|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ನಮ್ಮ ದೇಶದ ಬೆನ್ನೆಲುಬು ಆಗಿರುವ ರೈತರ ಮಹತ್ವವನ್ನು ಸಾರುವ ದಿನವಿಂದು

ನಮ್ಮ ದೇಶದ ಬೆನ್ನೆಲುಬು ಆಗಿರುವ ರೈತರ ಮಹತ್ವವನ್ನು ಸಾರುವ ದಿನವಿಂದು

 

ಭಾರತದಾದ್ಯಂತ ಪ್ರತಿ ವರ್ಷ ಡಿಸೆಂಬರ್ 23 ರಂದು, ರಾಷ್ಟ್ರೀಯ ರೈತರ ದಿನ ಎಂದು ಆಚರಿಸಿ, ದೇಶದ ಪ್ರಗತಿ ಮತ್ತು ಅಭಿವೃದ್ಧಿಗೆ ಬೆನ್ನೆಲುಬಾದ ರೈತರನ್ನು ಸ್ಮರಿಸಿ ಗೌರವಿಸಲಾಗುತ್ತದೆ. ಹಿಂದಿಯಲ್ಲಿ 'ರಾಷ್ಟ್ರೀಯ ಕಿಸಾನ್ ದಿವಸ್' ಎಂದೂ ಕರೆಯುತ್ತಾರೆ. ನಮ್ಮ ದೇಶದ 5ನೇ ಪ್ರಧಾನಿ ಚೌದುರಿ ಚರಣ್ ಸಿಂಗ್ ಅವರ ಹುಟ್ಟಿದ ದಿನವಾದ ಡಿಸೆಂಬರ್ 23ನ್ನು ದೇಶದಾದ್ಯಂತ ರೈತರ ದಿನ ಎಂದು ಸ್ಮರಿಸಲಾಗುತ್ತದೆ ಮತ್ತು ಸಂಭ್ರಮಿಸಲಾಗುತ್ತದೆ. ಚೌಧರಿ ಚರಣ್ ಸಿಂಗ್ ಅವರು ನಮ್ಮ ದೇಶ ಕಂಡ ಅಪ್ರತಿಮ ರೈತ ಹೋರಾಟಗಾರ ಮತ್ತು ರೈತರ ನಾಯಕರಾಗಿದ್ದರು. ಅವರು ಪ್ರಧಾನಿಯಾಗಿದ್ದಾಗ ನಮ್ಮ ದೇಶದ ರೈತರ ಜೀವನವನ್ನು ಸುಧಾರಿಸಲು ಮತ್ತು ಕೃಷಿಯನ್ನು ಉತ್ತೇಜಿಸಲು ಹಲವಾರು ಕ್ರಮಗಳನ್ನು ಮತ್ತು ಯೋಜನೆಗಳನ್ನು ಜಾರಿಗೆ ತಂದಿದ್ದರು.


ರೈತರೇ ನಮ್ಮ ದೇಶದ ಬೆನ್ನೆಲುಬು ಮತ್ತು ರೈತರಿಲ್ಲದ ದೇಶವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಕಟುಸತ್ಯವನ್ನು ಅರಿತು ರೈತರ ಶ್ರೇಯೋಭಿವೃದ್ಧಿಗಾಗಿ ಸತತ ಹೋರಾಟ ಮಾಡಿದರು. ದೇಶದ ಉದ್ದಗಲಕ್ಕೂ ಸಂಚರಿಸಿ ರೈತರ ಸಮಸ್ಯೆಗಳಿಗೆ ಕಿವಿಯಾದರು. ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಅವರೋರ್ವ ಆದರ್ಶ ಕೃಷಿಕರೂ ಆಗಿದ್ದರು. ನಿಜವಾದ ಮಣ್ಣಿನ ಮಗನಾದ ಚೌದುರಿ ಚರಣ್ ಸಿಂಗ್, ಸರಳ ಜೀವನ ನಡೆಸಿ ಇತರರಿಗೆ ಆದರ್ಶ ಪ್ರಾಯರಾಗಿದ್ದರು. ಸ್ವತ: ರೈತ ಕುಟುಂಬದ ಹಿನ್ನೆಲೆಯಿಂದ ಬಂದ ಅವರಿಗೆ ರೈತರ ಹಲವಾರು ಸಮಸ್ಯೆಗಳ ಬಗ್ಗೆ ಅಪರಿಮಿತ ಅರಿವು ಮತ್ತು ಜ್ಞಾನ ಹೊಂದಿದ್ದರು. ರೈತರ ಜೀವನ ಸುಧಾರಣೆಗಾಗಿ ಅವರು 'ಜಮೀನ್ದಾರಿ ನಿಯಂತ್ರಣ ಕಾಯಿದೆ'ಯನ್ನು ಜಾರಿಗೆ ತಂದರು.


