿ ಮುಷ್ಠಿಯಿಂದ ಪಾರಾಗಿ, ಸ್ವತಂತ್ರ ಬಾಂಗ್ಲಾ ದೇಶವಾಗಿ ಹೊರಹೊಮ್ಮಿತು. ಆಗ ನಮ್ಮ ಭಾರತ ದೇಶದ ಸೈನ್ಯವನ್ನು ಜನರಲ್ ಜಗಜಿತ್ ಸಿಂಗ್ ಅರೋರಾ ಅವರು ಮುನ್ನಡೆಸಿದ್ದರು. ಬಾಂಗ್ಲಾದೇಶದಲ್ಲಿಯೂ ಜಿಜೋಯ್ ದಿವಸ್ ಎಂದು ಸಂಭ್ರಮದಿಂದ ಈ ದಿನವನ್ನು ಆಚರಿಸಿ, ಜನರು ದೇಶವನ್ನು ಮತ್ತು ಮಡಿದ ಸೈನಿಕರ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾರೆ.


ಈ ದಿನದಂದು ದೇಶದೆಲ್ಲೆಡೆ ಯುದ್ದ ಸ್ವಾರಕಗಳಲ್ಲಿ ದೇಶದ ಎಲ್ಲಾ ಪ್ರಜೆಗಳು, ಸೈನ್ಯದ ಹಿರಿಯ ಅಧಿಕಾರಿಗಳ ಸಹಿತ ಸೈನ್ಯದ ನಿವೃತ್ತ ಅಧಿಕಾರಿಗಳು, ನಿವೃತ್ತ ಸೇನಾನಿಗಳು ಮತ್ತು ಅಧಿಕಾರಿ ವರ್ಗದವರು, ದೇಶಕ್ಕಾಗಿ ಬಲಿದಾನಗೈದ ಸೇನಾನಿಗಳನ್ನು ಸ್ಮರಿಸಿ, ಕೊಂಡಾಡಿ ಅವರ ತ್ಯಾಗವನ್ನು ಹಾಡಿ ಹೊಗಳಿ, ಅವರುಗಳಿಗೆ ಪುಷ್ಪ ಗುಚ್ಚ ಮತ್ತು ಹೂಹಾರ ಸಮರ್ಪಿಸಿ ಕೃತಜ್ಞತೆಯನ್ನು ಮೆರೆಯುತ್ತಾರೆ. ಪಾಕಿಸ್ತಾನದ ಕಪಿಮುಷ್ಟಿಯಿಂದ ಈಸ್ಟ್ ಪಾಕಿಸ್ತಾನವನ್ನು ವಿಮೋಚನೆಗೊಳಿಸಿ 'ಸ್ವತಂತ್ರ ಬಾಂಗ್ಲಾದೇಶ' ಉದಯಿಸಲು ಭಾರತ ಕಾರಣೀಭೂತವಾದ ಸ್ಮರಣೀಯವಾದ ದಿನ ಎಂದು ಚರಿತ್ರೆಗಳಲ್ಲಿ ಸುವರ್ಣಾಕ್ಷರದಲ್ಲಿ ದಾಖಲಿಸಲಾಯಿತು.


1971 ಡಿಸೆಂಬರ್ 3 ರಂದು ಅಧಿಕೃತವಾಗಿ ಈ ಯುದ್ದ ಆರಂಭವಾಯಿತು. ಪಾಪಿ ಪಾಕಿಸ್ತಾನ ತನ್ನ ವಾಯುಸೇನೆಯ ಯುದ್ದ ವಿಮಾನಗಳ ಮುಖಾಂತರ ಭಾರತದಲ್ಲಿ ತೀವ್ರವಾಗಿ ಬಾಂಬ್ ದಾಳಿ ಆರಂಭಿಸಿ ಯುದ್ಧಕ್ಕೆ ನಾಂದಿ ಹಾಡಿತು. ಭಾರತ ಪೂರ್ವಭಾಗದ ಗಡಿಯಲ್ಲಿ ನಿರಂತರವಾದ ಒತ್ತಡ ಮತ್ತು ಯುದ್ಧ ನಡೆಯುತ್ತಲೇ ಇತ್ತು. ಪಾಕಿಸ್ತಾನ ಅನಿಯಂತ್ರಿತವಾಗಿ ಪದೇ ಪದೇ ಭಾರತದ ಮೇಲೆ ಕಾಲು ಕೆರೆದು ಜಗಳ ಮಾಡುತ್ತಲೇ ಇತ್ತು. ಆಗಿನ ಪ್ರಧಾನ ಮಂತ್ರಿ ಶ್ರೀಮತಿ ಇಂದಿರಾ ಗಾಂಧೀಜಿಯವರು ಆಗಿನ ಕಲ್ಕತ್ತಾದಲ್ಲಿ 5 ಲಕ್ಷ ಮಂದಿಯನ್ನು ಉದ್ದೇಶಿಸಿ ರ‍್ಯಾಲಿಯಲ್ಲಿ ಮಾತನಾಡುತ್ತಾ ಭಾರತ ಶಾಂತಿಪ್ರಿಯ ರಾಷ್ಟ್ರ ಹಿಂಸೆಯನ್ನು ಸಹಿಸುವುದಿಲ್ಲ.


