ಡಿ.11: ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಡಾ.ಎಂ.ಪಿ. ಶ್ರೀನಾಥ್ ಪದಗ್ರಹಣ

Upayuktha
0


ಮಂಗಳೂರು: ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿರುವ ಲೇಖಕ ಸಂಘಟಕ ಉಪನ್ಯಾಸಕ ಡಾ.ಎಂ.ಪಿ ಶ್ರೀನಾಥ್ ಅವರ ಪದಗ್ರಹಣ ಕಾರ್ಯಕ್ರಮವು ಡಿಸೆಂಬರ್ 11ನೇ ತಾರೀಕು ಶನಿವಾರ ಸಂಜೆ 4 ಗಂಟೆಗೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಗ್ರಹಣ ಸಮಿತಿಯ ಗಣೇಶ್ ಹೆಬ್ಬಾರ್ ಅವರು ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.


ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾಗಿರುವ ಡಿ. ಹರ್ಷೇಂದ್ರ ಕುಮಾರ್ ಅವರು ದೀಪ ಪ್ರಜ್ವಲನೆ ಮಾಡುವ  ಮೂಲಕ ಸಮಾರಂಭವನ್ನು ಉದ್ಘಾಟಿಸುವರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ ಅವರು ಸರಕಾರದ ನಿಯಮಾವಳಿಯಂತೆ ಡಾ.ಎಂ.ಪಿ.ಶ್ರೀನಾಥ್ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸ್ಥಾನದ ಅಧಿಕಾರವನ್ನು ಹಸ್ತಾಂತರಿಸಿ ಪದಗ್ರಹಣ ಕಾರ್ಯಕ್ರಮವನ್ನು ನೆರವೇರಿಸುವರು ಎಂದವರು ತಿಳಿಸಿದರು.


ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ. ರಾಜೇಂದ್ರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕುಮಾರ, ಮಂಗಳೂರು ತಾಲೂಕು ತಹಶೀಲ್ದಾರರಾದ ಶ್ರೀ ಗುರುಪ್ರಸಾದ್, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.


ಎರಡು ದಶಕಗಳ ಬಳಿಕ ಹೊಸ ಮುಖವೊಂದು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲಿರುವ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿಯಲ್ಲಿ ಹೊಸತನವನ್ನು ತರುವ ಮತ್ತು ಎಲ್ಲರನ್ನೂ ಪರಿಷತ್ತಿನ ಕನ್ನಡ ಸೇವೆಯಲ್ಲಿ ಭಾಗಿಯಾಗಿಸುವ ಉದ್ದೇಶವನ್ನು ಹೊಂದಿರುವ ಡಾ.ಎಂ.ಪಿ ಶ್ರೀನಾಥ್ ಅವರು ಜಿಲ್ಲಾ ಕಸಾಪವನ್ನು ಸೃಜನಶೀಲವಾಗಿಸಿ ಹೊಸ ದಿಕ್ಕಿನ ಕಡೆ ಕೊಂಡೊಯ್ಯಲಿದ್ದು ಅನೇಕ ಕಾರ್ಯಕ್ರಮಗಳನ್ನು ಈ ಸಮಾರಂಭದಲ್ಲಿ ಘೋಷಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸೇರಿಕೊಳ್ಳಲು ಆಸಕ್ತರಿರುವವರಿಗೆ ಸದಸ್ಯರಾಗಲು ಸದಸ್ಯತ್ವ ಅಭಿಯಾನವನ್ನು ಅಂದೇ ಆರಂಭಿಸಲಿದ್ದು, ಆಸಕ್ತರು ನಿಯಮಾವಳಿಯಂತೆ ಸ್ಥಳದಲ್ಲೇ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಹೇಳಿದರು.


ಪತ್ರಿಕಾಗೋಷ್ಠಿಯಲ್ಲಿ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಿತಿಯ ಸಾಹಿತ್ಯ ಪೋಷಕ ಬರಹಗಾರ ಗುರುಪ್ರಸಾದ್ ಕಡಂಬಾರ್, ಸಂಘಟಕ ಮತ್ತು ಸಾಮಾಜಿಕ ಕಾರ್ಯಕರ್ತ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಹಾಗೂ ಕವಿ ಸಂಘಟಕ ಕಾ.ವೀ.ಕೃಷ್ಣದಾಸ್ ಉಪಸ್ಥಿತರಿದ್ದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top