ಕೃಷಿ ಉತ್ಪನ್ನಗಳಲ್ಲಿ ದಲ್ಲಾಳಿಗಳು, ಮಧ್ಯವರ್ತಿಗಳ ಸುಲಿಗೆ ನಿಲ್ಲಿಸಲು ಬಹಳ ಪರಿಶ್ರಮ ವಹಿಸಿದ್ದರು. ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಉತ್ತಮ ಮೌಲ್ಯ ಸಿಗಲು ಬೇಕಾದ ರೀತಿಯಲ್ಲಿ ರೈತಪರ ಪಾಲಿಸಿ ಮತ್ತು ಕಾಯಿದೆಗಳನ್ನು ಜಾರಿಗೆ ತರಲು ಬಹಳ ಮುಖ್ಯ ಭೂಮಿಕೆ ವಹಿಸಿದರು. ಅವರೋರ್ವ ಉತ್ತಮ ವಾಗ್ಮಿ ಮತ್ತು ಲೇಖಕರಾಗಿದ್ದು, ರೈತರ ಹಲವಾರು ಸಮಸ್ಯೆಗಳನ್ನು ಲೇಖನಗಳ ಮೂಲಕ ಸಮಾಜಕ್ಕೆ, ಸರಕಾರಕ್ಕೆ ತಲುಪುವಂತೆ ಮಾಡಿದರು. ರೈತರ ಸಮಸ್ಯೆಗಳಿಗೆ ಹಲವಾರು ಪರಿಹಾರಗಳನ್ನು ಸೂಚಿಸಿ, ಅದನ್ನು ಜಾರಿಗೆ ತರಲು ಬಹಳ ಶ್ರಮ ವಹಿಸಿದ್ದರು. ಅವರ ನೆನಪಿಗಾಗಿ ರೈತರ ಹಿತಕ್ಕಾಗಿ ಮಾಡಿದ ಕಾಯಿದೆ, ಕಾನೂನುಗಳನ್ನು ಜನರಿಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಪ್ರತಿ ವರ್ಷ ಅವರ ಜನ್ಮ ದಿನದಂದೇ ರಾಷ್ಟ್ರೀಯ ರೈತರ ದಿನವೆಂದು ಆಚರಿಸಿ, ಅವರ ಶ್ರಮವನ್ನು ನೆನಪಿಸಿಕೊಳ್ಳಲಾಗುತ್ತದೆ.


ಕೃಷಿ ಎನ್ನುವುದು ವಿಶ್ವದ ಅತ್ಯಂತ ಪುರಾತನವಾದ ವೃತ್ತಿಯಾಗಿದ್ದು, 12,000 ವರ್ಷಗಳ ಹಿಂದಿನಿಂದಲೂ ಕೃಷಿ ಚಟುವಟಿಕೆ ನಡೆಯುತ್ತಲೇ ಇದೆ. ಹಗಲು ರಾತ್ರಿ ಎನ್ನದೆ, ವರುಷದ 365 ದಿನವೂ ಕೃಷಿಕರು ಮತ್ತು ರೈತರು ನಮ್ಮ ಹೊಟ್ಟೆ ತುಂಬಿಸಲು ಸದಾಕಾಲ ದುಡಿಯುತ್ತಲೇ ಇರುತ್ತಾರೆ. ಇತರ ಎಲ್ಲಾ ವೃತ್ತಿಗಳಿಗೆ ವಾರಾಂತ್ಯದಲ್ಲಿ ರಜೆ ಇದ್ದರೆ ಈ ಕೃಷಿ ವೃತ್ತಿಗೆ ಅಥವಾ ರೈತ ಕಸುಬಿಗೆ ರಜೆ ಎನ್ನುವುದೇ ಇಲ್ಲ. ನಿರಂತರವಾಗಿ ವರ್ಷದಾದ್ಯಂತ ಒಂದಲ್ಲ ಒಂದು ಕೃಷಿ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಇತ್ತೀಚೆಗೆ ವಿಶ್ವದಾದ್ಯಂತ ಬಂದ ಸಾಂಕ್ರಾಮಿಕ ರೋಗ ಕೋವಿಡ್-19 ಸಂದರ್ಭದಲ್ಲಿಯೂ ಹಳ್ಳಿಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆ ನಡೆಯುತ್ತಲೆ ಇತ್ತು. ಜಗತ್ತೇ ಸ್ತಬ್ಧವಾಗಿದ್ದರೂ ಕೃಷಿ ಚಟುವಟಿಕೆ ಮಾತ್ರ ಎಗ್ಗಿಲ್ಲದೇ ನಡೆಯುತ್ತಿತ್ತು. ಈ ನಿಟ್ಟಿನಲ್ಲಿ ನಾವು ಪ್ರತಿದಿನ ಪ್ರತಿಯೊಂದು ಆಹಾರದ ತುತ್ತು ಬಾಯಿಗೆ ಹಾಕುವಾಗಲೂ ರೈತರನ್ನು ನೆನೆಯಬೇಕು, ಸ್ಮರಿಸಬೇಕು ಮತ್ತು ಕೃತಜ್ಞತಾಭಾವ ಹೊಂದಿರಲೇಬೇಕು.


ಕೊನೆಮಾತು


ಜಗತ್ತಿನ ಇತರ ಎಲ್ಲಾ ಚಟುವಟಿಕೆ ಸ್ತಬ್ಧವಾದರೂ, ನಮ್ಮ ದೈನಂದಿನ ಜೀವನ ಹೇಗಾದರೂ ಮುಂದೆ ಸಾಗಬಹುದು. ಆದರೆ ರೈತರು ಒಂದು ವಾರ ಕೆಲಸ ನಿಲ್ಲಿಸಿದರೆ ಜಗತ್ತೇ ಸ್ತಬ್ಧವಾಗಬಹುದು. ಜನರು ಹಸಿವಿನಿಂದ ಹಾಹಾಕಾರ ಹಾಕಬೇಕಾದೀತು. ಈ ನಿಟ್ಟಿನಲ್ಲಿ ರೈತರು/ಕೃಷಿಕರೇ ನಮ್ಮ ದೇಶದ ನಿಜವಾದ ಆಧಾರಸ್ತಂಭ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾನ, ರೈತ ಬಂಧುಗಳನ್ನು ಒಂದು ದಿನವಾದರೂ ಸ್ಮರಿಸಲೇಬೇಕು. ಬರೀ ಒಂದು ದಿನ ನೆನೆದರೆ ಸಾಲದು. ಪ್ರತಿದಿನ ಅವರನ್ನು ಸ್ಮರಿಸಿ ಗೌರವಿಸಬೇಕು. ಕೃಷಿಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಅನಾದಿ ಕಾಲದಿಂದಲೂ ನಮ್ಮ ದೇಶದ ಆರ್ಥಿಕತೆಗೆ ತಮ್ಮದೇ ಆದ ಕೊಡುಗೆ ನೀಡಿದ ರೈತರನ್ನು ಆರಾಧಿಸಬೇಕು.


'ಅನ್ನದಾತೋ ಸುಖೀಭವ' ಎಂಬ ಮಾತಿನಂತೆ ನಮಗೆ ಅನ್ನ ನೀಡುವ ರೈತರು ನಿಜವಾಗಿ ದೇವರಿದ್ದಂತೆ. ಇಡೀ ದೇಶದ ಬೆನ್ನೆಲುಬಾಗಿ ದೇಶದ ಆರ್ಥಿಕತೆಗೆ ತನ್ನದೇ ಆದ ಕೊಡುಗೆ ನೀಡುತ್ತಾ ನಮ್ಮೆಲ್ಲರ ಹಸಿವು ನೀಗಿಸಲು ತನ್ನ ಬೆನ್ನೆಲುಬನ್ನೇ ಸವೆಸಿ ಹಗಲಿರುಳೆನ್ನದೆ ದುಡಿಯುವ ರೈತ ಬಂಧುಗಳು ನಮ್ಮ ದೇಶದ/ವಿಶ್ವದ ನಿಜವಾದ ಆಸ್ತಿ. ತಮ್ಮ ಕಠಿಣ ಪರಿಶ್ರಮ, ಸಮರ್ಪಣಾ ಭಾವದಿಂದ ಬರಡು ಭೂಮಿಯನ್ನು ಆಹಾರ ಉತ್ಪತ್ತಿ ಮಾಡುವ ಫಲವತ್ತಾದ ಭೂಮಿಯನ್ನು ಪರಿವರ್ತಿಸಿ, ತಮ್ಮ ಹೃದಯ ಹಾಗೂ ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಬರಡು ಭೂಮಿಯನ್ನು ನಮಗೆ ಜೀವಿಸಲು ಪೂರಕವಾದ ಫಲವತ್ತಾದ ಭೂಮಿಯನ್ನಾಗಿ ಮಾಡುವ ರೈತರನ್ನು ನಾವು ದಿನನಿತ್ಯ ಕೊಂಡಾಡಬೇಕು ಮತ್ತು ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು.