ಆದರೆ ಭಾರತದ ಅಖಂಡತೆಯನ್ನು ತುಂಡು ಮಾಡಲು ಪ್ರಯತ್ನಿಸಿದಲ್ಲಿ ಸುಮ್ಮನೆ ಕೂರುವುದೂ ಇಲ್ಲ ಎನ್ನುತ್ತಿರುವಾಗಲೇ ಸಹಾಯಕನೊಬ್ಬ ಚೀಟಿ ನೀಡಿದ್ದ. ಅದರಲ್ಲಿ ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದೆ ಎಂದು ಬರೆದಿತ್ತು. ತಕ್ಷಣವೇ ಏನೂ ಮಾತನಾಡದೇ ವೇದಿಕೆ ಇಳಿದು ಹೋದರು. ಅದೇ ದಿನ ಸಂಜೆ ಆಲ್ ಇಂಡಿಯಾ ರೇಡಿಯೋದಲ್ಲಿ ಪಾಕಿಸ್ತಾನ ಭಾರತದ ಮೇಲೆ ಯುದ್ಧ ವಿಮಾನದಲ್ಲಿ ದಾಳಿ ಮಾಡಿ ಯುದ್ಧ ಸಾರಿರುವುದನ್ನು ಅಧಿಕೃತವಾಗಿ ಘೋಷಿಸಿದ್ದರು. ಭಾರತ ತಕ್ಷಣವೇ ತನ್ನ ಭೂಸೇನೆ, ವಾಯುಸೇನೆ ಮತ್ತು ನೌಕಾ ದಳದ ಸಹಾಯದಿಂದ ಪಾಕಿಸ್ತಾನದ ಮೇಲೆ ಉಗ್ರ ದಾಳಿ ನಡೆಸಿತ್ತು. ಭಾರತ ತನ್ನ ಪಶ್ಚಿಮದ ಪಾಕ್ ಗಡಿಯಲ್ಲಿಯೂ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುವವರ ಜೊತೆ, ಪೂರ್ವಭಾಗದಲ್ಲಿ ಏರಿ ಬರುತ್ತಿದ್ದ ಪಾಕಿಸ್ತಾನದ ಸೈನ್ಯವನ್ನು ಕ್ಷಣಾರ್ಧದಲ್ಲಿ ಹೊಸಕಿ ಹಾಕಿತ್ತು.


ಪೂರ್ವ ಭಾಗದಲ್ಲಿ ಭಾರತದ ನೌಕಾ ದಳದ INS ವಿಕ್ರಾಂತ್ ಬಳಕೆ ಮಾಡಿ ಪಾಕಿಸ್ತಾನದ ಸೇನೆ ಮೇಲೆ ನಿರಂತರ ಬಾಂಬ್ ದಾಳಿ ಮಾಡಿ ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸಿತ್ತು. ಆದರೆ ವಿಷಾದನೀಯ ವಿಚಾರವೆಂದರೆ ಭಾರತದ ಅತಿದೊಡ್ಡ ಹಡಗು INS ಕುರ್ಕಿ ಪಾಕ್ ಸಬ್ ಮರೈನ್ ದಾಳಿಗೆ ಸಿಲುಕಿ ಅರಬ್ಬಿ ಸಮುದ್ರದಲ್ಲಿ ಮುಳುಗಿದ್ದು, ಬಹು ದೊಡ್ಡ ನಷ್ಟವಾಗಿತ್ತು. ಭಾರತದ ಉತ್ಕೃಷ್ಟವಾದ ಅತ್ಯಾಧುನಿಕ ಸಲಕರಣೆಗಳ ಬಳಕೆಯಿಂದ, ಪಾಕಿಸ್ತಾನ ಸಂಪೂರ್ಣವಾಗಿ ಸೋಲು ಒಪ್ಪಿಕೊಂಡಿತ್ತು. ಆಗಿನ ಪಾಕಿಸ್ತಾನದ ಪ್ರಧಾನಿ ಯಾಹ್ಯಾಕಾನ್ ಇನ್ನು ಯುದ್ಧ ಮುಂದುವರಿಸುವುದರಿಂದ ಮತ್ತಷ್ಟು ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗುತ್ತದೆ ಎಂದು ಮನವರಿಕೆಯಾಗಿ ಡಿಸೆಂಬರ್ 14 ರಂದು ತನ್ನ ಸೈನ್ಯದ ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಜಿಯವರಿಗೆ ಶರಣಾಗತಿಯಲ್ಲದೆ ಬೇರೆ ಮಾರ್ಗವೇ ಇಲ್ಲ ಎಂಬ ಸಂದೇಶ ನೀಡಿದ್ದರು.


ಕೊನೆಗೆ ಡಿಸೆಂಬರ್ 16 ರಂದು ಭಾರತದ ಪೂರ್ವ ಭಾಗದ ಗಡಿಯಲ್ಲಿ ಭಾರತದ ಸೇನಾನಾಯಕ ಲೆಪ್ಟಿನೆಂಟ್ ಜನರಲ್ ಜಗಜಿತ್ ಸಿಂಗ್ ಆರೋರಾ ಅವರ ಮುಂದೆ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಎ.ಎ.ಕೆ. ನಿಯಾಜಿ ಅವರ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕಿದರು. ಸುಮಾರು 90,000 ಕ್ಕೂ ಅಧಿಕ ಪಾಕ್ ಸೈನಿಕರು ಯುದ್ಧ ಖೈದಿಯಾಗಿ ಸೆರೆ ಸಿಕ್ಕರು. ಅದೇ ದಿನ ಸಂಜೆ, ನಮ್ಮ ಪ್ರಧಾನಿ ಅಧಿಕೃತವಾಗಿ ಭಾರತದ ಪಾರ್ಲಿಮೆಂಟ್‌ನಲ್ಲಿ ಭಾರತದ ವಿಜಯವನ್ನು ಸಾರಿದರು ಮತ್ತು ಡಾಕಾವನ್ನು ಹೊಸದಾಗಿ ಉದಯವಾದ ಬಾಂಗ್ಲಾದೇಶದ ರಾಜಧಾನಿ ಎಂದು ಘೋಷಿಸಿದರು. ಅಲ್ಲದೆ, ಪಾಕಿಸ್ತಾನದ ಸೊಕ್ಕು ಅಡಗಿ ಭಾರತದ ಮಿಲಿಟರಿ ಶಕ್ತಿಗೆ ಸಂಪೂರ್ಣವಾಗಿ ಶರಣಾಗತಿಯಾಗಿ ಮಂಡಿಯೂರಿ ಸೋಲೊಪ್ಪಿಕೊಂಡಿತ್ತು.