ರೈತರು, ಕೃಷಿಕರುನ್ನು ಅಪ್ರಯೋಜಕರು ಎಂದು ಅವರನ್ನು ಹೀಯಾಳಿಸುವ ಮನೋಭಾವವನ್ನು ನಿಲ್ಲಿಸಬೇಕು. ಸದಾಕಾಲ ಮಣ್ಣಿನಲ್ಲಿ ಕೆಲಸ ಮಾಡುತ್ತಾ, ಮಣ್ಣಿನಿಂದಲೇ ಹೊನ್ನನ್ನು ಬೆಳೆಯುವ ರೈತರನ್ನು ಪೂಜಿಸುವ ವಾತಾವರಣವನ್ನು ನಾವು ಕಲ್ಪಿಸಬೇಕಾಗಿದೆ. ಹಾಗಾದರೆ ಮಾತ್ರ ರೈತರ ದಿನದ ಆಚರಣೆಗೆ ವಿಶೇಷವಾದ ಅರ್ಥ ಬಂದೀತು. ಇಲ್ಲವಾದರೆ ಅದೊಂದು ಇತರ ಎಲ್ಲಾ ಆಚರಣೆಗಳಂತೆ ತೋರಿಕೆಯ ಆಚರಣೆಯಾಗಿ ಮಾರ್ಪಾಡಾಗಿ ನಾವು ನಮ್ಮ ಭೂಮಿಗೆ, ಭೂತಾಯಿಗೆ ಮತ್ತು ಮಣ್ಣಿನ ಮಗನಾದ ರೈತನಿಗೆ ಮಾಡಿದ ಅಪಚಾರವಾದೀತೇ ವಿನಹ: ಇನ್ನೇನನ್ನೂ ಸಾಧಿಸಲು ಸಾಧ್ಯವಾಗದು. ಈ ನಿಟ್ಟಿನಲ್ಲಿ ನಾವೆಲ್ಲಾ ಮಗದೊಮ್ಮೆ ಪುನರಾಮರ್ಶಿಸಿಕೊಂಡು ತಪ್ಪುಗಳನ್ನು ತಿದ್ದಿಕೊಂಡು ರೈತರ ಶ್ರಮವನ್ನು ಸ್ಮರಿಸಿ, ಗೌರವಿಸಿ ಅವರನ್ಜು ಹುರಿದುಂಬಿಸುವ ಕೆಲಸ ತುರ್ತಾಗಿ ಮಾಡಬೇಕಾಗಿದೆ. ಅದುವೇ ನಾವು ಚೌದುರಿ ಚರಣ್ ಸಿಂಗ್ ಅವರ ಚೇತನಕ್ಕೆ ನೀಡುವ ಬಹುದೊಡ್ಡ ಗೌರವ ಆದೀತು ಮತ್ತು ಅದರಲ್ಲಿಯೇ ನಮ್ಮ ಊರಿನ, ನಾಡಿನ, ದೇಶದ ಹಾಗೂ ವಿಶ್ವದ ಒಳಿತು ಅಡಗಿದೆ.


✍ ಡಾ. ಮುರಲೀ ಮೋಹನ್ ಚೂಂತಾರು

        BDS, MDS, DNB, MOSRCSEd (U.K), FPFA, M.B.A

        ಸಮಾದೇಷ್ಟರು,

        ದ.ಕ ಜಿಲ್ಲಾ ಗೃಹರಕ್ಷಕದಳ

        9845135787

       drmuraleechoontharu@gmail.com


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post