ಕೊನೆ ಮಾತು


ಜಾಗತಿಕವಾಗಿ ನಡೆದ ಯುದ್ಧಗಳಲ್ಲಿ 1971 ರ ಯುದ್ಧಕ್ಕೆ ವಿಶೇಷವಾದ ಸ್ಥಾನವಿದೆ. ಈ ಯುದ್ಧದ ಅತೀಕಡಿಮೆ ದಿನಗಳಿಗೆ (13 ದಿನ) ಸೀಮಿತವಾಗಿದ್ದರೂ, ಜಾಗತಿಕವಾಗಿ ಅತೀ ದೊಡ್ಡ ಶರಣಾಗತಿ ಎಂಬ ಕುಖ್ಯಾತಿ ಗಳಿಸಿದೆ. ಯಾವುದೇ ಶರತ್ತು ಇಲ್ಲದೆ, ಏಕಪಕ್ಷೀಯವಾಗಿ ಪಾಕಿಸ್ತಾನದ ಪಡೆಗಳು, ಸೋಲಿನಿಂದ ಸಂಪೂರ್ಣವಾಗಿ ಕಂಗೆಟ್ಟು, ಭಾರತದ ಸೇನೆಗೆ ಶರಣಾಗತಿಯಾಗಿ ವಿಶ್ವದ ಇತರ ದೇಶಗಳ ಮುಂದೆ ನನ್ನ ಮಾನ ರ‍್ಯಾದೆಗಳನ್ನು ಹರಾಜಿಗೆ ಹಾಕಿ ನಗೆಪಾಟಲಿಗೆ ಈಡಾದ ದಿನ ಮತ್ತು ಭಾರತ ಹಾಗೂ ಬಾಂಗ್ಲಾ ದೇಶಕ್ಕೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಿ ಮಾರ್ಪಟ್ಟಿತ್ತು ಜಾಗತಿಕವಾಗಿ ಭಾರತದ ಸೇನೆಯ ಶಕ್ತಿ ಏನು ಎಂಬುದರ ಕಿರು ಪರಿಚಯ ಆಗ ಜಗತ್ತಿಗೆ ತೋರ್ಪಡಿಸಿದ ಸ್ಮರಣೀಯವಾದ ದಿನ ಎಂದರೂ ಅತಿಶಯೋಕ್ತಿಯಾಗಲಾರದು.


ಎರಡನೇ ಮಹಾ ಯುದ್ಧದ ಬಳಿಕ ನಡೆದ ಮೊದಲ ಯುದ್ಧ ಇದಾಗಿದ್ದು, ಬಾಂಗ್ಲಾ ದೇಶಕ್ಕಂತೂ ಅತ್ಯಂತ ಪವಿತ್ರವಾದ ದಿನವಾಗಿ ಹೊರ ಹೊಮ್ಮಿತ್ತು. ಈಸ್ಟ್ ಪಾಕಿಸ್ತಾನ ಎಂದು ಕರೆಯಲ್ಪಟ್ಟು, ಪಾಕಿಸ್ತಾನದ ಅಡಿಯಾಳಾಗಿ ಅದರ ಒಂದು ಭಾಗವೇ ಆಗಿದ್ದ ಭೂಪ್ರದೇಶ, ಪಾಕಿಸ್ತಾನದ ಕಪಿಮುಷ್ಟಿಯಿಂದ ಪಾರಾಗಿ, ಬಾಂಗ್ಲಾದೇಶ ಎಂಬ ಹೊಸ ದೇಶವಾಗಿ ಹೊರಹೊಮ್ಮಿತ್ತು. ಒಟ್ಟಿನಲ್ಲಿ ಈ 'ವಿಜಯ ದಿವಸ' ನಮ್ಮ ಭಾರತದ ಸೇನೆಗೆ, ಜನರಿಗೆ ಮತ್ತು ಜಗತ್ತಿಗೆ ಅತ್ಯಂತ ಪವಿತ್ರವಾದ ದಿನವಾಗಿ ಬದಲಾಗಿ ದೇಶದೆಲ್ಲೆಡೆ ಸಂಭ್ರಮ ಮತ್ತು ಸಂತಸದಿಂದ ಆಚರಿಸಿ ಜನರಲ್ಲಿ ದೇಶಭಕ್ತಿ, ದೇಶಪ್ರೇಮದ ಕಿಡಿ ಹೊತ್ತುವಂತೆ ಮಾಡಿ ಜನರಲ್ಲಿ ದೇಶಾಭಿಮಾನ ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂಬುದು ನಮ್ಮೆಲ್ಲರ ಒಕ್ಕೊರಲಿನ ಅಭಿಮತ.


-. ಮುರಲೀ ಮೋಹನ್ ಚೂಂತಾರು

 ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ, ಮಂಗಳೂರು

9845135787


(ಉಪಯುಕ್ತ ನ್ಯೂಸ್)


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم